ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಲೈನ್ ಶಿಲಾಶ್ರೇಣಿ

ಸಲೈನ್ ಶಿಲಾಶ್ರೇಣಿ = ಸಾಲ್ಟ್‍ರೇಂಜ್ ಶಿಲಾಸಮುದಾಯದ ರೂಪಣೆಯಲ್ಲಿ ಕೇಂಬ್ರಿಯನ್ ಯುಗವನ್ನು ಪ್ರತಿನಿಧಿಸುವ ಶಿಲಾಸ್ತರಗಳು. ಸಾಲ್ಟ್‍ಮಾಲ್ರ್ಸ್ ಪರ್ಯಾಯ ನಾಮ. ಐದು ಶಿಲಾಶ್ರೇಣಿಗಳ ಸಮುದಾಯವಿದು. ಒಟ್ಟು ಮಂದತೆ 800 ಮೀ.

ಉಗಮ : ಈ ಶ್ರೇಣಿ ಅಧಿಕ ಕ್ಷೋಭೆüಗೊಳಗಾದ ಹಾಗೂ ಹೆಚ್ಚು ರಚನಾ ಸಂಕೀರ್ಣತೆ ಇರುವ ಶಿಲೆಗಳಿಂದಾಗಿದೆ. ಓಲ್ಡ್ ಹ್ಯಾಮ್‍ನ ಅಭಿಪ್ರಾಯದಂತೆ ಇದರ ಮೂಲಶಿಲೆಗಳು ತೀವ್ರ ರೂಪಾಂತರಣೆಗೆ ಒಳಗಾಗಿ ಆಮ್ಲೀಯ ಆವಿಯಿಂದ ರೂಪಗೊಂಡಿವೆ. ಇವು ಭೂಅಂತರಾಳ ದಲ್ಲಾದ ಅಂತಸ್ಸರಣದಿಂದಾದವು ಎಂಬುದು ಮಿಡ್ಲುಮಿಸ್‍ನ ಅಭಿಪ್ರಾಯ. ಕ್ರಿಸ್ಟೆಯ ಪ್ರಕಾರ ಇವು ಜಲಜಶಿಲೆಗಳು. ಅಲ್ಲದೆ ಇಂಥ ಶಿಲೆಗಳು ಪ್ರಪಂಚದ ಇತರ ಭಾಗಗಳಲ್ಲೂ ಕಾಣಸಿಗುತ್ತವೆ ಎಂದಿದ್ದಾನೆ. ಕ್ರಿಸ್ಟೆ ಈ ಮೂರು ಬಗೆಯ ಉಗಮಗಳ ಪೈಕಿ ಜಲಜಶಿಲಾಸಂಚಯನ ರೀತಿಯದೆಂಬುದನ್ನು ಹೆಚ್ಚು ಭೂವಿಜ್ಞಾನಿಗಳು ಪ್ರತಿಪಾದಿಸಿರುವರು.

ವಯೋನಿರ್ಧಾರ: ಈ ಶಿಲೆಗಳಲ್ಲಿ ಬೃಹತ್‍ಗಾತ್ರದ ಯಾವ ಜೀವ್ಯವಶೇಷಗಳೇನೂ ಇಲ್ಲ. ಆದರೆ ಇಲ್ಲಿಯ ಕಲ್ಲುಪ್ಪು ಮತ್ತು ಮಾಲ್ರ್ಸ್‍ಗಳಲ್ಲಿ ದೊರೆಯುವ ಸೂಕ್ಷ್ಮಜೀವ್ಯವಶೇಷಗಳಾದ ಸಮ್ಮುಲೈಟಿಸ್ ಮತ್ತಿತರ ಫೊರಾಮಿನಿಫೆರಗಳು ಆ ಶಿಲೆಗಳಿಗೆ ಇಯೊಸೀನ್ ಕಾಲವನ್ನು ಸೂಚಿಸುತ್ತವೆ (ಗೀ, 1934). ಡಾನ್‍ಡಾಟ್ ಮತ್ತು ಖೇವ್ರಗಳಲ್ಲಿರುವ ಸಾಲ್ಟ್ ಮಾಲ್ರ್ಸ್‍ನಲ್ಲಿ ಸುಟ್ಟು ಇದ್ದಲಾಗಿರುವ ಸಸ್ಯಾವಶೇಷಗಳು ದೊರೆತಿವೆ (ಡೇವಿಸ್ ಮತ್ತು ವಾಡಿಯ 1929). ಇದೇ ತೆರನಾದ ಅವಶೇಷಗಳು ನಿಲವಾನ್ ಮತ್ತು ಢಾಕ್ ಪ್ರದೇಶಗಳಲ್ಲೂ ಕಾಣಸಿಗುತ್ತವೆ.

ಬೀರ್ಬಲ್‍ಸಾಹ್ನಿ (1891-1949) ಮತ್ತು ಅವರ ಸಂಶೋಧನ ತಂಡದವರು ಸಲೈನ್ ಶಿಲಾಶ್ರೇಣಿಗಳಲ್ಲಿಯ ಸೂಕ್ಷ್ಮ ಸಸ್ಯಾವಶೇಷಗಳ ವಿಶೇಷ ಅಧ್ಯಯನ ನಡೆಸಿ, ಅದರಲ್ಲೂ ಬೈರಿಗೆ ಬಾವಿಗಳ ಶಿಲಾದಿಂಡಿನ ನಮೂನೆಗಳಿಂದ ದೊರೆತ ಅವಶೇಷಗಳನ್ನು ಪರಿಶೀಲಿಸಿ ಈ ಶಿಲೆಗಳಿಗೆ ಕೇಂಬ್ರಿಯನ್ ಕಾಲಾವಧಿಯನ್ನು ನಿಗದಿಪಡಿಸಿರುವುದು ಅಷ್ಟೇನು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಂಧೂನದಿಯ ಪೂರ್ವದಿಕ್ಕಿಗೆ (ಸಿಸ್-ಇಂಡಸ್) ಇರುವ ಸಲೈನ್ ಶಿಲಾಶ್ರೇಣಿಯ ಸ್ತರಗಳು ಕೇಂಬ್ರಿಯನ್ ಕಾಲದ ಶಿಲೆಗಳ ಕೆಳಗೆ ಕಾಣಸಿಗುತ್ತಿವೆ: ಉದಾ: ಖೇವ್ರ ಮತ್ತು ಖುಷಾಕ್ ಪ್ರದೇಶದಲ್ಲಿ. ಹಾಗೆಯೇ ಪಶ್ಚಿಮಕ್ಕೆ ಬಂದಂತೆಲ್ಲ ಅದರಲ್ಲು ಸಕೇಸರ್ ಮತ್ತು ಟ್ರೆಡಿಯನ್ ಬೆಟ್ಟಗಳಲ್ಲಿ ಈ ಶಿಲೆಗಳು ಟಾಲ್ಚಿರ್ ಬೋಲ್ಡರ್ ಬೆಡ್ ಅಥವಾ ಸ್ಪೆಕಲ್ಡ್ ಸ್ಯಾಂಡ್‍ಸ್ಟೋನ್ ಶಿಲೆಗಳು ಕೇಂಬ್ರಿಯನ್ ಶಿಲೆಗಳ ಮೇಲೆ ಅತಿಕ್ರಮಿಸಿ ಹಾದುಹೋಗಿವೆ.

ಚಿಟ್ಟಡಿಲ್-ಸಕೇಸರ್-ಅಂಬ್ ಪ್ರದೇಶಗಳಲ್ಲಿ ಸ್ತರಭಂಗವಾಗಿರುವುದ ರಿಂದ ಕೇಂಬ್ರಿಯನ್ ಶಿಲಾಪರಂಪರೆ ಮೂರು ಬಾರಿ ಪುನರಾವೃತ್ತಿಯಾ ಗಿದೆ. ಮೇಲೆ ಹೇಳಿದ ಸ್ಥಳಗಳಲ್ಲಿ ಸಲೈನ್ ಶಿಲಾಶ್ರೇಣಿಯ ಮೇಲೆ ಕಡುಕೆಂಪು ಮರಳುಶಿಲೆ ಇಲ್ಲವೆ ಟಾಲ್ಚಿರ್ ಪೆಂಟಿಶಿಲೆಗಳಿವೆ. ಆದರೆ, ಚಿಟ್ಟಡಿಲ್ ವಿಶ್ರಾಂತಿಧಾಮಕ್ಕೆ 2 ಕಿಮೀ ಉತ್ತರದಲ್ಲಿರುವ ಲಂಬ ಸೀಳಿಕೆಯ ನೋಟದಲ್ಲಿ ಸಲೈನ್ ಶಿಲಾಶ್ರೇಣಿ ಮತ್ತು ಟಾಲ್ಚಿರ್ ಶಿಲೆಗಳು ವಿಕೃತಗೊಳ್ಳದ ಜಲಜ ಶಿಲಾ ಸಂಚಯನದ ಸೇರುವೆಗಳಂತೆ ಕಂಡುಬರುತ್ತವೆ. ಆದರೆ ಸಮೀಪದಲ್ಲಿರುವ ಕೆಲವು ಲಂಬ ಸೀಳಿಕೆಗಳಲ್ಲಿ ಟಾಲ್ಚಿರ್ ಶ್ರೇಣಿ ಕೇಂಬ್ರಿಯನ್ ಯುಗದ ಶಿಲೆಗಳ ಮೇಲೆ ಹಾದುಹೋಗಿವೆ. ವಾರ್ಚ ಪ್ರದೇಶದಲ್ಲಿ ಬಹುತೇಕ ತುಳಿತಕ್ಕೊಳಗಾದ ಶಿಲಾಪರಂಪರೆಗಳಿವೆ. ಜಲಾಲ್‍ಪುರ ಪ್ರದೇಶದಲ್ಲಿ ಈ ಶ್ರೇಣಿ ಮಧ್ಯ ಮತ್ತು ಮೇಲಣ ಶಿವಾಲಿಕ್ ಶಿಲೆಗಳ ಮೇಲೆ ಹಾದು ಹೋಗಿವೆ. ಅಲ್ಲದೆ ಕಲ್ಲಾರ್ ಕಹಾರ್ ಎಂಬ ಸ್ಥಳದಲ್ಲಿ, ಸಲೈನ್ ಶಿಲಾಶ್ರೇಣಿಯ ಮೇಲೆ ಲಾಕಿಸುಣ್ಣ ಶಿಲೆಗಳಿವೆ. ಇದನ್ನು ಗೀ ಅವರು ಸಾಲ್ಟ್‍ಮಾಲ್ರ್ಸ್‍ನ ಅಂತಸ್ಸರಣದಿಂದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. *