ಸಹರಾ

	ಪ್ರಪಂಚದ ಅತಿ ದೊಡ್ಡ ಮರುಭೂಮಿ. ಇದು ಉತ್ತರ ಆಫ್ರಿಕದಲ್ಲಿ ಹರಡಿದ್ದು ಅಟ್ಲಾಂಟಿಕ್ ಸಾಗರದಿಂದ ಕೆಂಪು ಸಮುದ್ರದವರೆಗೂ ಮೆಡಿಟರೇನಿಯನ್ ಸಮುದ್ರದಿಂದ ಸೂಡಾನ್‍ವರೆಗೂ ವ್ಯಾಪಿಸಿದೆ. ಇದರ ವಿಸ್ತೀರ್ಣ 80 ಲಕ್ಷ ಚ.ಕಿಮೀ.

ಸಹರಾ ಅಂದರೆ ಮರುಭೂಮಿ ಎಂದೇ ಅರ್ಥ. ಇದು ಪೂರ್ವದಿಂದ ಪಶ್ಚಿಮಕ್ಕೆ 5,150 ಕಿಮೀ ಗಳಷ್ಟು ಉದ್ದವಾಗಿದ್ದು ಉತ್ತರ-ದಕ್ಷಿಣವಾಗಿ 2,250 ಕಿಮೀ ಗಳಷ್ಟು ಅಗಲವಿದೆ. ಇದು ಕೇವಲ ಒಂದು ಅಥವಾ ಎರಡು ದೇಶಗಳಿಗೆ ಸೀಮಿತವಾದ ಪ್ರದೇಶವಲ್ಲ. ಇದರಲ್ಲಿ ಹತ್ತಾರು ದೇಶಗಳೇ ಅಡಗಿವೆ. ಅಲ್ಜೀರಿಯ, ಲಿಬಿಯ ಮತ್ತು ಈಜಿಪ್ಟ್‍ಗಳು ಪೂರ್ಣವಾಗಿಯೂ ಮೊರಾಕ್ಕೊ, ಟುನೀಷಿಯ ಮತ್ತು ಸೂಡಾನ್‍ಗಳು ಭಾಗಶಃವಾಗಿ ಇದರ ತೆಕ್ಕೆಗೆ ಬರುತ್ತವೆ. ಹಾಗೇಯೇ ಚಾಡ್, ನಿಗೆರ್, ಮೌರಿಟ್ಯಾನಿಯ, ಮಾಲಿ ಮತ್ತು ಆಫ್ರಿಕದಲ್ಲಿರುವ ಸ್ಪ್ಯಾನಿಷ್ ಪ್ರಾಂತದ ಬಹು ಭಾಗಗಳು ಇದರ ಬೀಸಿನಲ್ಲಿ ಸೇರಿವೆ.

ಮರುಭೂಮಿ ಅಂದರೆ ಕೇವಲ ಮರಳ ಹರವಲ್ಲ. ಅದರಲ್ಲೂ ಸಸ್ಯ, ಪ್ರಾಣಿ, ಜನವಸತಿ, ಜಲಮೂಲಗಳು ಎಲ್ಲಾ ಆಯಾ ಭೌಗೋಳಿಕ ಸನ್ನಿವೇಶವನ್ನವಲಂಬಿಸಿ ಅಸ್ತಿತ್ವದಲ್ಲಿರುತ್ತವೆ. ಈ ಸಹರಾ ಮರುಭೂಮಿಯನ್ನು ಪ್ರಪಂಚದ ಅತಿ ದೊಡ್ಡ ನದಿಗಳಲ್ಲೊಂದಾದ ನೈಲ್ ಮತ್ತು ನೈಗರ್ ನದಿಗಳು ಹಾದುಹೋಗುತ್ತವೆ. ಇಲ್ಲಿನ ಹವಾಗುಣ ಅತ್ಯಂತ ವೈಪರೀತ್ಯದಿಂದ ಕೂಡಿರುತ್ತದೆ. ವಾರ್ಷಿಕ ಸರಾಸರಿ 8 ಸೆಮೀ ಗಳಿಗಿಂತ ಕಡಿಮೆ ಮಳೆ ಪಡೆಯುವ ಪ್ರದೇಶವೇ ಇಲ್ಲಿ ಹೆಚ್ಚು. ವಾರದಲ್ಲಿ ಕೆಲವೊಮ್ಮೆ ಮಳೆ ಬಂದರೆ, ಹಲವಾರು ವರ್ಷಗಳು ಒಂದು ಹನಿ ಮಳೆಯನ್ನು ಕಾಣದಿರಬಹುದು. ಆದರೆ ಅಲ್ಲಲ್ಲಿ ಕಂಡು ಬರುವ ಓಯಸಿಸ್‍ಗಳು ಜನ ಜೀವನಕ್ಕೆ ಆಸರೆ ಒದಗಿಸಿವೆ. ಇಲ್ಲಿನ ಹವಾಮಾನ ಶುಷ್ಕವಾಗಿದ್ದು ಸರಾಸರಿ 490 ಸೆ. ನಿಂದ 540 ಸೆ. ವರೆಗಿನ ಉಷ್ಣಾಂಶವನ್ನು ಹೊಂದಿರುತ್ತದೆ. ಸಾವಿರಾರು ವರ್ಷಗಳ ಹಿಂದೆ ಈ ಭೂಪ್ರದೇಶ ಹಚ್ಚ ಹಸುರಿನಿಂದ ಕೂಡಿದ ಪ್ರದೇಶವಾಗಿತ್ತು. ಇಲ್ಲಿ ಅತ್ಯಂತ ವೇಗವಾಗಿ ಬೀಸುವ ಮಾರುತಗಳು ತೇವಾಂಶವನ್ನು ಮರುಭೂಮಿಯಿಂದ ದೂರ ಸಾಗಿಸುತ್ತವೆ. ಇದರಿಂದ ಈ ಪ್ರದೇಶದಲ್ಲಿ ಸದಾ ಶುಷ್ಕತೆ ಆವರಿಸುತ್ತದೆ. ಈ ಮಾರುತಗಳ ಪ್ರಕ್ರಿಯೆಯಿಂದಲೇ ಇಲ್ಲಿ ಮರುಭೂಮಿ ಉಂಟಾಗಿರಬಹುದೆಂದು ಭಾವಿಸಲಾಗಿದೆ. ಇಲ್ಲಿನ ಮಾರುತಗಳನ್ನು ಅರೇಬಿಕ್ ಭಾಷೆಯಲ್ಲಿ ಹಬೂಬ್ ಎಂದು ಕರೆಯುತ್ತಾರೆ. ಇದರ ಅರ್ಥ ಮರಳು ಮಿಶ್ರಿತ ಮಾರುತ. ಇದು ಮಾರ್ಚ್-ಮೇ ವರೆಗೂ ಬೀಸುತ್ತದೆ. ಈ ವೇಗವಾದ ಗಾಳಿ ಜೀವಕ್ಕೆ ಅಪಾಯಕಾರಿಯೂ ಹೌದು. ಆದ್ದರಿಂದಲೇ ಇದಕ್ಕೆ ಹರ್‍ಮಟ್ಟಸ್ ಅಂದರೆ ಉಸಿರನ್ನು ತೆಗೆಯುವ ಗಾಳಿ ಎಂದೂ ಹೆಸರಿದೆ.

ಈ ಮರುಭೂಮಿ ಸ್ವಾಭಾವಿಕವಾಗಿಯೇ ಸಸ್ಯ ಹಾಗೂ ಪ್ರಾಣಿ ಜೀವಿಗಳಿಗೆ ಪ್ರತಿಕೂಲ ಪರಿಸರವನ್ನು ಹೊಂದಿದ್ದರೂ ಇಲ್ಲಿ ಅನೇಕ ಬಗೆಯ ಸಸ್ಯ ಹಾಗೂ ಪ್ರಾಣಿ ವರ್ಗಗಳು ಬದುಕಿವೆ. ಸಹರಾದ ಒಂದು ಭಾಗದಲ್ಲಿ ಸ್ಥಳಾಂತರವಾಗುವ ಮರಳು ದಿಬ್ಬಗಳು ಕಂಡುಬರುತ್ತವೆ. ಆದರೆ ಇತರ ಭಾಗಗಳಲ್ಲಿ ಗಟ್ಟಿಯಾದ ಬಂಡೆಯಿಂದ ಕೂಡಿದ ಮೇಲ್ಮೈ ಇದೆ. ಇಲ್ಲಿನ ಕೇಂದ್ರ ಪ್ರಸ್ಥಭೂಮಿ ಈಶಾನ್ಯದಿಂದ ನೈಋತ್ಯಕ್ಕೆ ಹರಡಿದ್ದು ಮರುಭೂಮಿಯ ಮುಕ್ಕಾಲು ಭಾಗ ವ್ಯಾಪಿಸಿದೆ. ಇದು ಸಮುದ್ರಮಟ್ಟಕ್ಕೆ 579ರಿಂದ 762 ಮೀ ಎತ್ತರವಾಗಿದೆ. ಅತ್ಯಂತ ಎತ್ತರದ ಶಿಖರಗಳು 3,000ಮೀ ಎತ್ತರವಿವೆ. ಪಶ್ಚಿಮ ಸಹರಾ ವಿಸ್ತಾರವಾದ ಬಂಜರು ನೆಲ. ಕೇಂದ್ರ ಪ್ರಸ್ಥಭೂಮಿಗೆ ಉತ್ತರ ಮತ್ತು ಪೂರ್ವದಲ್ಲಿರುವ ಲಿಬಿಯನ್ ಮರುಭೂಮಿ ಅತ್ಯಂತ ಪಾಳಾಗಿದೆ. ಎತ್ತರದ ಪರ್ವತಗಳಲ್ಲಿ ಕೆಲವೊಮ್ಮೆ ಹಿಮ ಬೀಳುತ್ತದೆ.

ಓಯಸಿಸ್‍ಗಳು ಈ ಮರಳು ಭೂಮಿಯಲ್ಲಿ ಜೀವ ತಾಣಗಳಿದ್ದಂತೆ. ಇವು ಅಲ್ಲಿನ ಪ್ರಾಕೃತಿಕ ಚಿಲುಮೆಗಳಿಂದ ಬರುವ ನೀರಿನಿಂದ ಉಂಟಾಗಿರುತ್ತವೆ. ಈ ಚಿಲುಮೆಯ ನೀರು ಅಲ್ಲಲ್ಲಿ ಸಸ್ಯವರ್ಗದ ಬೆಳೆವಣಿಗೆಗೆ, ಜನವಸತಿಗೆ ಕಾರಣವಾಗಿವೆ. ಇಂತಹ ಕಡೆಗಳಲ್ಲಿ ಖರ್ಜೂರವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಓಯಸಿಸ್‍ಗಳು ಕೆಲವೇ ಕಿಮೀ ಗಳ ವಿಸ್ತಾರಕ್ಕೆ ಸೀಮಿತವಾಗಿರುವುದೂ ಉಂಟು. ಕೆಲವು ಬಲು ವಿಸ್ತಾರವಾಗಿರುತ್ತವೆ. ಇದು ಅಲ್ಲಿ ದೊರೆಯುವ ನೀರಿನ ಸಂಪನ್ಮೂಲವನ್ನು ಅವಲಂಬಿಸಿರುತ್ತದೆ. ಆಧುನಿಕ ಯಂತ್ರ ಸೌಲಭ್ಯಗಳಿಂದ ಇಂತಹ ಕಡೆಗಳಲ್ಲಿ ಬಾವಿಗಳನ್ನು ತೋಡಿ ಭೂಗರ್ಭದ ನೀರನ್ನು ತೆಗೆದು ಓಯಸಿಸ್‍ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲಾಗಿದೆ. ನೈಲ್‍ನದಿಗೆ ಈಜಿಪ್ಟ್ ಸರ್ಕಾರ ಆಸ್ವಾನ್ ಬಳಿ ದೊಡ್ಡ ಜಲಾಶಯ ನಿರ್ಮಿಸಿ ಲಕ್ಷಾಂತರ ಹೆಕ್ಟೇರ್ ಭೂಮಿ ಹಸುರಿನಿಂದ ತುಂಬುವಂತೆ ಮಾಡಿದೆ.

ಈ ಮರುಭೂಮಿಯಲ್ಲಿ ಒಂಟೆ ಮತ್ತು ಆಸ್ಟ್ರಿಕ್ ಪಕ್ಷಿ ಸಹಜವಾಗಿ ಬದುಕುವ ದೊಡ್ಡ ಜೀವಿಗಳಾಗಿವೆ. ಮರುಭೂಮಿಯ ಅಂಚಿನಲ್ಲಿ ಕಾಡು ಪ್ರದೇಶಗಳಿರುವೆಡೆಗಳಲ್ಲಿ ಸಿಂಹ, ಚಿರತೆ, ಕಿರುಬ, ನರಿ ಮೊದಲಾದ ಪ್ರಾಣಿಗಳು ವಾಸಿಸುತ್ತವೆ. ಹಾವು, ಹಲ್ಲಿ ಮೊದಲಾದ ಉರಗಗಳು ಹೆಚ್ಚಿನ ಭಾಗದಲ್ಲಿ ಕಂಡುಬರುತ್ತವೆ.

ಈ ಮರುಭೂಮಿ ಪ್ರದೇಶ ಜನವಸತಿಗೆ ಹಿತಕರವಾಗಿದ್ದ ಕಾಲದಲ್ಲಿ ದೊಡ್ಡ ನಾಗರಿಕತೆಗಳು ಆಗಿಹೋದವು. ಅದಕ್ಕೆ ಈಜಿಪ್ಟ್ ನಾಗರಿಕತೆಯೇ ದೊಡ್ಡ ಉದಾಹರಣೆಯಾಗಿದೆ. ಇಲ್ಲಿನ ಸಾಹಸಿ ಅರಬ್ಬರು, ಬೆರ್ಬರರು, ಟಿಬ್ಬುಗಳು ಮತ್ತು ನೀಗ್ರೊಗಳು ಈ ಮರುಭೂಮಿ ಜೀವನಕ್ಕೆ ತಮ್ಮನ್ನು ಹೊಂದಿಸಿಕೊಂಡು ಬದುಕುತ್ತಿದ್ದಾರೆ. ನೀಗ್ರೊಗಳು ಹೆಚ್ಚಾಗಿ ಸಹರಾದ ದಕ್ಷಿಣ ಭಾಗದಲ್ಲಿ ಕಂಡುಬರುತ್ತಾರೆ. ಈ ಎಲ್ಲಾ ಸಮೂಹದವರು ಹೆಚ್ಚಾಗಿ ಇಸ್ಲಾಮ್ ಧರ್ಮವನ್ನು ಅನುಸರಿಸುತ್ತಾರೆ. ಸಾವಿರಾರು ವರ್ಷಗಳ ಹಿಂದೆಯೇ ಅರಬ್ಬರು ಒಂಟೆಗಳ ತಂಡವಾದ ಕಾರವಾನ್‍ಗಳ ಮೂಲಕ ವ್ಯಾಪಾರ ನಡೆಸುತ್ತಿದ್ದರು. ಆಫ್ರಿಕಾದ ಭೂಶಿರವನ್ನು ಸುತ್ತಿ ಬರುವ ಜಲಮಾರ್ಗವನ್ನು ಕಂಡುಕೊಳ್ಳುವುದಕ್ಕೆ ಮುಂಚೆ ಈ ಕಾರವಾನಗಳೇ ಮುಖ್ಯ ಅಂತಾರಾಷ್ಟ್ರೀಯ ಸರಕು ಸಾಗಣೆ ಮಾಧ್ಯಮವಾಗಿದ್ದವು. ಆಫ್ರಿಕದಿಂದ ಕಪ್ಪುಸಮುದ್ರದವರೆಗೂ ಮೆಡಿಟರೇನಿಯನ್ ಸಮುದ್ರದಿಂದ ಅರಬ್ಬಿಸಮುದ್ರದ ತೀರದವರೆಗೂ ಅನೇಕ ಗಂಡಾಂತರಗಳನ್ನು ಎದುರಿಸಿಯೂ ಕಾರವಾನ್‍ಗಳು ಸಂಚರಿಸುತ್ತಿದ್ದವು. ಹಳೆಯ ಪ್ರಪಂಚದ ವಿವಿಧ ಖಂಡಗಳ ನಡುವೆ ವ್ಯಾಪಾರ ಸಂಪರ್ಕಕ್ಕೆ ಈ ಒಂಟೆಗಳ ಮೇಲಿನ ಸಾಗಣೆಯೇ ಬೆನ್ನೆಲುಬಾಗಿತ್ತು. ಇಂದು ಆ ಸ್ಥಾನವನ್ನು ಹೆಚ್ಚಾಗಿ ಮೋಟರು ವಾಹನಗಳು ತುಂಬಿವೆ. ವಿಮಾನ ಸಾರಿಗೆ ಇಲ್ಲಿ ಹೆಚ್ಚು ಉಪಯುಕ್ತವಾಗಿದೆ. ಇಲ್ಲಿ ಸೂಯೆಜ್ ಕಾಲುವೆಯನ್ನು ನಿರ್ಮಿಸಿದ್ದು ಅತ್ಯಂತ ಮಹತ್ತ್ವದ ಜಲಸಾರಿಗೆಗೆ ದಾರಿ ಮಾಡಿಕೊಟ್ಟಿದೆ.

ಸಹರಾ ತನ್ನ ಭೂಗರ್ಭದ ಸಂಪನ್ಮೂಲಗಳಿಂದಾಗಿ ತನ್ನ ಜನಜೀವನಕ್ಕೆ ಹೊಸ ಆಸರೆಯನ್ನು ಒದಗಿಸಿದೆ. ಇಲ್ಲಿನ ತೈಲ, ಯುರೇನಿಯಮ್, ಕಬ್ಬಿಣದ ಅದುರು, ಕಲ್ಲಿದ್ದಲು, ತಾಮ್ರ ಮತ್ತು ಫಾಸ್ಫೇಟ್ ನಿಕ್ಷೇಪಗಳು ಇಲ್ಲಿನ ಜನಜೀವನಕ್ಕೆ ಹೊಸ ಚೈತನ್ಯವನ್ನು ನೀಡಿವೆ. ಅಲ್ಲಲ್ಲಿ ನಗರ ಪಟ್ಟಣಗಳು ಬೆಳೆದಿವೆ. ಅರಬ್ಬರು ಮತ್ತಿತರರು ಶ್ರೀಮಂತ ನಗರಗಳನ್ನು ನಿರ್ಮಿಸಿ ಜೀವನಮಟ್ಟವನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಒಳನಾಡಿನಲ್ಲಿ ಜನಸಂಖ್ಯೆ ತೆಳುವಾಗಿದೆ. ಸಹರಾ ತನ್ನದೇ ಆದ ವೈವಿಧ್ಯ ಪರಿಸರವನ್ನು ಹೊಂದಿದ್ದು, ಮುಖ್ಯ ಭೂಭಾಗಗಳಲ್ಲೊಂದಾಗಿದೆ.

(ಕೆ.ಆರ್.ಐ.)