ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂಡರ್ಸ್, ಸಿ ಬಿ

ಸಾಂಡರ್ಸ್, ಸಿ ಬಿ - ಮೈಸೂರು ಸಂಸ್ಥಾನದಲ್ಲಿದ್ದ ಬ್ರಿಟಿಷ್ ಕಮೀಷನರ್ (1876-78). ಈಸ್ಟ್ ಇಂಡಿಯ ಕಂಪನಿಯ ಸೇವೆಯಲ್ಲಿದ್ದ ಈತ 1849ರಲ್ಲಿ ಪಂಜಾಬ್ ಸೈನ್ಯದಲ್ಲಿ ಅಧಿಕಾರಿಯಾಗಿದ್ದ. 1857ರಲ್ಲಿ ಬ್ರಿಟಿಷ್ ದಂಡು ದೆಹಲಿಗೆ ಮುತ್ತಿಗೆ ಹಾಕಿದಾಗ ಸೈನ್ಯದಲ್ಲಿ ಪೊಲಿಟಿಕಲ್ ಏಜೆಂಟ್ ಮತ್ತು ಕಮೀಷನರ್ ಆಗಿದ್ದ. 1861ರಲ್ಲಿ ಮೈಸೂರಿನ ಕಮೀಷನರ್ ಆಗಿದ್ದ ಮಾರ್ಕ್ ಕಬ್ಬನ್ ಅನಾರೋಗ್ಯದಿಂದ ರಾಜೀನಾಮೆ ಕೊಟ್ಟು ಇಂಗ್ಲೆಂಡಿಗೆ ಹೋದಾಗ ಸಾಂಡರ್ಸ್ ಹಂಗಾಮಿ ಕಮೀಷನರಾಗಿ, ಮುಂದೆ ಎಲ್.ಬಿ.ಬೌರಿಂಗ್ ಅಧಿಕಾರ ವಹಿಸಿಕೊಳ್ಳುವ ವರೆಗೆ (ಫೆಬ್ರವರಿ 1862) ಆ ಹುದ್ದೆಯಲ್ಲಿದ್ದ. ತರುವಾಯ 1866-67ರಲ್ಲಿ ಬೌರಿಂಗ್ ರಜೆಯ ಮೇಲೆ ಹೋದಾಗ ಮತ್ತೆ ಹಂಗಾಮಿ ಕಮೀಷನರ್ ಆಗಿದ್ದ. ಅನಂತರ ಹೈದರಾಬಾದಿನಲ್ಲಿ ರೆಸಿಡೆಂಟ್ ಆಗಿದ್ದು, 1876ರಲ್ಲಿ ಮೈಸೂರು ಸಂಸ್ಥಾನದಲ್ಲಿ ಚೀಫ್ ಕಮೀಷನರ್ ಆಗಿ ನೇಮಿತನಾದ. 1878ರಲ್ಲಿ ಈತ ಕಮೀಷನರ್ ಹುದ್ದೆಯಿಂದ ನಿವೃತ್ತನಾಗಿ ಇಂಗ್ಲೆಂಡಿಗೆ ಹಿಂತಿರುಗಿದ. ಕೆಲವು ವರ್ಷಗಳ ತರುವಾಯ ಸ್ವದೇಶದಲ್ಲಿ ನಿಧನನಾದ. ಈತ ಚೀಫ್ ಕಮೀಷನರ್ ಆಗಿದ್ದ 2 ವರ್ಷ ಮೈಸೂರು ಸಂಸ್ಥಾನದಲ್ಲಿ ಘೋರಕ್ಷಾಮ ಇದ್ದ ಕಾಲ. ಸಾಂಡರ್ಸ್ ಕ್ಷಾಮಪರಿಹಾರ ಕ್ರಮಗಳನ್ನು ತೀವ್ರವಾಗಿ ಕೈಕೊಂಡ. ಬ್ರಿಟಿಷ್ ಸಾರ್ವಭೌಮರಿಂದ ಇವನಿಗೆ 1864ರಲ್ಲಿ ಕಂಪ್ಯಾನಿಯನ್ ಆಫ್ ದಿ ಬಾತ್ ಪದವಿ ದೊರಕಿತು.

  (ವಿ.ಜಿ.ಕೆ.)