ಸರ್ಪಗಂಧ ಅಪೋಸೈನೇಸೀ ಕುಟುಂಬಕ್ಕೆ ಸೇರಿರುವ ರಾವುಲ್ಫಿಯ ಸರ್ಪೆಂಟೈನಾ ಪ್ರಭೇದದ ಬಹುವಾರ್ಷಿಕ ಸಸ್ಯ. ಸರ್ಪಬೇರು ಪರ್ಯಾಯನಾಮ. ಹಿಮಾಲಯದ ಪರ್ವತ ಪ್ರದೇಶಗಳಲ್ಲಿ, ಸಿಕ್ಕಿಮ್, ಬಿಹಾರ, ಅಸ್ಸಾಮ್, ಪಶ್ಚಿಮ ಘಟ್ಟದ ವಿವಿಧ ಭಾಗಗಳಲ್ಲಿ, ಶ್ರೀಲಂಕಾ, ಆಗ್ನೇಯ ಏಷ್ಯದ ಕೆಲವು ಭಾಗಗಳಲ್ಲಿ, ಆಫ್ರಿಕ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಕಂಡುಬರುತ್ತದೆ. ಉಷ್ಣಹವೆ ಇದರ ಬೆಳೆವಣಿಗೆಗೆ ಹೆಚ್ಚು ಪ್ರಶಸ್ತ. 150-180 ಸೆಂಮೀ ಎತ್ತರ ಬೆಳೆಯುತ್ತದೆ. ಪೊದರು ಸಸ್ಯ. ಇದರ ಕಾಂಡ ಬಿರುಸಾಗಿರುತ್ತದೆ. ತಾಯಿಬೇರಿನಿಂದ ಹಲವು ಉಪಬೇರುಗಳು ಹೊರಡುತ್ತವೆ. ಟೊಂಗೆಯ ಸುತ್ತ ಮೂರು ಅಥವಾ ನಾಲ್ಕು ಅಗಲ ಎಲೆಗಳು ಚಕ್ರಾಕಾರವಾಗಿ ಜೋಡಿಸಿಕೊಂಡಿರುತ್ತವೆ. ಕೆಲವು ವಿಧಗಳಲ್ಲಿ ಎಲೆಗಳು ಎದುರುಬದಿರಾಗಿರುವುವು. ನೀಲಿ, ತಿಳಿಗೆಂಪು ಅಥವಾ ಬಿಳಿಯ ಬಣ್ಣದ ಹೂಗಳು ಗೊಂಚಲಾಗಿ ಬೆಳೆಯುತ್ತವೆ. ಫಾಲಿಕಲ್ ಬಗೆಯ ಕಾಯಿಗಳು.

ಈ ಸಸ್ಯದ ಬೇರಿನಲ್ಲಿ ಓಫ್ಲೊಕ್ಸೈಲಿನ್ ಎಂಬ ಹರಳಿನಂಥ ವಸ್ತು, ರೆಸಿನ್, ಪಿಷ್ಟ, ಪೊಟ್ಯಾಶಿಯಮ್, ಫಾಸ್ಫೇಟ್, ಮ್ಯಾಂಗನೀಸ್ ಮುಂತಾದ ರಾಸಾಯನಿಕಗಳು, ಹಾಗೂ ಅಜ್ಮಲೀನ್, ಅಜ್ಮಲಿನಿನ್, ಅಜ್ಮಲಿಸಿನ್, ಸರ್ಪೆಂಟಿನ್, ಸರ್ಪೆಂಟಿನೀನ್ ಎಂಬ ಐದು ಸಸ್ಯಕ್ಷಾರಗಳೂ ಇವೆ. ಇವುಗಳಿಂದಾಗಿ ಸರ್ಪಗಂಧಕ್ಕೆ ಔಷಧೀಯ ಮಹತ್ತ್ವವಿದೆ. ಭಾರತೀಯ ವೈದ್ಯಕೀಯದಲ್ಲಿ, ಅಲ್ಲಿಯೂ ಆಯುರ್ವೇದದಲ್ಲಿ, ಸರ್ಪಗಂಧಕ್ಕೆ ವಿಶೇಷ ಸ್ಥಾನವಿದೆ. ಪ್ರಾಚೀನ ಕಾಲದಿಂದಲೂ ಇದನ್ನು ಔಷಧರೂಪದಲ್ಲಿ ಬಳಸಲಾಗುತ್ತಿತ್ತು ಎಂದು ದಾಖಲೆಗಳು ತಿಳಿಸುತ್ತವೆ. ಮನೋರೋಗ, ಉನ್ಮಾದ, ಭ್ರಮೆ ಮುಂತಾದವುಗಳಿಗೆ ಇದು ಉತ್ತಮ ಔಷಧ. ಕೇಂದ್ರ ಹಾಗೂ ಅನುವೇದನಾ ನರಮಂಡಲಗಳ ಮೇಲೆ ಪರಿಣಾಮ ಬೀರುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಈ ಸಸ್ಯದ ಘಟಕ ರೆಸರ್ಪೀನ್‍ನ್ನು ರಕ್ತದ ಒತ್ತಡ ಹೋಗಲಾಡಿಸಲು ಉಪಯೋಗಿಸುತ್ತಾರೆ. ಇದರೊಂದಿಗೆ ಮಲಬದ್ಧತೆ, ಯಕೃತ್ತಿಗೆ ಸಂಬಂಧಿಸಿದ ರೋಗಗಳು, ಕೀಲುನೋವಿನ ಉಪಶಮನಕ್ಕೆ ಕೂಡ ಬಳಸುತ್ತಾರೆ. ಹುಳುಕಡ್ಡಿ, ಇಸುಬು, ಮೊಡವೆ, ಮತ್ತಿತರ ಚರ್ಮರೋಗಗಳ ಉಪಶಮನದಲ್ಲಿಯೂ ಇದರ ಪ್ರಯೋಗವಿದೆ. ಬೇರಿನ ಕಷಾಯವನ್ನು ಗರ್ಭಕೋಶದ ತೊಂದರೆ ನಿವಾರಣೆ ಹಾಗೂ ಮತ್ತು ಬರಿಸುವುದರಲ್ಲಿಯೂ ನೀಡಲಾಗುತ್ತದೆ.

ಸರ್ಪಗಂಧದ ಸೇವನೆಯಿಂದ ಹಾನಿಯೂ ಇದೆ. ರಕ್ತದ ಒತ್ತಡ ತರುವುದು, ಹಸಿವು ಕಡಿಮೆಯಾಗುವುದು, ಲೈಂಗಿಕಾಸಕ್ತಿ ಕ್ಷೀಣಿಸುವುದು, ಮಂಕುತನ ಕವಿಯುವುದು, ದೇಹತೂಕ ಹೆಚ್ಚುವುದು, ಜಠರ ಬಾಧೆಗಳುಂಟಾಗುವುದು ಕೆಲವು ನಿದರ್ಶನಗಳು. ಇದನ್ನು ಸ್ತನ ಕ್ಯಾನ್ಸರ್ ಇರುವ ಸ್ತ್ರೀಯರು, ಗರ್ಭಿಣಿಯರು, ಸ್ತನ್ಯಪಾನ ಮಾಡಿಸುವ ಬಾಣಂತಿಯರು, ಜಠರದ ಹುಣ್ಣಿರುವವರು, ನಿದ್ದೆ ಔಷಧ ಸೇವಿಸುವವರು, ಹೃದಯ ಹಾಗೂ ಪಿತ್ತಕೋಶದ ತೊಂದರೆಗಳಿರುವವರು, ಹಸಿವು ಇಲ್ಲದವರು, ತೀವ್ರ ಮನೋರೋಗವುಳ್ಳವರು ಸೇವಿಸಬಾರದು. (ಎಸ್.ಎನ್.ಎಚ್.)