ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಹಾ, ಮೇಘನಾದ

ಸಹಾ, ಮೇಘನಾದ 1893-1956. ಭಾರತೀಯ ಖಭೌತವಿಜ್ಞಾನಿ. ಈಗ ಬಾಂಗ್ಲಾ ದೇಶಕ್ಕೆ ಸೇರಿರುವ ಢಾಕ್ಕಾದಲ್ಲಿ 1893ರಲ್ಲಿ ಜನಿಸಿದರು. ಕೋಲ್ಕತದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದು. ವಿದ್ಯಾರ್ಥಿವೇತನ ಗಳಿಸಿ ಯುರೋಪ್‍ನ ಪ್ರಮುಖ ವಿಜ್ಞಾನಕೇಂದ್ರಗಳಿಗೆ ಭೇಟಿ ನೀಡಿದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಮುಂದೆ ಭೌತವಿಜ್ಞಾನ ಪ್ರಾಧ್ಯಾಪಕರಾಗಿ ಕೋಲ್ಕತದಲ್ಲಿ ನೇಮನಗೊಂಡರು (1938).

ನಕ್ಷತ್ರಗಳ ಆಂತರಿಕ ಚಲನೆ ಕುರಿತು ಅಧ್ಯಯನ ನಡೆಸುವಾಗ ತಪ್ಪದೇ ಕೇಳಿ ಬರುವ ಒಂದು ಪ್ರಮುಖ ಹೆಸರು ಇವರದು: `ಸಹಾ ಅಯಾನೀಕರಣ ಸಮೀಕರಣ. ಇತರ ಶಾಖೆಗಳಿಗೂ ಈ ಸೂತ್ರ ಅನ್ವಯವಾಗುತ್ತದೆ. ಉದಾಹರಣೆಗೆ ಭೂಮಿಯ ಅಯಾನ್ ಆವರಣ ಜ್ವಾಲೆ ಗಳು, ವಿದ್ಯುಚ್ಚಾಪಗಳು, ಸ್ಫೋಟ ಇತ್ಯಾದಿ. ಉಷ್ಣತೆ ಯಿಂದ ಅಯಾನುಗಳ ರಚನೆ, ವಿಕಿರಣದ ಒತ್ತಡ, ರೋಹಿತಗಳು, ನಕ್ಷತ್ರ ರೋಹಿತಗಳು, ಅಣು ಪರಮಾಣುಗಳ ರೋಹಿತಗಳು, ರೇಡಿಯೊತರಂಗ ಗಳ ಪ್ರಸಾರ, ಸೌರಕಿರೀಟ, ವಿಕಿರಣಪಟುತ್ವ, ಶಿಲೆಗಳ ವಯೋನಿರ್ಧಾರ ಹೀಗೆ ಅನೇಕ ಶಾಖೆಗಳಲ್ಲಿ ಇವರ ಮಹತ್ತ್ವದ ಸಂಶೋಧನ ಪ್ರಬಂಧಗಳು ಪ್ರಕಟವಾಗಿವೆ. ಮೂಲಭೂತ ಸಂಶೋಧನೆಯ ಜೊತೆಗೆ ಶಿಕ್ಷಣ, ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರಗಳಲ್ಲೂ ಇವರಿಗೆ ಅಪಾರ ಆಸಕ್ತಿ ಇತ್ತು.

ಇವರು ಅಲಹಾಬಾದ್‍ನಲ್ಲಿ ಸಂಶೋಧನ ವಿಭಾಗ, ಕೋಲ್ಕತದಲ್ಲಿ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್, ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್ ಇವೆಲ್ಲವುಗಳ ಸ್ಥಾಪಕರು. ಅಲ್ಲಿಂದ ಪ್ರಕಟವಾಗುವ ಸೈನ್ಸ್ ಅಂಡ್ ಕಲ್ಚರ್ ಎಂಬ ಪತ್ರಿಕೆ ಅತ್ಯಂತ ಜನಪ್ರಿಯವಾಗಿದೆ. ಅದರ ಆರಂಭದ ದಿನಗಳಲ್ಲಿ ಸಂಪಾದಕತ್ವವನ್ನು ಖುದ್ದು ಇವರೇ ನಿರ್ವಹಿಸುತ್ತಿದ್ದರು. ಸ್ವತಂತ್ರ ಭಾರತದಲ್ಲಿ ವಿಜ್ಞಾನದ ಅಭಿವೃದ್ಧಿಗಾಗಿ ಶ್ರಮಿಸಿ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನ (ಸಿಎಸ್‍ಐಆರ್) ಆರಂಭದ ಕರ್ತವ್ಯವನ್ನು ನಿರ್ವಹಿಸಿದರು. ಭಾರತೀಯ ಪಂಚಾಂಗವನ್ನು ಸುಧಾರಣೆಗೊಳಿಸುವ ಬೃಹತ್ ಕಾರ್ಯವನ್ನು ಕೈಗೆತ್ತಿಕೊಂಡು ರಾಷ್ಟ್ರೀಯ ಪಂಚಾಂಗವನ್ನು ರೂಪಿಸಿದರು. 1938ರಿಂದಲೇ ಜವಹರಲಾಲ್ ನೆಹರೂ ನೇತೃತ್ವದ ಯೋಜನಾ ಸಮಿತಿಗಾಗಿ ಶ್ರಮಿಸಿದರು. ಸರಳ ಜೀವನಶೈಲಿ, ನಿರ್ಭೀತಿಯಿಂದ ಅಭಿಪ್ರಾಯ ಮಂಡನೆ, ಶಿಷ್ಯರ ಬಗ್ಗೆ ಕಳಕಳಿ, ಸ್ವತಂತ್ರ ಭಾರತದ ಬಗ್ಗೆ ಮುಂದಾಲೋಚನೆ ಈ ಮುಂತಾದ ಇವರ ಋಷಿಸದೃಶ ಗುಣಗಳು ಎಲ್ಲರನ್ನೂ ಆಕರ್ಷಿಸಿದ್ದುವು. ಸ್ವತಂತ್ರ ಅಭ್ಯರ್ಥಿಯಾಗಿ ಪಾರ್ಲಿಮೆಂಟ್ ಸದಸ್ಯರಾಗಿ ಚುನಾಯಿತರಾಗಿದ್ದರು. 1956 ಫೆಬ್ರವರಿ 16ರಂದು ಹೃದಯಾಘಾತದಿಂದ ನಿಧನಹೊಂದಿದರು. (ಎಸ್.ಎಚ್.ಬಿ.ಎಸ್.)