ಸಾಂತರರು ಸು. 7-17ನೆಯ ಶತಮಾನದ ವರೆಗೆ ಕರ್ನಾಟಕದಲ್ಲಿ ಆಳಿದ ಒಂದು ಸಾಮಂತ ಮನೆತನ. ಬಾದಾಮಿಯ ಚಳುಕ್ಯರ ಕಾಲದಲ್ಲಿ ಬನವಾಸಿಯ ಕದಂಬರ ಬಲ ಕುಂದಿದಾಗ ಕದಂಬರ ರಾಜ್ಯದ ಕೆಲವು ಭಾಗಗಳಲ್ಲಿ ಇವರು ಅಧಿಕಾರಕ್ಕೆ ಬಂದರೆಂದು ರೈಸ್ ಅವರು ಅಭಿಪ್ರಾಯ ಪಡುತ್ತಾರೆ. ಶಾಸನವೊಂದರಲ್ಲಿ ಈ ವಂಶದ ಮೂಲದ ವಿವರಗಳನ್ನು ಹೀಗೆ ಹೇಳಿದೆ : ಇವರು ಉಗ್ರವಂಶಕ್ಕೆ ಸೇರಿದವರು ಹಾಗೂ ಉತ್ತರ ಮಧುರೆಯವರು (ಮಧುರಾ). ರಾಹ ಈ ವಂಶದ ಮೂಲ ಪುರುಷ. ಅವನ ಅನಂತರ ಸಹಕಾರ ಆಳಿದ. ಈತನ ಮಗ ಜಿನದತ್ತ. ಈತ ತಂದೆಯ ವರ್ತನೆಗೆ ಬೇಸತ್ತು ಪದ್ಮಾವತಿ ಎಂಬ ಜೈನ ದೇವತೆಯ ವಿಗ್ರಹದೊಂದಿಗೆ ದಕ್ಷಿಣಕ್ಕೆ ಬಂದ. ಈತ ಹೊಂಬುಚವನ್ನು (ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿರುವ ಹುಮಚ) ರಾಜಧಾನಿಯಾಗಿ ಮಾಡಿಕೊಂಡು ಸಾಂತರ ರಾಜ್ಯವನ್ನು ಕಟ್ಟಿದ. ಮುಂದೆ ಇದು ಸಾಂತಳಿಗೆ 1000 (ತೀರ್ಥಹಳ್ಳಿ ತಾಲ್ಲೂಕು ಹಾಗೂ ಸುತ್ತಲ ಪ್ರದೇಶ) ಎಂದು ಹೆಸರಾಯಿತು. ಇವನು ತನ್ನ ರಾಜ್ಯವನ್ನು ದಕ್ಷಿಣಕ್ಕೆ ಕಳಸದವರೆಗೂ (ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು) ಉತ್ತರಕ್ಕೆ ಗೋವರ್ಧನಗಿರಿಯವರೆಗೂ (ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು) ವಿಸ್ತರಿಸಿದನೆಂದು ಹೇಳಿದೆ. ಇವನ ಅನಂತರ ಶ್ರೀಕೇಶಿ, ಜಯಕೇಶಿ, ರಣಕೇಶಿ, ವಿಕ್ರಮ, ವೀರ, ಭುಜಬಲ, ನನ್ನಿ, ರಾಮ, ಚಾಗಿ, ಕನ್ನರ, ಕಾಮದೇವ, ತ್ಯಾಗಿ, ರಾಯ, ಚಿಕ್ಕವೀರ, ಅಮ್ಮಣದೇವ, ತೈಲಪದೇವ, ಬೀರದೇವ, ಶ್ರೀವಲ್ಲಭ, ತೈಲ, ಜಗದೇವ, ಜಯಕೇಶಿ, ಸಾಂತಿಯದೇವ (ಶಾಂತೆಯ) ಮುಂತಾದ ಅರಸರು ರಾಜ್ಯವಾಳಿದರು. ಹನ್ನೆರಡನೆಯ ಶತಮಾನದಲ್ಲಿ ಈ ಮನೆತನ ಒಡೆದು ಎರಡು ಶಾಖೆಗಳಾಗಿ ಒಂದು ಶಾಖೆ ಕಳಸದಿಂದಲೂ ಇನ್ನೊಂದು ಶಾಖೆ ಹೊಸಗುಂದದಿಂದಲೂ ಆಳಿದುದಾಗಿ ತಿಳಿದುಬರುತ್ತದೆ. ಸುಮಾರು ಹನ್ನೆರಡನೆಯ ಶತಮಾನದ ಪ್ರಾರಂಭದಿಂದ ಇವರು ತಮ್ಮ ರಾಜ್ಯವನ್ನು ಕಳಸರಾಜ್ಯವೆಂದು ಕರೆದರು. ಬೀರದೇವರಸ, ಬೊಮ್ಮರಸ, ಕಮ್ಮರಸ-ಇವರು ಹೊಸಗುಂದದ ಶಾಖೆಯ ಕೆಲವು ದೊರೆಗಳು. ಶಾಂತಮರುದೇವ, ಜಾಕಲದೇವಿ, ಕಾಳಲಮಹಾದೇವಿ, ಬಾಲದೇವ ಇವರು ಕಳಸದಿಂದ ರಾಜ್ಯವಾಳಿದ ಅರಸ ಅರಸಿಯರು.

ಹೊಯ್ಸಳರ ಪ್ರಾಬಲ್ಯದಿಂದಾಗಿ ಕ್ರಮೇಣ ಇವರು ತಮ್ಮ ರಾಜಧಾನಿ ಯನ್ನು ಕಳಸದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆರವಸೆ ಮತ್ತು ಕಾರ್ಕಳಗ ಳಿಗೆ ಸ್ಥಳಾಂತರಿಸಿದರು. ಸುಮಾರು ಹದಿನಾರನೆಯ ಶತಮಾನದ ಪ್ರಾರಂಭ ದಲ್ಲಿ (ಸು. 1516) ಇವರು ತಮ್ಮ ರಾಜ್ಯವನ್ನು ಕಳಸ-ಕಾರ್ಕಳ ರಾಜ್ಯವೆಂದೂ (ಘಟ್ಟದ ಕೆಳಗೆ ಹಾಗೂ ಮೇಲೆ) ತದನಂತರ ಸು. 1530ರ ಹೊತ್ತಿಗೆ ಇದನ್ನು ಕೇವಲ ಕಾರ್ಕಳ ರಾಜ್ಯವೆಂದೂ ಕರೆಯ ಲಾರಂಭಿಸಿದರು. ಇವರು ತಮ್ಮ ದೀರ್ಘಕಾಲದ ಆಳಿಕೆಯಲ್ಲಿ ರಾಷ್ಟ್ರಕೂಟರ, ಕಲ್ಯಾಣದ ಚಾಳುಕ್ಯರ, ಹೊಯ್ಸಳರ, ವಿಜಯನಗರದ ದೊರೆಗಳ ಹಾಗೂ ಕೆಳದಿ ನಾಯಕರ ಸಾಮಂತರಾಗಿದ್ದರು. ಮುಂದೆ ಸುಮಾರು ಹದಿನೇಳನೆಯ ಶತಮಾನದ ಮಧ್ಯಭಾಗದ ವರೆಗೆ ಕಾರ್ಕಳದಿಂದ ರಾಜ್ಯವಾಳಿದ ಇವರನ್ನು ಕೆಳದಿ ನಾಯಕರು ಸಂಪೂರ್ಣವಾಗಿ ಸೋಲಿಸಿದುದರ ಪರಿಣಾಮವಾಗಿ ಇವರ ಆಳಿಕೆ ಕೊನೆಗೊಂಡಿತು.

ಸಾಂತರರು ವಾನರಧ್ವಜರೆಂದೂ ಸಿಂಹಲಾಂಛನರೆಂದೂ ಶಾಸನಗಳಲ್ಲಿ ಹೇಳಿದೆ. ಈ ವಂಶದ ದೊರೆಗಳು ಜೈನರು. ಹೊಸಗುಂದದ ಶಾಖೆಯ ಲ್ಲಿದ್ದ ದೊರೆಗಳು ಶೈವರು. ಹುಮಚದ ಪದ್ಮಾವತಿಯ ಆರಾಧಕರಾದ ಈ ಜೈನ ದೊರೆಗಳಿಗೆ ಕಳಸದ ಕಳಸನಾಥ ಕುಲದೈವ. ಧರ್ಮ, ವಾಸ್ತುಶಿಲ್ಪ, ಸಾಹಿತ್ಯ, ಕಲೆಗಳಿಗೆ ಇವರು ಉದಾರ ಆಶ್ರಯ ನೀಡಿದ್ದ ರೆಂದೂ ಇವರ ರಾಜ್ಯ ಅತ್ಯಂತ ವೈಭವದಿಂದ ಕೂಡಿತ್ತೆಂದೂ ತಿಳಿದು ಬರುತ್ತದೆ. (ಕೆ.ಎಮ್.ಎಸ್.)