ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರ್ವಾಂಟೀಸ್, ಮಿಗೆಲ್ ಡೆ

ಸರ್ವಾಂಟೀಸ್, ಮಿಗೆಲ್ ಡೆ 1547-1616. ಪ್ರಸಿದ್ಧ ಸ್ಪ್ಯಾನಿಷ್ ಲೇಖಕ; ಕಾದಂಬರಿಕಾರ. ಡಾನ್ ಕ್ವಿಕ್ಸೋಟ್ ಕಾದಂಬರಿಯ ಕರ್ತೃ. ಆಲ್ಕಲಾ ಡೆ ಹೆನರೆಸ್ ಎಂಬಲ್ಲಿ ಸು.1547 ಸೆಪ್ಟಂಬರ್ 29ರಂದು ಜನಿಸಿದ. ಈತನಿಗೆ ಹೆಚ್ಚಿನ ವಿದ್ಯಾಭ್ಯಾಸ ದೊರಕಲಿಲ್ಲವಾದರೂ ಸ್ವಶ್ರಮದಿಂದ ಅಪಾರ ವ್ಯಾಸಂಗ ಮಾಡಿದ. 1570ರಲ್ಲಿ ನೌಕಾಸೈನ್ಯ ಸೇರಿದ. 1571ರಲ್ಲಿ ಟರ್ಕರ ವಿರುದ್ಧ ನಡೆದ ಲಿಪ್ಯಾಂಟೊ ಕದನದಲ್ಲಿ ಕಾದಿ ಎಡಗೈ ಕಳೆದುಕೊಂಡ. ಸೈನಿಕನಾಗಿದ್ದು, ಸಾಹಸ ಕಾರ್ಯ ಮಾಡಬೇಕೆಂಬ ವ್ಯಾಮೋಹ ದಿಂದ ಸೈನ್ಯದಲ್ಲೇ ಉಳಿದು ಟೂನಿಸ್, ಸಿಸಿಲಿ, ಇಟಲಿ, ಗ್ರೀಸ್ ಮುಂತಾದೆಡೆಗಳಲ್ಲಿ ನಡೆದ ಯುದ್ಧಗಳಲ್ಲಿ ಭಾಗವಹಿಸಿದ. ಅನಂತರ ತಾಯ್ನಾಡಿನ ಬಯಕೆಯಿಂ ದಾಗಿ 1575ರಲ್ಲಿ ಸೈನ್ಯಕ್ಕೆ ರಾಜಿನಾಮೆಯಿತ್ತ. ಸ್ಪೇನಿಗೆ ಮರಳುವ ಹಾದಿಯಲ್ಲಿ ಕಡಲುಗಳ್ಳರ ಕೈಗೆ ಸೆರೆಸಿಕ್ಕು ಆಲ್ಜಿಯರ್ಸ್‍ನಲ್ಲಿ ಐದು ವರ್ಷಗಳ ಗುಲಾಮಗಿರಿ ವಾಸ ಅನುಭವಿಸಿದ. 1580ರಲ್ಲಿ ಮ್ಯಾಡ್ರಿಡ್‍ಗೆ ಬಂದ. ಅಮೆರಿಕ ದೇಶಕ್ಕೆ ಹೋಗುವ ತನ್ನ ಇಚ್ಛೆಯನ್ನು ಸರ್ಕಾರದ ಮುಂದೆ ಇಟ್ಟ. ಸರ್ಕಾರ ಒಪ್ಪಿಗೆ ನಿರಾಕರಿಸಿತು. ತೆರಿಗೆ ವಸೂಲಿಗಾರನಾಗಿ ಕೆಲಸಕ್ಕೆ ಸೇರಿದ; ದೇಶಾದ್ಯಂತ ಸುತ್ತಿದ. ಈ ಸಂದರ್ಭದಲ್ಲಾದ ಸ್ಪೇನ್ ಜನಜೀವನದ ದಟ್ಟ ಅನುಭವ ಮುಂದೆ ಇವನ ಸಾಹಿತ್ಯ ಸೃಷ್ಟಿಗೆ ಮೂಲಬೀಜವಾಯಿತು. *

ಈತ ಅನೇಕ ಕಾವ್ಯನಾಟಕ ಕಾದಂಬರಿಗಳನ್ನು ಬರೆದಿದ್ದಾನೆ. ಈ ಕೃತಿಗಳಲ್ಲಿ ಬಹುಭಾಗ ಉಪಲಬ್ಧವಾಗಿಲ್ಲ. ಲಾ ಗಾಲಾಟೇಯ ಎಂಬುದು ಇವನ ಮೊದಲ ಕಾದಂಬರಿ 1585ರಲ್ಲಿ ಪ್ರಕಟವಾಯ್ತು. ಆರ್ಥಿಕ ಮುಗ್ಗಟ್ಟು ಪ್ರಬಲವಾಗಿ ವ್ಯಾಪಾರಕ್ಕೆ ಕೈ ಹಾಕಿದ. ಅದೂ ಕುಂಠಿತವಾಯಿತು. 1587-1600ರ ಮಧ್ಯೆ ಸೆರೆಮನೆವಾಸ ಪ್ರಾಪ್ತವಾಯಿತು. ಈ ಕಷ್ಟದೆಸೆಯಲ್ಲಿ ತನ್ನ ಜೀವನದ ವಿಫಲತೆ ಮತ್ತು ನಿರಾಸೆಯನ್ನೇ ಪ್ರತಿಬಿಂಬಿಸುವ ಡಾನ್‍ಕ್ವಿಕ್ಸೋಟ್ ಕಾದಂಬರಿಯ ಮೊದಲ ಭಾಗವನ್ನು 1605ರಲ್ಲಿ ಪ್ರಕಟಿಸಿದ. ಇದು ಇವನನ್ನು ಸಾಹಿತ್ಯ ಲೋಕದಲ್ಲಿ ಜನಪ್ರಿಯಗೊಳಿಸಿತು. 1609ರಲ್ಲಿ ಈತ ಫ್ರಾನ್ಸಿಸ್ಕನ್ ಮಠವನ್ನು ಸೇರಿದ. 1613ರಲ್ಲಿ ಇಟಾಲಿಯನ್ ಮಾದರಿಯ ರೊಮಾನ್ಸ್ ಕಥೆಗಳು, ಅಸಾಧಾರಣ ಘಟನೆಗಳು ಅಥವಾ ವ್ಯಕ್ತಿ ಚಿತ್ರಣಗಳು, ಸೇವಿಲ್‍ನ ದುರಾಚಾರ ಚಿತ್ರಣಗಳನ್ನೊಳಗೊಂಡ ನೋವಾಲಸ್ ಎಸೆಂಪ್ಲಾರೇಸ್ (ನಿದರ್ಶನ ಕಾದಂಬರಿಗಳು) ಎಂಬ ಪುಸ್ತಕವನ್ನೂ 1615ರಲ್ಲಿ ಡಾನ್ ಕ್ವಿಕ್ಸೋಟ್ ಕಾದಂಬರಿಯ ಎರಡನೆಯ ಭಾಗವನ್ನೂ ಎಯಿಟ್ ಕಾಮೀಡೀಸ್ ಅಂಡ್ ಎಯಿಟ್ ಎಂಟ್ರಿಮೆಸೆಸ್ ಎಂಬ ನಾಟಕ ಸಂಕಲನವನ್ನೂ ಪ್ರಕಟಿಸಿದ. ನೋವಾಲಸ್ ಎಸೆಂಪ್ಲಾರೇಸ್ ನಲ್ಲಿ ಬರುವ ಕಥೆಗಳ ಗದ್ಯ ಸ್ಪ್ಯಾನಿಷ್ ಸಾಹಿತ್ಯದ ಅತ್ಯುತ್ತಮ ಶ್ರೇಣಿಯ ಗದ್ಯವೆಂದೂ ಡಾನ್ ಕ್ವಿಕ್ಸೋಟ್ ಕಾದಂಬರಿ ಪ್ರಪಂಚದ ಅತ್ಯುನ್ನತ ಕೃತಿಗಳಲ್ಲಿ ಒಂದೆಂದೂ ಪರಿಗಣಿವಾಗಿದೆ. ಈತ 1616ರಲ್ಲಿ ನಿಧನಹೊಂದಿದ. ಇವನ ಕೊನೆಯ ಕಾದಂಬರಿ ಪೆರ್‍ಸೈಲ್ಸ್ ಅಂಡ್ ಸಿಗಿಸ್‍ಮುಂಡ ಇವನ ನಿಧನಾನಂತರ 1617ರಲ್ಲಿ ಪ್ರಕಟವಾಯಿತು.

ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ತಾನು ಮಧ್ಯಯುಗದ ವೀರಯೋಧ ನೆಂದು ಭ್ರಮಿತನಾಗಿ ಅವರಂತೆಯೇ ಸಾಹಸ ಕಾರ್ಯಗಳನ್ನು ಮಾಡಬೇ ಕೆಂದು, ಜಗತ್ತಿನ ಸ್ವಾರ್ಥ ಅನ್ಯಾಯಗಳ ವಿರುದ್ಧ ಹೋರಾಡಬೇಕೆಂದು ಹೊರಡುವುದು ಡಾನ್ ಕ್ವಿಕ್ಸೋಟ್ ಕಾದಂಬರಿಯ ವಸ್ತು. ಇವನ ಜೊತೆಗಾರ ಸೇವಕ ಸ್ಯಾಂಕೊ ಪಾನ್ಸ. ಇವರಿಬ್ಬರೂ ಕುದುರೆ ಹೋದ ಕಡೆಗಳಲ್ಲಿ ಅಲೆಯುವರು. ಹಾದಿಯಲ್ಲಿ ಶ್ರೀಮಂತರು, ವೀರಯೋಧರು, ಕವಿಗಳು, ಆಸ್ಥಾನಗಣ್ಯರು, ಪಾದ್ರಿಗಳು, ವ್ಯಾಪಾರಿಗಳು, ರೈತರು, ಕ್ಷೌರಿಕರು, ಬಂದಿಗಳು, ಗಣ್ಯಸ್ತ್ರೀಯರು, ಅರಬ್ ಸುಂದರಿಯರು, ಹಳ್ಳಿಯ ಹುಡುಗಿಯರು ಮುಂತಾದ ವಿವಿಧ ವರ್ಗದ ಜನರನ್ನು ಸಂಧಿಸುವರು. ಈ ವಿವಿಧ ವ್ಯಕ್ತಿಗಳು ಮತ್ತು ಅವರವರ ಜೀವನ ವ್ಯಾಪಾರಗಳು, ಸಹಾನುಭೂತಿ, ಹಾಸ್ಯ ವಿಡಂಬನದ ಮೂಲಕ ವಿಸ್ತಾರವಾಗಿ ಚಿತ್ರಿತವಾಗಿರುವುದರಿಂದ ಈ ಗ್ರಂಥ 16ನೆಯ ಶತಮಾನದ ಸ್ಪ್ಯಾನಿಷ್ ಜೀವನದ ಪ್ರತಿಬಿಂಬವೆನ್ನಬಹುದು. ಲೇಖಕನೇ ಹೇಳಿಕೊಂಡಂತೆ ಕೃತಿಯ ಪ್ರಪ್ರಥಮ ಉದ್ದೇಶ ರೊಮಾನ್ಸ್ ಕಥೆಗಳನ್ನೂ ಅವುಗಳಲ್ಲಿ ವರ್ಣಿತವಾಗಿರುವ ಮಧ್ಯಯಗದ ವೀರಪರಂಪರೆ ಮತ್ತು ಅದರ ವಿಲಕ್ಷಣ ಧ್ಯೇಯಗಳನ್ನೂ ವಿಡಂಬಿಸುವುದೇ ಆಗಿದೆ. ಬಹುತೇಕ ಸ್ಪ್ಯಾನಿಷ್ ಜನರು ನಂಬುತ್ತಿದ್ದ ಕುಲೀನತೆಯ ಭಾವನೆಗಳು ದೇಶವನ್ನು ವಿನಾಶದ ಹಾದಿಯಲ್ಲಿ ಒಯ್ಯುತ್ತಿದ್ದುದನ್ನು ಕಂಡು, ವೈಪರೀತ್ಯದ ಉದಾಹರಣೆಗಳ ಮೂಲಕ ಅದರಿಂದಾಗುವ ಅನಾಹುತಗಳನ್ನು ತೋರುವುದೂ ಕೃತಿಯ ಮುಖ್ಯ ಗುರಿಯಾಗಿದೆ ಎಂದು ಕೆಲವರ ಭಾವನೆ. ಕಾದಂಬರಿಯ ಕೊನೆಯಲ್ಲಿ ನಾಯಕನಿಗೆ ಭ್ರಾಂತಿಯ ತೆರೆ ಹರಿದರೆ, ಸೇವಕನಿಗೆ ದಣಿಯ ಭ್ರಾಂತಿ ಸ್ವಲ್ಪ ಹಿಡಿಯುವುದು. ಈ ಚೌಕಟ್ಟಿನಲ್ಲಿ ನೋಡಿದರೆ, ಒಂದು ಕಡೆ ಆದರ್ಶ ಮತ್ತು ಕಲ್ಪನೆಗಳು ಅನೈಜವಾದರೂ ಎಷ್ಟು ಆಕರ್ಷಕ, ಇನ್ನೊಂದು ಕಡೆ ಅದಿಲ್ಲದ ಜೀವನ ಎಷ್ಟು ನೀರಸ ಎಂಬ ದ್ವಂದ್ವವನ್ನು ಡಾನ್ ಕ್ವಿಕ್ಸೋಟ್ ಕಥೆ ನಿರೂಪಿಸುವಂತೆ ತೋರುತ್ತದೆ. (ಎಮ್.ಕೆ.ಕೆ.; ಆರ್.ಜಿ.ಕೆ.)