ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಂತಾಯನ, ಜಾರ್ಜ್

ಸಾಂತಾಯನ, ಜಾರ್ಜ್ 1863-1952. ಅಮೆರಿಕದ ಪ್ರಸಿದ್ಧ ಬರೆಹಗಾರ ಹಾಗೂ ತತ್ತ್ವಶಾಸ್ತ್ರಜ್ಞ. ಈತ 1863ರಲ್ಲಿ ಸ್ಪೇನ್‍ನ ಮ್ಯಾಡ್ರಿಡ್ ನಲ್ಲಿ ಜನಿಸಿದ. ಈತನ ಕುಟುಂಬ ಅಮೆರಿಕಕ್ಕೆ ವಲಸೆ ಬಂದು ಬೋಸ್ಟನ್‍ನಲ್ಲಿ ನೆಲೆಸಿತು (1872). ಈತ ಹಾರ್ವರ್ಡ್ ವಿಶ್ವವಿದ್ಯಾಲಯ ದಲ್ಲಿ ಪದವೀಧರನಾದ (1886). ಇದೇ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕನಾಗಿ (1889-1912) ಈ ವಿಭಾಗಕ್ಕೆ ಪ್ರಪಂಚ ಖ್ಯಾತಿ ತಂದುಕೊಟ್ಟ. ತರುವಾಯ ಲೇಖಕನಾಗುವ ಬಯಕೆಯಿಂದ ಯುರೋಪಿಗೆ ಬಂದು ನೆಲೆಸಿದ. ಈತ ತನ್ನ ಚಿಂತನೆಗಳನ್ನು ಶಾಸ್ತ್ರೀಯ ಗ್ರಂಥಗಳಲ್ಲಿ ಮಾತ್ರವಲ್ಲದೆ ಸಂವಾದ, ಸಾಹಿತ್ಯಕ ಪ್ರಬಂಧ, ಸುನೀತ ಹಾಗೂ ದ ಲಾಸ್ಟ್ ಪ್ಯೂರಿಟನ್ (1936) ಕಾದಂಬರಿಯಲ್ಲಿ ಪ್ರಕಟಪಡಿಸಿದ್ದಾನೆ. ಈತನ ಬರೆಹಗಳು ಓದುಗರಿಗೆ ಒಗಟಿನ ರೂಪದಲ್ಲಿ ಕಾಡುತ್ತವೆ. ವಾಸ್ತವಿಕತೆಗೆ ಸಂಬಂಧಿಸಿದಂತೆ ಈತ ಪ್ರತಿಪಾದಿಸಿದ ಸಿದ್ಧಾಂತ ಸತ್ತ್ವ ಮತ್ತು ಅಸ್ತಿತ್ವಗಳ ವ್ಯತ್ಯಾಸದ ಸುತ್ತ ಕೇಂದ್ರೀಕರಿಸುತ್ತದೆ. ಸತ್ತ್ವವನ್ನು ಈತ ಯೋಚನೆ, ಅರ್ಥ, ಗ್ರಹಿಕೆ ಹಾಗೂ ಸಾಧ್ಯತೆಗಳೆಂದು ವ್ಯಾಖ್ಯಾನಿಸು ತ್ತಾನೆ. ಇದಕ್ಕೆ ವಿರುದ್ಧವಾಗಿ ಅಸ್ತಿತ್ವ ಪ್ರಪಂಚದಲ್ಲಿ ಘಟನೆಗಳು, ಜನ ಹಾಗೂ ಜೀವನದಲ್ಲಿ ನಾವು ಎದುರಿಸುವ ವಸ್ತು ವಿಷಯಗಳಿವೆ ಎಂದು ಪ್ರತಿಪಾದಿಸುತ್ತಾನೆ. ಈತನ ಪ್ರಕಾರ ಎಲ್ಲ ಸತ್ತ್ವಗಳು ಅಸ್ತಿತ್ವದಲ್ಲಿಲ್ಲ; ಅಸ್ತಿತ್ವದಲ್ಲಿರುವ ವಸ್ತುಗಳೆಲ್ಲವುಗಳಲ್ಲೂ ಸತ್ತ್ವಗಳಿವೆ. ಸತ್ತ್ವದ ಉದ್ದೇಶ ಅಸ್ತಿತ್ವವನ್ನು ದರ್ಶಿಸುವುದಾಗಿದೆ ಎಂಬುದು ಇವನ ಅಭಿಮತ.

ಇವನ ಪ್ರಕಾರ ಧರ್ಮವೆನ್ನುವುದು ಬದುಕಿಗೆ ಆಧ್ಯಾತ್ಮಿಕ ಅರ್ಥನೀಡುವ ಕಾಲ್ಪನಿಕ ಚಿಂತನೆಯ ಕಾವ್ಯರೂಪ; ಆದರೆ ಧರ್ಮವನ್ನು ಅಕ್ಷರಶಃ ಅರ್ಥದಲ್ಲಿ ಸ್ವೀಕರಿಸಬಾರದು. ಮಾನವ ಆತ್ಮ ಮುಕ್ತವಾಗಿ, ಸೃಜನಶೀಲವಾಗಿ ಇರಬಹುದಾದ ಆದರ್ಶ ಪ್ರಪಂಚವನ್ನು ಜನ ನಂಬಬಹುದು ಎಂದು ಈತ ಹೇಳುತ್ತಾನಲ್ಲದೆ, ಈ ಆದರ್ಶ ಪ್ರಪಂಚ ವಾಸ್ತವಿಕತೆಯನ್ನು ತಪ್ಪಾಗಿ ಗ್ರಹಿಸುವಂತಾಗಬಾರದೆನ್ನುತ್ತಾನೆ.

ಈತ ಕಲೆ, ನೈತಿಕತೆ, ಧರ್ಮ ಹಾಗೂ ವಿಜ್ಞಾನಗಳನ್ನು ಕುರಿತು ವಿಪುಲವಾಗಿ ಕೃತಿಗಳನ್ನು ರಚಿಸಿದ್ದಾನೆ. ತ್ರೀ ಫಿಲಾಸಫಿಕಲ್ ಪೊಯೆಟ್ಸ್ (1910) ಕೃತಿಯಲ್ಲಿ ಡಾಂಟೆ, ಲ್ಯೂಕ್ರೀಷಿಯಸ್ ಮತ್ತು ಗಯಟೆಯ ಚಿಂತನೆಗಳನ್ನು ಕುರಿತ ವ್ಯಾಖ್ಯೆಗಳಿವೆ. ಕ್ಯಾರೆಕ್ಟರ್ ಅಂಡ್ ಒಪೀನಿಯನ್ ಇನ್ ದಿ ಯುನೈಟೆಡ್ ಸ್ಟೇಟ್ಸ್ (1920) ಅಮೆರಿಕ ಜನಜೀವನದ ಟೀಕೆಯಾಗಿದೆ. ಇವುಗಳಲ್ಲದೆ ದಿ ಸೆನ್ಸ್ ಆಫ್ ಬ್ಯೂಟಿ (1896), ಇಂಟರ್‍ಪ್ರಿಟೇಶನ್ಸ್ ಆಫ್ ರಿಲಿಜಿಯನ್ ಅಂಡ್ ಪೊಯಟ್ರಿ (1900), ದಿ ಲೈಫ್ ಆಫ್ ರೀಸನ್ (ಐದು ಸಂಪುಟಗಳು, 1905-06), ಸ್ಕೆಪ್ಟಿಸಿಸಮ್ ಅಂಡ್ ಅನಿಮಲ್ ಫೇಯ್ತ್ (1923), ರೀಆಮ್ಸ್ ಆಫ್ ಬೀಯಿಂಗ್ (ನಾಲ್ಕು ಸಂಪುಟಗಳು, 1927-40) ಮೊದಲಾದ ಪ್ರಮುಖ ಕೃತಿಗಳನ್ನೂ ರಚಿಸಿದ್ದಾನೆ. ಈತ 1952ರಲ್ಲಿ ನಿಧನನಾದ. ಇವನ ಮರಣಾನಂತರ ಪರ್ಸನ್ಸ್ ಅಂಡ್ ಪ್ಲೇಸಸ್ : ಫ್ರ್ಯಾಗ್ಮೆಂಟ್ಸ್ ಆಫ್ ಆಟೋಬಯಾಗ್ರಫಿ (1987) ಎಂಬ ಕೃತಿ ಪ್ರಕಟವಾಯಿತು. (ಎಸ್.ಎಸ್.ಆರ್.)