ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸವಾಯಿ ಗಂಧರ್ವ (ರಾಮರಾವ್ ಕುಂದಗೋಳ)

ಸವಾಯಿ ಗಂಧರ್ವ (ರಾಮರಾವ್ ಕುಂದಗೋಳ) 1886-1952. ಗಾಯಕ ಹಾಗೂ ನಟರು. ಧಾರವಾಡ ಜಿಲ್ಲೆಯ ಕುಂದಗೋಳದವರು. ರಾಮಭಾವು ಕುಂದಗೋಳಕರ ಎಂಬುದು ಇವರ ಹೆಸರು. ಚಿಕ್ಕಂದಿನಿಂದಲೆ ಸಂಗೀತದ ಅಭಿರುಚಿ ಇದ್ದ ಇವರಿಗೆ ಇವರ ತಂದೆ ಗಣಪತರಾವ ಸಂಶಿ ಉತ್ತೇಜನ ನೀಡುತ್ತಿ ದ್ದರು. ಬಳವಂತರಾವ ಕೊಲ್ಹಟಕರ ಇವರ ಸಂಗೀತ ಗುರುಗಳು. ಒಂದೂವರೆ ವರ್ಷದಲ್ಲಿ 75 ದ್ರುಪದ್, 25 ತರಾಣೆ, 100 ಚೀಜ್ ಮತ್ತು ತಾಳಗಳನ್ನು ಕಲಿತು ಬಾಲಗವಾಯಿ ಎಂದು ಪ್ರಸಿದ್ಧರಾದರು. ಸು. 7 ವರ್ಷ ಕಾಲ ಕಿರಾಣಾ ಘರಾಣೆಯ ಪ್ರವರ್ತಕ ಅಬ್ದುಲ್ ಕರೀ ಮ್‍ಖಾನರ ಶಿಷ್ಯರಾಗಿದ್ದರು. ಗ್ವಾಲಿಯರ್ ಘರಾಣೆಯ ನಿಸ್ಸಾರ್ ಹುಸೇನ್ ಖಾನರ ಸಂಪರ್ಕದಿಂದ ಇವರ ಸಂಗೀತಕ್ಕೆ ವಿಶೇಷ ಮೆರುಗು ಬಂತು. ಇವರ ಗಾಯನ ಎಂದರೆ ಆಲಾಪ, ಮೀಂಡ್, ಬಢತ್, ಘಸೀಟ್ ತಾನ್, ಪಲಟಾ, ಬೋಲ್ ತಾನ್, ಮೂರ್ಛನಾ, ಖಟಕಾ, ಮುರಕಿಗಳ ನಳಪಾಕ. ಸ್ವಂತದ್ದೂ ಸೇರಿದಂತೆ ಹಲವಾರು ನಾಟಕ ಕಂಪನಿಗಳಲ್ಲಿ ಗಾಯಕನಟರಾ ಗಿದ್ದ ಇವರು ಸ್ತ್ರೀಪಾತ್ರಗಳ ನಟನೆಯಲ್ಲಿ ಸಿದ್ಧಹಸ್ತರಾಗಿದ್ದರು. 1919ರಲ್ಲಿ ಉಮರಾವತಿಯಲ್ಲಿ ಕಲಾಭಿಮಾನಿಗಳಿಂದ ಸವಾಯಿ ಗಂಧರ್ವ ಎಂಬ ಬಿರುದಿಗೆ ಪಾತ್ರರಾದರು. ಅಂದಿನಿಂದ ಅದೇ ಶಾಶ್ವತ ಹೆಸರಾಗಿ ಉಳಿಯಿತು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಫಿರೋಜ್ ದಸ್ತೂರ, ಬಸವರಾಜ ರಾಜಗುರು ಮುಂತಾದ ಶ್ರೇಷ್ಠ ಗಾಯಕರೆಲ್ಲರೂ ಇವರ ಶಿಷ್ಯಂದಿರು. (ಎಸ್.ವಿ.ಕೆ.)