ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂಗ್ವಿಲ್, ಇಸ್ರೇಲ್

ಸಾಂಗ್‍ವಿಲ್, ಇಸ್ರೇಲ್ 1864-1926. ಇಂಗ್ಲಿಷ್ ಕಾದಂಬರಿಕಾರ, ನಾಟಕಕಾರ. ಲಂಡನ್ನಿನಲ್ಲಿ ಜನಿಸಿದ. ಯೆಹೂದ್ಯ ಶಾಲೆಯಲ್ಲೂ ಲಂಡನ್ ವಿಶ್ವವಿದ್ಯಾಲಯದಲ್ಲೂ ವಿದ್ಯಾಭ್ಯಾಸ ಮಾಡಿದ. ಒಂದೆರಡು ವರ್ಷಕಾಲ ಶಾಲಾ ಉಪಾಧ್ಯಾಯನಾಗಿ ಕೆಲಸಮಾಡಿ ಸಾಹಿತ್ಯ ರಚನೆಗೆ ತೊಡಗಿದ. ಈತ ತನ್ನ ಕೃತಿಗಳಲ್ಲಿ ಯೆಹೂದ್ಯರ ಚರಿತ್ರೆ ಹಾಗೂ ಜೀವನ ಕ್ರಮಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ದಿ ಚಿಲ್ಡ್ರನ್ ಆಫ್ ದಿ ಫೆಟ್ಟೊ (1892-93), ಫೆಟ್ಟೊ ಟ್ರಾಜಿಡೀಸ್ (1893), ದಿ ಕಿಂಗ್ ಆಫ್ ದಿ ಷ್ನಾರರ್ಸ್ (1894), ದಿ ಮಾಸ್ಟರ್ (1895), ದೆ ದಟ್ ವಾಕ್ ಇನ್ ಡಾರ್ಕ್‍ನೆಸ್ (1899), ದಿ ಮ್ಯಾಂಟಲ್ ಆಫ್ ಎಲಿಜಾ (1900), ದಿ ಗ್ರೇ ವಿಗ್ (1903), ಮಿಯರ್ಲಿ ಮೇರಿ ಆನ್ (1904), ಫೆಟ್ಟೊ ಕಾಮೆಡೀಸ್ (1907), ಜಿನ್ನಿ ದಿ ಕ್ಯಾರಿಯರ್ (1919) ಎಂಬ ಕಾದಂಬರಿಗಳನ್ನು ಬರೆದಿದ್ದಾನೆ. ದಿ ಮೆಲ್ಟಿಂಗ್ ಪಾಟ್ (1908), ಟೂ ಮಚ್ ಮನಿ (1918), ದಿ ಕಾಕ್‍ಪಿಟ್ (1922)-ಇವು ಇವನ ನಾಟಕಗಳು. ಜೋಸನ್ ಪೀಪಲ್ಸ್ (1918) ಎಂಬುದು ಪ್ರಬಂಧಗಳ ಸಂಕಲನ. ಈತ ಅಂತಾರಾಷ್ಟ್ರೀಯ ಯೆಹೂದ್ಯ ರಾಜಕೀಯ ಸಂಸ್ಥೆಯ ಮೊದಲ ಅಧ್ಯಕ್ಷನಾಗಿದ್ದ. (ಎಚ್.ವಿ.ಎಸ್.)