ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರ್ಟನ್ ರಾಮರಾವ್

ಸರ್ಟನ್ ರಾಮರಾವ್ - ಚಾಮರಾಜೇಂದ್ರ ಒಡೆಯರು ಆರಂಭಿಸಿದ ಶ್ರೀಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾದ ಮುಖಾಂತರ ಬೆಳಕಿಗೆ ಬಂದ ರಂಗಭೂಮಿ ನಟರು. ವೀಣೆ ಸದಾಶಿವರಾಯರು ಇವರ ತಂದೆ. ರಾಮರಾಯರು ಹೆಚ್ಚಾಗಿ ಮಹಾರಾಜರ ನಾಟಕ ಮಂಡಲಿಯಲ್ಲಿಯೇ ಪಳಗಿ, ನಾಯಕ ಹಾಗೂ ಖಳನಾಯಕನ ಪಾತ್ರಗಳನ್ನು ಯಶಸ್ವಿಯಾಗಿ ಅಭಿನಯಿಸುತ್ತಿದ್ದರು. ಆಗಿನ ಆಳರಸರಾಗಿದ್ದ ಕೆಲವು ಪ್ರತಿಷ್ಠಿತ ಆಂಗ್ಲ ಅಧಿಕಾರಿಗಳ ಮನರಂಜನ ಕಾರ್ಯಕ್ರಮವಾಗಿ ಒಮ್ಮೆ ಮಹಾರಾಜರು ಅರಮನೆಯ ಚಂದ್ರಶಾಲೆಯಲ್ಲಿ ಶೂರಸೇನ ನಾಟಕವನ್ನೇರ್ಪಡಿಸಿದ್ದರು. ರಾಮರಾಯರು ಆ ನಾಟಕದಲ್ಲಿ ಅಭಿನಯಿಸಿದ ಶೂರಸೇನ ಪಾತ್ರ ಆಂಗ್ಲ ಅಧಿಕಾರಿಗಳಿಗೆ ಮೆಚ್ಚುಗೆಯಾಗಿ ಸರ್ಟನ್ ಎಂದು ಅವರನ್ನು ಶ್ಲಾಘಿಸಿದರು. ಅಂದಿನಿಂದ ಮಹಾರಾಜರು ಇವರನ್ನು ಸರ್ಟನ್ ರಾಮರಾಯರು ಎಂದೇ ಕರೆದರು; ಅಂದಿನಿಂದ ಅದೇ ಹೆಸರಿನಿಂದ ಪ್ರಸಿದ್ಧರಾದರು. ಇವರು ಪ್ರತಾಪಸಿಂಹಚರಿತ್ರೆಯಲ್ಲಿ ಮಹಾವೀರ, ಶೂರಸೇನದಲ್ಲಿ (ಒಥೆಲೊ) ಶೂರಸೇನ, ಚಂದ್ರಹಾಸದಲ್ಲಿ ದುಷ್ಟಬುದ್ಧಿ, ಹರಿಶ್ಚಂದ್ರದಲ್ಲಿ ಕಾಪಾಲಿ, ಮಹಾಭಾರತದಲ್ಲಿ ದುರ್ಯೋಧನ ಮುಂತಾದ ಪಾತ್ರಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸುತ್ತಿದ್ದರು. ಇವರ ಅಭಿನಯಕೌಶಲ್ಯವನ್ನು ನೋಡಿದ ಇತರ ಪ್ರಾಂತ್ಯಗಳ ನಾಟಕ ಮಂಡಲಿಗಳು ಇವರನ್ನು ತಮ್ಮ ಕಂಪನಿಗೆ ಸೇರಲು ಆಹ್ವಾನಿಸಿದರೂ ಇವರು ತಮ್ಮ ಕನ್ನಡ ಪ್ರೇಮದಿಂದ ಅಂಥ ಆಹ್ವಾನವನ್ನು ಒಪ್ಪಿಕೊಳ್ಳದೆ ಕೊನೆಯವರೆಗೂ ಕನ್ನಡ ರಂಗಭೂಮಿಯ ಉತ್ಕರ್ಷಕ್ಕಾಗಿ ಶ್ರಮಿಸಿದರು. ಇವರು ತಮ್ಮ ಗಂಭೀರ ಮುಖಮುದ್ರೆ, ಹಿತಮಿತವಾದ ಮಾತುಗಾರಿಕೆ, ಸೌಜನ್ಯಯುತ ನಡೆವಳಿಕೆಗಳಿಂದ ರಂಗಭೂಮಿಯಲ್ಲೂ ಹೊರಗೂ ಜನಮನ್ನಣೆ ಗಳಿಸಿದ್ದರು. ಕಾರಣಾಂತರಗಳಿಂದ ಅರಮನೆ ನಾಟಕ ಕಂಪನಿಯನ್ನು ಬಿಟ್ಟ ರಾಮರಾಯರು ಶ್ರೀಕಂಠೇಶಗೌಡ, ಜಯರಾವ್ ಮತ್ತು ಪಿ. ರಾಘವೇಂದ್ರರಾವ್ ಮುಂತಾದವರ ನೆರವಿನಿಂದ ತಮ್ಮದೇ ಆದ ಒಂದು ನಾಟಕಮಂಡಲಿಯನ್ನು ಪ್ರಾರಂಭಿಸಿ, ಸ್ವಲ್ಪಕಾಲ ನಡೆಸಿದರು. (ಎಮ್.ಎಚ್.ಆರ್.)