ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಗರಾತಿಕ್ರಮಣ

ಸಾಗರಾತಿಕ್ರಮಣ - ಭೂಭಾಗಗಳನ್ನು ಸಾಗರ ಆಕ್ರಮಿಸುವ ನಿಸರ್ಗಕ್ರಿಯೆ (ಮರೀನ್ ಟ್ರಾನ್ಸ್‍ಗ್ರೆಷನ್). ಭೂಇತಿಹಾಸದಲ್ಲಿ ಸಾಗರಗಳ ಮತ್ತು ಭೂಖಂಡಗಳ ವಿಂಗಡಣೆ ಈಗಿರುವಂತೆ ಇರಲಿಲ್ಲ ಎಂಬುದು ಭೂವೈe್ಞÁನಿಕ ಆಧಾರಗಳಿಂದ ತಿಳಿದು ಬಂದಿದೆ. ಆಗಾಗ್ಗೆ ಭೂಖಂಡಗಳ ಮೇಲೆ ಸಾಗರ ಮುನ್ಸರಿಯುತ್ತಿದ್ದುದೂ ಹಿಂನ್ಸರಿಯುತ್ತಿದ್ದುದೂ ಕಂಡುಬಂದಿದೆ. ಸಾಗರಗಳ ಹಿಂಚಲನೆಗೆ (ಮರೀನ್ ರಿಗ್ರೆಷನ್) ಸಾಗರ ವಿಕ್ರಮಣ (ವಿಪರ್ಯಯಕ್ರಮಣ, ಅಪಕ್ರಮಣ) ಎಂದು ಹೆಸರು. ಈ ಅತಿಕ್ರಮಣ ಅಪಕ್ರಮಣಗಳನ್ನು ಆಯಾಕಾಲಗಳಲ್ಲಿ ಶೇಖರಗೊಂಡ ಸ್ತರಗಳ ಮತ್ತು ಅವುಗಳಲ್ಲಿಯ ಜೀವ್ಯವಶೇಷಗಳ ಆಧಾರಗಳ ಮೇಲೆ ನಿರ್ಧರಿಸಲಾಗಿದೆ.

ಸಾಗರಾತಿಕ್ರಮಣ ಉಂಟಾಗಲು ಮುಖ್ಯ ಕಾರಣವೆಂದರೆ ಸಾಗರಗಳಲ್ಲಿ ನೀರಿನ ಆಧಿಕ್ಯ ಮತ್ತು ತೀರಭಾಗಗಳ ಅಸ್ಥಿರತೆ. ವಾಯುಗುಣದಲ್ಲಿ ಉಷ್ಣತೆ ಅಧಿಕವಾದಾಗ ಹಿಮ ದ್ರವಿಸಿ ನೀರಾಗಿ ಮಾರ್ಪಟ್ಟು ಸಾಗರ ಸೇರುತ್ತದೆ. ಇದರಿಂದ ಸಾಗರಾತಿಕ್ರಮಣ ಸಾಧ್ಯ. ವಾಯುಗುಣದಲ್ಲಿ ಉಷ್ಣತೆ ಕಡಿಮೆಯಾಗಿ ಶೀತವಾತಾವರಣ ಏರ್ಪಟ್ಟಾಗ ಸಾಗರಗಳ ನೀರು ಹೆಪ್ಪುಗಟ್ಟಿ ಸಾಗರಾಪಕ್ರಮಣಕ್ಕೆ ಕಾರಣವಾಗುತ್ತದೆ. ಇದಕ್ಕಿಂತಲೂ ಮುಖ್ಯ ಕಾರಣ ಭೂಭಾಗಗಳ ಅಸ್ಥಿರತೆ. ಭೂಮಿಯಲ್ಲಿಯ ಅಂತಃಕ್ರಿಯೆ ಅಥವಾ ಕ್ಷೋಭೆಗಳಿಂದ ಭೂಖಂಡಗಳಲ್ಲಿ ಕೆಲವು ಭಾಗಗಳು ಕುಸಿಯುತ್ತವೆ, ಕೆಲವು ಎತ್ತರಿಸಲ್ಪಡುತ್ತವೆ. ಈ ರೀತಿಯ ಏರಿಳಿತಗಳಿಂದ ಸಾಗರತೀರಪ್ರದೇಶದ ಭೂಭಾಗಗಳಲ್ಲಿ ಆದಾಗ ಸಾಗರಾತಿಕ್ರಮಣ ಇಲ್ಲವೆ ಅಪಕ್ರಮಣ ಉಂಟಾಗುತ್ತವೆ. ಸಾಗರತಳಭಾಗದ ಏರುವಿಕೆ ಅತಿಕ್ರಮಣಕ್ಕೂ ಸಾಗರ ತಳಭಾಗದ ಕುಸಿಯುವಿಕೆ ಅಪಕ್ರಮಣಕ್ಕೂ ಕಾರಣವಾಗಬಹುದು.

ಸಾಗರಾತಿಕ್ರಮಣ ಭೂಇತಿಹಾಸದ ಕೆಲವು ಯುಗಗಳಲ್ಲಿ ಭೂಮಿಯ ಎಲ್ಲ ಭಾಗಗಳಲ್ಲಿ ಮತ್ತೆ ಕೆಲವೊಮ್ಮೆ ಭೂಮಿಯ ಕೆಲವು ಭಾಗಗಳಲ್ಲಿ ಮಾತ್ರ ಉಂಟಾದಂತೆಯೂ ತಿಳಿದುಬಂದಿದೆ. ಇವನ್ನು ಪ್ರಾದೇಶಿಕ ಸಾಗರಾತಿಕ್ರಮಣ ಹಾಗೂ ಸ್ಥಳೀಯ ಸಾಗರಾತಿಕ್ರಮಣ ಎಂದು ಕರೆದಿದೆ.

ಭಾರತ ಪರ್ಯಾಯದ್ವೀಪ ಭಾಗ ಭೂಇತಿಹಾಸದ ಹೆಚ್ಚಿನ ಅವಧಿüಯಲ್ಲಿ ಸ್ಥಿರವಾಗಿದ್ದುದು ಕಂಡುಬಂದಿದೆ. ಈ ಭಾಗದಲ್ಲಿ ಆಗಾಗ್ಗೆ ಉಂಟಾಗಿರುವ ಸಾಗರಾತಿಕ್ರಮಣಗಳಿಂದ ಅಲ್ಲಲ್ಲಿ ಸ್ತರಗಳ ಸಂಚಯನ ಆಗಿದೆ. ಹಲವು ನಿದರ್ಶನಗಳು ಹೀಗಿವೆ: ಮಧ್ಯಪ್ರದೇಶದ ಉಮೇರಿಯ ಮತ್ತು ಮನೇಂದ್ರಘರ್ ಬಳಿಯ ಪರ್ಮಿಯನ್ ಕಲ್ಪದ ಸ್ತರಗಳು; ಕಚ್ ಬಳಿಯ ಜ್ಯುರಾಸಿಕ್ ಕಲ್ಪದ ಸ್ತರಗಳು; ತಿರುಚ್ಚಿರಾಪ್ಪಳ್ಳಿ, ಪುದುಚ್ಚೇರಿ, ಅಸ್ಸಾಮ್ ಮತ್ತು ಮಧ್ಯಪ್ರದೇಶದ ಭಾಗ್ ಬಳಿಯ ಕ್ರಿಟೇಷಸ್ ಕಲ್ಪದ ಸ್ತರಗಳು; ಕಚ್, ಕಾಥೇವಾರ್, ಸೂರತ್, ಬ್ರೋಚ್, ರಾಜಸ್ತಾನ, ಅಸ್ಸಾಮ್, ಕೇರಳದ ಕ್ವಿಲಾನ್ ಬಳಿಯ ಟರ್ಷಿಯರಿ ಯುಗದ ಸ್ತರಗಳು. (ಎಮ್.ವಿ.ಎ.ಎಸ್.)