ಸರೋವರ ಸುತ್ತಲೂ ಭೂಮಿ ಇರುವ ವಿಶಾಲವಾದ ನೀರಿನ ಹರವು. ಸರೋವರಗಳು ಗೌಣವೆನಿಸುವಷ್ಟು ಅಂದರೆ ಕೆಲವೇ ಗಜಗಳಷ್ಟು ಹರವಿನಿಂದ ನೂರಾರು ಮೈಲಿಗಳವರೆಗೆ ವಿಸ್ತಾರವಾಗಿರುತ್ತವೆ. ಲೇಕ್ ಸುಪೀರಿಯರ್ ಮತ್ತು ಕ್ಯಾಸ್ಪಿಯನ್ ಸಮುದ್ರವನ್ನು ವಿಸ್ತಾರವಾದ ಸರೋವರಗಳಿಗೆ ಉದಾಹರಣೆಯಾಗಿ ನೀಡಬಹುದು.

ಸರೋವರಗಳು ನಾನಾ ತೆರನಾಗಿ ರೂಪುಗೊಳ್ಳುತ್ತವೆ. ನೀರ್ಗಲ್ಲು ನದಿಗಳು ಕೊರೆದ ತಗ್ಗುಗಳಿಂದ ಕೆಲವು ಸರೋವರಗಳು ರೂಪುಗೊಂಡಿವೆ. ಮತ್ತೆ ಕೆಲವು ಹರಿವ ನೀರಿನ ಕೊರೆತದಿಂದ ರೂಪುಗೊಂಡಿರುತ್ತವೆ. ಇನ್ನು ಕೆಲವು ಸರೋವರಗಳು ಭೂಕವಚದ ಚಲನೆಯಿಂದ ರೂಪುಗೊಂಡಿರುತ್ತವೆ.

ಇಂದು ನಮಗೆ ಕಾಣಸಿಗುವ ಬಹುತೇಕ ಸರೋವರಗಳು ನೀರ್ಗಲ್ಲು ನದಿಯ ಹಿಮದ ಕೊರೆತದಿಂದ ಉಂಟಾದವು. ನೀರ್ಗಲ್ಲು ನದಿ ಹರಿಯುವಾಗ ಹಿಮದ ಭಾರಿ ಕಾಯಗಳೂ ತಳದ ಮೇಲೆ ನಿಧಾನವಾಗಿ ಸರಿಯುವಾಗ, ಅವುಗಳ ಜತೆಯಲ್ಲೇ ಸಾಗುವ ಶಿಲಾಚೂರುಗಳು ತಳಶಿಲೆಯನ್ನು ಕೊರೆದು ಹಾಕುತ್ತವೆ. ನೀರ್ಗಲ್ಲು ನದಿ ಸಾಗಿದ ಮೇಲೆ ಈ ಹಳ್ಳಗಳಲ್ಲಿ ನೀರು ತುಂಬಿಕೊಂಡು ಸರೋವರಗಳು ರೂಪು ತಳೆಯುತ್ತವೆ. ಇತರ ಸಂದರ್ಭಗಳಲ್ಲಿ ಈ ನೀರ್ಗಲ್ಲು ನದಿಗಳು ಹೊತ್ತೊಯ್ಯುವ ಶಿಲಾರಾಶಿಗಳು ಭೂಮಿಯ ಮೇಲೆ ಶೇಖರಗೊಂಡಾಗ ಉಂಟಾಗುವ ಹಳ್ಳದಾಕಾರಗಳಲ್ಲಿ ನೀರು ತುಂಬಿಕೊಂಡು ಸರೋವರಗಳು ರೂಪುಗೊಳ್ಳುತ್ತವೆ.

ನದಿಗಳಲ್ಲಿ ಪ್ರವಾಹ ಬಂದಾಗ, ಹವೇಗವಾಗಿ ಹರಿಯುವ ನೀರು ತಾತ್ಕಾಲಿಕವಾಗಿ ನಾಲೆಗಳನ್ನು ಕೊರೆಯಬಹುದು. ಪ್ರವಾಹ ತಗ್ಗಿದ ಮೇಲೆ ಈ ನಾಲೆಗಳು ಹಾಗೆಯೇ ಉಳಿದಿರುತ್ತವೆ. ಇವುಗಳಲ್ಲಿ ನೀರು ತುಂಬಿಕೊಂಡಾಗಲೂ ಸರೋವರ ರೂಪುಗೊಳ್ಳುತ್ತದೆ. ಕೆಲವೊಮ್ಮೆ ಮುಖ್ಯ ನದಿಗೆ ಬಂದು ಸೇರುವ ಉಪನದಿಗಳು ರಾಶಿರಾಶಿ ಮೆಕ್ಕಲನ್ನು ತಂದು ಮುಖ್ಯ ನದಿಯ ಕಣಿವೆಯ ಬಳಿ ಸಂಚಯನ ಮಾಡುತ್ತವೆ. ಆಗ ಉಂಟಾಗುವ ಹಳ್ಳದಾಕಾರಗಳ ರಚನೆಯಲ್ಲಿ ನೀರು ತುಂಬಿಕೊಂಡು ಸರೋವರ ರೂಪುಗೊಳ್ಳಬಹುದು. ನದಿಯು ಹಳ್ಳಪ್ರದೇಶದಿಂದ ಇಳಿದು ಬಯಲು ಪ್ರದೇಶದಲ್ಲಿ ಹರಿಯುವಾಗ ನೀರಿನ ವೇಗ ಕಡಿಮೆ ಇರುತ್ತದೆ. ಆಗ ಹರಿವ ನೀರಿಗೆ ಅಡಚಣೆ ಎದುರಾದಾಗ ನದಿ ಬಾಗಿಕೊಂಡು ಹೋಗುತ್ತದೆ. ಇದೇ ನದಿ ತಿರುವು. ಪ್ರವಾಹ ಬಂದ ಕಾಲದಲ್ಲಿ ರಭಸವಾದ ನೀರು ಅಡಚಣೆಯನ್ನು ಕೊಚ್ಚಿಕೊಂಡು ಹೋಗುತ್ತದೆ. ಆಗ ಈ ನದಿಯ ಬಾಗು ಪ್ರತ್ಯೇಕಗೊಂಡು ಸರೋವರ ರೂಪುಗೊಳ್ಳು ತ್ತದೆ. ಅದೇ ಕೊಂಬಿನಾಕಾರದ ಸರೋವರ (ಆಕ್ಸ್‍ಬೋಲೇಕ್).

ಭೂಕಂಪವಾದಾಗ ಭೂಕವಚದ ಕೆಲವು ಭಾಗಗಳು ಮೇಲೇರಿ, ಕೆಲವು ಭಾಗಗಳು ಕೆಳಕ್ಕೆ ತಗ್ಗಬಹುದು. ಆಗ ಉಂಟಾಗುವ ಹಳ್ಳಗಳಲ್ಲಿ ನೀರು ತುಂಬಿಕೊಂಡಾಗಲೂ ಸರೋವರ ರೂಪುಗೊಳ್ಳುತ್ತದೆ. ಉದಾಹರಣೆ: 1811-12ರಲ್ಲಿ ಕೆಳ ಮಿಸಿಸಿಪಿ ಕಣಿವೆಯಲ್ಲಿ ತೀವ್ರ ಭೂಕಂಪನದ ಸರಣಿಯೇ ಸಂಭವಿಸಿತು. ಆಗ ಭೂ ಕವಚದಲ್ಲಿ ಉಂಟಾದ ಸ್ಥಳಾಂತರದಿಂದಾಗಿ ಮಿಸ್ಸೋರಿಯಲ್ಲಿ ಸುಮಾರು ಐದು ಸಾವಿರ ಚದರ ಮೈಲಿಗಳಷ್ಟು ಭೂ ಪ್ರದೇಶ ಕೆಳಕ್ಕಿಳಿಯಿತು. ಅದು ಮುಂದೆ ಸರೋವರವಾಗಿ ಮಾರ್ಪಟ್ಟಿತು. ಕೆಲವೊಮ್ಮೆ ಭೂಕುಸಿತಗಳಿಂದಾಗಿ ಕಣಿವೆಯಲ್ಲಿ ಅಡ್ಡಗಟ್ಟೆಯುಂಟಾಗಿ, ಅನಂತರ ಕಣಿವೆಯು ಸರೋವರದ ತಳವಾಗಿ ಮಾರ್ಪಡಬಹುದು. 1893ರಲ್ಲಿ ಗಂಗಾನದಿಯ ಪಾತ್ರದಲ್ಲಿ ಭೂ ಸರಿತದಿಂದಾಗಿ ಒಂದು ಕಡೆ ಕಣಿವೆಯು ಎರಡು ಮೈಲಿಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಶಿಲಾರಾಶಿಗಳಿಂದ ತುಂಬಿಹೋಯಿತು. ಆಗ ಸರೋವರದ ಮಾದರಿಯಲ್ಲಿ ನೀರು ಸಂಗ್ರಹವಾಯಿತು.

ಹೆಚ್ಚಿನ ಸರೋವರಗಳು ಸಮುದ್ರಮಟ್ಟದಿಂದ ಮೇಲಿರುತ್ತವೆ. ಆದರೆ ಕೆಲವೇ ಕೆಲವು ಸರೋವರಗಳು ಸಮುದ್ರಮಟ್ಟದಿಂದ ಕೆಳಮಟ್ಟದಲ್ಲೂ ಇವೆ. ಏಷ್ಯ ಮೈನರ್‍ನಲ್ಲಿರುವ ಡೆಡ್‍ಸೀ ಸಮುದ್ರಮಟ್ಟಕ್ಕಿಂತ ಕೆಳಗಿರುವ ಸರೋವರಕ್ಕೆ ಒಂದು ಹೆಸರಾಂತ ಉದಾಹರಣೆ.

ಸರೋವರಗಳಲ್ಲಿ ಎರಡು ಬಗೆ: ಸಿಹಿ ನೀರಿನವು, ಉಪ್ಪು ನೀರಿನವು. ಸಿಹಿನೀರಿನ ಸರೋವರದಿಂದ ಹರಿಯುವ ನೀರು ಸಾಮಾನ್ಯವಾಗಿ ಸಾಗರವನ್ನು ಸೇರುತ್ತದೆ. ಆದರೆ ಉಪ್ಪುನೀರಿನ ಸರೋವರ ಸಾಮಾನ್ಯವಾಗಿ ನೆಲದಿಂದ ಅತಿ ಕೆಳಮಟ್ಟದಲ್ಲಿ ಇರುತ್ತದೆ. ಕ್ಯಾಸ್ಪಿಯನ್ ಸಮುದ್ರಗಳಂತಹ ಉಪ್ಪುನೀರಿನ ಸರೋವರಗಳು ಭೂಪ್ರದೇಶ ಮೇಲಕ್ಕೆ ವಿಸ್ತರಿಸಲ್ಪಟ್ಟಾಗ ಸಮುದ್ರದಿಂದ ಬೇರ್ಪಟ್ಟು ರೂಪುಗೊಂಡಂತಹವು. ಆದರೆ ಡೆಡ್‍ಸೀ ಗೆ ಉಪ್ಪಿನಂಶ ಅದರ ಉಪನದಿಗಳಿಂದ ಬಂದು ಸೇರುತ್ತದೆ.

ಅಮೆರಿಕದ ಲೇಕ್ ಸುಪೀರಿಯರ್ ಮತ್ತು ರಷ್ಯದ ಲೇಕ್ ಬೈಕಾಲ್ ಪ್ರಪಂಚದ ಅತಿದೊಡ್ಡ ಸಿಹಿನೀರಿನ ಸರೋವರಗಳು. ಕ್ಯಾಸ್ಪಿಯನ್ ಸಮುದ್ರ ಪ್ರಪಂಚದ ಅತಿದೊಡ್ಡ ಉಪ್ಪುನೀರಿನ ಸರೋವರ. ಭಾರತದಲ್ಲಿ ಕಾಶ್ಮೀರ ರಾಜ್ಯದಲ್ಲಿ ಹಲವು ಸರೋವರಗಳಿವೆ. ಒರಿಸ್ಸಾದ ಚಿಲ್ಕಾ ಸರೋವರ ಹೆಚ್ಚು ಪ್ರಸಿದ್ಧವಾದುದು. ಇದು ಈ ಉಪಖಂಡದಲ್ಲಿ ಅತಿ ದೊಡ್ಡ ಸರೋವರ.

*