ಸವಣೂರು ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕು ಮತ್ತು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು, ಪಶ್ಚಿಮ ಮತ್ತು ವಾಯವ್ಯದಲ್ಲಿ ಶಿಗ್ಗಾಂವಿ ತಾಲ್ಲೂಕು, ನೈಋತ್ಯದಲ್ಲಿ ಹಾನಗಲ್ಲೂ ದಕ್ಷಿಣ ಮತ್ತು ಪೂರ್ವಕ್ಕೆ ಹಾವೇರಿ ತಾಲ್ಲೂಕೂ ವ್ಯಾಪಿಸಿವೆ. ಈ ತಾಲ್ಲೂಕನ್ನು 1969 ಮೇ 26ರಂದು ಹಾವೇರಿ ತಾಲ್ಲೂಕಿನಿಂದ 26 ಗ್ರಾಮಗಳನ್ನೂ ಶಿಗ್ಗಾಂವಿ ತಾಲ್ಲೂಕಿನಿಂದ 36 ಗ್ರಾಮ ಮತ್ತು ಸವಣೂರು ಪೇಟೆಯನ್ನೂ ಬೇರ್ಪಡಿಸಿ ರಚಿಸಲಾಯಿತು. ಈಗ 62 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 547.2 ಚ.ಕಿಮೀ. ಜನಸಂಖ್ಯೆ 1,43,968.

ತಾಲ್ಲೂಕಿನ ದಕ್ಷಿಣದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ವರದಾನದಿ ಈ ತಾಲ್ಲೂಕನ್ನು ಹಾವೇರಿ ತಾಲ್ಲೂಕಿನಿಂದ ಬೇರ್ಪಡಿಸಿದೆ. ಈ ನದಿ ತಾಲ್ಲೂಕನ್ನು ಹಲಸೂರಿನ ನೈಋತ್ಯದಲ್ಲಿ ಪ್ರವೇಶಿಸಿ ಮುಂದೆ ಚಿಕ್ಕಮರ ಲಿಹಳ್ಳಿಯ ಪೂರ್ವದಲ್ಲಿ ಹಾವೇರಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಅಲ್ಲಿಯವರೆ ಗಿನ ನದಿಯ ಎಡದಂಡೆ ಪ್ರದೇಶ ಈ ತಾಲ್ಲೂಕಿಗೆ ಸೇರಿದ್ದು ವ್ಯವಸಾಯಕ್ಕೆ ಅನುಕೂಲವಾಗಿದೆ. ವಾರ್ಷಿಕ ಸರಾಸರಿ ಮಳೆ 750 ಮಿಮೀ.

ಕಪ್ಪು ಜೇಡಿಮಣ್ಣಿನ ಮತ್ತು ಮರಳುಮಿಶ್ರಿತ ಕಪ್ಪುಮಣ್ಣಿನ ಪ್ರದೇಶ ವಿರುವ ಈ ತಾಲ್ಲೂಕಿನ ಮುಖ್ಯ ಬೆಳೆಗಳು ಜೋಳ, ಸೇಂಗಾ ಮತ್ತು ಹತ್ತಿ. ಇದರ ಜೊತೆಗೆ ನೀರಾವರಿಯಿಂದ ದ್ವಿದಳ ಧಾನ್ಯಗಳನ್ನೂ ಇತರ ತೋಟದ ಬೆಳೆಗಳನ್ನೂ ಬೆಳೆಯುತ್ತಾರೆ.

ಈ ತಾಲ್ಲೂಕಿನ ಕೆಲವು ಪ್ರಸಿದ್ಧ ಸ್ಥಳಗಳಲ್ಲಿ ಸವಣೂರಿಗೆ ವಾಯವ್ಯ ದಲ್ಲಿ 6 ಕಿಮೀ ದೂರದ ಮಂತ್ರೋಡಿಯಲ್ಲಿರುವ ಸಿದ್ಧೇಶ್ವರಮಠ ಪ್ರಸಿದ್ಧವಾದದ್ದು. ಸವಣೂರಿಗೆ ವಾಯವ್ಯದಲ್ಲಿ 8 ಕಿಮೀ ದೂರದಲ್ಲಿರುವ ಕರಡಗಿಯಲ್ಲಿರುವ ವೀರಭದ್ರ ದೇವಾಲಯ ಬಹು ಹೆಸರಾದದ್ದು.

ಸವಣೂರು ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಧಾರವಾಡ-ಹುಬ್ಬಳ್ಳಿಗೆ ಆಗ್ನೇಯದಲ್ಲಿ 64 ಕಿಮೀ ದೂರದಲ್ಲಿದೆ. ಲಕ್ಷ್ಮೇಶ್ವರ-ಹಾನಗಲ್ಲುಗಳ ನಡುವೆ ಜಿಲ್ಲಾ ಹೆದ್ದಾರಿಯಲ್ಲಿರುವ ಈ ಪಟ್ಟಣದ ಜನಸಂಖ್ಯೆ 35,561. ಈ ಊರು ಸ್ಥಾಪಿತವಾದದ್ದು ಔರಂಗಜೇಬನ ಕಾಲದಲ್ಲಿ. ರವೂಫ್ ಖಾನ್ ಎಂಬವನಿಗೆ ತೋರಗಲ್ಲು, ಬಂಕಾಪುರ ಮುಂತಾದ ಇಪ್ಪತ್ತೆರಡು ಮಹಲುಗಳನ್ನೊಳಗೊಂಡ ಪ್ರದೇಶವನ್ನು ಔರಂಗಜೇಬ್ ಬಹುಮಾನವಾಗಿ ಕೊಟ್ಟ. ಆ ಪ್ರದೇಶಕ್ಕೆ ಮುಖ್ಯ ಪಟ್ಟಣ ಬಂಕಾಪುರ. ರವೂಫ್‍ಖಾನ್ ಜನಮಾರನಹಳ್ಳಿ ಎಂಬ ಗ್ರಾಮಕ್ಕೆ ರಾಜಧಾನಿಯನ್ನು ಬದಲಾಯಿಸ ಬೇಕೆಂದು ನಿಶ್ಚಯಿಸಿದ. ಆಗ ಶ್ರಾವಣಮಾಸ. ಆದ್ದರಿಂದ ರಾಜಧಾನಿಗೆ ಶ್ರಾವಣೂರು ಎಂಬ ಹೆಸರಿಟ್ಟರು. ಅದೇ ಮುಂದೆ ಸವಣೂರು ಎಂದಾಯಿತು.

ಸವಣೂರಿನ ಸುತ್ತಲ ತೋಟಗಳಲ್ಲಿ ಬೆಳೆಯುವ ವೀಳ್ಯದೆಲೆ ಹೆಸರಾ ದದ್ದು. ಸುತ್ತಲ ಗ್ರಾಮಗಳಿಗೆ ವ್ಯಾಪಾರ ಕೇಂದ್ರವಾಗಿರುವ ಈ ಪಟ್ಟಣ ದಿಂದ ಹೆಚ್ಚಾಗಿ ಸೇಂಗಾ, ವೀಳ್ಯದೆಲೆ, ಹತ್ತಿ ರಫ್ತಾಗುತ್ತವೆ. ಮರಕೊಯ್ಯುವ ಮತ್ತು ಹತ್ತಿ ಬಿಡಿಸುವ ಕಾರ್ಖಾನೆಗಳಿವೆ.

ಹಿಂದೆ ಹೆಸರಾದ ಅಗ್ರಹಾರವಾಗಿದ್ದ ಈ ಪಟ್ಟಣದಲ್ಲಿ ಈಗಲೂ ಲಕ್ಷ್ಮೇಶ್ವರ ಅಗಸಿ, ಬಂಕಾಪುರ ಅಗಸಿ ಮತ್ತು ಬೆಲ್ಲದ ಅಗಸಿ ಎಂಬ ಮೂರು ಮಹಾದ್ವಾರಗಳ ಅವಶೇಷಗಳನ್ನು ಕಾಣಬಹುದು. ಹಾಗೇ ಕೆಲವು ಮಸೀದಿಗಳೂ ದೇವಸ್ಥಾನಗಳೂ ನವಾಬರ ಅರಮನೆ, ಸತ್ಯಬೋಧ ಸ್ವಾಮಿಗಳ ಮಠ, ಕೆಲವು ಶಿಲಾಶಾಸನಗಳೂ ಮತ್ತು ಕೋಟೆಯ ಅವಶೇಷಗಳೂ ಇಲ್ಲಿವೆ. ಔರಂಗಜೇಬನ ಕಾಲದಿಂದ ಬ್ರಿಟಿಷರ ಕೈಸೇರುವವರೆಗೆ ಸವಣೂರನ್ನು ಆಳಿದ ಮಾಂಡಲಿಕ ಮನೆತನವನ್ನು ಸವಣೂರು ನವಾಬರು ಎಂದು ಕರೆಯಲಾಯಿತು. (ಎಸ್.ವಿ.ಪಿ.)