ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರ್ವಾಧಿಕಾರ

ಸರ್ವಾಧಿಕಾರ ಸಂಪೂರ್ಣ ಅಧಿಕಾರ ಒಬ್ಬ ವ್ಯಕ್ತಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರೀಕೃತಗೊಂಡಿರುವ ಆಡಳಿತ ವ್ಯವಸ್ಥೆ (ಡಿಕ್ಟೇಟರ್‍ಶಿಪ್). ಈ ಪದವನ್ನು ಪ್ರಾಚೀನ ರೋಮ್‍ನಿಂದ ಪಡೆಯಲಾ ಗಿದೆ. ಪ್ರಜಾಪ್ರಭುತ್ವದಲ್ಲಿ ಇರುವ ಸಮತೋಲನಾತ್ಮಕ ಪದ್ಧತಿಗಳು, ಕಾನೂನು ಮತ್ತು ಮೌಲ್ಯ ಪದ್ಧತಿ ಇಲ್ಲಿ ಗೌಣವಾಗಿ, ಸರ್ವಾಧಿಕಾರಿ ಇಚ್ಛೆಗೆ ಅನುಗುಣವಾಗಿ ಆಡಳಿತ ನಡೆಯುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಸರ್ಕಾರ ಪದ್ಧತಿ. ಪ್ರಜಾಪ್ರಭುತ್ವ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರೆ ಸರ್ವಾಧಿಕಾರ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. “ಮೂಲಭೂತವಾಗಿ, ಪಿತ್ರಾರ್ಜಿತವಾಗಿ ಬಂದ ಅಧಿಕಾರವನ್ನು ಬಲತ್ಕಾರ ದಿಂದಾಗಲೀ ಇಲ್ಲವೇ ಸರ್ವಾನುಮತದಿಂದಾಗಲಿ, ಸಾಮಾನ್ಯವಾಗಿ ಇವೆರಡರ ಸಂಯೋಜನೆಯಿಂದ ಪಡೆದ ಏಕನಾಯಕನ ಅಧಿಕಾರವೇ ಸರ್ವಾಧಿಕಾರ” ಎಂದು ಹೇಳಬಹುದು. ನಿರಂಕುಶ ಪ್ರಭುತ್ವ ಅಥವಾ ಸರ್ವಾಧಿಕಾರದಲ್ಲಿ ಆಡಳಿತವೆಲ್ಲ ಏಕನಾಯಕನ ಇಲ್ಲವೇ ಏಕ ರಾಜಕೀಯ ಪಕ್ಷದಲ್ಲಿ ಕೇಂದ್ರೀಕೃತವಾಗಿರುತ್ತದೆ. ಉದಾಹರಣೆಗೆ ರಷ್ಯದಲ್ಲಿ ಅಧಿಕಾರ ಕಮ್ಯೂನಿಸ್ಟ್ ಪಕ್ಷದಲ್ಲಿ ಕೇಂದ್ರಿಕೃತವಾಗಿತ್ತು. ಸರ್ವಾಧಿಕಾರಿಯ ಆದೇಶಗಳೇ ಕಾನೂನುಗಳಾಗುತ್ತವೆ. ಈ ಸರ್ಕಾರವನ್ನು ಟೀಕಿಸುವ ಅಥವಾ ಪ್ರತಿಭಟಿಸುವ ಸ್ವಾತಂತ್ರ್ಯ ಯಾರಿಗೂ ಇರುವುದಿಲ್ಲ. ಇಂಥ ವ್ಯವಸ್ಥೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವಕ್ಕಾಗಲಿ, ಪ್ರಜಾಭಿಪ್ರಾಯಕ್ಕಾಗಲಿ ಯಾವ ಮಾನ್ಯತೆಯೂ ಇರುವುದಿಲ್ಲ. (ನೋಡಿ- ನಿರಂಕುಶ-ಪ್ರಭುತ್ವ) (ಎಮ್.ಎಚ್.ಎ.)