ಸರ್ವೋದಯ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯವಾಗಿ ಸಕಲರ ಹಿತರಕ್ಷಣೆ ಹಾಗೂ ಏಳಿಗೆ ಬಯಸುವ ಮಾರ್ಗ. ಈ ಬಗೆಯ ಗಾಂಧಿ ಚಿಂತನೆಯನ್ನು ಕಾರ್ಯರೂಪಕ್ಕೆ ತಂದು ಅದೊಂದು ಪ್ರಭಾವಪೂರ್ಣ ಶಕ್ತಿಯಾಗುವಂತೆ ವಿನೋಬಾಭಾವೆ ಮತ್ತು ಜಯಪ್ರಕಾಶನಾರಾಯಣ ರೂಪಿಸಿದ ಒಂದು ಪಥ. ಸಕಲ ಮಾನವ ವರ್ಗದ ಮತ್ತು ಸಕಲ ಜೀವರಾಶಿಯ ನೆಮ್ಮದಿ, ಕ್ಷೇಮ, ಸೌಖ್ಯ, ಹಿತ ಮಹಾತ್ಮಾಗಾಂಧಿಯವರ ಸರ್ವೋದಯದ ಕಲ್ಪನೆಯಾಗಿತ್ತು. ಸರ್ವೋದಯ ನವಮಾನವ ಸಮಾಜ ಮತ್ತು ಸಂಸ್ಕøತಿಗಳನ್ನು ರೂಪಿಸಲು ಮಾರ್ಗ ತೋರಿತೆನ್ನಬಹುದು.

ಸರ್ವೋದಯ ಕಲ್ಪನೆ ಭಾರತಕ್ಕೆ ಹೊಸದೇನಲ್ಲ. ಇಲ್ಲಿಯ ಋಷಿ ಮುನಿಗಳು ಜಗತ್ತಿನ ಕಲ್ಯಾಣ ಬಯಸಿದವರು. ಸರ್ವಜೀವಿಗಳ ಕ್ಷೇಮಕ್ಕಾಗಿ ತಪ್ಪಸ್ಸನ್ನಾಚರಿಸಿದವರು. ಮಾನವ ಪ್ರೇಮಿಗಳ ಹೃದಯ ಯಾಂತರಾಳದಲ್ಲಿ ಅಡಗಿರುವ ಪರಮೋಚ್ಚಭಾವನೆಯೂ ಇದಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದರೆನ್ನಲಾದ ಜೈನಾಚಾರ್ಯರಾದ ಸಮಂತಭದ್ರರು ರಚಿಸಿರುವ ಗ್ರಂಥದಲ್ಲಿ ಈ ಮಾತಿದೆ ಸರ್ವಾಪದಂ ಆಂತಕರಂ ನಿರಂತಂ, ಸರ್ವೋದಯಂ ತೀರ್ಥಮಿದಂ ತವೈವ. ಅಂದರೆ ಎಲ್ಲ ಆಪತ್ತುಗಳನ್ನು ಎಲ್ಲ ಕಾಲದಲ್ಲೂ ಪರಿಹರಿಸುವ ಪವಿತ್ರ ಶಕ್ತಿ ಸರ್ವೋದಯ ಒಂದೇ ಎಂಬುದಾಗಿದೆ. ಭಾರತದಲ್ಲಿ ಸರ್ವೋದಯದ ಕಲ್ಪನೆ ಉಪನಿಷತ್ತುಗಳಷ್ಟೇ ಪುರಾತನ ವಾದದು. ಇದಕ್ಕೆ ಋಷಿಮುನಿಗಳ ಪ್ರಾರ್ಥನೆಯಲ್ಲೂ ಅನೇಕ ಉದಾಹರಣೆ ಸಿಗುತ್ತವೆ.

ಗಾಂಧೀಜಿಗೆ ಸರ್ವೋದಯದ ಕಲ್ಪನೆಗೆ ಮೂಲವಾದದ್ದು ಜಾನ್ ರಸ್ಕಿನ್ನನ ಕೃತಿ ಅನ್‍ಟು ದಿಸ್ ಲಾಸ್ಟ್ ಎನ್ನಲಾಗಿದೆ. ಗಾಂಧೀಜಿಯವರು ಆ ಕೃತಿಯನ್ನು ಗುಜರಾತಿ ಭಾಷೆಗೆ ಅನುವಾದ ಮಾಡಿ ಆ ಕೃತಿಗೆ ಸರ್ವೋದಯ ಎಂದು ಹೆಸರನ್ನಿಟ್ಟರು. ಅನ್‍ಟು ದಿಸ್ ಲಾಸ್ಟ್ ಎಂಬ ಮಾತು ಬೈಬಲ್ಲಿನದು. ಕಟ್ಟಕಡೆಯವನಿಗೂ ಸಮಾನ ನ್ಯಾಯ ದೊರಕ ಬೇಕೆಂಬ ಸಾರಾಂಶದ ಬೈಬಲ್ಲಿನ ಒಂದು ಕಥೆಗೆ ಸಂಬಂಧಿಸಿದ್ದು. ಈ ಕಥೆಯ ತತ್ತ್ವವನ್ನೇ ರಸ್ಕಿನ್ ಪ್ರತಿಪಾದಿಸಲು ಪುಸ್ತಕ ಬರೆದ. ಔದ್ಯೋಗಿಕ ಕ್ರಾಂತಿಯ ಪರಿಣಾಮವಾಗಿ ಇಂಗ್ಲೆಂಡ್ ಮತ್ತು ಯುರೋಪಿನಲ್ಲಿ ಉಂಟಾದ ಅರ್ಥಮೋಹ, ಹಣಗಳಿಕೆಗಾಗಿ ನೀತಿನಿಯಮಗಳ ಉಲ್ಲಂಘನೆ, ಇದರಿಂದ ಪ್ರಾಪ್ತವಾದ ದುಃಖ-ದಾರಿದ್ರ್ಯ ಮತ್ತು ಮಾನವೀಯತೆಯ ಅವನತಿಯನ್ನು ರಸ್ಕಿನ್ ಚಿತ್ರಿಸಿದ. ಇದಕ್ಕೆ ಅವನು ಪರಿಹಾರವನ್ನೂ ಸೂಚಿಸಿದ್ದ. ಮಾನವ ಬಾಳಿಗೆ ಸಮಾನವಾದ ಸಂಪತ್ತು ಬೇರೊಂದಿಲ್ಲ; ಬಾಳಿನ ಉತ್ಕøಷ್ಟ ನೀತಿ ನಿಯಮಗಳ ಅನುಸರಣೆಯಿಂದ ಸಾಮಾಜಿಕ ನ್ಯಾಯ ಪ್ರಾಪ್ತವಾಗುತ್ತದೆ. ಈ ನ್ಯಾಯದಿಂದ ದಲಿತರ, ದುಃಖಿತರ ಉದ್ಧಾರ ಆಗುತ್ತದೆ. ಇದರಿಂದ ಸ್ಫೂರ್ತಿಪಡೆದ ಗಾಂಧಿ ಮೂರು ಸಿದ್ಧಾಂತಗಳನ್ನು ಮನಗಂಡರು :

ಸರ್ವರ ಹಿತದಲ್ಲಿ ವ್ಯಕ್ತಿಯ ಹಿತವೂ ಅಡಗಿದೆ, ನ್ಯಾಯವಾದಿಯ ವೃತ್ತಿಯಾಗಲಿ, ನಾಯಿಂದನ ವೃತ್ತಿಯಾಗಲಿ ಎರಡೂ ಸಮಾನ ಬೆಲೆಯುಳ್ಳವು; ಏಕೆಂದರೆ ಅವರವರ ಕೆಲಸಮಾಡಿ ಜೀವನ ನಡೆಸುವ ಹಕ್ಕು ಎಲ್ಲರಿಗೂ ಇದೆ. ರೈತರ ಹಾಗೂ ಕೈಕಸಬುದಾರರ ಜೀವನ ಒಟ್ಟಿನಲ್ಲಿ ಶ್ರಮ ಪ್ರಧಾನ ಯೋಗ್ಯಜೀವನ.

ಮಾನವ ನಿರ್ಮಿತ ದುಃಖ, ದಾರಿದ್ರ್ಯ, ಅಸಮಾನತೆ, ಭಯ ಇವುಗಳಿಗೆಲ್ಲ ಈ ಮೂರು ಸಿದ್ಧಾಂತಗಳಲ್ಲಿ ಪರಿಹಾರವಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ಉತ್ತರವಿದೆ; ಸ್ವಾತಂತ್ರ್ಯ, ಸಮಾನತೆ, ಸೋದರಭಾವ ಇವುಗಳನ್ನು ಸ್ಥಾಪಿಸಲು ಸಾಧ್ಯವಿದೆ.

ಮೊದಲನೆಯ ಸಿದ್ಧಾಂತ ವ್ಯಕ್ತಿಹಿತದ ಮೂಲವನ್ನು ಸೂಚಿಸುತ್ತದೆ. ಸರ್ವ ಎಂಬಲ್ಲಿ ವ್ಯಕ್ತಿಯ ಸಮಾವೇಶವಾಗುತ್ತದೆ. ಸರ್ವರ ಹಿತವನ್ನು ಹಿತವೆಂದು ಪರಿಭಾವಿಸಿ ವ್ಯಕ್ತಿ ದುಡಿದಾಗಲೇ ಅವನ ಹಿತವೂ ಲಭ್ಯ; ಅದು ಬಹುಜನರ ಬಹುಹಿತವಲ್ಲ-ಸರ್ವರ ಸರ್ವಹಿತ. ಇದರ ಮಥಿತಾರ್ಥ, ವ್ಯಕ್ತಿ ಪರಹಿತ ನಿರತನಾಗಿರುತ್ತಾನೆ; ಎಲ್ಲರಿಗೂ ಇರುವುದು ತನಗೂ ಬೇಕು ಎನ್ನುವುದಕ್ಕೆ ಪ್ರತಿಯಾಗಿ ಯಾವೊಬ್ಬನಿಗೂ ಇಲ್ಲವಾ ದುದು ತನಗೂ ಬೇಡವೆಂದು ವರ್ತಿಸುತ್ತಾನೆ. ಇದನ್ನು ಪ್ರೇಮಪೂರಿತ ತ್ಯಾಗ ಎನ್ನಬಹುದು. ಇದು ಕುಟುಂಬಗಳಲ್ಲಿ ವ್ಯಕ್ತವಾಗುತ್ತದೆ. ಹಾಗೇ ಕುಟುಂಬಕ್ಕೇ ಸೀಮಿತವಾಗದೆ ಸಮಾಜಕ್ಕೂ ಅನ್ವಯಿಸುವಂತಾಗಬೇಕು. ಇದರಿಂದ ವ್ಯಕ್ತಿಹಿತ, ಸಮಾಜಹಿತ ಇವುಗಳ ನಡುವಿನ ಅಂತರ ನಾಶವಾಗುವುದು.

ಎರಡನೆಯದು ಸಮಾಜಕ್ಕೆ ಉಪಯುಕ್ತವಾದ ಎಲ್ಲ ಕೆಲಸಗಳೂ ವೃತ್ತಿಗಳೂ ಸಮಾನ ಬೆಲೆಯುಳ್ಳವು ಎಂಬುದನ್ನು ನಾವು ನೈತಿಕ ದೃಷ್ಟಿಯಿಂದ ಒಪ್ಪಿಕೊಂಡರೂ ಲೌಕಿಕ ದೃಷ್ಟಿಯಿಂದ ಸ್ವೀಕಾರ ಮಾಡಿಲ್ಲ. ಇದು ಆರ್ಥಿಕ ಅಸಮಾನತೆಗೆ, ಮಾನಸಿಕ ಹಿಂಸೆಗೆ ಹಾಗೂ ಶೋಷಣೆಗೆ ಕಾರಣವಾಗುತ್ತದೆ. ವ್ಯಕ್ತಿ ವ್ಯಕ್ತಿಯನ್ನು ಗುಂಪು ಗುಂಪನ್ನು ಸಮುದಾಯ ಸಮುದಾಯವನ್ನು ಶೋಷಣೆಗೆ ಗುರಿಮಾಡಲು ಈ ಆರ್ಥಿಕ ಅಸಮಾನತೆಯೇ ಕಾರಣ. ಇದು ಯುದ್ಧಕ್ಕೂ ಸರ್ವಾಧಿಕಾರಕ್ಕೂ ಮೂಲ ಕಾರಣವಾಗ ಬಹುದು. ಆದ್ದರಿಂದ ಜೀವನೋಪಾಯದ ದೃಷ್ಟಿಯಿಂದ ನಡೆಯುವ ಸಕಲ ವೃತ್ತಿಗಳಿಗೂ ಸಮಾನ ಬೆಲೆ ದೊರೆಯುವಂತಾಗಬೇಕು ಎಂಬುದು ಸರ್ವೋದಯದ ಆಶಯ. ಹಾಗೆಯೇ ಮೂರನೆಯ ಸಿದ್ಧಾಂತ, ಶ್ರಮಪ್ರಧಾನ ಬಾಳಿನ ಹಿರಿಮೆ ಹಾಗೂ ನಿಷ್ಠೆಯ ಅಗತ್ಯ ತಿಳಿಸುತ್ತದೆ. ಕೈಕೆಸರಾಗುವ, ಉಡುಪು ಕೊಳೆಯಾಗುವ, ಮೈಬೆವರಿನಿಂದ ತೋಯುವ ಕಾಯಕ ಬೇರೆ ಯಾವುದೇ ಬಗೆಯ ಕಾಯಕಗಳಿಗೆ ಕಡಿಮೆಯಿಲ್ಲ ಎಂಬುದನ್ನು ತಿಳಿಸುತ್ತದೆ. ಪರಾವಲಂಬನೆ ಒಳ್ಳೆಯದಲ್ಲವೆಂಬುದೂ ಇದರಲ್ಲಿ ಅಡಗಿರುವ ಒಂದು ಅಂಶ.

ವ್ಯಕ್ತಿಜೀವನ ಪರಿವರ್ತನೆಯಾಗದೆ ಸಮಾಜ ಪರಿವರ್ತನೆ ಆಗದು ಎಂಬುದನ್ನು ಗಾಂಧೀಜಿಯವರು ಹೇಳಿದರು. ಅದಕ್ಕೆ ಸಂಬಂಧಿಸಿದಂತೆ ಗಾಂಧೀಜಿ ಸಾಧ್ಯಕ್ಕಿಂತ ಸಾಧನವೇ ಪ್ರಧಾನ, ವ್ಯಕ್ತಿ ತನ್ನ ಕರ್ತವ್ಯಗಳನ್ನು ನೇರ್ಪಿನಿಂದ ಮಾಡಿದರೆ ಲಭಿಸಬೇಕಾದ ಹಕ್ಕು ತಾನಾಗಿಯೇ ಲಭಿಸುತ್ತದೆ, ಸಾಧನ ಶುದ್ಧವಾಗಿರಬೇಕು, ನೀತಿಯುಕ್ತವಾಗಿರಬೇಕು, ಭೌತಿಕಸುಖ ಮತ್ತು ಆರ್ಥಿಕಾಭಿವೃದ್ಧಿ ಇವೇ ಜೀವನದ ಮುಖ್ಯ ಗುರಿಯಲ್ಲ ಎಂದರು ಜೀವನದ ಉತ್ಕರ್ಷವೆಂದರೆ ಗುಣೋತ್ಕರ್ಷ; ಶೀಲವೃದ್ಧಿ, ಸತ್ಯ ಸರ್ವಪ್ರಧಾನ, ಅದು ಸಾಕ್ಷಾತ್ಕಾರದ ಗುರಿ - ಅಹಿಂಸೆ ಅದಕ್ಕೆ ರಾಜಮಾರ್ಗವೆಂದರು.

ಇವುಗಳ ಸಾಧನೆಗಾಗಿ ಗಾಂಧೀಜಿ ಕೆಲವು ರಚನಾತ್ಮಕ ಕಾರ್ಯಗಳನ್ನು ರೂಪಿಸಿದರು. ಇವರ ಕಾಲದಲ್ಲಿ ಅವು ರಾಷ್ಟ್ರದೀಕ್ಷೆಗಳಾಗಿದ್ದುವು : ಖಾದೀ, ಗ್ರಾಮೋದ್ಯೋಗಗಳು, ಹರಿಜನೋದ್ಧಾರ, ಸ್ತ್ರೀಜನೋದ್ಧಾರ, ವಯಸ್ಕರ ಶಿಕ್ಷಣ, ಜೀವನ ಶಿಕ್ಷಣ, ರಾಷ್ಟ್ರಭಾಷಾ ಹಿಂದಿ, ಕೋಮುವಾರು ಐಕ್ಯಮತ್ಯ, ಆರ್ಥಿಕಸಮಾನತೆ, ಪಾನನಿರೋಧ, ವಿದ್ಯಾರ್ಥಿ ಸಂಘಟನೆ, ರೈತಕಾರ್ಮಿಕ ಸಂಘಟನೆ, ಗೋಸೇವೆ, ಕುಷ್ಠರೋಗ ನಿವಾರಣೆ, ಆದಿವಾಸಿ ಗಳ ಉದ್ಧಾರ ಇತ್ಯಾದಿ. ಇವುಗಳನ್ನು ನಡೆಸಲು ಅಖಿಲ ಭಾರತ ಸಂಸ್ಥೆಗಳನ್ನು ಸ್ಥಾಪಿಸಿದರು. ಈ ಎಲ್ಲ ಸಂಸ್ಥೆಗಳೂ ಪ್ರತ್ಯೇಕ ಪ್ರತ್ಯೇಕವಾಗಿ ಸೇವೆ ಸಲ್ಲಿಸುತ್ತಿದ್ದವು. ಗಾಂಧೀಜಿ ನಿಧನರಾದ ಮೇಲೆ 1949ರಲ್ಲಿ ರಚಿತವಾದ ಅಖಿಲಭಾರತ ಸರ್ವಸೇವಾಸಂಘದಲ್ಲಿ ಇವೆಲ್ಲ ಲೀನವಾದವು. ಸತ್ಯ ಅಹಿಂಸೆಗಳ ಆಧಾರದ ಮೇಲೆ ಶೋಷಣೆರಹಿತ, ಜಾತಿರಹಿತ, ವರ್ಗರಹಿತ ಸಮಾಜವನ್ನು ರಚಿಸುವುದೇ ಇದರ ಉದ್ದೇಶ, ಇದೇ ಸರ್ವೋದಯದ ಗುರಿ ಎಂದು ಸರ್ವಸೇವಾಸಂಘದ ಉದ್ದೇಶವನ್ನು ವಿವರಿಸಲಾಗಿದೆ.

ಆಚಾರ್ಯ ವಿನೋಬಾರವರ ನಾಯಕತ್ವದಲ್ಲಿ ಸರ್ವೋದಯದ ವ್ಯಕ್ತ ಸ್ವರೂಪ ಬೆಳೆಯಿತು, ಹೆಚ್ಚು ಪ್ರಚಾರ ಪಡೆಯಿತು. ಸಮಾಜದಲ್ಲಿ ಪ್ರೇಮ, ತ್ಯಾಗ, ಪರಹಿತ ಇವನ್ನು ಉಜ್ಜ್ವಲಗೊಳಿಸಲು ಭೂದಾನ ಆಂದೋಳನ ಪ್ರಾರಂಭಿಸಿದರು. ಈ ಆಂದೋಳನ ಗಾಂಧೀಜಿ ನಿರೂಪಿಸಿದ್ದ ಗ್ರಾಮದಾನ ಇತ್ಯಾದಿ ದಾನಗಳಿಂದ ಸಮಾಜದ ಆರ್ಥಿಕ, ನೈತಿಕ ಸ್ವರೂಪವನ್ನೇ ಬದಲಾಯಿಸಲು ಯತ್ನಿಸಲಾಯಿತು. ಶಾಂತಿಸೇವೆ, ಸರ್ವೋದಯಯಾತ್ರೆ, ಗ್ರಾಮರಾಜ್ಯ-ಇವುಗಳ ಮೂಲಕ ರಾಷ್ಟ್ರ ಮತ್ತು ವಿಶ್ವಶಾಂತಿಯನ್ನುಂಟುಮಾಡಲು ಪ್ರಯತ್ನಿಸಿದರು. ಜಯಜಗತ್ ಎಂಬ ಸೂತ್ರ ಸರ್ವೋದಯದ ಕಹಳೆಯಾಯಿತು.

ಇಂದಿನ ರಾಜಕಾರಣವು ಅಧಿಕಾರ, ಸಂಪತ್ತು, ಆಸೆ ಆಮಿಷಗಳಿಗೆ ಅಧೀನವಾಗಿದೆ. ಅಧಿಕಾರ ಸೇವೆಗೂ ಸಂಪತ್ತು ಲೋಕಹಿತಕ್ಕೂ ವಿನಿಯೋಗವಾಗುತ್ತಿಲ್ಲ. ಸರ್ವೋದಯ ಸಮಾಜದಲ್ಲಿ ಸೇವೆಗೂ ಲೋಕ ಹಿತಕ್ಕೂ ಅವು ವಿನಿಯೋಗವಾಗುತ್ತವೆ. ಪ್ರಭುತ್ವಶಕ್ತಿ ಕರಗಿಹೋಗುತ್ತದೆ. ರಾಜನೀತಿಗೆ ಬದಲಾಗಿ ಲೋಕನೀತಿ, ದಂಡಶಕ್ತಿಗೆ ಬದಲಾಗಿ ಜನಶಕ್ತಿ ಬೆಳೆಯುತ್ತವೆ.

ಸರ್ವೋದಯ ಮೂರು ನಿಷ್ಠೆಗಳಿಂದ ಕೂಡಿದೆಯೆನ್ನಬಹುದು. ಜೀವನದಲ್ಲಿ ತುಂಬು ಶ್ರದ್ಧೆ, ಮಾನವರೆಲ್ಲ ಸಮಾನರು, ಮೂಲತಃ ಒಳ್ಳೆಯವರು ಎಂಬ ಮಾನವನಿಷ್ಠೆ, ಮಾನವನನ್ನೂ ಪ್ರಕೃತಿಯನ್ನೂ ತುಂಬಿಕೊಂಡು ನಿಂತಿರುವ ಅಗೋಚರ ದಿವ್ಯಶಕ್ತಿಯೊಂದು ಎಲ್ಲದರ ಸೂತ್ರಶಕ್ತಿಯಾಗಿದೆ ಎಂಬ ದೈವನಿಷ್ಠೆ. ಈ ಮೂರೂ ಲೋಕಹಿತಕ್ಕೆ ಒಗ್ಗೂಡಿ ಸಾಗಬೇಕು ಎಂಬುದು ಸರ್ವೋದಯದ ಒಂದು ಭಾವನೆ.

ಇಂದು ಸರ್ವೋದಯವೋ ಸರ್ವನಾಶವೋ ಎಂಬುದೇ ಮಾನವನ ಮುಂದಿರುವ ಮಹಾಸಮಸ್ಯೆ. ಯಾರನ್ನೂ ಯಾವ ವರ್ಗವನ್ನೂ ನಾಶಮಾಡದೆ, ರಕ್ತಪಾತಮಾಡದೆ, ಸರ್ವಸಮಾನತೆಯನ್ನು ಸಮಾಜದಲ್ಲಿ ಸೃಷ್ಟಿಸುವ ಮಹಾಸಾಹಸದ ಕಾರ್ಯ ಸರ್ವೋದಯದ್ದಾಗಿದೆ. ವಿe್ಞÁನ, ಆತ್ಮe್ಞÁನ ಎರಡನ್ನೂ ಜೊತೆಗೂಡಿಸಿ ವಿಚಾರ ಮತ್ತು ಪ್ರೇಮಶಕ್ತಿಗಳ ಸಾರ್ವಭೌಮತ್ವದ ಮೇಲೆ ಮನುಜಲೋಕದಲ್ಲಿ ಚಿರಶಾಂತಿ ರೂಪಿಸಲು ಯತ್ನಿಸಲಾಗುತ್ತಿದೆ. ಸರ್ವೋದಯ ನಾಯಕ ಜಯಪ್ರಕಾಶ್‍ನಾರಾಯಣರು ಗಾಂಧೀಜಿಯ ಮತ್ತು ವಿನೋಬಾರವರ ಸರ್ವೋದಯ ಆಂದೋಲನವನ್ನು ಮುಂದುವರೆಸಿಕೊಂಡು ಬಂದುದಲ್ಲದೆ ಅನೇಕರನ್ನು ಸರ್ವೋದಯ ಚಳವಳಿಗೆ ದುಡಿಯಲು ಹಚ್ಚಿದರು. ಅವರ ಅನಂತರ ಅವರ ಅನುಯಾಯಿಗಳು ಆ ಚಳವಳಿಯನ್ನು ಮುಂದುವರಿಸಿಕೊಂಡು ಬಂದರು. ಇತ್ತೀಚಿನ ದಿನಗಳಲ್ಲಿ ಜೀವನಮೌಲ್ಯಗಳ ಶೈಥಿಲ್ಯವನ್ನು ನಾವು ಕಾಣತೊಡಗಿದ್ದೇವೆ. ಇದರಿಂದಾಗಿ ಸಮಾಜ ಜೀವನ ಕಲಕಿದೆ. (ಜಿ.ವಿ.ಎನ್.)