ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯ -

	ಒಂದು ದೇಶದ ಕಾನೂನು ರಕ್ಷಣೆಯ ಅತ್ಯುನ್ನತ ಅಧಿಕಾರ (ಸುಪ್ರೀಂ ಕೋರ್ಟ್). ವ್ಯಕ್ತಿ ಹಕ್ಕುಗಳ ಸೃಷ್ಟಿ ಮತ್ತು ರಕ್ಷಣೆ ರಾಜ್ಯ ಸ್ಥಾಪನೆಯ ಮುಖ್ಯ ಉದ್ದೇಶಗಳಲ್ಲೊಂದು. ಈ ಉದ್ದೇಶಸಾಧನೆಗೆ ನ್ಯಾಯಾಲಯವೇ ಮುಖ್ಯ ಸಾಧನವೆನ್ನುವುದನ್ನು ಬಹಳ ಹಿಂದಿನಕಾಲದಿಂದಲೂ ಜನ ಮನಗಂಡಿದ್ದಾರೆ. ಶಾಸಕಾಂಗವಿಲ್ಲದ ಒಂದು ಸಮಾಜವನ್ನು ಊಹಿಸಲು ಸಾಧ್ಯ. ಹಾಗೆ ನೋಡಿದರೆ ಪೂರ್ಣ ರೂಪುಗೊಂಡ ಶಾಸಕಾಂಗಗಳು ಆಧುನಿಕ ಕಾಲದವರೆಗೆ ಅಸ್ತಿತ್ವಕ್ಕೆ ಬಂದಿರಲಿಲ್ಲ. ಆದರೆ ನ್ಯಾಯಾಂಗವಿಲ್ಲದ ಒಂದು ನಾಗರಿಕ ರಾಜ್ಯ ಕಲ್ಪನೆಗೂ ಮೀರಿದ್ದು. ಹಿಂದಿನ ಕಾಲದ ಕೆಲವು ಸಮುದಾಯಗಳಲ್ಲಿ ಶಾಸಕಾಂಗಗಳಿಲ್ಲದಿದ್ದರೂ ನ್ಯಾಯಾಲಯಗಳೇ ಬೇರೆ ಮೂಲಗಳಿಂದ ಪಡೆದುಕೊಂಡ ನಿಯಮಗಳ ಆಧಾರದಲ್ಲಿ ಹಿಂದಿನ ತೀರ್ಪುಗಳ ಅಥವಾ ಸಮಾಜದ ವ್ಯವಸ್ಥಿತ ಪದ್ಧತಿಗಳ ಆಧಾರಗಳಮೇಲೆ ನ್ಯಾಯವಿತರಣೆ ಮಾಡುತ್ತಿದ್ದವು. ಪ್ರಜಾಪ್ರಭುತ್ವರಾಷ್ಟ್ರಗಳಲ್ಲಿ ಬಡವ, ಬಲ್ಲಿದ, ಹಳ್ಳಿಯವ, ಪಟ್ಟಣಿಗ ಎನ್ನುವ ಯಾವ ಭೇದಭಾವವೂ ಇಲ್ಲದೆ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ನ್ಯಾಯಮೂರ್ತಿಗಳಿಂದ ಕೂಡಿದ ನ್ಯಾಯಾಲಯಗ ಳಿದ್ದರೆ ಮಾತ್ರ ಕಾನೂನುಗಳಿಂದ ಸಕಲರಿಗೂ ಸಮಾನವಾದ ಮನ್ನಣೆ ಮತ್ತು ರಕ್ಷಣೆ ದೊರೆಯಲು ಸಾಧ್ಯ. ಸರ್ವಾಧಿಕಾರಿ ಪ್ರಭುತ್ವರಾಷ್ಟ್ರಗಳಲ್ಲಿ ನ್ಯಾಯಾಂಗ ಆಳುವ ವರ್ಗದವರ ಕೈಗೊಂಬೆಯಾಗಿದ್ದು ಅವರ ಗುರಿಸಾಧನೆಯ ಒಂದು ಮುಖ್ಯ ಅಸ್ತ್ರವಾಗಿರುತ್ತದೆ. ಇಂತಹ ರಾಷ್ಟ್ರಗಳಲ್ಲಿ ವ್ಯಕ್ತಿಸ್ವಾತಂತ್ರ್ಯದ ಭರವಸೆಯಿರುವುದಿಲ್ಲ. `ಕತ್ತಲೆಯಲ್ಲಿ ನ್ಯಾಯದ ಜ್ಯೋತಿ ಆರಿಹೋದರೆ ಆ ಕತ್ತಲೆ ಇನ್ನೆಷ್ಟು ಗಾಢವಾಗಿರ ಬಲ್ಲದು ಎಂದು ಲಾರ್ಡ್ ಬ್ರೈಸ್ ಉದ್ಗರಿಸಿರುವುದು ಸಮಂಜಸವಾಗಿದೆ. ಈ ಹಿನ್ನಲೆಯಲ್ಲಿ ಸರ್ವೋಚ್ಚನ್ಯಾಯಾಲಯದ ಪ್ರಾಮುಖ್ಯ ಅಧಿಕವಾದುದು.

ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ನ್ಯಾಯಾಂಗ ಮತ್ತು ಕಾನೂನು ಪದ್ಧತಿಗಳಲ್ಲಿ ಏನೇ ವ್ಯತ್ಯಾಸವಿದ್ದರೂ ಅವುಗಳ ನ್ಯಾಯಾಂಗ ರಚನೆಯಲ್ಲಿ ಮಾತ್ರ ಕೆಲವು ಏಕಪ್ರಕಾರ ತತ್ತ್ವಗಳನ್ನು ಮಾನ್ಯಮಾಡಿರುವುದನ್ನು ನೋಡಬಹುದು. ಅಂದರೆ ಎಲ್ಲ ರಾಷ್ಟ್ರಗಳಲ್ಲಿಯೂ ನ್ಯಾಯಾಲಯಗಳು ಒಂದು ಶ್ರೇಣಿಯಾಕಾರದಲ್ಲಿ ಒಂದರಮೇಲೆ ಇನ್ನೊಂದಿರುವಂತೆ ರಚಿಸಲ್ಪಟ್ಟು ಮೇಲಿನ ನ್ಯಾಯಾಲಯ ಕೆಳಗಿನ ನ್ಯಾಯಾಲಯಗಳಿಂದ ಬರುವ ಅಪೀಲುಗಳ ವಿಚಾರಣೆ ನಡೆಸುವ ಅಧಿಕಾರ ಹೊಂದಿರುತ್ತದೆ. ಈ ನ್ಯಾಯಾಂಗ ಶ್ರೇಣಿಯ ಉತ್ತುಂಗದಲ್ಲಿ ಸರ್ವೋಚ್ಚನ್ಯಾಯಾಲಯವಿರು ತ್ತದೆ. ಈ ನ್ಯಾಯಾಲಯ ಕೆಳ ಹಂತದ ನ್ಯಾಯಾಲಯಗಳ ಅಥವಾ ನ್ಯಾಯಮಂಡಲಿಗಳ ತೀರ್ಪುಗಳನ್ನು ಪರಿಷ್ಕರಿಸಬಲ್ಲದು ಅಥವಾ ರದ್ದುಗೊಳಿಸಬಲ್ಲದು. ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿಯೂ ಈ ನ್ಯಾಯಾಲಯವೇ ಅಂತಿಮ ಮರುವಿಚಾರಣಾ ನ್ಯಾಯಾಲಯವಾಗಿರುತ್ತದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಹಲವಾರು ನ್ಯಾಯಮೂರ್ತಿಗಳಿದ್ದು ಮೊಕದ್ದಮೆಗಳ ವಿಚಾರಣೆ ಎಲ್ಲರೂ ಒಟ್ಟಾಗಿ ಕುಳಿತು ಅಥವಾ ಕಾರ್ಯಹಂಚಿಕೆಗಾಗಿ ರಚಿಸಿದ ವಿಶಿಷ್ಟ ಪೀಠದ ಸದಸ್ಯರಾಗಿ ಬಹುಮತದ ರೀತ್ಯಾ ತೀರ್ಪು ಕೊಡುತ್ತಾರೆ. ಈ ನ್ಯಾಯಾಲಯ ತನ್ನ ಅಭಿಪ್ರಾಯಗಳನ್ನು ಸಂವಿಧಾನದ ಮೂಲಕ ಸಮರ್ಥಿಸಿಕೊಳ್ಳುತ್ತದೆ. ಕೆಲವು ಸಾರಿ ಒಬ್ಬಿಬ್ಬರು ನ್ಯಾಯಾಧೀಶರು ಬಹುಮತದ ತೀರ್ಪನ್ನು ಒಪ್ಪದೇ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯದ ತೀರ್ಪನ್ನೂ ಕೊಡಬಹುದು. ಈ ನ್ಯಾಯಾಲಯದ ತೀರ್ಪುಗಳು ಆಗಿಂದಾಗ್ಗೆ ಆಯಾ ದೇಶದ ಮುಖ್ಯ ನಿಯತಕಾಲಿಕೆಗಳಲ್ಲಿ ಪ್ರಸಿದ್ಧಿಪಡಿಸಲ್ಪಟ್ಟು ಅವು ಆಂಗ್ಲೋ ಸ್ಯಾಕ್ಸನ್ ನ್ಯಾಯಪದ್ಧತಿ ಅನುಸರಿಸುವ ರಾಷ್ಟ್ರಗಳಲ್ಲಿನ ಕಾನೂನಿನ ಆಕರಗಳಲ್ಲಿ ಒಂದು ಮುಖ್ಯ ಆಧಾರಪೂರ್ವಕ ಆಕರವಾಗುತ್ತವೆ.

ಒಂದು ದೇಶದ ಶ್ರೇಷ್ಠತೆಯನ್ನು ಅಲ್ಲಿನ ನ್ಯಾಯಾಂಗದ ಹಿರಿಮೆಯ ಹಿನ್ನೆಲೆಯಲ್ಲಿ ಅಳೆಯಬಹುದು. ಸ್ವಾತಂತ್ರ್ಯ ಮತ್ತು ಸಮದರ್ಶಿತ್ವಗಳೇ ನ್ಯಾಯಾಂಗ ಹಿರಿಮೆಯ ಪ್ರತೀಕಗಳು. ಈ ಹಿರಿಮೆಯನ್ನು ಕಾಪಾಡಿ ಕೊಂಡು ಬರುವ ಉದ್ದೇಶದಿಂದಲೇ ನ್ಯಾಯಾಲಯಗಳ ಅದರಲ್ಲೂ ಸರ್ವೋಚ್ಚನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕ, ಅಧಿಕಾರಾವಧಿ, ಕೆಲಸದಿಂದ ತೆಗೆಯುವಿಕೆ, ಅವರ ವೇತನ ಮತ್ತು ಅರ್ಹತೆಗಳ ಬಗ್ಗೆ ಹೆಚ್ಚು ಗಮನವಹಿಸಲಾಗುತ್ತಿದೆ.

ನ್ಯಾಯ ಮೂರ್ತಿಗಳ ನೇಮಕ ವಿಧಾನ: ಸರ್ವೋಚ್ಚನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಎರಡು ವಿಧಾನಗಳಿವೆ-ಕಾರ್ಯಾಂಗದಿಂದ ನೇಮಕ ಮತ್ತು ಶಾಸಕಾಂಗದಿಂದ ಚುನಾವಣೆ.

ರಷ್ಯದ ಸರ್ವೋಚ್ಚ ನ್ಯಾಯಲಯ ಮತ್ತು ಸ್ವಿಟ್ಜರ್ಲೆಂಡಿನ ಫೆಡರಲ್ ಟ್ರಿಬ್ಯೂನಲ್‍ಗೆ ಆಯಾ ದೇಶದ ಶಾಸಕಾಂಗದ ಸದಸ್ಯರೆ ನ್ಯಾಯಾಧೀಶರನ್ನು ಆಯ್ಕೆಮಾಡುತ್ತಾರೆ. ಶಾಸಕಾಂಗದ ಆಯ್ಕೆಯಿರುವಲ್ಲಿ ಶಾಸಕಾಂಗದ ಮೇಲೆ ಅಧಿಕಾರಾರೂಢ ಪಕ್ಷದ ಪ್ರಭಾವವಿರುವ ಸಾಧ್ಯತೆಯಿದೆ. ಅಂತಹ ಕಡೆಗಳಲ್ಲಿ ನ್ಯಾಯಾಂಗದ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಅರ್ಹತೆಗಳುಳ್ಳವರನ್ನೇ ಶಾಸಕಾಂಗದ ಸದಸ್ಯರು ಆಯ್ಕೆಮಾಡುತ್ತಾರೆ ಎನ್ನುವ ಭರವಸೆಯಿರುವುದಿಲ್ಲ.

ಕಾರ್ಯಾಂಗದ ನೇಮಕವೇ ಬಹುಕಡೆಗಳಲ್ಲಿ ಬಳಕೆಯಲ್ಲಿರುವ ಪದ್ಧತಿ. ಈ ಪದ್ಧತಿಯಿರುವಲ್ಲಿ ಆಯಾ ದೇಶದ ರಾಷ್ಟ್ರಪತಿ ಅಥವಾ ಕಾರ್ಯಾಂಗದ ಮುಖ್ಯಾಧಿಕಾರಿ ನ್ಯಾಯಾಧೀಶರನ್ನು ನೇಮಿಸುತ್ತಾನೆ. ನ್ಯಾಯಾಂಗದ ನೇಮಕಗಳನ್ನು ಮಾಡಲು ಕಾರ್ಯಾಂಗಕ್ಕೆ ಶಾಸಕಾಂಗಕ್ಕಿಂತಲೂ ಹೆಚ್ಚು ಶಕ್ತಿಸಾಮಥ್ರ್ಯಗಳಿವೆ ಎನ್ನುವ ಭಾವನೆಯೇ ಈ ಪದ್ಧತಿಯ ಅನುಕರಣೆಗೆ ಮುಖ್ಯ ಕಾರಣವಾಗಿದೆ.

ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರನ್ನು ರಾಷ್ಟ್ರಾಧ್ಯಕ್ಷರು ಸರ್ವೋಚ್ಚನ್ಯಾಯಾಲಯದ ಇತರ ನ್ಯಾಯಾಧೀಶರೊಡನೆ ಹಾಗೂ ಅಗತ್ಯಬಿದ್ದರೆ ರಾಜ್ಯಗಳ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರೊಡನೆ ಸಮಾಲೋಚಿಸಿ ನೇಮಕ ಮಾಡುತ್ತಾರೆ.

ಪ್ರಧಾನ ನ್ಯಾಯಾಧೀಶರನ್ನು ಬಿಟ್ಟು ಉಳಿದ ನ್ಯಾಯಾಧೀಶರನ್ನು ನೇಮಕಮಾಡುವಾಗ ಪ್ರಧಾನ ನ್ಯಾಯಾಧೀಶರೊಡನೆ ರಾಷ್ಟ್ರಾಧ್ಯಕ್ಷರು ಸಮಾಲೋಚನೆ ನಡೆಸುವುದು ಸಂಪ್ರದಾಯವಾಗಿದೆ. ಇಲ್ಲಿ ಸಮಾಲೋಚನೆ ಎಂಬ ಶಬ್ದಕ್ಕೆ ಸಮ್ಮತಿ ಎಂಬ ಅರ್ಥವನ್ನು ಕಲ್ಪಿಸಲಾಗಿ ಪ್ರಧಾನ ನ್ಯಾಯಾಧೀಶರ ಪರಿಣಾಮಕಾರೀ ಭಾಗವಹಿಸುವಿಕೆಯನ್ನು ಅಳವಡಿಸಲಾಗಿದೆ.

ಅಮೆರಿಕದಲ್ಲಿ ಅಧ್ಯಕ್ಷರು ಸೆನೆಟ್‍ನೊಂದಿಗೆ ಸಮಾಲೋಚನೆ ನಡೆಸಿ ಅಲ್ಲಿನ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ನಾಮಕರಣಕ್ಕೆ ಸೂಚಿತವಾದ ವ್ಯಕ್ತಿಯ ಬಗ್ಗೆ ಸೆನೆಟ್ ಪೂರ್ಣ ಪರಿಶೀಲನೆ ನಡೆಸುತ್ತದೆ.

ಇಂಗ್ಲೆಂಡ್ ಮತ್ತು ಕೆನಡಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರ ಉಚ್ಚನ್ಯಾಯಾಲಯ ನೇಮಕದ ಬಗ್ಗೆ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತದೆ.

ನ್ಯಾಯಾಧೀಶರನ್ನು ನೇಮಕಮಾಡುವಾಗ ಇತರ ನ್ಯಾಯಾಧೀಶ ರೊಂದಿಗೆ ಸಮಾಲೋಚನೆ ನಡೆಸಿ ನೇಮಕ ಮಾಡಬೇಕೆನ್ನುವ ಭಾರತದ ಸಂಪ್ರದಾಯ ನಿಜವಾಗಿಯೂ ಅನುಕರಣೀಯವಾದದ್ದು.

ನ್ಯಾಯಾಂಗದಲ್ಲಿ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತವನ್ನುಳಿಸಿಕೊಂಡು ಬರಲು ನ್ಯಾಯಾಧೀಶ ನೇಮಕದಷ್ಟೇ ಅವರ ಅಧಿಕಾರಾವಧಿಯೂ ಮುಖ್ಯವಾದದ್ದು. ಅಲ್ಪಕಾಲದ ಅಧಿಕಾರಾವಧಿ ಇದ್ದರೆ ಅವರು ತಮ್ಮ ಅಧಿಕಾರಾವಧಿಯನ್ನು ಮುಂದುವರಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಪಕ್ಷಾತೀತರಾಗಿ ವರ್ತಿಸುವುದಕ್ಕೆ ಬದಲಾಗಿ ಪಕ್ಷಪಾತಿಗಳಾಗಿ ವರ್ತಿಸಬಹುದು. ಆದ್ದರಿಂದ ನ್ಯಾಯಾಧೀಶರು ಸದ್ವರ್ತನೆಯಿಂದ ಇದ್ದಿದ್ದರೆ ಅವರ ಆಜೀವಪರ್ಯಂತ ಅವರನ್ನು ಅಧಿಕಾರದಲ್ಲಿರಿಸಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಅಮೆರಿಕದಲ್ಲಿ ಈ ಪದ್ಧತಿಯಿದೆ. ಅಲ್ಲಿನ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರು ಸದ್ವರ್ತನೆಯಿಂದಿರುವವರೆಗೂ ಅಧಿಕಾರದಲ್ಲಿರಬಲ್ಲರು. ಒಮ್ಮೆ ನೇಮಕಗೊಂಡರೆ ದೋಷಾರೋಪಣ ವಿಧಾನದ ವಿನಹ ಬೇರೆ ರೀತಿಯಲ್ಲಿ ಅವರನ್ನು ತೆಗೆದುಹಾಕಲು ಸಾಧ್ಯವಿಲ್ಲ. ಹಾಗಿಲ್ಲದೆ ಒಬ್ಬ ನ್ಯಾಯಾಧೀಶ ಮೊದಲೇ ನಿವೃತ್ತಿಗೊಳ್ಳಬೇಕೆಂದು ಇಚ್ಛೆಪಟ್ಟರೆ ಅವನು ತನ್ನ 70ನೆಯ ವಯಸ್ಸಿನಲ್ಲಿ ನಿವೃತ್ತಿಗೊಳ್ಳಬಹುದು. ಭಾರತದಲ್ಲಿಯೂ ನ್ಯಾಯಾಧೀಶರಿಗೆ ದೀರ್ಘಕಾಲದ ಅಧಿಕಾರಾವಧಿಯಿದೆ. ಇಲ್ಲಿನ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರು ತಮ್ಮ 65ವರ್ಷ ವಯಸ್ಸಿನವರೆಗೂ ಅಧಿಕಾರದಲ್ಲಿರುತ್ತಾರೆ. ಆದರೆ ರಷ್ಯದ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರನ್ನು ಅಲ್ಲಿನ ಸುಪ್ರೀಮ್ ಸೋವಿಯತ್ ಐದು ವರ್ಷ ಅವಧಿಗೆ ಚುನಾಯಿಸುತ್ತದೆ. ಅವರಿಗೆ ಪುನರಾಯ್ಕೆಗೊಳ್ಳುವ ಅವಕಾಶವೂ ಇದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅಥವಾ ದುರ್ನೀತಿಗಿಳಿದರೆ ಅಥವಾ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಶಕ್ತರಾದರೆ ಅಂತಹವರನ್ನು ಅಧಿಕಾರದಲ್ಲಿ ಮುಂದುವರಿಸಲಾಗದು. ಅವರನ್ನು ತೆಗೆದು ಹಾಕುವ ಅಧಿಕಾರವನ್ನು ಒಬ್ಬ ವ್ಯಕ್ತಿಗೆ ಕೊಡುವ ಬದಲು ಹಲವರ ತೀರ್ಮಾನಕ್ಕೆ ಬಿಡುವುದು ಒಳಿತು ಎನ್ನುವುದು ಅನುಭವಸಿದ್ಧ ಅಭಿಪ್ರಾಯ. ಆದ್ದರಿಂದಲೆ ಆಯಾ ದೇಶದ ಶಾಸಕಾಂಗಗಳ ಸದಸ್ಯರ ಬಹುಮತಾಭಿಪ್ರಾಯಕ್ಕೆ ಈ ವಿಷಯವನ್ನು ಬಿಡಲಾಗಿದೆ.

ಅಮೆರಿಕದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ದೋಷಾರೋಪದ ಬಗ್ಗೆ ವಿಚಾರಣೆಮಾಡಿ ಕಾಂಗ್ರೆಸ್ಸಿನ ಮೂಲಕ ತೆಗೆದುಹಾಕಲಾಗುವುದು. ಇಂಥ ಸಂದರ್ಭದಲ್ಲಿ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ದೋಷಾರೋಪಣೆ ಮಾಡಿದಾಗ ಮೇಲ್ಮೆನೆಯಾದ ಸೆನೆಟ್ ವಿಚಾರಣೆ ನಡೆಸುತ್ತದೆ.

ಭಾರತದಲ್ಲಿ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರಲ್ಲಿ ಯಾರನ್ನಾದರೂ ಅಧಿಕಾರದಿಂದ ತೆಗೆದುಹಾಕಬೇಕಾದರೆ ಆ ಬಗ್ಗೆ ಮೊದಲು ಸಂಸತ್ತಿನ ಎರಡೂ ಸದನಗಳಲ್ಲಿಯೂ ಬಹುಮತದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಈ ಬಹುಮತ ಸಂಖ್ಯೆ ಸದನದ ಒಟ್ಟು ಸಂಖ್ಯೆಯ ಬಹುಮತ ಸಂಖ್ಯೆಯಾಗಿರಬೇಕು ಮತ್ತು ಹಾಜರಿದ್ದು ಮತನೀಡುವವರಲ್ಲಿ ಮೂರನೆಯ ಎರಡುಭಾಗಕ್ಕೆ ಕಡಮೆ ಇಲ್ಲದ ಬಹುಮತದ ಸಂಖ್ಯೆಯೂ ಆಗಿರಬೇಕು. ಸಂಸತ್ತಿನ ಎರಡು ಸದನಗಳು ಒಂದೇ ಅಧಿವೇಶನದಲ್ಲಿ ಅಂಗೀಕರಿಸಿದ ಈ ನಿರ್ಣಯದ ಪ್ರತಿಯನ್ನು ರಾಷ್ಟ್ರಾಧ್ಯಕ್ಷರ ಮುಂದೆ ಮಂಡಿಸಿದರೆ ಅವರು ಸಂಬಂಧಪಟ್ಟ ನ್ಯಾಯಾಧೀಶರನ್ನು ಅಧಿಕಾರದಿಂದ ತೆಗೆದುಹಾಕುತ್ತಾರೆ. ಹೀಗೆ ಅವರನ್ನು ಅಧಿಕಾರದಿಂದ ತೆಗೆದುಹಾಕುವುದಕ್ಕೆ ಮುನ್ನ ಅವರ ದುರ್ವರ್ತನೆಯಾಗಲೀ ಅಸಾಮಥ್ರ್ಯವಾಗಲೀ ಸತ್ಯಸಂಗತಿಗಳಿಂದ ಸಮರ್ಥಿಸಲ್ಪಟ್ಟಿರಬೇಕು.

ರಷ್ಯದಲ್ಲಿ ಸುಪ್ರೀಮ್ ಸೋವಿಯತ್ತಿನ ಪ್ರಿಸೀಡಿಯಂ ಅಲ್ಲಿನ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರನ್ನು ಅಧಿಕಾರದಿಂದ ತೆಗೆದುಹಾಕಬಲ್ಲದು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನಿರ್ಭೀತಿಯಿಂದ ಮತ್ತು ಯಾವ ರೀತಿಯ ಆಸೆ, ಅಮಿಷಗಳಿಗೂ ಬಲಿಯಾಗದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾದರೆ ಅವರ ಜೀವನದ ಅಗತ್ಯಕ್ಕೆ ಅವಶ್ಯಕವಾದಷ್ಟು ವೇತನ ಅವರಿಗೆ ದೊರೆಯಬೇಕು. ಅವರು ನಿವೃತ್ತರಾದ ಮೇಲೂ ಸುಖವಾಗಿ ಬಾಳುವುದಕ್ಕೆ ಅಗತ್ಯವಾದ ನಿವೃತ್ತಿವೇತನ ಪಡೆಯುವಂತಿರಬೇಕು. ಅವರ ವೇತನ ಮತ್ತಿತರ ಸೌಲಭ್ಯಗಳು ನ್ಯಾಯಾಸ್ಥಾನದ ಸ್ಥಾನಮಾನಗಳಿಗೆ ತಕ್ಕಂತಿರಬೇಕು. ಈ ಕಾರಣದಿಂದಲೇ ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿಯೂ ನ್ಯಾಯಾಧೀಶರ ವೇತನ ಮತ್ತು ಇತರ ಸೌಲಭ್ಯಗಳು ಆಯಾದೇಶದ ಆರ್ಥಿಕ ಸ್ಥಿತಿಗತಿ ಗನುಸಾರವಾಗಿ ಉನ್ನತಮಟ್ಟದಲ್ಲಿರುತ್ತವೆ. ಅವರ ವೇತನ ಮತ್ತು ಇತರ ಸೌಲಭ್ಯಗಳನ್ನು ಅವರ ಸೇವಾ ಅವಧಿಯಲ್ಲಿ ಅವರಿಗೆ ಅನನುಕೂಲವಾಗುವ ರೀತಿಯಲ್ಲಿ ಮಾರ್ಪಾಡುಮಾಡಬಾರದು ಎನ್ನುವ ನಿಯಮವೂ ಜಾರಿಯಲ್ಲಿದೆ. ಭಾರತ ಸಂವಿಧಾನದಲ್ಲಿ ನ್ಯಾಯಾಧೀಶರಿಗೆ ಸಂಬಳ ಸಾರಿಗೆಗಳನ್ನು ನಿರ್ದಿಷ್ಟವಾಗಿ ಗೊತ್ತುಮಾಡಲಾಗಿದೆ. ಸರ್ವೋಚ್ಚನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಿಗೆ ಮತ್ತು ಇತರ ನ್ಯಾಯಾಧೀಶರಿಗೆ ಕೊಡುವ ಮಾಹೆಯಾನ ಸಂಬಳವನ್ನು ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. ಇದರ ಜೊತೆಗೆ ಇತರ ಸೌಲಭ್ಯಗಳನ್ನೂ ನೀಡಲಾಗಿದೆ. ಇವರ ಸಂಬಳ, ಸೌಲಭ್ಯಗಳು ಸಂಸತ್ತಿನ ಅನುಮತಿಗೆ ಒಳಪಡುವುದಕ್ಕೆ ಬದಲಾಗಿ ಭಾರತದ ಸಂಚಿತ ನಿಧಿಗೆ ಖರ್ಚು ಹಾಕಲ್ಪಡುತ್ತದೆ. ಆದರೆ ರಾಷ್ಟ್ರದಲ್ಲಿ ಆರ್ಥಿಕ ಪರಿಸ್ಥಿತಿಯ ಬಗ್ಗೆ ರಾಷ್ಟ್ರಾಧ್ಯಕ್ಷರು ತುರ್ತು ಪರಿಸ್ಥಿತಿ ಘೋಷಿಸಿದಾಗ ಇವರ ಸಂಬಳಗಳನ್ನು ಕಡಮೆ ಮಾಡಲು ಪಾರ್ಲಿಮೆಂಟಿಗೆ ಅವಕಾಶವಿದೆ.

ನ್ಯಾಯಾಂಗದ ಆದರ್ಶಗಳಿಗೆ ತಕ್ಕಂತೆ ನ್ಯಾಯಾಧೀಶರ ಅರ್ಹತೆಗಳಿರ ಬೇಕು. ನ್ಯಾಯಾಧೀಶರು ನ್ಯಾಯಶಾಸ್ತ್ರಪಾರಂಗತರೂ ಮೇಧಾವಿಗಳೂ ಅನುಭವಿಗಳೂ ಆಗಿದ್ದು ತಮ್ಮ ವೃತ್ತಿಯಲ್ಲಿ ಸಾಕಷ್ಟು ನುರಿತವರಾಗಿರ ಬೇಕು. ಈ ಕಾರಣದಿಂದ ಸಾಮಾನ್ಯವಾಗಿ ವಕೀಲವೃತ್ತಿಯಲ್ಲಿರುವವರ ಪೈಕಿ ಸೂಕ್ತ ಕಂಡವರನ್ನು ನ್ಯಾಯಾಧೀಶರನ್ನಾಗಿ ಆರುಸುವ ಪದ್ಧತಿ ಇದೆ. ಭಾರತದಲ್ಲಿ ಸರ್ವೋಚ್ಚನ್ಯಾಯಾಲಯದ ನ್ಯಾಯಾಧೀಶರಾಗತಕ್ಕವರು ಭಾರತೀಯ ಪೌರರಾಗಿರಬೇಕು ಮತ್ತು ಒಂದು ರಾಜ್ಯದ ಉಚ್ಚನ್ಯಾಯಾಲಯ ದಲ್ಲಿ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ಅಂತಹ ನ್ಯಾಯಾಲಯ ಗಳಲ್ಲಿ ಅನುಕ್ರಮವಾಗಿ ಐದು ವರ್ಷ ನ್ಯಾಯಾಮೂರ್ತಿಯಾಗಿ ಸೇವೆಸಲ್ಲಿಸಿರಬೇಕು. ಅಥವಾ ಒಂದು ರಾಜ್ಯದ ಉಚ್ಚನ್ಯಾಯಲಯದಲ್ಲಿ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ಅಂತಹ ನ್ಯಾಯಾಲಯಗಳಲ್ಲಿ ಕೊನೆಯ ಪಕ್ಷ ಹತ್ತು ವರ್ಷಕಾಲ ಅನುಕ್ರಮವಾಗಿ ನ್ಯಾಯವಾದಿಯಾಗಿ ಸೇವೆಸಲ್ಲಿಸಿರಬೇಕು. ಅಥವಾ ರಾಷ್ಟ್ರಾಧ್ಯಕ್ಷರ ದೃಷ್ಟಿಯಲ್ಲಿ ಅವರು ರಾಷ್ಟ್ರದ ಶ್ರೇಷ್ಠ ನ್ಯಾಯಾಶಾಸ್ತ್ರಪಂಡಿತರೆಂದು ಪರಿಗಣಿಸಲ್ಪಟ್ಟಿರಬೇಕು. ಅಧಿಕಾರ ಸ್ವೀಕಾರಕ್ಕೆ ಮುನ್ನ ಅಧ್ಯಕ್ಷರ ಮುಂದೆ ಆಗಲಿ ಅಥವಾ ಅವರಿಂದ ನಿಯುಕ್ತರಾದವರ ಪ್ರತ್ಯಕ್ಷದಲ್ಲಿ ಆಗಲಿ ಪ್ರತಿಜ್ಞಾ ಸ್ವೀಕಾರಮಾಡಬೇಕು. ಅಮೆರಿಕ ಮತ್ತು ಬ್ರಿಟನ್‍ಗಳಲ್ಲಿ ನ್ಯಾಯಾಧೀಶರ ಅರ್ಹತೆಗಳನ್ನು ಸಂವಿಧಾನದಲ್ಲಿ ಸಾರದಿದ್ದರೂ ಸಾಮಾನ್ಯವಾಗಿ ಅಲ್ಲಿಯ ನ್ಯಾಯಾಧೀಶರು ನ್ಯಾಯಶಾಸ್ತ್ರವಿಶಾರದರೂ ಸದ್ವರ್ತನಾಶೀಲರೂ ಆಗಿರುತ್ತಾರೆ. ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾ ದವರು ನಿವೃತ್ತರಾದ ಮೇಲೆ ಯಾವುದೇ ನ್ಯಾಯಸ್ಥಾನದಲ್ಲಿ ನಿಂತು ವಾದಮಾಡುವಂತಿಲ್ಲ. ಯಾರ ಪರವಾಗಿಯೂ ವಕಾಲತ್ತು ವಹಿಸುವಂತಿಲ್ಲ.

ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯಪ್ರವೃತ್ತವಾಗಬೇಕಾದರೆ ಅದು ಶಾಸಕಾಂಗ ಮತ್ತು ಕಾರ್ಯಾಂಗಗಳಿಂದ ಪ್ರತ್ಯೇಕ ಅಂಗವಾಗಿರಬೇಕು ಮತ್ತು ಅವುಗಳ ಕಪಿಮುಷ್ಟಿಯಲ್ಲಿರಬಾರದು. ಇಲ್ಲಿ ಮಾಂಟೆಸ್ಕ್ಯೊವಿನ ಅಧಿಕಾರ ಪ್ರತ್ಯೇಕತಾ ತತ್ತ್ವವನ್ನು ಸ್ಮರಿಸಬಹುದು. ಭಾರತದ ಸಂವಿಧಾನದಲ್ಲಿ ನ್ಯಾಯಾಂಗವು ಕಾರ್ಯಾಂಗ ಮತ್ತು ಶಾಸಕಾಂಗಗಳಿಂದ ಪ್ರತ್ಯೇಕ ಅಂಗವಾಗಿರುವಂತೆ ನಿರ್ದೇಶನಗಳಿರುವುದನ್ನು ಕಾಣಬಹುದು.

ಸರ್ವೋಚ್ಚ ನ್ಯಾಯಾಲಯದ ಕಾರ್ಯಗಳು ಮತ್ತು ಅಧಿಕಾರಗಳನ್ನು ಈ ಕೆಳಗೆ ಕಂಡಂತೆ ವಿಂಗಡಿಸಬಹುದು: (1) ಮೂಲಾಧಿಕಾರ. (2) ಮೂಲಭೂತ ಹಕ್ಕುಗಳ ರಕ್ಷಣೆ. (3) ಮೇಲ್ಮನವಿ ಪರಿಶೀಲನಾ ಅಧಿಕಾರ. (4) ಸಲಹಾಧಿಕಾರ. (5) ನ್ಯಾಯಿಕ ವಿಮರ್ಶಾಧಿಕಾರ.

1. ಮೂಲಾಧಿಕಾರ: ಭಾರತದ ಸಂವಿಧಾನದಲ್ಲಿ ನಮೂದಿಸಲ್ಪಟ್ಟ ಕೆಲವು ವಿಷಯಗಳ ಮೇಲಿನ ವಿವಾದಗಳ ವಿಚಾರಣೆ ನಡೆಸಲು ಅಲ್ಲಿನ ಸರ್ವೋಚ್ಚನ್ಯಾಯಾಲಯಕ್ಕೆ ಮಾತ್ರ ಮೂಲಾಧಿಕಾರವಿದೆ.

ಸರ್ವೋಚ್ಚನ್ಯಾಯಾಲಯದ ಮೂಲಾಧಿಕಾರಕ್ಕೊಳಪಟ್ಟ ವಿವಾದಗಳಿವು:

ಅ) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು-ಇವುಗಳ ಮಧ್ಯೆ ಉದ್ಭವಿಸುವ ವಿವಾದಗಳು. ಆ) ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಒಂದು ಪಕ್ಷವಾಗಿ ಮತ್ತು ಇನ್ನಿತರ ಯಾವುದಾದರೂ ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಇನ್ನೊಂದು ಪಕ್ಷವಾಗಿರುವ ವಿವಾದಗಳು. ಇ) ರಾಜ್ಯ ಸರ್ಕಾರಗಳ ಮಧ್ಯೆ ಪರಸ್ಪರರಲ್ಲಿ ಉದ್ಭವಿಸುವ ವಿವಾದಗಳು.

ಅಮೆರಿಕದಲ್ಲಿ ರಾಯಭಾರಿಗಳು, ಇತರ ಮಂತ್ರಿಗಳು ಮತ್ತು ರಾಜತಾಂತ್ರಿಕವರ್ಗದವರಿಗೆ ಸಂಬಂಧಿಸಿದ ಮತ್ತು ರಾಷ್ಟ್ರವು ಒಂದು ಪಕ್ಷವಾಗಿರುವ ಮೊಕದ್ದಮೆಗಳ ಮೇಲೆ ಸರ್ವೋಚ್ಚನ್ಯಾಯಾಲಯಕ್ಕೆ ಮೂಲಾಧಿಕಾರವಿದೆ. ಇಷ್ಟು ಮೊಕದ್ದಮೆಗಳಿಗೆ ಮಾತ್ರ ಅಲ್ಲಿನ ಸರ್ವೋಚ್ಚನ್ಯಾಯಾಲಯದ ಮೂಲಾಧಿಕಾರ ಸೀಮಿತಗೊಂಡಿದೆ.

ರಷ್ಯದ ಸರ್ವೋಚ್ಚ ನ್ಯಾಯಾಲಯಕ್ಕೆ ಸಮಗ್ರ ಒಕ್ಕೂಟಕ್ಕೆ ಸಂಬಂಧಪಟ್ಟ ಮುಖ್ಯವಾದ ಯಾವುದೇ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳ (ಇವು ಯಾವುವೆಂಬುದನ್ನು ಎಲ್ಲೂ ವಿವರಿಸಿಲ್ಲ) ವಿಚಾರಣೆ ನಡೆಸುವ ಮೂಲಾಧಿಕಾರವಿದೆ.

2. ಮೂಲಭೂತ ಹಕ್ಕುಗಳ ರಕ್ಷಣೆ: ವ್ಯಕ್ತಿಗಳ ಮೂಲಭೂತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚನ್ಯಾಯಾಲಯ ಕೆಲವು ಆಜ್ಞೆಗಳನ್ನು ನೀಡಬಲ್ಲದು. ವ್ಯಕ್ತಿ ಪ್ರತ್ಯಕ್ಷೀಕರಣ ಪರಮಾದೇಶ, ನಿಷೇಧಾಜ್ಞೆ, ಕೋವಾರೆಂಟೊ, ಸರ್ಷಿಯರೇರೈ ಇವುಗಳಲ್ಲಿ ಮುಖ್ಯವಾದವು. ವ್ಯಕ್ತಿ ಪ್ರತ್ಯಕ್ಷೀಕರಣ ಎಂಬ ಆಜ್ಞೆಯನ್ನು ನ್ಯಾಯಾಲಯ ಅಕ್ರಮವಾಗಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ಬಂಧನ ವಿಮುಕ್ತನನ್ನಾಗಿ ಮಾಡುವುದ ಕ್ಕೋಸ್ಕರ ನೀಡುವುದು. ಸರ್ವೋಚ್ಚನ್ಯಾಯಾಲಯ ಕೆಳ ಹಂತದ ನ್ಯಾಯ ಸ್ಥಾನಕ್ಕಾಗಲಿ, ಸಂಸ್ಥೆಗಳಿಗಾಗಲಿ, ವ್ಯಕ್ತಿಗಳಿಗಾಗಲೀ ಸಾರ್ವಜನಿಕ ಕೆಲಸ, ಕರ್ತವ್ಯಗಳನ್ನು ಕಡ್ಡಾಯವಾಗಿ ನೆರವೇರಿಸುವಂತೆ ಪರಮಾದೇಶ ನೀಡುತ್ತದೆ. ಕೆಳಗಿನ ನ್ಯಾಯಾಲಯ ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ಕಾರ್ಯಮಾಡದಂತೆ ಮಾಡುವುದಕ್ಕಾಗಿ ಹಾಗೂ ಕೆಳಗಿನ ನ್ಯಾಯಾಲಯ ತನ್ನ ಮುಂದಿರುವ ವಿವಾದವನ್ನು ವಿಚಾರಣೆ ಮಾಡಕೂಡದೆಂದು ಲಿಖಿತ ರೂಪದಲ್ಲಿ ನೀಡುವ ಆಜ್ಞೆಗೆ ನಿಷೇಧಾಜ್ಞೆ ಎಂದು ಕರೆಯಲಾಗಿದೆ. ಯಾವುದಾದರೂ ಒಬ್ಬ ವ್ಯಕ್ತಿ ಅನಧಿಕೃತವಾಗಿ ಅಧಿಕಾರ ಸ್ಥಾನವನ್ನು ಆಕ್ರಮಿಸಲೆತ್ನಿಸಿದರೆ ಅವನು ಅಧಿಕಾರದ ಆಧಾರದ ಮೇಲೆ ಆ ಅಧಿಕಾರಸ್ಥಾನ ವಹಿಸಿಕೊಳ್ಳುತ್ತಿದ್ದಾನೆ ಎನ್ನುವುದನ್ನು ತನ್ನ ಮುಂದೆ ಬಂದು ಸಮರ್ಥಿಸಿಕೊಳ್ಳಲಿ ಎಂದು ಕರೆನೀಡುವ ಆಜ್ಞೆಗೆ ಕೋವಾರೆಂಟೊ ಎಂದು ಹೆಸರು. ಕೆಳಗಿನ ನ್ಯಾಯಾಲಯ ಮಾಡಿದ ತಪ್ಪುಗಳನ್ನು, ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಒಂದು ವಿವಾದದ ಕಟ್ಟು ಅಥವಾ ಸಾಕ್ಷ್ಯ ದಾಖಲೆಗಳನ್ನು ತನ್ನ ಪರಿಶೀಲನೆಗೆ ಕಳುಹಿಸಬೇಕೆಂದು ಸರ್ವೋಚ್ಚನ್ಯಾಯಾಲಯ ನೀಡುವ ಆಜ್ಞೆಗೆ ಸರ್ಷಿಯರೇರೈ ಎಂದು ಹೆಸರು.

ಅಮೆರಿಕ ಸಂವಿಧಾನದ ಹತ್ತು ತಿದ್ದುಪಡಿಗಳು ಅಲ್ಲಿನ ಜನತೆಗೆ ಮೂಲಭೂತ ಹಕ್ಕುಗಳನ್ನಿತ್ತಿವೆ. ಸರ್ವೋಚ್ಚ ನ್ಯಾಯಾಲಯಕ್ಕೆ ಈ ಹಕ್ಕುಗಳ ರಕ್ಷಣೆಯ ಜವಾಬ್ದಾರಿಯಿದೆ. ಈ ಸರ್ವೋಚ್ಚನ್ಯಾಯಾಲಯವೂ ಅಲ್ಲಿಯ ಜನತೆಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕೆಲವು ಆಜ್ಞೆಗಳನ್ನು ನೀಡಬಲ್ಲದು.

ರಷ್ಯದ ಸಂವಿಧಾನ ಪ್ರಪಂಚದ ಇತರ ಯಾವ ರಾಷ್ಟ್ರಗಳ ಸಂವಿಧಾನಗಳ ಮೂಲಭೂತ ಹಕ್ಕುಗಳಿಗಿಂತಲೂ ಹೆಚ್ಚು ಸತ್ವಪೂರ್ಣ ಮೂಲಭೂತ ಹಕ್ಕುಗಳನ್ನು ಅಲ್ಲಿನ ಜನತೆಗಿತ್ತಿದ್ದರೂ ಅವುಗಳ ರಕ್ಷಣೆಯ ಬಗ್ಗೆ ಸಂವಿಧಾನದಲ್ಲೆಲ್ಲೂ ಉಲ್ಲೇಖವಿದ್ದಹಾಗೆ ಕಾಣಿಸುವುದಿಲ್ಲ.

3. ಮೇಲ್ಮನವಿ ಪರಿಶೀಲನಾ ಅಧಿಕಾರ: ಭಾರತದ ಸರ್ವೋಚ್ಚ ನ್ಯಾಯಾಲಯ ಮೂರು ತೆರನಾದ ಮೇಲ್ಮನವಿ ಅರ್ಜಿಗಳನ್ನು (ಅಪೀಲು) ಸ್ವೀಕರಿಸುತ್ತದೆ: 1. ಸಂವಿಧಾನಕ್ಕೆ ಸಂಬಂಧಿಸಿದವು, 2. ಸಿವಿಲ್ ಹಾಗೂ 3. ಕ್ರಿಮಿನಲ್.

ಸಂವಿಧಾನಕ್ಕೆ ಸಂಬಂಧಪಟ್ಟ ಹಾಗೆ ಸಿವಿಲ್, ಕ್ರಿಮಿನಲ್ ಅಥವಾ ಇನ್ನಾವುದಾದರೂ ವಿಚಾರಣೆಗಳಲ್ಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪು, ಆದೇಶ ಅಥವಾ ಸ್ಥಿರಾಜ್ಞೆಗಳ ವಿರುದ್ಧ ಬರುವ ಮೇಲ್ಮನವಿ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ಸ್ವೀಕರಿಸಬಹುದು. ಆದರೆ ಆ ಮೊಕದ್ದಮೆ ಸಂವಿಧಾನದ ನಿಯಮ ವ್ಯಾಖ್ಯೆಗೆ ಸಂಬಂಧಿಸಿದಂತೆ ಸಾಕಷ್ಟು ಸಂದಿಗ್ಧವಾಗಿದೆ ಎಂದು ರಾಜ್ಯದ ಉಚ್ಚ ನ್ಯಾಯಾಲಯ ದೃಢೀಕರಿಸಿ ಅನುಮತಿಯಿತ್ತರೆ ಮಾತ್ರ ಮುಂದೆ ಅದನ್ನು ಸರ್ವೋಚ್ಚನ್ಯಾಯಾಲಯಕ್ಕೆ ಅಪೀಲು ತೆಗೆದುಕೊಂಡು ಹೋಗಬಹುದು.

ಸಿವಿಲ್ ವ್ಯವಹಾರ ಮೊಕದ್ದಮೆಗಳಲ್ಲಿ, ಒಂದು ಮೊಕದ್ದಮೆಗೆ ಸಂಬಂಧಿಸಿದ ಹಣದ ಮೊತ್ತ ಇಪ್ಪತ್ತುಸಾವಿರಕ್ಕೆ ಕಡಮೆ ಇಲ್ಲದ ಅಥವಾ ಅಷ್ಟು ಮೌಲ್ಯಕ್ಕೆ ಕಡಮೆ ಇಲ್ಲದ ಆಸ್ತಿ ಅಥವಾ ಹಕ್ಕಿಗೆ ಸಂಬಂಧಿಸಿದೆ ಎನ್ನುವುದನ್ನು ಉಚ್ಚನ್ಯಾಯಾಲಯ ನಿರ್ಧರಿಸಿ ಅನುಮತಿಯಿತ್ತರೆ ಅಥವಾ ಯಾವ ಮೊಕದ್ದಮೆಯೇ ಆಗಲಿ ಸರ್ವೋಚ್ಚನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲು ಅರ್ಹವಾದ ಮೊಕದ್ದಮೆ ಎಂದು ನಿರ್ಧರಿಸಿ ಅನುಮತಿಯಿತ್ತರೆ ಅಂತಹ ಮೊಕದ್ದಮೆಯನ್ನು ಮೇಲ್ಮನವಿಗೆ ಸರ್ವೋಚ್ಚನ್ಯಾಯಾಲಯಕ್ಕೆ ತೆಗೆದುಕೊಂಡುಹೋಗ ಬಹುದು.

ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸಿದ ಹಾಗೆ ಕೆಳಗಿನ ನ್ಯಾಯಾಲಯಗಳಲ್ಲಿ ಮರಣದಂಡನೆ ಶಿಕ್ಷೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿಯ ಮೇಲೆ ಸರ್ಕಾರ ಹೈಕೋರ್ಟ್‍ನಲ್ಲಿ ಅಪೀಲು ಹೂಡಿದಾಗ ಅದು ಮತ್ತೆ ಮರಣದಂಡನೆಯನ್ನು ವಿಧಿಸಿದ್ದಲ್ಲಿ ಆತ ಸರ್ವೋಚ್ಚ ನ್ಯಾಯಾಲಯಕ್ಕೆ ಮರುಪರಿಶೀಲನೆ ಹೋಗಬಹುದು ಅಥವಾ ಕೆಳಗಿನ ನ್ಯಾಯಾಲಯ ಪರಿಶೀಲಿಸುತ್ತಿರುವ ವಿಚಾರಣೆಯನ್ನು ನೇರವಾಗಿ ಉಚ್ಚನ್ಯಾಯಾಲಯ (ಹೈಕೋರ್ಟ್) ಪರಿಶೀಲಿಸಿ ಮರಣದಂಡನೆ ವಿಧಿಸಿದಾಗಲೂ ಅಂತಹ ತೀರ್ಮಾನದ ವಿರುದ್ಧ ಸರ್ವೋಚ್ಚನ್ಯಾಯಾಲಯಕ್ಕೆ ಅಪೀಲು ಹೋಗಬಹುದು. ಸಿವಿಲ್ ಮತ್ತು ಕ್ರಿಮಿನಲ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಪೀಲಿನ ಪ್ರಾವಿಧಾನಗಳನ್ನು ಬದಲಾಯಿಸಲು ಸಂಸತ್ತಿಗೆ ಅಧಿಕಾರವಿದೆ.

ಕೆಲವು ಸನ್ನಿವೇಶಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ನ್ಯಾಯ ಮಂಡಲಿ ಅಥವಾ ನ್ಯಾಯಾಲಯದ ತೀರ್ಪುಗಳ ವಿರುದ್ಧ ಅಪೀಲು ಹೋಗಲು ಉಚ್ಚನ್ಯಾಯಾಲಯದ ಅನುಮತಿ ದೊರೆಯದಿದ್ದರೂ ತನ್ನ ಸ್ವಂತ ವಿವೇಚನೆ ಮೇಲೆ ವಿಶೇಷ ಅನುಮತಿಯಿತ್ತ ಅಪೀಲುಗಳನ್ನು ವಿಚಾರಣೆಗೆ ಸ್ವೀಕರಿಸಬಲ್ಲದು.

ಅಮೆರಿಕದ ಸರ್ವೋಚ್ಚ ನ್ಯಾಯಾಲಯಕ್ಕೂ ಮೇಲ್ಮನವಿ ಪರಿಶೀಲನೆಯ ಅಧಿಕಾರವಿದೆ. ಅದರ ಮುಂದೆ ಬರುವ ಮೊಕದ್ದಮೆಗಳಲ್ಲಿ ಬಹುಪಾಲು ಸಂಚಾರೀ ಮೇಲ್ಮನವಿ ನ್ಯಾಯಾಲಯ ಅಥವಾ ರಾಜ್ಯಗಳ ಉಚ್ಚ ನ್ಯಾಯಾಲಯಗಳ ತೀರ್ಪುಗಳ ವಿರುದ್ಧ ಬಂದ ಮೇಲ್ಮನವಿ ಅರ್ಜಿಗಳಾಗಿರುತ್ತವೆ. ಈ ಸರ್ವೋಚ್ಚ ನ್ಯಾಯಾಲಯದ ಮೂಲಾಧಿಕಾರ ಕ್ಕಿಂತ ಮೇಲ್ಮನವಿ ವಿಚಾರಣಾಧಿಕಾರವೇ ಹೆಚ್ಚು ವ್ಯಾಪಕವಾಗಿದೆ. ಸಂವಿಧಾನದ ಅರ್ಥವಿವರಣೆಗೆ ಸಂಬಂಧಿಸಿದ ಮೊಕದ್ದಮೆಗಳು, ಕಾಂಗ್ರೆಸ್ ಹೊರಡಿಸಿದ ಶಾಸನಗಳು, ಸೆನೆಟಿನ ಒಪ್ಪಿಗೆಯೊಂದಿಗೆ ಅಧ್ಯಕ್ಷರು ವಿದೇಶಗಳೊಡನೆ ಮಾಡಿಕೊಂಡ ಒಪ್ಪಂದಗಳು, ಸಮುದ್ರಪಡೆಗಳು ಮತ್ತು ಸಮುದ್ರದಲ್ಲಿ ಉಂಟಾಗುವ ವಿವಾದಗಳು, ಸಂಯುಕ್ತ ಸಂಸ್ಥಾನ ಪಕ್ಷವಾಗಿರುವ ವಿವಾದಗಳು, ಒಂದು ಸಂಸ್ಥಾನ ಮತ್ತು ಇನ್ನೊಂದು ಸಂಸ್ಥಾನದ ಪ್ರಜೆಗಳ ನಡುವಣ ವಿವಾದಗಳು, ಹೊರ ರಾಜ್ಯಗಳಿಂದ ಇಲ್ಲವೇ ಅವುಗಳ ನಾಗರಿಕರಿಂದ ಅಥವಾ ಪ್ರಜೆಗಳಿಂದ ಬರತಕ್ಕ ಆಸ್ತಿ ಕುರಿತ ವಿವಾದಗಳು-ಇವೇ ಮೊದಲಾದ ವಿವಾದಗಳ ಮೇಲೆ ಸರ್ವೋಚ್ಚನ್ಯಾಯಾಲಯಕ್ಕೆ ಮೇಲ್ಮನವಿ ವಿಚಾರಣಾಧಿಕಾರವಿದೆ.

ಸರ್ವೋಚ್ಚ ನ್ಯಾಯಾಲಯದ ನ್ಯಾಯಿಕ ಪರಾಮರ್ಶೆಯ ಅಧಿಕಾರ ಚಲಾವಣೆಯು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತ ಜನಪರ ನೀತಿಯನ್ನು ಪುರಸ್ಕರಿಸಿದುದು 1973ರ ಅನಂತರ ಬೆಳೆದು ಬಂದ ಮಹತ್ತರ ಸಾಂವಿಧಾನಿಕ ಬೆಳೆವಣಿಗೆ. ಸಂಸತ್ತು ಸಂವಿಧಾನ ತಿದ್ದುಪಡಿಯ ಅಧಿಕಾರವನ್ನು ಸಂವಿಧಾನದ ಮೂಲವಿನ್ಯಾಸವನ್ನು ಬದಲಿಸುವ ರೀತಿಯಲ್ಲಿ ಚಲಾಯಿಸಲು ಸಾಧ್ಯವಿಲ್ಲವೆಂದು ತೀರ್ಪು ನೀಡಿದುದು (ಕೇಶವಾನಂದ ಭಾರತಿ ಪ್ರಕರಣ, 1973) ಸರ್ವೋಚ್ಚನ್ಯಾಯಾಲಯದ ಇತಿಹಾಸದಲ್ಲಿ ಒಂದು ಮೈಲುಗಲ್ಲು. ತುರ್ತುಪರಿಸ್ಥಿತಿಯ ಅನಂತರ ಭಾರತದಲ್ಲಿ ಮೂಲಭೂತ ಹಕ್ಕುಗಳ ವಿಸ್ತøತ ಅರ್ಥದ ವ್ಯಾಖ್ಯಾನವನ್ನು ನೀಡುತ್ತಾ ಮಾನವ ಹಕ್ಕುಗಳ ಸಾಮಾಜಿಕ ಆಯಾಮವನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡದ್ದು ಸ್ವಾಗತಾರ್ಹ ಬೆಳೆವಣಿಗೆ. ಅಧಿಕಾರ ದುರುಪಯೋಗಕ್ಕೆ ತಡೆ, ಕಾನೂನಿನ ಆಳ್ವಿಕೆಯ ಗಂಭೀರ ಅನುಷ್ಠಾನ, ದೀನ ದಲಿತರ, ಮಕ್ಕಳ, ಮಹಿಳೆಯರ, ಜೀತದಾಳುಗಳ, ಕಾರ್ಮಿಕರ, ಖೈದಿಗಳ ಹಾಗೂ ಸಾಮಾಜಿಕ ನಿಮ್ನ ವರ್ಗದ ಜನರ ರಕ್ಷಣೆ ಇತ್ಯಾದಿ ಉದ್ದೇಶಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಹೊಸ ಸಾಧನದ ಮೂಲಕ ಭಾರತೀಯ ಸರ್ವೋಚ್ಚ ನ್ಯಾಯಾಲಯ ಜನ ಸಾಮಾನ್ಯರ ಸರ್ವೋಚ್ಚ ನ್ಯಾಯಾಲಯವಾಗಿ ಅಗಾಧ ಎತ್ತರಕ್ಕೆ ಬೆಳೆದಿದೆ.

ರಷ್ಯದ ಸರ್ವೋಚ್ಚ ನ್ಯಾಯಾಲಯ ಮುಖ್ಯವಾಗಿ ಒಂದು ಮೇಲ್ಮನವಿ ವಿಚಾರಣಾ ನ್ಯಾಯಾಲಯವೇ ಆಗಿದೆ.

4. ಸಲಹಾಧಿಕಾರ: ಭಾರತದ ಸಂವಿಧಾನದ 143ನೆಯ ವಿಧಿ ಪ್ರಕಾರ ರಾಷ್ಟ್ರಾಧ್ಯಕ್ಷರು ಯಾವಾಗ ಬೇಕಾದರೂ ಯಾವುದೇ ಕ್ಲಿಷ್ಟ, ಸಂದಿಗ್ಧ ನ್ಯಾಯ ಸಂಗತಿಗಳ ಬಗ್ಗೆ ಸರ್ವೋಚ್ಚನ್ಯಾಯಾಲಯದ ಸಲಹೆ ಕೇಳಬಹುದು. ಅಮೆರಿಕ ಮತ್ತು ರಷ್ಯದ ಸರ್ವೋಚ್ಚನ್ಯಾಯಾಲಯಗಳಿಗೆ ಸಲಹಾಧಿಕಾರವಿಲ್ಲ.

5. ನ್ಯಾಯಿಕ ವಿಮರ್ಶಾಧಿಕಾರ: ಅಮೆರಿಕದಲ್ಲಿ ಕಾಂಗ್ರೆಸ್ಸಿನ ಯಾವುದಾದರೂ ಶಾಸನಗಳು ಅಥವಾ ಕಾರ್ಯಾಂಗದ ಆದೇಶಗಳು ಸಂವಿಧಾನಕ್ಕೆ ವಿರುದ್ಧವಾಗಿದ್ದರೆ ಅಂತಹವುಗಳನ್ನು ರದ್ದುಗೊಳಿಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯಕ್ಕಿದೆ. ಇದಕ್ಕೆ ನ್ಯಾಯಿಕ ವಿಮರ್ಶೆ ಎಂದು ಕರೆಯಲಾಗುತ್ತಿದೆ. ಕಾಂಗ್ರೆಸ್ಸಿನ ಶಾಸನಗಳು ಅಥವಾ ಕಾರ್ಯಾಂಗದ ಆದೇಶಗಳು ಸಂವಿಧಾನಬದ್ಧವಾಗಿದ್ದು, ಪ್ರಜೆಗಳ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟುಮಾಡುವಂತಿದ್ದರೆ ಅಂತಹ ಶಾಸನ ಅಥವಾ ಕಾರ್ಯಾಂಗದ ಆದೇಶಗಳ ಮೇಲೂ ಸರ್ವೋಚ್ಚನ್ಯಾಯಾಲಯ ತನ್ನ ನ್ಯಾಯಿಕವಿಮರ್ಶಾಧಿಕಾರವನ್ನು ಬಳಸಬಲ್ಲದು.

ರಷ್ಯದಲ್ಲಿ ಗಣತಂತ್ರಗಳ, ಸುಪ್ರೀಮ್ ಸೋವಿಯತ್‍ಗಳ ಮತ್ತು ಪ್ರಿಸೀಡಿಯಂಗಳ ನಿರ್ಣಯಗಳು ಕೇಂದ್ರದ ಶಾಸನಗಳಿಗೆ ವಿರುದ್ಧವಾಗಿದ್ದರೆ ಅಥವಾ ಒಂದು ಗಣತಂತ್ರದ ತೀರ್ಮಾನ ಇತರ ಗಣತಂತ್ರಗಳ ಆಸಕ್ತಿಗಳಿಗೆ ಧಕ್ಕೆತರುವ ಹಾಗಿದ್ದರೆ ಅಲ್ಲಿನ ಸರ್ವೋಚ್ಚನ್ಯಾಯಾಲಯ ಅವುಗಳನ್ನು ವಿಮರ್ಶಿಸಬಹುದು. ಹೀಗೆ ಒಂದು ರೀತಿಯಲ್ಲಿ ಅಲ್ಲಿನ ಸರ್ವೋಚ್ಚನ್ಯಾಯಾಲಯ ಗಣತಂತ್ರಗಳ ಕಾನೂನುಗಳ ಮತ್ತು ಆಜ್ಞೆಗಳ ನ್ಯಾಯಿಕ ವಿಮರ್ಶೆ ನಡೆಸುತ್ತದೆ ಎನ್ನಬಹುದು. ಆದರೆ ಕೇಂದ್ರಸರ್ಕಾರದ ಕಾನೂನುಗಳ ನ್ಯಾಯಿಕ ವಿಮರ್ಶೆ ನಡೆಸುವ ಅಧಿಕಾರ ಅದಕ್ಕಿಲ್ಲ. (ಯು.ಜಿ.ಎಮ್.)