ಸವದತ್ತಿ ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಗೋಕಾಕ ಮತ್ತು ರಾಮದುರ್ಗ ತಾಲ್ಲೂಕುಗಳೂ ಪೂರ್ವಕ್ಕೆ ಗದಗ ಜಿಲ್ಲೆಯ ನರಗುಂದ, ದಕ್ಷಿಣದಲ್ಲಿ ಧಾರವಾಡ ಮತ್ತು ನವಲುಗುಂದ ತಾಲ್ಲೂಕುಗಳೂ ಪಶ್ಚಿಮದಲ್ಲಿ ಬೈಲಹೊಂಗಲ (ಸಂಪಗಾಂವ) ತಾಲ್ಲೂಕೂ ಸುತ್ತುವರೆದಿವೆ. ಒಟ್ಟು 116 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 1,581 ಚ.ಕಿಮೀ. ಸವದತ್ತಿಯನ್ನು ಪರಸಗಡ ತಾಲ್ಲೂಕೆಂದೂ ಕರೆಯುತ್ತಾರೆ. ಈ ತಾಲ್ಲೂಕಿನ ಜನಸಂಖ್ಯೆ 3,11,745.

ಈ ತಾಲ್ಲೂಕಿನ ವಾಯವ್ಯ ಮತ್ತು ಆಗ್ನೇಯದ ಮರಳುಗಲ್ಲಿನ ಗುಡ್ಡಶ್ರೇಣಿ ತಾಲ್ಲೂಕನ್ನು ಇಬ್ಭಾಗವಾಗಿಸಿದೆ. ಈ ತಾಲ್ಲೂಕಿನ ಪಶ್ಚಿಮದಲ್ಲಿ ಇಂಗಳಗಿ ಗ್ರಾಮದ ದಕ್ಷಿಣದಲ್ಲಿ ತಾಲ್ಲೂಕನ್ನು ಪ್ರವೇಶಿಸುವ ಮಲಪ್ರಭಾ ಈ ತಾಲ್ಲೂಕಿನ ಮುಖ್ಯನದಿ. ಮಲ್ಲೂರಿನ ಬಳಿ ಪೂರ್ವಕ್ಕೆ ಗಮಿಸಿ ಯಕ್ಕುಂಡಿ ಬಳಿ ದಕ್ಷಿಣಕ್ಕೆ ತಿರುಗಿ ಮಂಗಳಿಯ ಬಳಿ ಉತ್ತರಕ್ಕೆ ತಿರುಗಿ ಮತ್ತೆ ಸ್ವಲ್ಪ ದೂರದಲ್ಲಿ ಪೂರ್ವಾಭಿಮುಖವಾಗಿ ಹರಿದು ಹಡಗಲಿಯಿಂದ ಸ್ವಲ್ಪ ಮುಂದೆ ಮತ್ತೆ ಉತ್ತರಕ್ಕೆ ತಿರುಗಿ ನವಿಲುತೀರ್ಥದ ಮೂಲಕ ಸ್ವಲ್ಪ ದೂರ ಪ್ರವಹಿಸಿ ಅನಂತರ ಈಶಾನ್ಯಾಭಿಮುಖವಾಗಿ ಹರಿದು ಭಂಡಾರಹಳ್ಳಿಯ ಪೂರ್ವದಲ್ಲಿ ರಾಮದುರ್ಗ ತಾಲ್ಲೂಕನ್ನು ಪ್ರವೇಶಿಸುತ್ತದೆ. ಸವದತ್ತಿಯ ವಾಯವ್ಯಕ್ಕೆ ಸು. 6 ಕಿಮೀ ದೂರದಲ್ಲಿ ನವಿಲುತೀರ್ಥದ ಬಳಿ ಈ ನದಿಗೆ ಅಣೆಕಟ್ಟನ್ನು ಕಟ್ಟಲಾಗಿದೆ. ಇದರಿಂದ ಸು. 1,20,000 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಒದಗಿದೆ.

ತಾಲ್ಲೂಕಿನ ಮಧ್ಯದಲ್ಲಿರುವ ಮರಳುಗಲ್ಲಿನ ಗುಡ್ಡದ ದೆಸೆಯಿಂದಾಗಿ ಈ ತಾಲ್ಲೂಕಿನ ಉತ್ತರ ಭಾಗದ ಭೂಮಿ ಮರಳುಗಲ್ಲಿನ ಗರಸು ಮತ್ತು ಮಸಾರಿ ಮಣ್ಣಿನಿಂದ ಕೂಡಿದೆ. ಆಗ್ನೇಯ ದಿಕ್ಕಿನ ಗುಡ್ಡದ ಇಳಿಜಾರಿನ ಕೆಳಗಡೆಯಲ್ಲಿ ಕಪ್ಪುಮಿಶ್ರಿತ ಮಣ್ಣಿನ ಫಲವತ್ತಾದ ಪ್ರದೇಶವಿದೆ. ತಾಲ್ಲೂಕಿನ ಉತ್ತರದ ಭಾಗದಲ್ಲಿ ಮಳೆ ಕಡಿಮೆ. ಪಶ್ಚಿಮದ ಕಡೆಗೆ ಸಹ್ಯಾದ್ರಿ ಗಿರಿಶ್ರೇಣಿಗಳಿಗೆ ಸಮೀಪವಾಗುವ ಪ್ರದೇಶಕ್ಕೆ ಸಾಕಷ್ಟು ಮಳೆಯಾಗುವುದು. ವಾರ್ಷಿಕ ಸರಾಸರಿ ಮಳೆ 661.45 ಮಿಮೀ. ಬೇಸಗೆಯಲ್ಲಿ ಈ ತಾಲ್ಲೂಕಿನ ಹವೆ ಅಧಿಕ ಉಷ್ಣತೆಯಿಂದ ಕೂಡಿರು ತ್ತದೆ. ಹೆಚ್ಚಾಗಿ ಮಳೆಯನ್ನೇ ಅವಲಂಬಿಸಿರುವ ಈ ತಾಲ್ಲೂಕಿನ ಮುಖ್ಯ ಬೆಳೆಗಳೆಂದರೆ ಹತ್ತಿ, ಗೋದಿ, ಜೋಳ, ಸೇಂಗಾ ಮತ್ತು ಸಜ್ಜೆ. ಈ ತಾಲ್ಲೂಕಿನಲ್ಲಿ ಹತ್ತಿ ನೂಲುವುದು, ಗಾಣದ ಎಣ್ಣೆ ತೆಗೆಯುವುದು ಮುಂತಾದ ಗೃಹಕೈಗಾರಿಕೆಗಳಿವೆ.

ಸವದತ್ತಿಯ ಉತ್ತರಕ್ಕೆ 11 ಕಿಮೀ ದೂರದಲ್ಲಿರುವ ಮನೋಳಿ ಮಲಪ್ರಭಾನದಿಯ ಎಡದಂಡೆಯ ಮೇಲಿದೆ. ಇದಕ್ಕೆ ಪ್ರಾಚೀನದಲ್ಲಿ ಮುನಿಪುರ ಅಥವಾ ಮುನಿವಳ್ಳಿ ಎಂಬ ಹೆಸರಿತ್ತು. ಇಲ್ಲಿನ ನದೀ ತೀರದಲ್ಲೇ ಏಳೆಂಟು ಸಣ್ಣದೊಡ್ಡ ಸುಂದರವಾದ ಪಂಚಲಿಂಗದೇವರ ಮಂದಿರಗಳಿವೆ. ಇಲ್ಲಿ 7ನೆಯ ಯಾದವ ಕೃಷ್ಣನ (1246-60) ಕಾಲದ ಶಿಲಾಶಾಸನಗಳಿವೆ. ಊರ ಬದಿಯಲ್ಲಿ ಭದ್ರವಾದ ಹಳೆಯ ಕೋಟೆ ಯಿದ್ದು, ಅಲ್ಲಿ ಹಿಂದೆ ಸಾಮಂತರು ಪೂಜಿಸುತ್ತಿದ್ದ ಹನುಮಂತ ಹಾಗೂ ಉಡಚವ್ವನ ಮಂದಿರಗಳಿವೆ. 1786ರಲ್ಲಿ ಪರಶುರಾಮಭಾವು ತೊರಗಲ್ ಮುಖ್ಯಸ್ಥರಿಂದ ಈ ಕೋಟೆಯನ್ನು ತೆಗೆದುಕೊಂಡಿದ್ದ. 1800ರಲ್ಲಿ ಅದು ಬ್ರಿಟಿಷರ ವಶವಾಯಿತು. ಹಿಂದೆ ಈ ಗ್ರಾಮ ಬಟ್ಟೆಗಳಿಗೆ ಬಣ್ಣಹಾಕುವ ಉದ್ಯಮಕ್ಕೆ ಹೆಸರಾಗಿತ್ತು. ನವಿಲುತೀರ್ಥ ಅಣೆಕಟ್ಟು ಇಲ್ಲಿಗೆ ಸು. 4 ಕಿಮೀ ದೂರದಲ್ಲಿದೆ. ಗುರ್ಲಹೊಸೂರು ನೀರಿನಲ್ಲಿ ಮುಳುಗಿ ಹೋದ್ದರಿಂದ ಅಲ್ಲಿನ ಚಿದಂಬರೇಶ್ವರ ದೇವಸ್ಥಾನವನ್ನು ಇಲ್ಲಿ ಕಟ್ಟಲಾಗಿದೆ. ಮುರಗೋಡ ಸವದತ್ತಿಯ ವಾಯವ್ಯಕ್ಕೆ ಸು. 24 ಕಿಮೀ ದೂರದಲ್ಲಿದೆ. ಇದಕ್ಕೆ ಹಿಂದೆ ತ್ರಿಶಂಗಪುರವೆಂದು ಕರೆಯುತ್ತಿದ್ದ ರಂತೆ. ಇಲ್ಲಿ ಪ್ರಸಿದ್ಧವಾದ ಮಲ್ಲಿಕಾರ್ಜುನ ದೇವಾಲಯವಿದೆ. ಒಂದು ಹಳೆಯ ಕೋಟೆಯಿದ್ದು 1565ರಲ್ಲಿ ನವಲಗುಂದ ವಿಠಲಗೌಡ ಇದನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ. 1680ರಲ್ಲಿ ಶಿವಾಜಿ ಮರಣಹೊಂದುವ ಕಾಲಕ್ಕೆ ಇದು ಅವನ ಅಂಕಿತದಲ್ಲಿತ್ತು. ಮುರಗೋಡ ಕೀಲಿಗಳೆಂದು ಹೆಸರಾದ ಕೀಲಿಗಳು ಇಲ್ಲಿ ತಯಾರಾಗುತ್ತಿದ್ದವು. ಇಲ್ಲಿ ಚಿದಂಬರೇಶ್ವರರ ದೊಡ್ಡ ಮಠವಿದೆ. ಇದು ಚಿದಂಬರ ದೀಕ್ಷಿತರ ಜನ್ಮಸ್ಥಾನ. ಸವದತ್ತಿಯ ಈಶಾನ್ಯಕ್ಕೆ 9 ಕಿಮೀ ದೂರದಲ್ಲಿರುವ ಹೂಲಿಯನ್ನು ಮೊದಲು ಪೂವಲ್ಲಿ ಎಂದೂ ಕರೆಯುತ್ತಿದ್ದರು. ಇಲ್ಲಿ ಶಿಲಾಶಾಸನಗಳಿಂದೊಡಗೂಡಿದ ಪಂಚಲಿಂಗದೇವರ (11ನೆಯ ಶತಮಾನದ) ಸುಂದರವಾದ ಮಂದಿರವಿದೆ. ಇದು ಮೂಲದಲ್ಲಿ ಜೈನ ಬಸದಿಯಾಗಿತ್ತು. ಸುಮಾರು ಅದೇ ಕಾಲದಲ್ಲಿಯೇ ರಚಿಸಿರಬಹುದಾದ ಅಂಧಕೇಶ್ವರ, ತಾರಕೇಶ್ವರ ಮುಂತಾದ ಹಲವಾರು ಮಂದಿರಗಳ ಸಮೂಹವೇ ಈ ಊರ ಗುಡ್ಡದ ಬದಿಯಲ್ಲಿವೆ. ಇಲ್ಲಿ 5ನೆಯ ವಿಕ್ರಮಾದಿತ್ಯ (1018-42) ಮತ್ತು 2ನೆಯ ಸೋಮೇಶ್ವರರಿಗೆ (1068-75) ಸಂಬಂಧಿಸಿದ ಶಿಲಾಶಾಸನಗಳಿವೆ.

ಗ್ರಾಮಕ್ಕೆ ಸನಿಹದಲ್ಲಿಯೇ 200| ಎತ್ತರದ ಗುಡ್ಡದ ತುದಿಯಲ್ಲಿ ಒಂದು ಹಳೆಯ ಕೋಟೆಯಿದೆ. ತಾಳೀಕೋಟೆ ಕದನದ ಅನಂತರ ಇದು ಶಿರಸಂಗಿ ದೇಸಾಯರ ವಶಕ್ಕೆ ಬಂದಿತ್ತು. 1674ರಲ್ಲಿ ತನ್ನ ವಶದಲ್ಲಿದ್ದ ಈ ಕೋಟೆಯನ್ನು ಶಿವಾಜಿ ಜೀರ್ಣೋದ್ಧಾರಗೊಳಿಸಿದ್ದನಂತೆ. ಹೂಲಿ ಅಜ್ಜನವರ ಪ್ರಸಿದ್ಧವಾದ ಮಠವಿದೆ. ಬಹು ಹಿಂದೆ ದಕ್ಷಿಣದ ಕಾಶಿ ಎಂದು ಹೆಸರಾದ ಪುಣ್ಯಸ್ಥಳವಿದು. ಸವದತ್ತಿಯ ಈಶಾನ್ಯಕ್ಕೆ ಸು. 19 ಕಿಮೀ ದೂರದಲ್ಲೂ ಸವದತ್ತಿ-ರಾಮದುರ್ಗ ಜಿಲ್ಲಾ ಹೆದ್ದಾರಿಯಲ್ಲೂ ಇರುವ ಶಿರಸಂಗಿ ಉತ್ತರ ಕರ್ನಾಟಕದಲ್ಲಿ ನೂರೆಂಟು ಶಿಕ್ಷಣ ಸಂಸ್ಥೆಗಳಿಗೆ ಕಾರಣೀಭೂತರಾದಂಥ ತ್ಯಾಗವೀರ ಶಿರಸಂಗಿ ದೇಸಾಯರ ಊರು. ಇಲ್ಲಿ ಭದ್ರವಾದ ಕೋಟೆಯಿದೆ. ಊರ ಉತ್ತರದಲ್ಲಿ ಕಾಳಮ್ಮನ ಪ್ರಸಿದ್ಧ ದೇವಸ್ಥಾನವಿದೆ. ಈ ಊರನ್ನು ಮೊದಲು ಶಿರಶೃಂಗವೆಂದು ಕರೆಯುತ್ತಿದ್ದರಂತೆ. ಈ ತಾಲ್ಲೂಕಿನ ಎಲ್ಲಮ್ಮನ ಗುಡ್ಡ ಒಂದು ಯಾತ್ರಾಸ್ಥಳ. ಸವದತ್ತಿಯ ಆಗ್ನೇಯದಲ್ಲಿ ಸು. 8 ಕಿಮೀ ದೂರದಲ್ಲೂ ಹಾಗೂ ಉಗರಕೊಳ್ಳದಿಂದ ಪಶ್ಚಿಮಕ್ಕೆ ಸುಮಾರು 2-3 ಕಿಮೀ ದೂರದಲ್ಲಿರುವ ಸಿದ್ಧನಕೊಳ್ಳ, ಸಂಗನಕೊಳ್ಳಗಳಾಗಿ ಐದು ಕೊಳ್ಳಗಳಿಂದೊಡಗೂಡಿದ ಎತ್ತರವಾದ ಗುಡ್ಡದಲ್ಲಿ ಹರಿದುಬರುವ ಸರಸ್ವತೀ ತಟಾಕದ ತಡಿಯಲ್ಲಿ ರೇಣುಕಾಂಬೆಯ ದೇವಸ್ಥಾನವಿದೆ. ಇದು ಪರಶುರಾಮ, ಜಮದಗ್ನಿ-ರೇಣುಕೆಯರ ತಪೋಭೂಮಿಯೆಂದು ನಂಬಿಕೆ. ಈ ಗುಡ್ಡದ ಓರೆಯಲ್ಲಿ ಹಲವಾರು ವಸತಿಗೃಹಗಳು, ಎಣ್ಣೆಹೊಂಡ, ಅರಿಸಿನಹೊಂಡ, ವಿಶಾಲವಾದ ಪೌಳಿ ಮತ್ತು ಮಾರುಕಟ್ಟೆಗಳಿವೆ. ಪ್ರತಿಹುಣ್ಣಿಮೆಯಲ್ಲೂ ಜಾತ್ರೆ ನಡೆಯುತ್ತದೆ. ವಿಶೇಷವಾಗಿ ಬನದ ಹುಣ್ಣಿಮೆ, ಭಾರತ ಹುಣ್ಣಿಮೆಗಳಲ್ಲಿ ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ಈ ದೇವಸ್ಥಾನದಲ್ಲಿ 1514ರ ಶಾಸನವೊಂದು ಮಂದಿರದ ಮಂಟಪದ ರಚನೆಯನ್ನು ತಿಳಿಸುವುದು. ಇಲ್ಲಿನ ಮಂದಿರ ಎರಡು ಸಾವಿರ ವರ್ಷದಷ್ಟು ಹಿಂದಿನದೆಂದು ಪ್ರತೀತಿ. ರಚನೆಯ ದೃಷ್ಟಿಯಿಂದ ಇದು 7 ಅಥವಾ 8ನೆಯ ಶತಮಾನಕ್ಕೆ ಸೇರಬಹುದೆಂದು ನಂಬುಗೆ. ಸವದತ್ತಿಯ ವಾಯವ್ಯಕ್ಕೆ ಸು. 24 ಕಿಮೀ ದೂರದಲ್ಲಿ, ಬೆಟ್ಟದಡಿಯಲ್ಲಿರುವ ಸೋಗಲ ಪುಟ್ಟಗ್ರಾಮ ಮತ್ತು ಪುಣ್ಯಕ್ಷೇತ್ರ. ಇದರ ಆಗ್ನೇಯಕ್ಕೆ ಸು. 14 ಕಿಮೀ ದೂರದಲ್ಲಿ ನವಿಲುತೀರ್ಥವಿದೆ. ಸೋಗಲದ ಬಳಿ 50† ಕೆಳಕ್ಕೆ ದುಮುಕುವ ಜಲಪಾತವಿದೆ. ಇದರ ಮೇಲುಗಡೆ ಸುಂದರ ಪ್ರದೇಶದಲ್ಲಿ ಎರಡು ಸಣ್ಣ ಜಲಪಾತಗಳಿವೆ. ಇಲ್ಲೊಂದು ಸೋಮೇಶ್ವರ ದೇವಸ್ಥಾನವಿದೆ.

ಸವದತ್ತಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬೆಳಗಾಂವಿಯ ಆಗ್ನೇಯಕ್ಕೆ 78 ಕಿಮೀ ದೂರದಲ್ಲಿದೆ. ಜನಸಂಖ್ಯೆ 38,212. ಇದು ತಾಲ್ಲೂಕಿನ ಮತ್ತು ಸುತ್ತಲ ಗ್ರಾಮಗಳ ಮುಖ್ಯ ವ್ಯಾಪಾರ ಕೇಂದ್ರ. ಸೇಂಗಾ, ಹತ್ತಿ, ಕುಸುಬೆ ಇಲ್ಲಿನ ಮುಖ್ಯ ವ್ಯಾಪಾರ ವಸ್ತುಗಳು.

ಹಿಂದೆ ಇದನ್ನು ಸುಗಂಧವರ್ತಿ, ಸಂವಧವರ್ತಿ, ಸವಧವರ್ತಿ ಎಂದು ಕರೆಯುತ್ತಿದ್ದರೆಂದು ತಿಳಿದುಬರುವುದು. ಇಲ್ಲಿನ ಗುಡ್ಡದ ಮೇಲೆ ಈಗಲೂ ರಟ್ಟರ ಕಾಲದ ಕೋಟೆಯ ಅವಶೇಷವಿದೆ. ಈ ಪಟ್ಟಣ 10-13ನೆಯ ಶತಮಾನದ ವರೆಗೆ ಸವದತ್ತಿಯ ರಟ್ಟರ ರಾಜಧಾನಿಯಾಗಿತ್ತು. ಇಲ್ಲಿ ಅಂಕುರೇಶ್ವರ, ಪುರಂದರೇಶ್ವರ, ಶಂಕರಲಿಂಗ ದೇವ ಮುಂತಾದ ಹಳೆಯ ದೇವಾಲಯಗಳಿವೆ. ಒಂದು ಜೈನ ಬಸದಿಯೂ ಇದೆ. ಕೇಶಿರಾಜನೆಂಬುವನು ಸು. 1230ರಲ್ಲಿ ನಾಗರಕೆರೆಯ ದಂಡೆಯ ಮೇಲೆ ಕಟ್ಟಿಸಿದ ಮಲ್ಲಿಕಾರ್ಜುನ ದೇವಾಲಯವಿದೆ. (ಇ.ಕೆ.)