ಸಾಗರ ನಂದಿ ಸು. 10ನೆಯ ಶತಮಾನದ ಲಾಕ್ಷಣಿಕ. ನಾಟಕ ಲಕ್ಷಣ ರತ್ನಕೋಶ ಎಂಬ ಲಕ್ಷಣ ಗ್ರಂಥದ ಕರ್ತೃ. ನಾಟಕ ಲಕ್ಷಣ ರತ್ನಕೋಶದ ಹಸ್ತಪ್ರತಿಯೊಂದು ಸಿಲ್ವನ್ ಲೇವಿ ಎಂಬ ವಿದ್ವಾಂಸನಿಗೆ ನೇಪಾಲದಲ್ಲಿ ದೊರೆತು (1922), ಅನಂತರ ಎಮ್.ಡಿಲಾನ್ ಅವರ ಪರಿಶ್ರಮದ ಫಲವಾಗಿ ಈ ಗ್ರಂಥ ಬೆಳಕಿಗೆ ಬಂದಿತು (1937).

ಈ ಗ್ರಂಥದಲ್ಲಿ ರೂಪಕಭೇದ, ಐದು ಅವಸ್ಥೆಗಳು, ಐದು ಅರ್ಥಪ್ರಕೃತಿಗಳು, ಐದು ಉಪಕ್ಷೇಪಕಗಳು, ಐದು ಸಂಧಿಗಳು, ನಾಲ್ಕು ಪತಾಕಾ ಸ್ಥಾನಗಳು, ವೃತ್ತಿ, ನಾಯಕ-ನಾಯಿಕಾ ಭೇದ, ಮೂವತ್ತಾರು ನಾಟ್ಯಲಕ್ಷಣಗಳು, ರಸ-ಭಾವ, ಉಪರೂಪಕಗಳು ಮೊದಲಾದವು ವಿವರಿಸಲ್ಪಟ್ಟಿವೆ. ಅಭಿನಯಾದಿಗಳ ಬಗೆಗೂ ಹೆಚ್ಚು ವಿವರಣೆ ಇದೆ. ಹರ್ಷವಿಕ್ರಮ, ಮಾತೃಗುಪ್ತ, ಗರ್ಗ, ಅಶ್ಮಕುಟ್ಟ, ನಖಕುಟ್ಟ, ಬಾದರಿ, ಭರತ ಮೊದಲಾದವರ ಲಕ್ಷಣ ಗ್ರಂಥಗಳನ್ನು ಅನುಸರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅನೇಕ ಗ್ರಂಥಗಳನ್ನು ಅಭ್ಯಸಿಸಿ, ಸುಮಾರು ಐದುನೂರಕ್ಕಿಂತಲೂ ಹೆಚ್ಚು ಶ್ಲೋಕಗಳನ್ನು ಬೇರೆ ಬೇರೆ ನಾಟಕಗಳಿಂದ ಆಯ್ದು ಉದಾಹರಿಸಿರುವುದರಿಂದಲೂ ನಾಟ್ಯಶಾಸ್ತ್ರದ ಬಗೆಗೆ ಬರೆದ ಲಾಕ್ಷಣಿಕರ ಅಭಿಪ್ರಾಯಗಳನ್ನು ಅವಶ್ಯವಿರುವೆಡೆ ಉಲ್ಲೇಖಿಸಿರುವುದರಿಂದಲೂ ಈ ಕೃತಿಗೆ ಹೆಚ್ಚು ಮಹತ್ತ್ವಬಂದಿದೆ. (ಎಮ್.ಡಿ.)