ಸಾಂಚಿ ಮಧ್ಯಪ್ರದೇಶದ ರಾಯ್‍ಸೆನ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಬೌದ್ಧಕೇಂದ್ರ. ಭೋಪಾಲ್ ಮತ್ತು ಬೀನಾ ನಡುವೆ ಭಿಲ್ಸಾದ ಆಗ್ನೇಯಕ್ಕೆ 8 ಕಿಮೀ ದೂರದಲ್ಲಿ, ಭೋಪಾಲ್‍ನಿಂದ 68 ಕಿಮೀ ದೂರದಲ್ಲಿದೆ. ಸಾಂಚಿಯ ರೈಲ್ವೆನಿಲ್ದಾಣದಿಂದ ಅರ್ಧ ಕಿಮೀ ದೂರದಲ್ಲಿ 30 ಅಡಿ ಎತ್ತರದ ಗುಡ್ಡದ ನೆತ್ತಿಯಲ್ಲಿ ವಿವಿಧ ಕಾಲ ಮತ್ತು ರಾಜವಂಶಗಳಿಗೆ ಸೇರಿದ ಬೌದ್ಧಸ್ಮಾರಕಗಳಿವೆ. ಇವು ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ.ಸು. 11ನೆಯ ಶತಮಾನದವರೆಗೆ ವ್ಯಾಪಿಸಿದ ರಚನೆಗಳಾಗಿವೆ. ಭಾರತೀಯ ಬೌದ್ಧ ವಾಸ್ತುಶಿಲ್ಪಗಳ ಉಗಮ, ವಿಕಾಸ ಹಾಗೂ ಅವನತಿಯ ಇತಿಹಾಸವನ್ನು ಇಲ್ಲಿ ಅಧ್ಯಯನ ಮಾಡಬಹುದು; ಇದು ಬಹುಮಟ್ಟಿಗೆ ಭಾರತೀಯ ಬೌದ್ಧಧರ್ಮದ ಸಂಪೂರ್ಣ ಕಾಲಮಾನವನ್ನು ಒಳಗೊಳ್ಳುತ್ತದೆ ಎನ್ನಬಹುದು. ಇಲ್ಲಿನ ಎಲ್ಲ ಸ್ಮಾರಕಗಳನ್ನು ಸಂರಕ್ಷಿಸಲಾಗಿದೆ. ಇಲ್ಲಿ ಒಂದು ವಸ್ತುಸಂಗ್ರಹಾಲಯವಿದ್ದು ಅದರಲ್ಲಿ ಇಲ್ಲಿನ ಹಾಗೂ ಸುತ್ತುಮುತ್ತಲಿನ ಕಲಾವಶೇಷಗಳನ್ನು ಇರಿಸಲಾಗಿದೆ.

ಸ್ವಾರಸ್ಯದ ಸಂಗತಿ ಎಂದರೆ ಸಾಂಚಿ ಬುದ್ಧನ ಜೀವನದ ಯಾವುದೊಂದು ಘಟನೆಗೂ ಸಂಬಂಧಿಸಿದ ಸ್ಥಳವಲ್ಲ ಅಥವಾ ಬೌದ್ಧ ಸಂನ್ಯಾಸಿಗಳ ಬದುಕಿಗೆ ಸಂಬಂಧಪಟ್ಟ ಸ್ಥಳವೂ ಅಲ್ಲ ಎನ್ನುವುದು. ಭಾರತಾದ್ಯಂತದ ಬೌದ್ಧಸ್ಮಾರಕಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ದಾಖಲಿಸಿರುವ 7ನೆಯ ಶತಮಾನದ ಚೀನೀಯಾತ್ರಿಕ ಯುವಾನ್‍ಚಾಂಗ್ ಸಾಂಚಿಯ ಬಗ್ಗೆ ಮೌನವಾಗಿರುವುದು ಆಶ್ಚರ್ಯಕರ. ಅಶೋಕನ ಮಗನಾದ ಮಹೇಂದ್ರನನ್ನು ಆತನ ತಾಯಿ ದೇವಿ ವೆದಿಸಗಿರಿ ಅಥವಾ ಚೇತಿಯಗಿರಿ ಯಲ್ಲಿ ತಾನು ಕಟ್ಟಿಸಿದ ಸುಂದರ ಬೌದ್ಧವಿಹಾರಕ್ಕೆ ಕರೆದೊಯ್ದ ವಿಷಯವನ್ನು ಸಿಂಹಳೀ ಇತಿವೃತ್ತಗಳು ತಿಳಿಸುತ್ತವೆ. ವಿದಿಶಾ ಈಗಿನ ಬೆಸನಗರ, ಭಿಲ್ಸಾಗೆ ಸಮೀಪವಿದೆ. ಅಶೋಕನ ಹೆಂಡತಿ ದೇವಿ ಸಾಂಚಿಯ ಸಮೀಪದ ವಿದಿಶಾನಗರದ ವರ್ತಕನೊಬ್ಬನ ಮಗಳು.

ಅಶೋಕ ಇಲ್ಲಿ ಏಕಶಿಲಾ ಸ್ತಂಭವೊಂದನ್ನು ಸ್ಥಾಪಿಸಿದ, ಅದರ ಮೇಲೆ ತನ್ನ ಶಾಸನವನ್ನು ಹಾಕಿಸಿದ ಹಾಗೂ ಆತನ ಕಾಲದಲ್ಲಿ ಸಾಂಚಿಯಲ್ಲಿ ಸ್ತೂಪವೊಂದನ್ನು ಕಟ್ಟಲಾಯಿತು. ವಿದಿಶಾದ ಸಂಬಂಧದ ಜೊತೆಗೆ ಆತನ ಬೌದ್ಧಧರ್ಮವನ್ನು ಕುರಿತ ನವಾಸಕ್ತಿಗೆ ಸಾಂಚಿಯ ಈ ಗುಡ್ಡ ಅತ್ಯುತ್ತಮ ತಾಣವಾಯಿತು.

ಸಾಂಚಿಯ ಗುಡ್ಡದ ನೆತ್ತಿಯಲ್ಲಿ-ಇದು ದಕ್ಷಿಣೋತ್ತರವಾಗಿ 400 ಗಜ ಹಾಗೂ ಪೂರ್ವಪಶ್ಚಿಮವಾಗಿ 220 ಗಜ ವಿಶಾಲವಾಗಿದೆ-50 ಸ್ಮಾರಕಗಳನ್ನು ಗುರುತಿಸಿದೆ. ಕನಿಂಗ್‍ಹ್ಯಾಮ್ ಎಂಬಾತ ಕೊಟ್ಟ ಸಂಖ್ಯೆಗಳನ್ನೇ ಸರ್‍ಜಾನ್ ಮಾರ್ಷಲ್ ಮುಂದುವರಿಸಿರುವುದರಿಂದ ಸ್ಮಾರಕಗಳನ್ನು ಸಂಖ್ಯೆಗಳಿಂದಲೇ ಗುರುತಿಸಲಾಗುತ್ತಿದೆ. ಇವುಗಳಲ್ಲಿ ಸಂಖ್ಯೆ 1 ಅಶೋಕನ ಕಾಲದ ಮಹಾಸ್ತೂಪ. ಇದು ಈಗ ಉಪಲಬ್ಧವಿರುವ ಅತಿ ಪ್ರಾಚೀನ ಮಾದರಿಗಳಲ್ಲಿ ಒಂದು.

ಮೂಲತಃ ಇಟ್ಟಿಗೆಯಿಂದ ಕಟ್ಟಲಾದ ಸ್ತೂಪವನ್ನು ಸುಮಾರು ಒಂದು ಶತಮಾನದ ಅನಂತರ ವಿಸ್ತರಿಸಿ ಕಲ್ಲಿನ ಹೊದಿಕೆಯನ್ನು ಅಳವಡಿಸಲಾಯಿತು; ಕಲ್ಲಿನ ಕಟಕಟೆಯನ್ನು, ತೋರಣದ್ವಾರಗಳನ್ನು ಸೇರಿಸಲಾಯಿತು. ಮರಗೆತ್ತನೆಯ ತಂತ್ರವನ್ನು ಕಲ್ಲಿನ ಕೆತ್ತನೆಯಲ್ಲೂ ಅಳವಡಿಸಲಾಗಿದೆ. ದಕ್ಷಿಣ ತೋರಣದ್ವಾರದ ಮೇಲಿನ ಶಾಸನವೊಂದು ಸಾತಕರ್ಣಿಯ ಆವೇಸನಿನ್ ಆದ ಆನಂದನ ದಾನವನ್ನು ದಾಖಲಿಸುತ್ತದೆ. ಇತರ ತೋರಣದ್ವಾರಗಳ ಮೇಲಿನ ಶಾಸನಗಳಿಂದ ಬಲಮಿತ್ರ, ನಾಮಪಿಯ ದಾನವಿತ್ತ ಸಂಗತಿ ತಿಳಿದುಬರುತ್ತದೆ. ತೋರಣದ್ವಾರಶಿಲ್ಪ ಗಳು, ಯಕ್ಷಯಕ್ಷಿಯರು, ಸಾಲಭಂಜಿಕೆಯರು, ಅಲಂಕರಣಗಳು ಮುಂತಾದವುಗಳಿಂದ ಕೂಡಿದ್ದು ಮರ, ಲೋಹ ಹಾಗೂ ದಂತದ ಕುಸರಿ ಕೆಲಸವನ್ನು ಹೋಲುತ್ತವೆ. ದಕ್ಷಿಣ ತೋರಣದ್ವಾರದ ಉಬ್ಬುಗೆತ್ತನೆಯ ಅಲಂಕರಣವು ವಿದಿಶಾದ ದಂತಕೆಲಸಗಾರರ ರೂಪಕಮ್ಮ. ಚೌಕಾಕಾರದ ಎರಡು ಕಂಬಗಳು ಪ್ರತಿಯೊಂದು ತೋರಣದ್ವಾರದಲ್ಲೂ ಇದ್ದು, ಅವು ಸಿಂಹ, ಆನೆ ಅಥವಾ ಕುಬ್ಜರಶಿಲ್ಪಗಳಿಂದ ಕೂಡಿವೆ. ಜಾತಕ ಕಥೆಗಳಿಗೆ ಸಂಬಂಧಿಸಿದ ದೃಶ್ಯಗಳು, ಗೌತಮಬುದ್ಧನ ಜೀವನ ದೃಶ್ಯಗಳು, ಬೌದ್ಧಧರ್ಮದ ಇತಿಹಾಸಕ್ಕೆ ಸಂಬಂಧಿಸಿದ ಘಟನಾವಳಿಗಳು, ಮಾನುಷಿ ಬುದ್ಧರಿಗೆ ಸಂಬಂಧಪಟ್ಟ ದೃಶ್ಯಗಳು, ಇತರೆ ದೃಶ್ಯಗಳು ಹಾಗೂ ಅಲಂಕರಣ - ಇವು ತೋರಣದ್ವಾರಗಳ ವಸ್ತು. ಸಮೃದ್ಧ ಸಸ್ಯ ಜೀವನ ಚಿತ್ರಣಕ್ಕೆ ಸಾಂಚಿ ಶಿಲ್ಪ ಪ್ರಸಿದ್ಧ.

ಇತರ ಸ್ಮಾರಕಗಳಲ್ಲಿ ಸ್ತೂಪ-3ರಲ್ಲಿ ಶಾರಿಪುತ್ರ ಮತ್ತು ಮೌದ್ಗಲ್ಯಾಯನ ಎಂಬ ಬುದ್ಧನ ಇಬ್ಬರು ಅಗ್ರಶಿಷ್ಯರ ಅವಶೇಷಗಳಿರುವ ಕರಂಡಕಗಳು ಪತ್ತೆಯಾದವು. ಈ ಅವಶೇಷಗಳು ಈಗ ಇಂಗ್ಲೆಂಡಿನಲ್ಲಿವೆ. ಇಲ್ಲಿನ ಸ್ತೂಪಗಳಲ್ಲಿರುವ ಧ್ಯಾನಮುದ್ರೆ ಶಿಲ್ಪಗಳು ಮಥುರಾ ಶೈಲಿಯವು. ಶುಂಗ, ಸಾತವಾಹನ, ಗುಪ್ತ ಮುಂತಾದ ಹಲವು ರಾಜಮನೆತನಗಳ ಕಾಲದಲ್ಲಿ ಇಲ್ಲಿ ಕಲಾಚಟುವಟಿಕೆಗಳು ನಡೆದವು. 12ನೆಯ ಶತಮಾನಕ್ಕೆ ಸೇರಿದ ಯಾವ ಬೌದ್ಧ ನಿರ್ಮಾಣವೂ ಇಲ್ಲಿಲ್ಲ. ವಿಷ್ಣು, ಗಣೇಶ, ಮಹಿಷಮರ್ದಿನಿ ಮುಂತಾದ ಹಿಂದು ದೇವತಾ ಶಿಲ್ಪಗಳು ಸಾಂಚಿಯ ವಸ್ತುಸಂಗ್ರಹಾಲಯದಲ್ಲಿವೆ. ಸಾಂಚಿಯಲ್ಲಿ ಅನೇಕ ಪುಟ್ಟ ಶಾಸನಗಳು ದೊರೆತಿವೆ.

13ನೆಯ ಶತಮಾನದಿಂದ ಸಾಂಚಿ ಪರಿತ್ಯಕ್ತವಾದ ಮತ್ತು ಯಾರ ಗಮನಕ್ಕೂ ಬರದ ಒಂದು ಸ್ಥಳವಾಗಿತ್ತು. 1818ರಲ್ಲಿ ಜನರಲ್ ಟೇಲರ್ ಇಲ್ಲಿನ ಸ್ತೂಪಾವಶೇಷಗಳನ್ನು ಪತ್ತೆ ಹಚ್ಚಿದ; ಅದನ್ನು ಬೆಳಕಿಗೆ ತಂದು ಜನರ ಗಮನ ಸಲ್ಲುವಂತೆ ಮಾಡಿದ. ಆದರೆ ದುರ್ದೈವವೆಂದರೆ ಇದರಿಂದಾಗಿ ಹಲವು ಅನನುಭವಿ ಉತ್ಸಾಹಿಗಳು ಮತ್ತು ನಿಧಿಶೋಧಕರ ಕೈಗೆ ಸಿಲುಕಿದ ಸಾಂಚಿ ಹಾನಿಗೀಡಾಯಿತು. 1822ರಲ್ಲಿ ಕ್ಯಾಪ್ಟನ್ ಜಾನ್‍ಸನ್ 1ನೆಯ ಸ್ತೂಪದ ಒಂದು ಪಾಶ್ರ್ವವನ್ನು ಮೇಲಿನಿಂದ ಕೆಳಗಿನವರೆಗೆ ಉತ್ಖನನಮಾಡಿದ. ಇದರಿಂದ ಪಶ್ಚಿಮ ಭಾಗ, ಕೈಪಿಡಿ ಕುಸಿದವು. ಅಗತೆದಲ್ಲಿ 2ನೆಯ ಸ್ತೂಪ ಹಾನಿಗೊಂಡಿತು. 1851ರಲ್ಲಿ ಅಲೆಗ್ಸಾಂಡರ್ ಕನಿಂಗ್‍ಹ್ಯಾಮ್ ಎಂಬಾತ ಎಫ್.ಸಿ.ಮೈಸೆಯೊಂದಿಗೆ ಸೇರಿ 2 ಮತ್ತು 3ನೆಯ ಸ್ತೂಪಗಳನ್ನು ಉತ್ಖನನಮಾಡಿದ. ಅವಶೇಷವಿರುವ ಕರಂಡಕಗಳು ಲಭ್ಯವಾದದ್ದು ಆಗಲೇ.

ಸಾಂಚಿಯ ಗುಡ್ಡದಲ್ಲೆಲ್ಲ ಗಿಡಗೆಂಟೆಗಳು ಬೆಳೆದು ಸ್ತೂಪಗಳು ಪಾಳುಬಿದ್ದಿದ್ದವು. ಸ್ಥಳೀಯ ಜಮೀನುದಾರನೊಬ್ಬ ಅಶೋಕ ಸ್ತಂಭವನ್ನು ತುಂಡರಿಸಿ ಕಬ್ಬು ಅರೆಯಲು ಗಾಣವನ್ನಾಗಿ ಬಳಸಿದ್ದ. 1881ರವರೆಗೆ ಸಾಂಚಿ ಅವಶೇಷಗಳ ಬಗ್ಗೆ ಗಮನ ಹರಿಯಲಿಲ್ಲ. ಮೇಜರ್ ಕೋಲ್ ಈ ಬಗ್ಗೆ ಬಹಳ ಪ್ರಯತ್ನಮಾಡಿ ಯಶಸ್ವಿಯಾದ. 1912-19ರ ಅವಧಿಯಲ್ಲಿ ಸರ್‍ಜಾನ್ ಮಾರ್ಷಲ್ ಭಾರತೀಯ ಪುರಾತತ್ತ್ವ ಇಲಾಖೆಯ ಪ್ರಧಾನ ನಿರ್ದೇಶಕನಾಗಿದ್ದಾಗ ಇಲ್ಲಿನ ಎಲ್ಲ ಸ್ಮಾರಕಗಳು ಸುಸ್ಥಿತಿಯನ್ನು ಕಂಡವು. ಮುಹಮ್ಮದ್ ಹಮೀದ್ 1936ರಲ್ಲಿ ಸ್ತೂಪ 1 ಮತ್ತು 2ರ ನಡುವಣ ಗುಡ್ಡದ ಇಳಿಜಾರಿನಲ್ಲಿ ಉತ್ಖನನ ನಡೆಸಿ ಒಂದು ಸ್ಮಾರಕವನ್ನು ಬೆಳಕಿಗೆ ತಂದರು; ಅದು ಸ್ಮಾರಕ ಸಂಖ್ಯೆ 51. ಭಾರತೀಯ ವಾಸ್ತುಶಿಲ್ಪದ (ನೋಡಿ- ಭಾರತೀಯ-ವಾಸ್ತುಶಿಲ್ಪ) ಇತಿಹಾಸದ ಪ್ರಾಚೀನತೆಯಲ್ಲಿ ಸಾಂಚಿಯದು ಪ್ರಥಮ ಹಾಗೂ ಪ್ರಧಾನ ಪಾತ್ರ.

ಪ್ರಾಚೀನ ಭಾರತದ ಶಾಸನಗಳ ಬ್ರಾಹ್ಮೀ ಲಿಪಿಯನ್ನು ಓದಲು ವಿದ್ವಾಂಸರಿಗೆ ಸಾಧ್ಯವಾಗಿರಲಿಲ್ಲ. ಜೇಮ್ಸ್‍ಪ್ರಿನ್ಸೆಪ್ ಸತತವಾಗಿ ಏಳುವರ್ಷಗಳ ಕಾಲ ಪ್ರಯತ್ನಪಟ್ಟ. ಕೊನೆಗೆ ಸಾಂಚಿಸ್ತೂಪದ ಹರಕೆಯ ಪುಟ್ಟ ಶಾಸನಗಳಿಂದ 1837ರಲ್ಲಿ ಇದಕ್ಕೆ ಸುಳಿವು ಹಾಗೂ ಪರಿಹಾರ ದೊರೆಯಿತು. ಪ್ರಿನ್ಸೆಪ್ ಬ್ರಾಹ್ಮೀಲಿಪಿಯ ವರ್ಣಮಾಲೆಯನ್ನು ಸಿದ್ಧಪಡಿಸಿದ. ಹೀಗಾಗಿ ಲಿಪಿಯ ಅನ್ವೇಷಣೆಯ ದೃಷ್ಟಿಯಿಂದಲೂ ಸಾಂಚಿ ಮಹತ್ತ್ವದ ಪಾತ್ರವಹಿಸಿದ. (ಎಚ್.ಎಮ್.ಎನ್.ಆರ್.)