ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸತ್ಯನಾರಾಯಣ, ಕೆ

ಸತ್ಯನಾರಾಯಣ, ಕೆ

1935- ಸಾಮಾಜಿಕ-ರಾಜಕೀಯ ವಿಷಯಗಳ ಅಂಕಣಕಾರ, ಆರ್ಥಿಕ ವಿಚಾರಗಳ ವಿಮರ್ಶಕ. ಕನ್ನಡ ಮತ್ತು ಇಂಗ್ಲೀಷ್ ಭಾಷಾ ಪತ್ರಿಕೋದ್ಯಮದಲ್ಲಿ ಸಿದ್ಧಹಸ್ತ. ಹುಟ್ಟಿದ್ದು ಬೆಂಗಳೂರಿನಲ್ಲಿ ಏಪ್ರಿಲ್ 28, 1935ರಲ್ಲಿ. ತಂದೆ ಪಾಂಡುರಂಗರಾವ್, ತಾಯಿ ರಾಜಾಬಾಯಿ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದು ವಿಜ್ಞಾನ ಪದವಿಯನಂತರ ಆಯ್ಕೆ ಮಾಡಿದ ವೃತ್ತಿ ಪತ್ರಿಕೋದ್ಯಮ. ಮದರಾಸಿನ ಖಾಸಾ ಸುಬ್ಬರಾಯರ ಸ್ವತಂತ್ರ ಇಂಗ್ಲಿಷ್ ಪತ್ರಿಕೆ (1955-56) ಸೇರಿದ ಸತ್ಯ, ಬೆಂಗಳೂರಿಗೆ ಮರಳಿ ತಾಯಿನಾಡು (1956-59) ಪ್ರವೇಶಿಸಿದ ನಂತರ ಇಂಡಿಯನ್ ಎಕ್ಸ್‍ಪ್ರೆಸ್ (59-67) ವರದಿಗಾರರಾದರು. ಕನ್ನಡಪ್ರಭದಲ್ಲಿ (67-99) ಮುಖ್ಯ ವರದಿಗಾರರಾಗಿದ್ದು ಕೊನೆಗೆ ಆ ಪತ್ರಿಕೆಯ ಸಂಪಾದಕರಾಗಿ ನಿವೃತ್ತರಾದರು. ಪತ್ರಿಕೆಯಿಂದ ನಿವೃತ್ತರಾದರೂ, ಕನ್ನಡ ಪ್ರಭದಲ್ಲಿ ಅವರ ಅಂಕಣ-ಬರಹ ಮುಂದುವರೆದಿದೆ.

ಸತ್ಯನಾರಾಯಣ ಅವರ ವಿಶೇಷವೆಂದರೆ ನೇರಮಾತು. ನೇರಬರಹ. ಮುಖ್ಯವಾಗಿ ಪತ್ರಿಕಾಗೋಷ್ಠಿಯಲ್ಲಿ ಅವರು ಹಾಕುತ್ತಿದ್ದ ಪ್ರಶ್ನೆಗಳು ಮರ್ಮಾಘಾತವನ್ನೇ ಮಾಡುತ್ತಿದ್ದವು. ಸತ್ಯ ಅವರ ನೆನಪಿನ ಶಕ್ತಿ ಅಪಾರವಾದದ್ದು. ಸಭೆ, ಸಮಾರಂಭ, ಸಂದರ್ಶನಗಳ ಕಾಲದಲ್ಲಿ ಟಿಪ್ಪಣಿ ಮಾಡಿಕೊಳ್ಳದೆ, ಶೀಘ್ರವಾಗಿ ವರದಿ ಸಿದ್ಧಮಾಡುವುದಲ್ಲಿ ಸಿದ್ಧಹಸ್ತರು. ಕನ್ನಡ ಪ್ರಭದಲ್ಲಿರುವಾಗಲೇ, ಎಕ್ಸ್‍ಪ್ರೆಸ್ ಸಮೂಹದ ಆಂಗ್ಲ ಪತ್ರಿಕೆಗಳಿಗೆ ಅವರು ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಈ ವೈಶಿಷ್ಟ್ಯಪೂರ್ಣ ಅಂಕಣಗಾರನಿಗೆ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ (1985), ಮತ್ತು ಟಿಯೆಸ್ಸಾರ್ ಪ್ರಶಸ್ತಿ (2002) ಸಂದಿದೆ.

ಕನ್ನಡ ಭಾಷೆಯನ್ನು ಪತ್ರಿಕೋದ್ಯಮದ ಬರವಣಿಗೆಗೆ ರೂಢಿಸಿಕೊಂಡ ಕೆಲವೇ ಸಮರ್ಥ ಪತ್ರಿಕೋದ್ಯಮಿಗಳಲ್ಲಿ ಕೆ.ಸತ್ಯನಾರಾಯಣ ಅವರೂ ಒಬ್ಬರು. ಸುತ್ತಮುತ್ತಲ ವಸ್ತು ವ್ಯಕ್ತಿ, ಘಟನೆಗಳನ್ನು ಕುತೂಹಲ ದೃಷ್ಟಿಯಿಂದ ನೋಡಿ ವಿಮರ್ಶಾತ್ಮಕವಾಗಿ ನಿರೂಪಿಸುವ ಕಲೆ ಸತ್ಯ ಅವರಿಗೆ ಮೈಗೂಡಿದೆ. ಸಾಮಾಜಿಕ ವಿಷಯಗಳ ಅಂಕಣಕಾರರಾಗಿ, ಆರ್ಥಿಕ ವಿಚಾರಗಳ ವಿಮರ್ಶಕರಾಗಿ ಕೆ.ಸತ್ಯನಾರಾಯಣ ಅವರು ಹೆಸರು ಮಾಡಿರುವ ಪತ್ರಿಕೋದ್ಯಮಿ. ನಗರ ಪ್ರದಕ್ಷಿಣೆ, ಸಮಕಾಲೀನ, ಷೇರುಪೇಟೆ ಅವರ ಜನಪ್ರಿಯ ಅಂಕಣಗಳಲ್ಲಿ ಮುಖ್ಯವಾದವು.