ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾತವಾಹನರು

ಸಾತವಾಹನರು ಮೌರ್ಯರ ಅನಂತರ ದಖನ್ ಪ್ರದೇಶದಲ್ಲಿ ಆಳಿದ ರಾಜಮನೆತನ. ಸೀಮುಕ ಈ ಮನೆತನದ ಮೂಲಪುರುಷ. ಈ ವಂಶದ ಅರಸರನ್ನು ದಕ್ಷಿಣಾಪಥೇಶ್ವರರೆಂದು ಕರೆಯಲಾಗಿದೆ. ದಕ್ಷಿಣಾ ಪಥ ಎಂಬ ಮಾತಿಗೆ ವಿಂಧ್ಯಪರ್ವತದ ದಕ್ಷಿಣಕ್ಕಿರುವ ಭಾರತದ ಭೂಭಾಗ, ಎಂದರೆ ಸಮಗ್ರ ದಕ್ಷಿಣಭಾರತ ಎಂಬುದು ಕೆಲವರ ಅಭಿಪ್ರಾಯ. ಆದರೆ ಇದು ವಿಂಧ್ಯಪರ್ವತದ ಕೆಳಗಿನ ಈಗಿನ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳನ್ನೊಳಗೊಂಡ ದಖನ್ ಪ್ರದೇಶವೆಂಬುದು ಬಹುಜನರ ಅಭಿಮತ.

ರಾಜಕೀಯ ಇತಿಹಾಸ : ಸಾತವಾಹನರು ಯಾರು, ಸಾತವಾಹನ ಎಂದರೇನು ಎಂಬ ಬಗ್ಗೆ ಜಿಜ್ಞಾಸೆಯಿದೆ. ಸಾತವಾಹನ ಎಂಬ ಪದ ಶಾಸನಗಳಲ್ಲಿ ಮಾತ್ರ ಕಂಡುಬಂದಿದೆ. ಸಾತ ಎಂದರೆ ಮೊನಚಾದ, ತೆಳುವಾದ ಎಂದು ಅರ್ಥ. ಇದಕ್ಕೆ ಚುರುಕಾದ ಎಂಬ ಅರ್ಥವೂ ಇದೆ. ವಾಹನ ಎಂಬ ಮಾತನ್ನು ಕುದುರೆಗೂ ಅನ್ವಯಿಸಬಹುದು. ಆಗ ಸಾತವಾಹನ ಎಂದರೆ ಚುರುಕಾದ (ಶೀಘ್ರಗಾಮಿಯಾದ) ಕುದುರೆ ಯನ್ನೇರುವವ ಎಂದಾಗುತ್ತದೆ. ಸಾತಕಣ್ಣಿ (ಸಾತಕರ್ಣಿ) ಎಂದೂ ಇವರು ತಮ್ಮನ್ನು ಕರೆದುಕೊಂಡಿದ್ದಾರೆ. ಸಾತಕಣ್ಣಿ ಎಂದರೆ ಚುರುಕಾದ ಕಿವಿ(ಕರ್ಣ) ಉಳ್ಳವನೆಂದಾಗುತ್ತದೆ. ಇವರನ್ನು ಕುರಿತು ನಮಗೆ ಪುರಾಣಗಳಲ್ಲಿ ವಿಶೇಷವಾದ ಮಾಹಿತಿ ದೊರಕುತ್ತದೆಯಾದರೂ ಅಲ್ಲೆಲ್ಲೂ ಇವರನ್ನು ಈ ಹೆಸರಿನಿಂದ ಕರೆದಿಲ್ಲ. ಪುರಾಣಗಳಲ್ಲಿ, ಅವುಗಳಲ್ಲೂ ಮತ್ಸ್ಯ, ವಾಯು, ವಿಷ್ಣು ಮತ್ತು ಭಾಗವತ ಪುರಾಣಗಳಲ್ಲಿ, ಈ ಅರಸರನ್ನು ಕುರಿತ ವಿವರಗಳಿವೆ. ಆದರೆ ಅವುಗಳಲ್ಲಿ ಇವರನ್ನು ಆಂಧ್ರರೆಂದೋ, ಆಂಧ್ರಭೃತ್ಯರೆಂದೋ ಕರೆಯಲಾಗಿದೆ. ಆಂಧ್ರಭೃತ್ಯ ಎಂಬ ಮಾತಿಗೆ ಆಂಧ್ರರಿಗೆ ಭೃತ್ಯರಾಗಿದ್ದವರೆಂದೂ ಭೃತ್ಯರಾಗಿದ್ದ ಆಂಧ್ರರೆಂದೂ ಎರಡು ಅರ್ಥಗಳನ್ನು ಮಾಡಲಾಗಿದೆ.

ಸಾತವಾಹನರ ಮೂಲ ಪ್ರದೇಶ ಯಾವುದು ಎಂಬುದನ್ನು ಕುರಿತು ಸಹ ಹಲವಾರು ವಿರೋಧಾಭಿಪ್ರಾಯಗಳಿವೆ. ಇವರ ಪ್ರಾಚೀನ ಶಾಸನಗಳೆಲ್ಲ ಪಶ್ಚಿಮ ತೀರದಲ್ಲಿ, ಮಹಾರಾಷ್ಟ್ರದ ನಾಸಿಕ್, ನಾನಾಘಾಟ್, ಕಾರ್ಲೆ ಮುಂತಾದ ಸ್ಥಳಗಳಲ್ಲಿ ಲಭಸಿವೆ. ಕ್ರಿ.ಪೂ. 1ನೆಯ ಶತಮಾನಕ್ಕೆ ಸೇರಿದ ಒರಿಸ್ಸದ ಖಾರವೇಲನ ಹಥಿಗುಂಫಾ ಶಾಸನದಲ್ಲಿ ತನ್ನ ರಾಜ್ಯದ ಪಶ್ಚಿಮದಲ್ಲಿ ರಾಜ್ಯವನ್ನಾಳುತ್ತಿದ್ದ ಸಾತಕರ್ಣಿಯನ್ನು ಲೆಕ್ಕಿಸದೆ ಆತ ಹಿರಿದಾದ ಸೈನ್ಯವನ್ನು ಪಶ್ಚಿಮಾಭಿಮುಖವಾಗಿ ಕಳುಹಿಸಿದನೆಂದು ಹೇಳಿದೆ. ಇದನ್ನವಲಂಬಿಸಿ ಸಾತಕರ್ಣಿಯ ರಾಜ್ಯ ಕಲಿಂಗದೇಶದ ಪಶ್ಚಿಮಕ್ಕಿದ್ದಿತೇ ಹೊರತು, ದಕ್ಷಿಣದ ಆಂಧ್ರವಾಗಿರಲಿಲ್ಲ ಎಂಬುದೊಂದು ವಾದ. ಆರಂಭದಲ್ಲಿ ಈ ಸಾತವಾಹನರು ಪಶ್ಚಿಮ ಭಾಗದಲ್ಲಿದ್ದು ಕ್ರಮೇಣ ಪೂರ್ವಭಾಗಕ್ಕೆ ಸರಿದರೆಂದೂ ಪುರಾಣಗಳು ತಮ್ಮ ಅಂತಿಮರೂಪವನ್ನು ತಾಳಿದ ಸು. 3ನೆಯ ಶತಮಾನದ ವೇಳೆಗೆ ಇವರು ಆಂಧ್ರದಲ್ಲಿ ನೆಲಸಿದ್ದರೆಂದೂ ಎಂತಲೇ ಇವರನ್ನು ಪುರಾಣಗಳಲ್ಲಿ ಆಂಧ್ರರೆಂದು ಹೆಸರಿಸಲಾಗಿದೆಯೆಂದೂ ಹಲವರು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಈ ವಾದಗಳನ್ನು ಅಲ್ಲಗಳೆದು ಕೃಷ್ಣಾ, ಗೋದಾವರೀ ನದಿಗಳ ನಡುವಣ ಆಂಧ್ರಪ್ರದೇಶದ ಭಾಗ ಇವರ ಮೂಲಸ್ಥಾನ ವೆಂದೂ ಕೃಷ್ಣಾನದೀತೀರದ ಶ್ರೀಕಾಕುಳಂ ಇವರ ರಾಜಧಾನಿಯಾಗಿತ್ತೆಂದೂ ಇವರು ಕ್ರಮೇಣ ಪಶ್ಚಿಮದಿಕ್ಕಿನ ಕಡೆ ತಮ್ಮ ಪ್ರಭಾವವನ್ನು ಬೆಳೆಸುತ್ತ ಹೋದರೆಂದೂ ಕೆಲವರು ವಾದಿಸಿದ್ದಾರೆ. ಈ ವಾದಗಳು ಸದ್ಯಕ್ಕೆ ಅಷ್ಟು ಸಮರ್ಪಕವಾಗಿಲ್ಲ.

ಸಾತವಾಹನರ ಆಳಿಕೆಯ ಕಾಲ, ಈ ವಂಶಕ್ಕೆ ಸೇರಿದ ಅರಸರ ಸಂಖ್ಯೆ ಇತ್ಯಾದಿಗಳನ್ನು ಕುರಿತೂ ಭಿನ್ನಾಭಿಪ್ರಾಯಗಳಿವೆ. ಪುರಾಣಗಳ ಲ್ಲಿಯೇ ಈ ಬಗೆಗೆ ವಿಭಿನ್ನ ಹೇಳಿಕೆಗಳಿವೆ. ಸಾಮಾನ್ಯವಾಗಿ ಒಟ್ಟು 30 ಅರಸರು ಆಳಿದರೆಂದು ಹೇಳಿದ್ದರೂ ಇವರ ಆಳಿಕೆಯ ಕಾಲ 300 ವರ್ಷಗಳಿಂದ 460ರವರೆಗೂ ಹೋಗಿದೆ. ಈ ಅರಸರನ್ನು ಕುರಿತು ಮಾಡಿದ ಉಲ್ಲೇಖಗಳನ್ನು ಗಮನಿಸಿದರೆ ಇನ್ನೂ ಕೆಲವು ವ್ಯತ್ಯಾಸಗಳು ಗೋಚರಿಸುತ್ತವೆ. ಮತ್ಸ್ಯಪುರಾಣದಲ್ಲಿ 25 ಅರಸರು ಆಳಿದರೆಂದು ಹೇಳಿದ್ದರೂ 30 ಅರಸರನ್ನು ಕುರಿತು ವಿವರಗಳಿವೆ. ವಾಯುಪುರಾಣದಿಂದ 17 ಅರಸರು ಸು. 273 ವರ್ಷಗಳು ಮಾತ್ರ ಆಳಿದರೆಂದು ತಿಳಿದಿದೆ. 30 ಅರಸರು (111 ಅಥವಾ 300 ವರ್ಷಗಳು) ಆಳಿದರೆಂದು ಅದರಲ್ಲೂ ಸಾಮಾನ್ಯ ಹೇಳಿಕೆ. ಭಾಗವತಪುರಾಣದಲ್ಲಿ 22 ಅರಸರನ್ನು ಕುರಿತು ಮಾತ್ರ ವಿವರಗಳು ಲಭಿಸಿವೆ. ಈ ಅರಸರಲ್ಲಿ ಅನೇಕ ಹೆಸರುಗಳು ಇತರ ಯಾವ ಆಧಾರಗಳಿಂದಲೂ ತಿಳಿದುಬಂದಿಲ್ಲ.

ಮಗಧರಾಜ್ಯದ ಚಂದ್ರಗುಪ್ತಮೌರ್ಯ ಆಳತೊಡಗಿದುದು ಕ್ರಿ.ಪೂ. 324ರಲ್ಲಿ. ಬಳಿಕ ಶುಂಗಮನೆತನದ ಅರಸರು ಅಧಿಕಾರಕ್ಕೆ ಬಂದರು. ಅವರು 112 ವರ್ಷಗಳು ಅನಂತರ ಬಂದ ಕಣ್ವರು 45 ವರ್ಷಗಳು ಆಳಿದರೆಂದೂ ಸಾಮಾನ್ಯವಾಗಿ ಒಪ್ಪಲಾಗಿದೆ. ಎಂದಮೇಲೆ, ಕಣ್ವಮನೆತನ ಕ್ರಿ.ಪೂ. 33ರಲ್ಲಿ ಕಣ್ಮರೆಯಾಯಿತು. ಇದಕ್ಕೆ ಕಾರಣ ಸೀಮುಕ. ಈತನ ಆಳಿಕೆ ಆ ವರ್ಷದಿಂದ ಆರಂಭವಾಯಿತು. ಇದೊಂದು ಅಭಿಪ್ರಾಯ. ಆದರೆ ಕಣ್ವವಂಶದ ಸುಶರ್ಮನನ್ನು ಸೋಲಿಸಿದಾತ ಸೀಮುಕನಲ್ಲವೆಂದೂ ಸೀಮುಕ ಎಂಬಾತ ಸಾತವಾಹನರ ಅರಸರಲ್ಲಿ ಅನಂತರ ಆಳಿಕೆಗೆ ಬಂದಾತನೆಂದೂ ಮತ್ಸ್ಯಪುರಾಣದಲ್ಲಿ ಹೇಳಿದಂತೆ ಸಾತವಾಹನರು 460 ವರ್ಷಗಳ ಕಾಲ ಆಳಿದ್ದೂ ಸೀಮುಕ 271ರಲ್ಲಿ ಆಳಿಕೆಗೆ ಬಂದನೆಂದೂ ಕೆಲವರು ಕಣ್ವಮನೆತನದ ಸುಶರ್ಮನನ್ನು ಸೋಲಿಸಿದಾತ ಸಾತವಾಹನರ ಹದಿನೈದನೆಯ ಅರಸನಾದ ಮೊದಲನೆಯ ಪುಳುಮಾವಿ ಎಂದೂ ಇನ್ನು ಕೆಲವರು ವಾದಿಸಿದ್ದಾರೆ.

ಈ ವಾದವಿವಾದಗಳೇನೇ ಇರಲಿ, ಸಾತವಾಹನರು ದಖನ್ನಿನಲ್ಲಿ ಮೌರ್ಯರ ಅನಂತರ ಅವರ ಉತ್ತರಾಧಿಕಾರಿಗಳಾಗಿ ಆಳಿದ ಅರಸುಗಳೆಂ ಬುದು ನಿಜ. ಸೀಮುಕ, ಆತನ ಸೋದರ ಕೃಷ್ಣ, ಕೃಷ್ಣನ ಮಗ ಸಾತಕರ್ಣಿ-ಇವರು ಆರಂಭದ ಅರಸರು. ಇವರು ಕ್ರಮವಾಗಿ 23, 18 ಮತ್ತು 18 ವರ್ಷಗಳ ಕಾಲ ಆಳಿದರು. ಸಾತಕರ್ಣಿ ಒಂದು ರಾಜಸೂಯ, ಎರಡು ಅಶ್ವಮೇಧ ಹಾಗೂ ಇತರ ವೈದಿಕಯಾಗಗಳನ್ನು ಮಾಡಿದನೆಂದು ಹೇಳಿದೆ. ರಠಿಕ ಮತ್ತು ಭೋಜಕ ವಂಶಗಳಿಗೆ ಸೇರಿದ ಈತನ ಸೇನಾನಿಗಳ ನೆರವಿನಿಂದ ರಾಜ್ಯವನ್ನು ವಿಸ್ತರಿಸಿದ. ಅನಂತರ ಈ ಸೇನಾನಾಯಕರು ಪ್ರಾಂತಾಧಿಕಾರಿಗಳಾದರು. ಸಾತಕರ್ಣಿಯ ಪತ್ನಿ ನಾಗನಿಕಾ ಮಹಾರಠಿಕ ವಂಶದವಳು. ಸಾತಕರ್ಣಿಯ ಅನಂತರದ ಒಂದು ಶತಮಾನ ಕಾಲ ಸಾತವಾಹನರು ತೆರೆಯ ಮರೆಯಲ್ಲಿ ಇರಬೇಕಾಯಿತು. ಆಗ ಭಾರತದಲ್ಲಿ ಗ್ರೀಕರು, ಶಕರು ದಂಡೆತ್ತಿ ಬಂದು ಭಾರತದ ರಾಜಕೀಯದಲ್ಲಿ ಅಭದ್ರತೆ ಉಂಟುಮಾಡಿದ್ದರು. ಅದರ ಬೇಗೆ ಸಾತವಾಹನರಿಗೂ ತಟ್ಟಿತ್ತು. ಆದರೆ ಸಾತವಾಹನರ ಗೌತಮೀಪುತ್ರ ಸಾತಕರ್ಣಿ ಈ ಅರಸರ ಶಕ್ತಿಯನ್ನು ಪುನಶ್ಚೇತನಗೊಳಿಸಿದ. ಶಕರ ಅರಸನಾದ ಕ್ಷಹರಾತಕುಲದ ನಹಪಾಣನನ್ನು ಸೋಲಿಸಿ ಅಪರಾಂತ, ಅನೂಪ, ಸೌರಾಷ್ಟ್ರ, ಅಕರ, ಅವಂತಿ ಮುಂತಾದ ಪ್ರದೇಶಗಳನ್ನು ವಶಪಡಿಸಿ ಕೊಂಡ. ಇದರಿಂದ ಇವನ ರಾಜ್ಯ ಕೊಂಕಣ, ಸೌರಾಷ್ಟ್ರ, ಮಾಳವ, ಬೀರಾರ್ ಮತ್ತು ಕೃಷ್ಣಾ ಕಣಿವೆ ಪ್ರದೇಶಗಳವರೆಗೂ ವಿಸ್ತರಿಸಿ, ಉತ್ತರ ಕರ್ನಾಟಕದ ಬಹುಭಾಗವೂ ಇವನ ವಶವಾಯಿತು. ಕ್ಷಹರಾತ ವಂಶವನ್ನು ನಿರ್ನಾಮಮಾಡಿದವನು (ಕ್ಷಹರಾತವಂಶನಿರವಶೇಷಕರ), ಮೂರು ಸಮುದ್ರಗಳ ನೀರನ್ನು ಕುಡಿದ ಕುದುರೆಯನ್ನು ವಾಹನವಾಗಿ ಹೊಂದಿದವನು (ತ್ರಿಸಮುದ್ರತೋಯಪೀತವಾಹನ) ಸಾತವಾಹನರ ಯಶಸ್ಸನ್ನು ಪ್ರತಿಷ್ಠಾಪಿಸಿ ದವನು (ಸಾತವಾಹನ ಯಶಃಪ್ರತಿಷ್ಠಾಪನಕರ). ಇತ್ಯಾದಿ ಬಿರುದುಗಳನ್ನು ಈತ ಧರಿಸಿದ್ದ. ಇದರಿಂದ ಸಾತವಾಹನರ ಯಶಸ್ಸು ಪುನಃ ಪ್ರತಿಷ್ಠಾಪಿತ ವಾಯಿತು. ಈ ಘಟನೆ ನಡೆದುದು ಸು. 124-25ರಲ್ಲಿ. ಗೌತಮೀಪುತ್ರನ ಆಳಿಕೆಯ ಕಾಲ ಸು. 106ರಿಂದ 130ರವರೆಗೆ. ನಾಸಿಕದಲ್ಲಿ ದೊರೆತ ಈತನ ಮಗ ವಾಶಿಷ್ಠೀಪುತ್ರ ಪುಳುಮಾವಿಯ ಶಾಸನದಲ್ಲಿ ಈತನನ್ನು ಮುಕ್ತಕಂಠದಿಂದ ಹೊಗಳಲಾಗಿದೆ. ಇಷ್ಟಾದರೂ ಈತನ ಅಂತ್ಯ ದಾರುಣ ರೀತಿಯಲ್ಲಾಯಿತು. ಮಹಾಕ್ಷತ್ರಪನೆನಿಸಿದ ಶಕರ ಕುಲದ ಕಾರ್ದಮಕ ವಂಶಕ್ಕೆ ಸೇರಿದ ಚಷ್ಟನನ ಮೊಮ್ಮಗ ರುದ್ರದಾಮ ಈತನನ್ನು ಕದನದಲ್ಲಿ ಸೋಲಿಸಿದ. ಅದರ ಪರಿಣಾಮವಾಗಿ ಈತನ ರಾಜ್ಯದ ಉತ್ತರದ ಹಲವು ಭಾಗಗಳು ಈತನ ಕೈಬಿಟ್ಟುವು. ಈತನ ಮಗ ವಾಶಿಷ್ಠೀಪುತ್ರ (130-59) ರಾಜ್ಯವನ್ನು ಪೂರ್ವದಿಕ್ಕಿನಲ್ಲಿ ವಿಸ್ತರಿಸಿ ಕೃಷ್ಣಾನದಿಯ ಮುಖಜ ಪ್ರದೇಶಗಳನ್ನು ಆಕ್ರಮಿಸಿದ. ಕರ್ನಾಟಕದ ಬಳ್ಳಾರಿ ಜಿಲ್ಲೆ ಸಹ ಆಗ ಈತನ ವಶವಾದಂತೆ ತೋರುತ್ತದೆ. ಇವನ ಅನಂತರ ಕ್ರಮವಾಗಿ ಶಿವಶ್ರೀ (159-66), ಶಿವಸ್ಕಂಧ (166-74) ಮತ್ತು ಯಜ್ಞಶ್ರೀ (174-203) ಸಾತಕರ್ಣಿಗಳು ಆಳಿದರು. ಈ ಮನೆತನದ ಕೊನೆಯ ಖ್ಯಾತ ಅರಸನಾದ ಯಜ್ಞಶ್ರಿ ಶಕರನ್ನು ಸೋಲಿಸಿ ಉತ್ತರ ಮತ್ತು ಪಶ್ಚಿಮಭಾರತದ ಪ್ರದೇಶಗಳಿಂದ ಅವರನ್ನು ಹೊರಗಟ್ಟಿದ. ಈತನ ಬಳಿಕ ಸಾತವಾಹನರ ಬಲ ಕ್ರಮೇಣ ಕುಗ್ಗಿತು.

ಸಾತವಾಹನ ಕುಲಕ್ಕೆ ಸೇರಿದ ಕೆಲವು ಶಾಖೆಗಳವರು ಪೈಠಣ ಮತ್ತು ಕುಂತಲ ದೇಶ ಹಾಗೂ ಬನವಾಸಿ-ಇವುಗಳಿಂದ ಆಳುತ್ತಿದ್ದರು. ಕರ್ನಾಟಕದ ಸಾತವಾಹನರಲ್ಲಿ ಕುಂತಲ ಸಾತಕರ್ಣಿ ಮತ್ತು ಹಾಲ ಪ್ರಮುಖರು. ಪುರಾಣಗಳಲ್ಲಿ ಕುಂತಲ ಸಾತಕರ್ಣಿಯ ಪ್ರಸ್ತಾಪವಿದೆ. ವಾತ್ಸ್ಯಾಯನನ ಕಾಮಸೂತ್ರದಲ್ಲೂ ಈ ಅರಸನ ಹೆಸರಿದೆ. ಕಾವ್ಯ ಮೀಮಾಂಸದ ಕರ್ತೃವಾದ ರಾಜಶೇಖರನೂ ಕುಂತಲದ ಅರಸನೊಬ್ಬ ಸಾತವಾಹನನಾಗಿದ್ದನೆಂದಿದ್ದಾನೆ. ಪ್ರಾಕೃತಭಾಷೆಯ ಗಾಥಾಸತ್ತಸೈ (ಗಾಥಾಸಪ್ತಶತಿ) ಎಂಬ ಕೃತಿಯ ಕರ್ತೃವಾದ ಹಾಲ ಒಬ್ಬ ಕವಿ. ಶಾಂತಿವರ್ಮನ ತಾಳಗುಂದ ಶಾಸನದಲ್ಲಿ ಕದಂಬರಿಗೂ ಮೊದಲು ಸಾತಕರ್ಣಿ ಮತ್ತು ಇತರ ಅರಸರು ಅಲ್ಲಿನ ಪ್ರಣವೇಶ್ವರ ದೇವರನ್ನು ಅರ್ಚಿಸುತ್ತಿದ್ದರೆಂದು ಹೇಳಿದೆ. ನಾಸಿಕದ ಶಾಸನದಲ್ಲಿ ಗೌತಮೀಪುತ್ರ ಸಾತಕರ್ಣಿಯು ವೈಜಯಂತೀಯಲ್ಲಿದ್ದಾಗ (ಈಗಿನ ಬನವಾಸಿ) ಆಜ್ಞೆ ಹೊರಡಿಸಿದನೆಂದು ಹೇಳಿದೆ. ಇತ್ತೀಚೆಗೆ (1974) ಬನವಾಸಿಯಲ್ಲಿಯೇ ವಾಶಿಷ್ಠೀಪುತ್ರನ ಮಗ ಶಿವಶ್ರೀ ಪುಳುಮಾವಿಯ ಮಹಾದೇವಿಯ (ಅರಸಿ ?) ಸ್ಮಾರಕಶಿಲೆಯ ಶಾಸನವೊಂದು ದೊರೆತಿದೆ. ಬಳ್ಳಾರಿಯ ಸಮೀಪದ ಮ್ಯಾಕದೋಣಿಯಲ್ಲಿ 3ನೆಯ ಶತಮಾನಕ್ಕೆ ಸೇರಿದ ಪುಳುಮಾವಿನ ಶಾಸನವೊಂದಿದೆ. ಇದರಲ್ಲಿ ಸಾತಾವಾಹನಿಹಾರ ಎಂಬ ಭೌಗೋಳಿಕ ಭಾಗವನ್ನು ಹೆಸರಿಸಿದೆ. ಹಿರೇಹಡಗಲಿಯಲ್ಲಿ ದೊರೆತ ಪಲ್ಲವ ಶಿವಸ್ಕಂಧವರ್ಮನ ತಾಮ್ರಶಾಸನದಲ್ಲಿ ಆ ಸುತ್ತಲಿನ ಪ್ರದೇಶ, ಸಾತಹನಿರಟ್ಟಕ್ಕೆ (ಸಾತವಾಹನ ರಾಷ್ಟ್ರ) ಸೇರಿದುದೆಂದು ಹೇಳಿದೆ. ಇವುಗಳಿಂದ ಸಾತವಾಹನ ಕುಲದ ಅನೇಕ ಅರಸರು ಕರ್ನಾಟಕದಲ್ಲೂ ಆಳಿದರೆಂಬುದು ಸ್ಪಷ್ಟವಾಗುತ್ತವೆ. ಚುಟು ಮುಂತಾದ ಸಾತವಾಹನರ ಸಾಮಂತರ ಹಲವಾರು ನಾಣ್ಯಗಳು ಕರ್ನಾಟಕದ, ಚಿತ್ರದುರ್ಗ ಹಾಗೂ ಕಾರವಾರ ಜಿಲ್ಲೆಗಳಲ್ಲಿ, ಮತ್ತಿತರ ಕೆಲವು ಕಡೆಗಳಲ್ಲಿ ದೊರೆತಿವೆ.

ಆಡಳಿತ ವ್ಯವಸ್ಥೆ : ಅರ್ಥಶಾಸ್ತ್ರದಲ್ಲಿ ನಿರೂಪಿಸಿದಂತೆ ರಾಜ್ಯವನ್ನು ಆಹಾರ ಅಥವಾ ರಾಷ್ಟ್ರಗಳಾಗಿ ವಿಂಗಡಿಸಲಾಗಿತ್ತು. ಒಂದೊಂದು ಆಹಾರದಲ್ಲಿಯೂ ನಿಗಮ ಎನಿಸಿದ ಒಂದಾದರೂ ಪಟ್ಟಣವಿರುತ್ತಿತ್ತು. ಗ್ರಾಮಗಳಂತೂ ರಾಜ್ಯದ ಜೀವನಾಡಿಗಳು. ಪ್ರತಿ ಆಹಾರಕ್ಕೂ ಅಮಾತ್ಯ ಮುಖ್ಯಾಧಿಕಾರಿಯಾಗಿ ನಿಯಮಿಸಲ್ಪಟ್ಟಿದ್ದ. ವಿಷ್ಣುಪಾಲಿತ, ಸ್ಯಮಕ ಮತ್ತು ಶಿವಸ್ಕಂಧ ದತ್ತರು, ಗೌತಮೀಪುತ್ರ ಸಾತಕರ್ಣಿ ಹಾಗೂ ಪುಳುಮಾವಿಯರ ಅಧೀನದಲ್ಲಿ ಗೋವರ್ಧನದ (ನಾಸಿಕ್) ಅಮಾತ್ಯರಾಗಿ ದ್ದರೆಂದು ತಿಳಿದಿದೆ. ರಾಜಾಮಾತ್ಯ ಎನಿಸಿದ ಅಧಿಕಾರಿಗಳು ಬಹುಶಃ ಇವರಿಗೂ ಮೇಲ್ದರ್ಜೆಯವರಾಗಿದ್ದು ಅರಸನ ಮಂತ್ರಿವರ್ಗಕ್ಕೆ ಸೇರಿದವ ರಾಗಿರಬಹುದು. ಭಾಂಡಾಗಾರಿಕಾ, ಹೇರಣಿಕ, ಮಹಾಸೇನಾಪತಿ, ಲೇಖಕ, ನಿಬಂಧಕ ಇವರು ಕೇಂದ್ರಾಡಳಿತದ ಇತರ ಪ್ರಮುಖ ಅಧಿಕಾರಿಗಳು. ಲೇಖಕ ರಾಜ್ಯದ ಮುಖ್ಯ ಕಾರ್ಯದರ್ಶಿ ಇದ್ದಂತೆ. ರಾಜನ ಬಾಯಿಮಾತಿನ ಆಜ್ಞೆಗಳಿಗೆ ದಾಖಲೆಗಳ ಸ್ವರೂಪ ಕೊಟ್ಟು ಅವನ್ನು ಇತರ ಅಧಿಕಾರಿಗಳಿಗೆ ತಿಳಿಯಪಡಿಸುವ, ಕಾರ್ಯಗತಗೊಳಿಸುವ ಹೊಣೆಗಾರಿಕೆ ಈತನದಾಗಿತ್ತು. ಲೇಖಕ ಸಿದ್ಧಗೊಳಿಸಿದ ದಾಖಲೆಗಳನ್ನು ವ್ಯವಸ್ಥಿತವಾಗಿಡುವ ಕಾರ್ಯ ನಿಬಂಧಕನದು. ಭಾಂಡಾಗಾರಿಕಾ ರಾಜ್ಯದ ಉಗ್ರಾಣಾಧಿಕಾರಿ. ಹೇರಣಿಕ ಬೊಕ್ಕಸದ ಅಧಿಕಾರಿ. ಲಭ್ಯವಿರುವ ಆಧಾರಗಳಿಂದ ರಾಜ್ಯದಲ್ಲಿ ಸುವ್ಯವಸ್ಥಿತವಾದ, ಕಾನೂನುಬದ್ಧವಾದ ಆಡಳಿತ ಪದ್ಧತಿ ಇದ್ದಿತೆಂದು ಸಹಜವಾಗಿ ಊಹಿಸಬಹುದು.

ರಾಜನ ನೇರವಾದ ಆಡಳಿತಕ್ಕೊಳಪಟ್ಟ ಭಾಗಗಳಲ್ಲದೆ ರಾಜನ ಸಾಮಂತರಾಗಿ ತಮ್ಮ ತಮ್ಮ ಪ್ರದೇಶಗಳ ಒಳಾಡಳಿತದಲ್ಲಿ ಸ್ವತಂತ್ರರಾಗಿದ್ದ ಮಹಾರಥಿ, ಮಹಾಭೋಜ ಎಂಬ ಮಾಂಡಳಿಕರು ಹಲವರು ಕಂಡುಬರು ತ್ತಾರೆ. ಮಹಾರಥಿಗಳು ಪಶ್ಚಿಮಘಟ್ಟಗಳ ಉತ್ತರ ಭಾಗದಲ್ಲಿಯೂ ಮಹಾಭೋಜರು ಉತ್ತರ ಕೊಂಕಣ ಪ್ರದೇಶದಲ್ಲಿಯೂ ಆಳುತ್ತಿದ್ದರೆಂದು ಕಂಡುಬಂದಿದೆ. ಇವರು ಸ್ವತಂತ್ರರಾಗಿ ಭೂಮಿದಾನ ಮುಂತಾದವುಗಳನ್ನು ಮಾಡಬಹುದಾಗಿದ್ದರಿಂದ ಕೆಲವು ವೇಳೆ ಇವರು ತಮ್ಮದೇ ಆದ ನಾಣ್ಯಗಳನ್ನು ಸಹ ಅಚ್ಚುಹಾಕಿಸಿ ತಮ್ಮ ಆಡಳಿತ ಪ್ರದೇಶದಲ್ಲಿ ಚಲಾವಣೆಗೆ ತಂದಿದ್ದರು. ಸಾತವಾಹನರ ಪ್ರಾಬಲ್ಯ ಪಶ್ಚಿಮ ದಖನ್‍ನಲ್ಲಿ ಇಳಿಮುಖವಾದಾಗ ಬನವಾಸಿಯ ಸುತ್ತಲಿನ ಪ್ರದೇಶದಲ್ಲಿ ಚುಟುಗಳು ಸ್ವತಂತ್ರರಾಗಿ ಆಳುತ್ತಿದ್ದರು.

ರಾಜ್ಯದಲ್ಲಿ ಹಲವು ಪಟ್ಟಣಗಳೂ (ನಿಗಮ) ಅನೇಕ ಗ್ರಾಮಗಳೂ ಇದ್ದುವೆಂದು ಹೇಳಿದೆ. ಗ್ರಾಮ ಆಡಳಿತದ ಅತಿ ಸಣ್ಣ ಘಟಕ. ಇದರ ಅಧಿಕಾರಿ ಗ್ರಾಮಣಿ. ಹಾಲನ ಗಾಥಾಸತ್ತಸೈನಲ್ಲಿ ಈ ಗ್ರಾಮಣಿಯು ಐದು ಅಥವಾ ಒಮ್ಮೊಮ್ಮೆ ಹತ್ತು ಗ್ರಾಮಗಳ ಅಧಿಕಾರಿಯಾಗಿದ್ದನೆಂದು ಹೇಳಿದೆ. ಪರದೇಶ ವಾಣಿಜ್ಯ ಬಹುಮಟ್ಟಿಗೆ ಅಭಿವೃದ್ಧಿ ಹೊಂದಿದ್ದ ಈ ಕಾಲದಲ್ಲಿ ಪೂರ್ವ ಹಾಗೂ ಪಶ್ಚಿಮ ತೀರಗಳಲ್ಲಿಯೂ ಒಳನಾಡಿನಲ್ಲಿಯೂ ಅನೇಕ ನಿಗಮಗಳಿದ್ದುವು. ಈಗಿನ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಗೋದಾವರಿಯ ಉತ್ತರತೀರದ ಪೈಠಣ ಹಾಗೂ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಧನಕಟ-ಧಾನ್ಯಕಟಕ-ಧರಣೀಕೋಟೆ-ಇವರ ರಾಜಧಾನಿಗಳಾಗಿ ಮೆರೆದುವು. ಭರುಕಚ್ಛ, ಸೋಪಾರ, ಕಲ್ಯಾಣ, ಕನ್ಹೇರಿ, ತಗರ, ಜನ್ನರ್, ಕಾರ್ಲೆ, ಗೋವರ್ಧನ ಮುಂತಾದವು ಇತರ ನಿಗಮಗಳು. ಇವುಗಳ ಆಡಳಿತ ಒಂದು ಸಭೆಗೆ (ನಿಗಮ ಸಭೆ) ಸೇರಿದ್ದಿತೆನ್ನಲು ಆಧಾರಗಳಿವೆ. ಈ ಸಭೆಯ ಮೂಲಕ ಪ್ರಜೆಗಳು ತಮ್ಮ ಅಭಿಪ್ರಾಯಗಳನ್ನು ಸೂಚಿಸಬಹುದಾಗಿದ್ದಿತು. ಗ್ರಾಮ ಗಳಲ್ಲಿ ಗಹಪತಿಯೂ (ಬಹುಶಃ ಬೇಸಾಯಗಾರರ ಒಂದು ಸಂಘವೂ) ವ್ಯಾಪಾರಕೇಂದ್ರಗಳೆನಿಸಿದ ಪಟ್ಟಣಗಳಲ್ಲಿ ಸೇನಿ (ಶ್ರೇಣಿ) ಎಂಬ ವಣಿಕ ಸಂಘವೂ ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಂಡಿದ್ದುವು. ಈ ವಣಿಕ ಸಂಘ ಅನೇಕ ಸಂದರ್ಭಗಳಲ್ಲಿ ಆಧುನಿಕ ಬ್ಯಾಂಕ್‍ಗಳಂತೆ ಲೇವಾದೇವಿ ವ್ಯವಹಾರಗಳಲ್ಲಿ ನಿರತವಾಗಿದ್ದಿತು. ಈ ಸಂಘಗಳು ಹಲವಾರು ದತ್ತಿ ಗಳನ್ನು ಸ್ವೀಕರಿಸಿ ಅದರಿಂದ ಬರುವ ಬಡ್ಡಿಹಣದಲ್ಲಿ ದಾನಕಾರ್ಯಗಳನ್ನು ಮಾಡಬಹುದಾಗಿದ್ದಿತಲ್ಲದೆ ಮೂಲಧನವನ್ನು ವರ್ತಕ ಹಾಗೂ ಇತರರಿಗೂ ಸಾಲ ಕೊಡುವ, ತನ್ಮೂಲಕ ವ್ಯಾಪಾರಕ್ಕೆ ಬಂಡವಾಳ ವನ್ನೊದಗಿಸುವ ಸಂಸ್ಥೆಗಳಂತೆ ಕಾರ್ಯನಿರತವಾಗಿದ್ದುವು. ಬೇಸಾಯಕ್ಕೂ ವಾಣಿಜ್ಯಕ್ಕೂ ಪೋಷಕವಾಗಿ ಇತರ ಅನೇಕ ವೃತ್ತಿಸಂಘಗಳೂ ಇದ್ದವು. ಶಾಸನಗಳಲ್ಲಿ ಕುಲರಿಕ (ಕುಂಬಾರ), ಒದಯಂತ್ರಿಕ, ತಿಲಪಿಸಕ (ಗಾಣಿಗ), ಧನ್ನಿಕ (ಧಾನ್ಯಗಳ ಮಾರಾಟಗಾರ ?), ಕೊಲಿಕ (ನೇಕಾರ ?), ವಸಕಾರ, ಕಸಕಾರ (ಕಾಸ್ಯಕಾರ) ಮುಂತಾದ ವೃತ್ತಿಗಾರರನ್ನು ಹೆಸರಿಸಿದೆ. ಈ ವೃತ್ತಿಸಂಘಗಳು ಶ್ರೇಣಿಧರ್ಮ ಗಳನ್ನು ಪಾಲಿಸುತ್ತಿದ್ದುವು.

ಆರ್ಥಿಕ, ಸಾಮಾಜಿಕ ಸ್ಥಿತಿ: ಈ ಕಾಲದಲ್ಲಿ ವ್ಯಾಪಾರ ಬಹಳ ಅಭಿವೃದ್ಧಿಹೊಂದಿತ್ತು. ಪೆರಿಪ್ಲಸ್ ಆಫ್ ದಿ ಎರಿಥ್ರಿಯನ್ ಸೀ, ಟಾಲೆಮಿಯ ಜೊಗ್ರಫಿಗಳಲ್ಲಿ ದಖನ್ ಪ್ರದೇಶದಿಂದ ರಫ್ತಾಗುತ್ತಿದ್ದ, ಇಲ್ಲಿನ ಜನ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ವಿವರಗಳನ್ನು ಕೊಟ್ಟಿದೆ. ಸುಗಂಧದ್ರವ್ಯಗಳು, ಹತ್ತಿ ಹಾಗೂ ರೇಷ್ಮೆಯ ಬಟ್ಟೆಗಳು, ಮೆಣಸು ಮುಂತಾದ ಸಂಬಾರ ಪದಾರ್ಥಗಳು, ದಂತ, ಅಗೇಟ್, ಕಾರ್ನಿಲಿಯನ್ ಮತ್ತು ಲೀಸಿಯಮ್ ಮುಂತಾದ ಪ್ರಶಸ್ತ ಶಿಲೆಗಳು ಮುಂತಾದವುಗಳನ್ನು ರಫ್ತುಮಾಡಿ ತಾಮ್ರ, ತವರ, ಸೀಸ, ಉತ್ತಮ ದರ್ಜೆಯ ಹಲವು ಬಗೆಯ ಮದ್ಯಪೇಯಗಳು, ಅಲಂಕಾರವಸ್ತುಗಳು, ಗಾಜು ಮುಂತಾದವುಗಳನ್ನು ಆಮದು ಮಾಡಿ ಕೊಳ್ಳುತ್ತಿದ್ದರು. ರೋಮ್ ದೇಶದೊಡನೆ ವಾಣಿಜ್ಯ ಸಂಬಂಧಗಳು ಉತ್ತಮವಾಗಿದ್ದುವು. ದಖನ್ ಹಾಗೂ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ರೋಮನ್ ನಾಣ್ಯಗಳು ಲಭಿಸಿವೆ. ಅಲ್ಲದೆ ಬರ್ಮಾ, ಸುಮಾತ್ರ, ಅರಕಾನ್, ಚಂಪಾದೇಶಗಳೊಂದಿಗೂ ಈ ಕಾಲದ ವ್ಯಾಪಾರಿಗಳು ಸಂಪರ್ಕ ಹೊಂದಿದ್ದರು. ರೋಮನರೂ ಅರಬರೂ ಪರದೇಶದ ವರ್ತಕರಲ್ಲಿ ಪ್ರಮುಖರು. ಕಾಹಾಪಾನಾ (ಕರ್ಪಾಪಣ) ಹಾಗೂ ಸುವರ್ಣವೆಂಬ ನಾಣ್ಯಗಳು ಚಲಾವಣೆಯಲ್ಲಿದ್ದರೂ ಅವುಗಳು ಮಿತವಾಗಿ ಉಪಯೋಗಿಸಲ್ಪಟ್ಟಂತೆ ತೋರುತ್ತದೆ. ತಾಮ್ರ, ಸೀಸ, ಪೊಟಿನ್, ಚಿನ್ನ, ಬೆಳ್ಳಿ-ಈ ಲೋಹಗಳ ನಾಣ್ಯಗಳು ಲಭಿಸಿವೆ. ಇವುಗಳಲ್ಲಿ ಯಾವ ಕಲಾತ್ಮಕ ವಿಶೇಷವೂ ಇಲ್ಲ. ಆದರೂ ಇತ್ತೀಚೆಗೆ ದೊರೆತ ಹಲವಾರು ನಾಣ್ಯಗಳಲ್ಲಿ ಸಾತವಾಹನ ಅರಸರ ಚಿತ್ರಗಳು ಕಾಣಿಸಿಕೊಂಡಿವೆ. ವಾಣಿಜ್ಯ ಅಭಿವೃದ್ಧಿ ಹೊಂದಿದ್ದರೂ ವ್ಯವಸಾಯ ಮುಖ್ಯ ಕಸಬಾಗಿಯೇ ಉಳಿದಿತ್ತು. ಅರಸರು, ಜನರು ಮಾಡುತ್ತಿದ್ದ ಭೂದಾನ, ಗೋದಾನಗಳಿಂದ ಭೂಮಿಗೂ ಪಶುಗಳಿಗೂ ಇವರು ಕೊಟ್ಟಿದ್ದ ಪ್ರಾಶಸ್ತ್ಯ ಸ್ಪಷ್ಟವಾಗುತ್ತದೆ. ಬೆಳೆಯ ಷಡ್ಭಾಗ ರಾಜಾದಾಯಕ್ಕಾಗಿ ಹೋಗುತ್ತಿತ್ತು. ಉಪ್ಪನ್ನು ತಯಾರಿಸುವುದು ಬಹುಶಃ ಸರ್ಕಾರದ ಏಕಸ್ವಾಮ್ಯವಾಗಿತ್ತು.

ಸಮಾಜದಲ್ಲಿ ಪಿತೃಪ್ರಧಾನ ಸಹಕುಟುಂಬ ಪದ್ಧತಿ ಜಾರಿಯಲ್ಲಿತ್ತು. ಸಾತವಾಹನ ಅರಸರ ಹೆಸರುಗಳ ಆರಂಭದಲ್ಲಿ ತಾಯಿಯ ಹೆಸರನ್ನು (ಗೌತಮೀಪುತ್ರ, ವಾಶಿಷ್ಠೀಪುತ್ರ ಇತ್ಯಾದಿ) ಬಳಸುತ್ತಿದ್ದರು. ಅದು ಮಾತೃಪ್ರಧಾನ ಪದ್ಧತಿಯ ಪರಿಣಾಮವಲ್ಲ. ಶಾಸನಗಳಲ್ಲಿ ಮೊದಲ ಸ್ಥಾನ ಪಿತೃವಿಗೆ, ಅನಂತರ ಮಾತೃ, ಗಂಡುಮಕ್ಕಳು, ಹೆಣ್ಣುಮಕ್ಕಳು ಈ ಕ್ರಮದಲ್ಲಿ ಸ್ಥಾನಗಳನ್ನು ಕೊಟ್ಟಿದೆ. ಹಾಗೆಂದಾಕ್ಷಣ ಸ್ತ್ರೀಯರಿಗೆ ಸಮಾಜದಲ್ಲಿ ಪ್ರಮುಖಸ್ಥಾವಿರಲಿಲ್ಲವೆಂದೇನೂ ಅಲ್ಲ. ಅನೇಕ ಸ್ತ್ರೀದಾನಿ ಗಳು ಶಾಸನಗಳಲ್ಲಿ ಕಂಡುಬಂದಿದ್ದಾರೆ. ಪಿತೃಪ್ರಧಾನಪದ್ಧತಿ ಆರ್ಯೀ ಕರಣದ ಪ್ರಭಾವವೆನ್ನಬಹುದು.

ಸಮಕಾಲೀನ ಶಾಸನಗಳನ್ನು, ಚಿತ್ರಗಳನ್ನು ಗಮನಿಸಿದಾಗ ಇವರ ಉಡುಗೆ ತೊಡುಗೆಗಳ ಬಗೆಗೆ ಹಲವಾರು ಅಂಶಗಳು ಗೋಚರವಾಗು ತ್ತವೆ. ಸ್ತ್ರೀಯರು ಸೊಂಟದ ಕೆಳಗೆ ನೆರಿಗೆಹಿಡಿದ ಒಂದು ವಸ್ತ್ರವನ್ನುಡು ತ್ತಿದ್ದರು. ಬಲಗಡೆಗೆ ಗಂಟನ್ನು ಹಾಕಿಕೊಂಡು ಸ್ವಲ್ಪ ಚುಂಗನ್ನು ಕೆಳಗೆ ಬಿಡುತ್ತಿದ್ದರು. ಎದೆಯನ್ನು ಮುಚ್ಚಿಕೊಳ್ಳುವ ಪದ್ಧತಿ ಇನ್ನೂ ಬಂದಿರಲಿಲ್ಲವೆಂದು ತೋರುತ್ತದೆ. ಕಿವಿಗಳಿಗೆ ಉಂಗುರ, ಮೊಳಕೈವರೆಗೂ ಕೈತುಂಬ ಬಳೆಗಳು, ಕಂಠಹಾರಗಳು ಮತ್ತು ಕಡಗಗಳನ್ನು ಧರಿಸುತ್ತಿದ್ದರು. ಕಾಲುಗಳಿಗೆ ಕಾಲಂದಿಗೆಗಳನ್ನು ಸ್ತ್ರೀಪುರುಷರೆಲ್ಲರೂ ಧರಿಸುತ್ತಿದ್ದರು. ಗಂಡಸರು ಸೊಂಟದ ಕೆಳಗೆ ವಸ್ತ್ರವನ್ನು ಉಟ್ಟು ತಲೆಗೆ ರುಮಾಲನ್ನು ಸುತ್ತುತ್ತಿದ್ದರು. ಪುರಷರೂ ಆಭರಣಗಳನ್ನು ತೊಡುತ್ತಿದ್ದರು. ಚಿನ್ನದ ಆಭರಣಗಳ ಮೇಲೆ ಇವರಿಗೆ ಹೆಚ್ಚಿನ ಒಲವು.

ಈ ಕಾಲದಲ್ಲಿ ವೈದಿಕಮತ ಪ್ರಧಾನ ಧರ್ಮವಾಗಿದ್ದಿತು. ಅರಸರು ವೈದಿಕಯಜ್ಞಯಾಗಾದಿಗಳನ್ನು ಮಾಡುತ್ತಿದ್ದರು. ವರ್ಣಾಶ್ರಮ ಧರ್ಮಗಳ ಪಾಲನೆ ಅವರ ಕರ್ತವ್ಯವಾಗಿತ್ತು. ಗೌತಮೀಪುತ್ರ ಸಾತಕರ್ಣಿಯು ವರ್ಣಸಂಕರವನ್ನು ತಡೆಯಲು ಯತ್ನಿಸಿದನೆಂಬುದು ಶಾಸನಗಳಿಂದ ತಿಳಿದ ವಿಷಯ. ಈವೇಳೆಗೆ ಪುರಾಣಗಳು ತಮ್ಮ ಅಂತಿಮ ರೂಪವನ್ನು ತಾಳಿದ್ದು ಪೌರಾಣಿಕ ದೇವತೆಗಳೆನಿಸಿದ ಇಂದ್ರ, ಸಂಕರ್ಷಣ, ವಾಸುದೇವ, ಚಂದ್ರ, ಸೂರ್ಯ, ಯಮ, ವರುಣ, ಕುಬೇರ, ಪಶುಪತಿ, ಗೌರಿ, ಲಕ್ಷ್ಮಿನಾರಾಯಣ ಮೊದಲಾದವರನ್ನು ಪೂಜಿಸುವ ಪರಿಪಾಠ ಬೆಳೆದು ಬಂದಿತ್ತು, ಪರದೇಶೀಯ ರೆನಿಸಿದ ಶಕ, ಪಹೂವ, ಕುಷಾಣ ಮೊದಲಾದ ವರು ಸಹ ವೈದಿಕಮತದ ಪ್ರಭಾವಕ್ಕೊಳಗಾಗಿ ವೈದಿಕದೇವತೆಗಳೆನಿಸಿದ ಶಿವ ಮತ್ತು ವಿಷ್ಣುವನ್ನು ಪೂಜಿಸುತ್ತಿದ್ದರು. ಗೋದಾನ ಭೂದಾನಗಳು, ಕೆರೆ ಕಟ್ಟಿಸುವುದು, ಬಾವಿಗಳನ್ನು ತೋಡುವುದು, ಪ್ರಯಾಣಿಕರ ಸೌಕರ್ಯಕ್ಕಾಗಿ ಛತ್ರಗಳನ್ನು ಕಟ್ಟಿಸಿ ಊಟ ವಸತಿ ಸೌಕರ್ಯಗಳನ್ನೇರ್ಪಡಿ ಸುವುದು, ತೀರ್ಥಯಾತ್ರೆ ಮಾಡುವುದು ಪವಿತ್ರ ಕರ್ತವ್ಯಗಳೆನಿಸಿ ಕೊಂಡಿದ್ದವು.

ಈ ಕಾಲದಲ್ಲಿ ಜೈನ ಹಾಗೂ ಬೌದ್ಧಧರ್ಮಗಳು ಸಹ ಪ್ರಮುಖ ಧರ್ಮಗಳೆನಿಸಿದ್ದುವು; ಬೌದ್ಧಧರ್ಮ ದಖನ್ನಿನ ಪೂರ್ವತೀರ ಪ್ರದೇಶ ಗಳಲ್ಲಿ ಬಹುಮಟ್ಟಿಗೆ ವ್ಯಾಪಿಸಿತ್ತು. ಜಗ್ಗಯ್ಯಪೇಟೆ, ಅಮರಾವತಿ ಮತ್ತು ಭಟ್ಟಿಪ್ರೋಲುಗಳಲ್ಲಿ ದೊರೆತ ಸ್ತೂಪಗಳಲ್ಲಿ ಕ್ರಿ.ಪೂ. 2ನೆಯ ಶತಮಾನಕ್ಕೆ ಸೇರಿದ ಬ್ರಾಹ್ಮೀಲಿಪಿಯ ಶಾಸನಗಳು ಲಭಿಸಿವೆ. ಅಶೋಕನ ಶಾಸನಗಳು ಉತ್ತರ ಕರ್ನಾಟಕದ ಹಲವಾರು ಕಡೆ ಲಭಿಸಿರುವುದನ್ನು ಗಮನಿಸಿ ಆಪ್ರದೇಶಗಳು ಬೌದ್ಧಧರ್ಮ ಪ್ರಭಾವಕ್ಕೊಳಪಟ್ಟಿದ್ದುವೆಂದು ಹೇಳ ಬಹುದು. ಬನವಾಸಿ ಒಂದು ಪ್ರಮುಖ ಬೌದ್ಧಕೇಂದ್ರವಾಗಿದ್ದಿತು. ಅಶೋಕನ ಧರ್ಮಪ್ರಸಾರಕ್ಕಾಗಿ ಕಳುಹಿಸಿದ ಭಿಕ್ಷುಗಳಲ್ಲಿ ಕೆಲವರು ಬನವಾಸಿಗೆ ಬಂದಿದ್ದರೆಂದು ತಿಳಿದಿದೆ. ನಾಗಾರ್ಜುನಕೊಂಡದಲ್ಲಿ ದೊರೆತ ಬೌದ್ಧಶಾಸನಗಳಲ್ಲಿಯೂ ಬನವಾಸಿಯಲ್ಲಿ ನೆಲಸಿದ್ದ ಬೌದ್ಧಭಿಕ್ಷುಗಳ ಪ್ರಸ್ತಾಪವಿದೆ. ಇತ್ತೀಚೆಗೆ ಬನವಾಸಿಯಲ್ಲಿ ನಡೆಸಿದ ಉತ್ಖನನದಲ್ಲಿ ಗಜಪೃಷ್ಠಾಕಾರದ ಕಟ್ಟಡದ ಅವಶೇಷಗಳು ಲಭಿಸಿವೆಯಾದರೂ ಅದು ಬೌದ್ಧ ಧರ್ಮಕ್ಕೆ ಸಂಬಂಧಿಸಿದುದೆಂದು ಖಚಿತವಾಗಿ ಹೇಳಲಾಗದು. ಲಭ್ಯ ಆಧಾರಗಳಿಂದ ಗುಲ್ಬರ್ಗ ಜಿಲ್ಲೆಯ ಸನ್ನತಿ (ನೋಡಿ- ಸನ್ನತಿ) ಒಂದು ಬೌದ್ಧ ಕೇಂದ್ರವಾಗಿದ್ದಿತೆಂದು ತಿಳಿದಿದೆ. ಅಲ್ಲಿ ಕ್ರಿ.ಪೂ. 1ನೆಯ ಶತಮಾನದ ಬ್ರಾಹ್ಮೀ ಲಿಪಿಯ ಶಾಸನಗಳು ಲಭಿಸಿವೆ. ಇವುಗಳಿಂದ ಹೆಚ್ಚಿನ ವಿವರಗಳು ತಿಳಿಯದಿದ್ದರೂ ಇದು ಬೌದ್ಧಕೇಂದ್ರಗಳಲ್ಲೊಂದಾಗಿತ್ತೆಂದು ಇಲ್ಲಿ ದೊರೆತ ಅವಶೇಷಗಳಿಂದ ಊಹಿಸಬಹುದಾಗಿದೆ. (ಜಿ.ಬಿ.ಆರ್.)

ವಾಸ್ತುಶಿಲ್ಪ: ದಕ್ಷಿಣ ಭಾರತದ ಬಹುಭಾಗವನ್ನು ಆಕ್ರಮಿಸಿದ್ದ ಸಾತವಾಹನರ ಆಳಿಕೆ ವಾಸ್ತುಶಿಲ್ಪಕ್ಕೆ ಬಹುಮುಖ್ಯವಾದ ತಿರುವುಕೊಟ್ಟ ಕಾಲ. ಇವರು ವೈದಿಕಮತಾವಲಂಬಿಗಳಾಗಿದ್ದರೂ ಬೌದ್ಧಧರ್ಮಕ್ಕೆ ಕೊಟ್ಟ ಪ್ರೋತ್ಸಾಹ ಅಪಾರ. ಹೊರದೇಶಗಳ ವ್ಯಾಪಾರಾಭಿವೃದ್ಧಿಯಿಂದಾಗಿ ಬೆಳೆದ ಶ್ರೀಮಂತವರ್ಗ ಹೇರಳವಾಗಿ ದಾನದತ್ತಿಗಳನ್ನು ಬಿಟ್ಟು ಅನೇಕ ಗುಹಾವಾಸ್ತುಗಳ ನಿರ್ಮಾಣಕ್ಕೆ ಕಾರಣವಾಯಿತು. ಜೊತೆಗೆ ಮಹಾಯಾನದ ಪ್ರಾಬಲ್ಯ ಮೂರ್ತಿಶಿಲ್ಪಕ್ಕೆ ಪ್ರಾಧಾನ್ಯತೆಯುಂಟಾಗಲು ಕಾರಣವಾಯಿತು. ಆದರೂ ಕರ್ನಾಟಕದಲ್ಲಿ ಈ ಕಾಲದ ವಾಸ್ತುಶಿಲ್ಪಗಳು ಉಳಿದುಬಂದಿರು ವುದು ಅತ್ಯಲ್ಪ. ಬಹುಶಃ ಬೌದ್ಧಧರ್ಮಕ್ಕೆ ಕರ್ನಾಟಕದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯದಿದ್ದುದು, ಸಮುದ್ರತೀರದಿಂದ ದೇಶದೊಳಕ್ಕೆ, ಸಾತವಾಹನರ ರಾಜಧಾನಿಗೆ, ಹಾದುಹೋಗುತ್ತಿದ್ದ ವ್ಯಾಪಾರಮಾರ್ಗ ಕರ್ನಾಟಕದ ಮೂಲಕ ಹೋಗದಿದ್ದುದು ಇದಕ್ಕೆ ಮುಖ್ಯ ಕಾರಣವಿರ ಬಹುದು. ಆಂಧ್ರದಲ್ಲಿ ಅದ್ಭುತವಾಗಿ ಬೆಳೆದ ಬೌದ್ಧ ಸ್ತೂಪ, ವಿಹಾರಗಳು ಕರ್ನಾಟಕದಲ್ಲಿ ಆ ಮಟ್ಟದಲ್ಲಿ ವ್ಯಾಪಿಸಲೇ ಇಲ್ಲ. ಈ ಗುಂಪಿಗೆ ಸೇರಿದ ಒಂದೇ ಒಂದು ಸ್ಥಳವೆಂದರೆ ಸನ್ನತಿ. ಇಲ್ಲಿ ಸ್ತೂಪಗಳಿದ್ದ ಕುರುಹು ಮಾತ್ರ ಉಳಿದಿದೆ.

ಕರ್ನಾಟಕದ ಬಹುಭಾಗ ಸಾತವಾಹನರ ನೇರ ಆಳಿಕೆಗೆ ಒಳಪಡದೆ ಇವರ ಸಾಮಂತರಾಗಿದ್ದ ಚುಟುಕುಲದ ಅರಸರು ಇಲ್ಲಿ ಆಳುತ್ತಿದ್ದುದರಿಂದ ಅವರಿಗೆ ಸಂಬಂಧಿಸಿದಂತೆ ಕೆಲವು ಸ್ಥಳಗಳಲ್ಲಿ ವಾಸ್ತುಶಿಲ್ಪಗಳ ಅವಶೇಷ ಗಳನ್ನು ಕಾಣಬಹುದು. ಚಿತ್ರುದುರ್ಗದ ಬಳಿಯ ಚಂದ್ರವಳ್ಳಿ ಯಲ್ಲಿ ಅವರ ಕಾಲದ ವಾಸದ ಮನೆಗಳಿದ್ದ ಕುರುಹುಗಳು ಉತ್ಖನನಗಳಲ್ಲಿ ಕಂಡುಬಂದಿದ್ದರೂ ಅವುಗಳ ವಿನ್ಯಾಸ, ಇತರ ವಿವರಣೆಗಳು ಉಳಿದು ಬಂದಿಲ್ಲ. ಇಟ್ಟಿಗೆಯಿಂದ ಕಟ್ಟಿದ್ದ ಹಲವು ಕಟ್ಟಡಗಳಿದ್ದುವೆಂದು ಹೇಳಬಹುದು. ಇವಲ್ಲದೆ ಬೌದ್ಧ ಅಥವಾ ವೈದಿಕಧರ್ಮಕ್ಕೆ ಸೇರಿದ ಯಾವ ಕಟ್ಟಡವೂ ಅಲ್ಲಿ ಕಂಡುಬಂದಿಲ್ಲ; ಮೃಣ್ಮೂರ್ತಿಗಳೂ ದೊರೆತಿಲ್ಲ. ನಿಗದಿಯಾದ ಪ್ರಮಾಣದ ಇಟ್ಟಿಗೆಗಳಿಗಿಂತ ಹೆಚ್ಚು ದೊಡ್ಡದಾದ ಇಟ್ಟಿಗೆಗಳೂ ಹೇರಳವಾಗಿ ದೊರೆತಿರುವುದರಿಂದ ಅವು ಅಲ್ಲಿದ್ದ ಕೋಟೆಯನ್ನು ಸೂಚಿಸುತ್ತವೆ ಎಂದು ಹೇಳಲಾಗಿದೆ.

ಲೌಕಿಕ ವಾಸ್ತುರೀತಿಗೆ ಸಂಬಂಧಿಸಿದಂತೆ ಸಾತವಾಹನರ ಕಾಲದ ಎರಡು ಕೋಟೆಗಳು ಒಂದು ಸನ್ನತಿಯಲ್ಲಿ, ಇನ್ನೊಂದು ಬನವಾಸಿಯಲ್ಲಿ ಉಳಿದುಬಂದಿವೆ. ಇವು ಇಟ್ಟಿಗೆಯಿಂದ ಕಟ್ಟಿದ ದಪ್ಪ ನೇರ ಗೋಡೆಗಳು. ವಡಗಾಂವ-ಮಾಧವಪುರದಲ್ಲಿ ಉತ್ಖನನಗಳಲ್ಲಿ ಕಂಡುಬಂದ ಚೌಕನಾದ ಅಥವಾ ದೀರ್ಘಚತುರಸ್ಸಾಕಾರದ ವಾಸದ ಮನೆಗಳ ಅವಶೇಷಗಳನ್ನೂ ಇಲ್ಲಿ ಸೂಚಿಸಬಹುದು.

ಹಲವು ಅವಶೇಷಗಳುಳ್ಳ ಮತ್ತೊಂದು ಊರೆಂದರೆ ಬನವಾಸಿ. ಇಲ್ಲಿ ಇವರ ಕಾಲದಲ್ಲಿ ಬೌದ್ಧಧರ್ಮ ಪ್ರಬಲವಾಗಿದ್ದು ಹಲವು ಚೈತ್ಯಗಳು ಸ್ತೂಪಗಳು ಇದ್ದುದರ ಕುರುಹುಗಳನ್ನು ಕಾಣಬಹುದು. ಇಲ್ಲಿ ನಡೆದ ಉತ್ಖನನಗಳಿಂದ ಗಜಪೃಷ್ಠಾಕೃತಿಯ ಚೈತ್ಯಾಲಯವೊಂದಿದ್ದುದು ಪತ್ತೆಯಾಗಿದೆ. ಇದಕ್ಕೆ ತುಂಬ ದಪ್ಪವಾದ ಇಟ್ಟಿಗೆಗೋಡೆಯಿದ್ದು ಇಂಥ ಮೂರು ಗೋಡೆಗಳು ಒಂದನ್ನೊಂದು ಬಳಸಿ ಒಳಗೆ ಎರಡು ಪ್ರದಕ್ಷಿಣಾಪಥವನ್ನುಂಟುಮಾಡಿವೆ. ತಲವಿನ್ಯಾಸ ಮತ್ತು ಕೆಲವು ವರಿಸೆ ಇಟ್ಟಿಗೆಗಳನ್ನುಳ್ಳ ಗೋಡೆಗಳು ಮಾತ್ರ ಉಳಿದುಬಂದಿದ್ದು ಆ ಚೈತ್ಯಾಲಯದ ಪೂರ್ಣಸ್ವರೂಪ ತಿಳಿದುಬರುವಂತಿಲ್ಲ. ಚೈತ್ಯವಲ್ಲದೆ ಸ್ತೂಪಗಳೂ ಇಲ್ಲಿ ಇದ್ದಿರಬೇಕು. ಆದರೆ ಅವು ಅಲ್ಲಿರುವ ದಿಬ್ಬಗಳಲ್ಲಿ ಅಡಗಿರುವ ಸಾಧ್ಯತೆ ಇದೆ. ಸನ್ನತಿಯಲ್ಲಾದರೆ ಒಂದು ಗುಂಡಾದ ವಿನ್ಯಾಸದ ಸ್ತೂಪವಿದ್ದ ಕುರುಹುಮಾತ್ರ ಉಳಿದಿದ್ದು ಆ ಸ್ತೂಪ ಪೂರ್ತಿಯಾಗಿ ನಾಶವಾಗಿದೆ. ಅದರ ತಲವಿನ್ಯಾಸವನ್ನು ಮಾತ್ರ ಈಗ ಗುರುತಿಸಬಹುದು. ಇದು ಬಹುಮಟ್ಟಿಗೆ ಕಲ್ಲುತುಂಡುಗಳಿಂದ ನಿರ್ಮಿತವಾಗಿದ್ದು, ಮೇಲೆ ಶಿಲ್ಪಿತ ಶಿಲಾಫಲಕಗಳಿಂದ ಮುಚ್ಚಲ್ಪಟ್ಟಿದ್ದಿ ತೆಂದು ತೋರುತ್ತದೆ. ಈ ಸ್ತೂಪದ ಪೂರ್ಣಮಾದರಿ ಹೇಗಿತ್ತೆಂಬುದೂ ಈಗ ತಿಳಿದು ಬರುವಂತಿಲ್ಲ. ಬನವಾಸಿಯ ಶಾಸನ ಫಲಕವೊಂದರ ಮೇಲಿನ ಮತ್ತು ಸನ್ನತಿಯ ಆಯಕಸ್ತಂಭವೊಂದರ ಮೇಲಿನ ಚೈತ್ಯಾಕಾರದ ಕಮಾನಿನ ಅಲಂಕರಣಗ ಳಿಂದ ಆಗ ನಿರ್ಮಿತವಾಗಿದ್ದಿರ ಬಹುದಾದ ಚೈತ್ಯಾಲಯ ಅಥವಾ ವಿಹಾರಗಳ ಮಾದರಿಯನ್ನು ಗುರುತಿಸಬಹುದೇನೋ. ಬನವಾಸಿಯಲ್ಲಿ ವಿಹಾರವೊಂದನ್ನು ಕಟ್ಟಿಸಿದುದನ್ನು ಅಲ್ಲಿನ ಶಾಸನವೊಂದು ತಿಳಿಸುತ್ತದೆ. ಹಾಗೆಯೇ ಯುವಾನ್‍ಚಾಂಗ್ (ನೋಡಿ- ಯುವಾನ್-ಚಾಂಗ್) ಇಲ್ಲಿನ ಸ್ತೂಪ ಹಾಗೂ ವಿಹಾರಗಳನ್ನು ವರ್ಣಿಸಿದ್ದಾನೆ.

ಬೌದ್ಧವಾಸ್ತುವಲ್ಲದೆ ವೈದಿಕ ವಾಸ್ತುಗಳೂ ಸಾತವಾಹನರ ಕಾಲದಲ್ಲಿ ಇದ್ದುದಕ್ಕೆ ಸೂಚನೆಗಳಿವೆ. ಮಳವಳ್ಳಿಯ ಸ್ತಂಭಶಾಸನದಲ್ಲಿ ಮಳ್ಳಪಳ್ಳಿದೇವರ ಹೆಸರು ಬಂದರೆ, ತಾಳಗುಂದದ ಪ್ರಣವೇಶ್ವರ ದೇವರು ಸಾತಕರ್ಣಿಗಳಿಂದ ಪೂಜೆಗೊಂಡಂತೆಯೂ ತಿಳಿದುಬರುತ್ತದೆ. ಮೊದಲ ದೇವಾಲಯ ಈಗ ಉಳಿದು ಬಂದಿಲ್ಲ; ಎರಡನೆಯದರ ಮೂಲಸ್ವರೂಪ ಈಗ ತಿಳಿಯದು. ಐಹೊಳೆಯಲ್ಲಿ ಬಾದಾಮಿ ಚಳುಕ್ಯರಿಗಿಂತ ಮುಂಚೆ ಸಾತವಾಹನರ ಕಾಲದಲ್ಲಿಯೇ ಇಟ್ಟಿಗೆಯಿಂದ ನಿರ್ಮಿಸಿದ ವಾಸ್ತುರೂಪ ಗಳಿದ್ದುದು ಈಚೆಗೆ ಬೆಳಕಿಗೆ ಬಂದಿದೆ. ದೊಡ್ಡ ಮಂಟಪಗಳ ಮಾದರಿಯಲ್ಲಿ ಕಂಬಸಾಲಗಳನ್ನು ಹೊಂದಿದ್ದ ಚೌಕಾಕಾರದ ಕಟ್ಟಡಗಳು ಅವಾಗಿರಬೇಕೆಂದು ಈಗ ಉಳಿದುಬಂದಿರುವ ತಲವಿನ್ಯಾಸದಿಂದ ಊಹಿಸಲಾಗಿದ್ದು ಅದು ಮುಂದೆ ಕೊಂತಿಗುಡಿ, ಲಾಡಖಾನ್ ಗುಡಿ ಮೊದಲಾದುವಕ್ಕೆ ಮಾದರಿಯಾಯಿತೆಂದು ಭಾವಿಸಲಾಗಿದೆ.

ಹೀಗೆ ಸಾತವಾಹನರ ಕಾಲದ ವಾಸ್ತುರೂಪಗಳು ಕರ್ನಾಟಕದಲ್ಲಿ ಪೂರ್ಣರೂಪದಲ್ಲಿ ಉಳಿದು ಬಂದಿಲ್ಲದಿದ್ದರೂ ಇದ್ದುದರಲ್ಲಿ ಶಿಲ್ಪ ಸ್ವರೂಪವೇ ಸ್ವಲ್ಪಮಟ್ಟಿಗೆ ಬೆಲೆ ಕಟ್ಟಬಹುದಾದ ಸ್ಥಿತಿಯಲ್ಲಿದೆ. ಬನವಾಸಿ ಯಲ್ಲಿ ದೊರೆತ ಕೆಲವು ಕಿರುಪ್ರಮಾಣದ ಮೃಣ್ಮೂರ್ತಿಗಳು, ಸನ್ನತಿಯಲ್ಲಿ ದೊರೆತ ಇದೇ ಕಾಲದ ಮೃಣ್ಮೂರ್ತಿಗಳು ಈ ಕಲೆ ಸಾಕಷ್ಟು ಪ್ರಬುದ್ಧ ಸ್ಥಿತಿಯಲ್ಲಿದ್ದುದನ್ನು ಸೂಚಿಸುತ್ತದೆ. ಯಕ್ಷಯಕ್ಷಿಯರಾಗಲಿ, ಪ್ರಾಣಿಗಳಾಗಲಿ ಸ್ವಾಭಾವಿಕವಾಗಿದ್ದು ಅವುಗಳ ಗುಣ ಸ್ವಭಾವಗಳನ್ನು ಚೆನ್ನಾಗಿ ವ್ಯಕ್ತಪಡಿಸುವಂತಿವೆ. ಅಚ್ಚಿನಲ್ಲಿ ಒತ್ತಿ ಮಾಡಿದ ಈ ಮೂರ್ತಿಗಳು ಒಳಗೆ ಟೊಳ್ಳಾಗಿರುವುದೇ ಹೆಚ್ಚು. ಬನವಾಸಿಯಲ್ಲಿ ದೊರೆತ ನಾಗರ ಕಲ್ಲಿನ ಶಿಲ್ಪ ಸಾತವಾಹನರ ಕಾಲದ ಶಿಲಾಶಿಲ್ಪ ಮಾದರಿಗೆ ಉತ್ತಮ ಉದಾಹರಣೆ. ಸನ್ನತಿಯಲ್ಲಿ ದೊರೆತ ನಾಗರ ಕಲ್ಲುಗಳೂ ಇದರಂತೆಯೇ ಇದ್ದು, ಅರೆಯುಬ್ಬಿ ಬಿಡಿಸಿರುವ ನಾಗ ಸುಳಿಸುಳಿಯಾಗಿ ಸುತ್ತಿಕೊಂಡು ತನ್ನ ಐದು ಹೆಡೆಗಳನ್ನು ತೆರೆದಿದೆ. ಈ ಶಿಲ್ಪದಲ್ಲಿ ಗಂಭೀರತೆಯಿದೆ, ಭವ್ಯತೆ ಇದೆ. ಬನವಾಸಿಯ ನಾಗರಕಲ್ಲನ್ನು ಕಂಡರಿಸಿದ ನಟಕ ಅಥವಾ ನರ್ತಕ ಎಂಬ ಶಿಲ್ಪಿಯ ಹೆಸರೂ ಉಳಿದುಬಂದಿದ್ದು ಈಗ ತಿಳಿದಿರುವ ಮಟ್ಟಿಗೆ ಕರ್ನಾಟಕದ ಆದ್ಯರೂವಾರಿ ಇವನೆಂದು ಪರಿಗಣಿಸಬಹುದು. ಸನ್ನತಿಯಲ್ಲಿ ದೊರೆತ ಕೆಲವು ಶಿಲ್ಪಗಳಲ್ಲಿನ ಪ್ರಾಣಿಗಳನ್ನು ಅತ್ಯಂತ ಸ್ವಾಭಾವಿಕವಾಗಿ ಬಿಡಿಸುವ ಪ್ರಯತ್ನವಿದೆ. ಗಾಡಿಗೆ ಕಟ್ಟಿದ ಎತ್ತುಗಳಾಗಲಿ, ಸಂತೋಷದಿಂದ ಚಿಮ್ಮುತ್ತಿರುವ ಕೋಣವಾಗಲಿ, ಪಿತಾಲ್‍ಖೋರ ಮೊದಲಾದೆಡೆ ಇರುವಂತೆ ರೆಕ್ಕೆಹೊಂದಿದ ಕುದುರೆಯಾಗಲಿ ಕಂಡರಿಸುವಲ್ಲಿ ಶಿಲ್ಪನೈಪುಣ್ಯ ವಿದೆ. ಇವೆಲ್ಲಕ್ಕಿಂತ ಮಾನವ ಸಂವೇದನೆ, ಅಂತರ್ಭಾವಗಳನ್ನು ಹೊಮ್ಮಿಸುವ ಸನ್ನತಿಯಲ್ಲಿನ ಹಲವಾರು ಶಿಲ್ಪಗಳು ಈ ಕಾಲದ ಶ್ರೇಷ್ಠಮಟ್ಟದ ಶಿಲ್ಪ ಪ್ರತೀಕಗಳು. ಇವುಗಳಲ್ಲಿ ಅತ್ಯುತ್ತಮ ಮಾದರಿ ಯೆಂದರೆ ಆಯಕಸ್ತಂಭವೊಂದರ ಮೇಲೆ ಬಿಡಿಸಿರುವ ದಂಪತಿ ಶಿಲ್ಪ. ಬೌದ್ಧ ಜಾತಕಗಳ ಮೂಲಕ ಕಥನಶಿಲ್ಪ ಕರ್ನಾಟಕದಲ್ಲಿ ಆರಂಭವಾದುದೂ ಈ ಕಾಲದಲ್ಲಿಯೇ. ಕಾಲದ ಪೂರ್ಣರೂಪದ ಮೂರ್ತಿಗಳು ದೊರೆತಂತಿಲ್ಲ. ಐಹೊಳೆಯಲ್ಲಿ ಬುದ್ಧನ ಭಗ್ನಮೂರ್ತಿಯೊಂದು ದೊರೆತಿದ್ದು ಅದು ಸಾತವಾಹನರ ಕಾಲದ್ದೆನ್ನಲಾಗಿದೆ. ಈಚೆಗೆ ಹಂಪೆಯ ಉತ್ಖನನದಲ್ಲಿ ದೊರೆತಿರುವ ಈ ಕಾಲದ ಗಚ್ಚಿನ ಬೋಧಿಸತ್ವನ ತಲೆಯೊಂದು ಕುತೂಹಲವನ್ನು ಕೆರಳಿಸುವಂತಿದೆ. ಸುಣ್ಣಕಲ್ಲಿನಲ್ಲಿ ತೆಳುವುಬ್ಬಿನಲ್ಲಿ ಬಿಡಿಸಿರುವ ಶಿಲ್ಪಗಳು ಬೆರಗುಗೊಳಿಸುವಂಥವು.

ಶಾಸನಗಳು : ಸಾತವಾಹನರ ತಕ್ಕಷ್ಟು ದೊಡ್ಡದಾದ ಮತ್ತು ಐತಿಹಾಸಿಕವಾಗಿ ಬಹುಪ್ರಮುಖವಾದ ಶಾಸನಗಳು ನಾನಾಘಾಟ್, ನಾಸಿಕ್, ನಾಗಾರ್ಜುನಕೊಂಡ, ಜಗ್ಗಯ್ಯಪೇಟೆ ಮೊದಲಾದ ಕರ್ನಾಟಕದ ಹೊರಗಿನ ಸ್ಥಳಗಳಲ್ಲಿ ದೊರೆತಿದ್ದರೂ ಕರ್ನಾಟಕದಲ್ಲಿ ಅಂಥ ಶಾಸನಗಳಿಲ್ಲವೆಂದೇ ಹೇಳಬೇಕು. ಇಲ್ಲಿ ದೊರೆತಿರುವ ಈ ಕಾಲದ ಶಾಸನಗಳಲ್ಲಿ ದೊಡ್ಡದಾದುದೆಂದರೆ ಮಳವಳ್ಳಿಯ ಸ್ತಂಭಶಾಸನ. ಇದಲ್ಲದೆ ಬನವಾಸಿ, ಸನ್ನತಿ, ಬೆಳ್ವಾಡಗಿ, ಚುರುಸುಗುಂಡಿ, ಹಂಪೆಗಳಲ್ಲಿ ಈ ಕಾಲಕ್ಕೆ ಸೇರಿರಬಹುದಾದ ಹಲವಾರು ಶಾಸನಗಳು ದೊರೆತಿವೆ. ಕ್ರಿ.ಪೂ.ಸು.1ನೆಯ ಶತಮಾನದಿಂದ ಕ್ರಿ.ಶ.ಸು.3ನೆಯ ಶತಮಾನದವರೆಗಿನ ಕಾಲಕ್ಕೆ ಸೇರಿದ ಈ ಶಾಸನಗಳು ಬ್ರಾಹ್ಮೀಲಿಪಿ ಮತ್ತು ಪ್ರಾಕೃತಭಾಷೆಗಳ ಲ್ಲಿವೆ. ಬನವಾಸಿಯಲ್ಲಿ ದೊರೆತ ಒಂದು ಶಾಸನ ಸು.2ನೆಯ ಶತಮಾನದ ಮಧ್ಯಭಾಗದಲ್ಲಿ ಆಳುತ್ತಿದ್ದ ವಾಶಿಷ್ಠೀಪುತ್ರ ಶಿವಶ್ರೀ ಪುಳುಮಾವಿಯ ಆಳಿಕೆಗೆ ಸೇರಿದ್ದು, ಅದು ಆತನ ರಾಣಿಯ ನೆನಪಿಗಾಗಿ ಹಾಕಿಸಿದ ಛಾಯಾದ್ರಸ್ತರವಾಗಿದೆ. ಆದರೆ ಆ ರಾಣಿಯ ಹೆಸರನ್ನು ತಿಳಿಸಿಲ್ಲ. ಮಳವಳ್ಳಿಯ ಸ್ತಂಭಶಾಸನ ಸಾತವಾಹನರ ಮಾಂಡಲಿಕನಾಗಿದ್ದ, ಚುಟುವಂಶಕ್ಕೆ ಸೇರಿದ ಏಣ್ಹುಕಡ ಚುಟುಕುಲಾನಂದನ ಎರಡನೆಯ ಆಳಿಕೆಯ ವರ್ಷಕ್ಕೆ ಸೇರಿದ್ದು, ರಾಜನು ಮಳ್ಳಪಳ್ಳಿ ದೇವರಿಗೆ ಸಹಲಾಟವಿ ಗ್ರಾಮವನ್ನು ದತ್ತಿಯಾಗಿ ಬಿಟ್ಟುದನ್ನು ಈ ಶಾಸನ ತಿಳಿಸುತ್ತದೆ. ಇದೇ ರಾಜನ 12ನೆಯ ಆಳಿಕೆಯ ವರ್ಷಕ್ಕೆ ಸೇರಿದುದು ಬನವಾಸಿಯಲ್ಲಿರುವ ನಾಗರಕಲ್ಲಿನ ಶಾಸನ. ಮಹಾಭೋಜ ನೆಂಬೊಬ್ಬನ ಹೆಂಡತಿ ಶಿವಸ್ಕಂದ ನಾಗಶ್ರೀ ಕೆರೆ, ವಿಹಾರಗಳನ್ನು ಕಟ್ಟಿಸಿ ಈ ಶಾಸನವಿರುವ ನಾಗರಕಲ್ಲನ್ನು ಮಾಡಿಸಿದುದಾಗಿ ಶಾಸನದಿಂದ ತಿಳಿದುಬರುತ್ತದೆ. ಈ ಶಾಸನಕಲ್ಲನ್ನು ಮಾಡಿದ ರೂವಾರಿ ಸಂಜಯಂತಿಯ, ಎಂದರೆ ಬನವಾಸಿಯ ಇಂದ್ರಮಯೂರಕನ ಶಿಷ್ಯ ನರ್ತಕ. ಸನ್ನತಿಯ ಒಂದು ತುಂಡುಶಾಸನದಲ್ಲಿ ವಾಶಿಷ್ಠೀಪುತ್ರ ಸಿರಿಸಾತ . . . ಎಂದಿದ್ದು ಅದು ವಾಶಿಷ್ಠೀಪುತ್ರ ಶ್ರೀ ಸಾತಕರ್ಣಿಯನ್ನು ನಿರ್ದೇಶಿಸುವುದಾಗಿದೆ. ಉಳಿದಂತೆ ಅಲ್ಲಿನ ಹಲವಾರು ಶಾಸನಗಳು ದತ್ತಿಬಿಟ್ಟವರ ಇತರರ ಹೆಸರುಗಳನ್ನು ಸೂಚಿಸುತ್ತವೆ. ಬೆಳ್ವಾಡಿಗಿಯಲ್ಲಿರುವ ಶಾಸನವು ಆ ಕಲ್ಲಿನ ಮೇಲೆ ಎತ್ತಿನ ಗಾಡಿಯಲ್ಲಿರುವ ಮೂರ್ತಿಯನ್ನು ಕಲಕ ಎನ್ನುವವನ ಛಾಯಾಪ್ರತಿಮೆ ಎನ್ನುತ್ತದೆ. ಹಾಗೆಯೇ ಹಂಪೆಯಲ್ಲಿ ಉತ್ಖನನದಲ್ಲಿ ದೊರೆತ ಶಾಸನಸ್ತಂಭವೊಂದನ್ನು ಬೌದ್ಧವಿಹಾರವೊಂದಕ್ಕೆ ದತ್ತಿಬಿಟ್ಟುದನ್ನು ಸೂಚಿಸುವಂತೆ ತೋರುತ್ತದೆ. ಈ ಶಾಸನಗಳ ವ್ಯಾಪ್ತಿಯಿಂದ ಸಾತವಾಹನರು ಅಥವಾ ಅವರ ಸಾಮಂತರಾದ ಚುಟುಕುಲ ಸಾತಕರ್ಣಿಗಳು ಕರ್ನಾಟಕದ ಬಹುಭಾಗವನ್ನು ಆಳುತ್ತಿದ್ದರೆಂಬುದು ವಿದಿತವಾಗುತ್ತದೆ. (ಎಮ್.ಎಚ್.)

ನಾಣ್ಯಗಳು : ಕೃಷ್ಣಾ, ಗೋದಾವರಿ ಪ್ರದೇಶ, ಮಾಲವ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕಗಳ ಹಲವಾರು ಕಡೆಗಳಲ್ಲಿ ಸಾತವಾಹನರ ವಿವಿಧ ನಾಣ್ಯಗಳು ಅಪಾರವಾಗಿ ದೊರೆತಿವೆ. ಅವುಗಳ ರಚನೆ, ಅವುಗಳ ಮೇಲಿನ ಚಿತ್ರಾಲಂಕರಣ ಮತ್ತು ಅವುಗಳಿಗಾಗಿ ಬಳಸಲಾದ ಲೋಹ ಇವುಗಳಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಪೊಟಿನ್, ಸೀಸ, ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳನ್ನು ಅವರು ಅಚ್ಚುಹಾಕಿಸಿದ್ದಾರೆ. ಆದರೆ ಸೀಸ ಮತ್ತು ಪೊಟಿನ್ ನಾಣ್ಯಗಳೇ ಹೆಚ್ಚು. ವಿದೇಶ ಹಾಗೂ ಸುತ್ತಲಿನ ಪ್ರದೇಶಗಳನ್ನು ಹೊರತುಪಡಿಸಿ ಅನ್ಯತ್ರ ದೊರಕಿರುವುದು ಹೆಚ್ಚಾಗಿ ಅಚ್ಚುಹಾಕಿದವುಗಳೇ. ಸಾಮಾನ್ಯವಾಗಿ ಈ ನಾಣ್ಯಗಳ ಮೇಲೆ ಬ್ರಾಹ್ಮೀಲಿಪಿಯಲ್ಲಿ ಆಲೇಖ್ಯಗಳಿದ್ದು, ಇನ್ನೊಂದು ಮುಖದಲ್ಲಿ ಸಿಂಹ, ಆನೆ, ಕುದುರೆ, ಬಾಣ, ಬೆಟ್ಟ ಮುಂತಾದ ಚಿತ್ರಗಳಿರುತ್ತವೆ. ಆಕಾರದಲ್ಲಿ ಇವು ಬಹುಮಟ್ಟಿಗೆ ದುಂಡು. ದಪ್ಪದಾದ ಈ ನಾಣ್ಯಗಳ ವ್ಯಾಸ 1.5", 0.9" ಮತ್ತು 0.6". ಅರಸರ ಹೆಸರುಗಳನ್ನು ನಾಣ್ಯಗಳಲ್ಲಿ ಮೂಡಿಸಿದ್ದರೂ ಒಂದೇ ಹೆಸರಿನ ಹಲವಾರು ಅರಸರು ಈ ವಂಶದಲ್ಲಿರುವ ಕಾರಣ ಅವರನ್ನು ಗುರುತಿಸುವುದು ಕಷ್ಟವಾಗಿದೆ.

ಬನವಾಸಿಯ ಉತ್ಖನನದಲ್ಲಿ ಗೌತಮೀಪುತ್ರ ಸಾತಕರ್ಣಿಯ ಅನೇಕ ನಾಣ್ಯಗಳೂ ಯಜ್ಞಶ್ರೀ ಸಾತಕರ್ಣಿಯ ಒಂದೆರಡು ನಾಣ್ಯಗಳೂ ದೊರೆತಿವೆ. ಬನವಾಸಿಯಲ್ಲಿ ದೊರೆತ ನಾಣ್ಯಗಳು ಸೀಸದಿಂದ ಮಾಡಲ್ಪಟ್ಟಿದ್ದು. ಇವುಗಳ ವ್ಯಾಸ ಸಾಮಾನ್ಯವಾಗಿ 0.6". ಇವುಗಳ ಮುಮ್ಮುಖ ಸವೆದಿದ್ದರೂ ಹಿಮ್ಮುಖದಲ್ಲಿ ಉಜ್ಜಯಿನಿ ಚಿಹ್ನೆ ಇದೆ. ಚಂದ್ರವಳ್ಳಿಯಲ್ಲಿ ವಾಶಿಷ್ಠೀಪುತ್ರ ಪುಳುಮಾವಿ ಮತ್ತು ಯಜ್ಞಶ್ರೀ ಸಾತಕರ್ಣಿಯರ ನಾಣ್ಯಗಳು ದೊರೆತಿವೆ. ಪುಳುಮಾವಿಯ ನಾಣ್ಯದ ಒಂದು ಮುಖದಲ್ಲಿ ಸೊಂಡಿಲು ಮೇಲಕ್ಕೆತ್ತಿದ ಆನೆಯ ಚಿತ್ರ ಮತ್ತು ಬ್ರಾಹ್ಮೀಲಿಪಿಯಲ್ಲಿ ಪುಳುಮಾವಿ ಎಂಬ ಆಲೇಖ್ಯವಿದೆ. ಹಿಮ್ಮುಖದಲ್ಲಿ ಉಜ್ಜಯಿನಿ ಚಿಹ್ನೆಯಿದ್ದು, ಅದರ ಒಂದೊಂದು ವೃತ್ತದಲ್ಲಿ ಒಂದೊಂದು ಗೂಡು ಇದೆ. ಯಜ್ಞಶ್ರೀ ಸಾತಕರ್ಣಿಯ ನಾಣ್ಯಗಳೂ ಹೀಗೇ ಇವೆ. ಒಂದು ನಾಣ್ಯದಲ್ಲಿ ಆ ಸಿರಿಯನ ಸತಾ ಎಂಬ ಆಲೇಖ್ಯವೂ ಇನ್ನೊಂದರಲ್ಲಿ ನಸತಕ . . . ಎಂಬ ವಿಲೇಖ್ಯವೂ ಇದೆ. ಪೊಟಿನ್ ನಾಣ್ಯವೊಂದರಲ್ಲಿ ಹಕು ಶ್ರೀ ಎಂಬ ಆಲೇಖ್ಯವಿರುವುದನ್ನೂ ಇನ್ನೊಂದು ಸೀಸದ ನಾಣ್ಯದಲ್ಲಿ ಶ್ರೀಸದಕ ಎಂಬ ಆಲೇಖ್ಯವಿರುವುದನ್ನೂ ಎಂ.ಎಚ್.ಕೃಷ್ಣ ಅವರು ಗುರುತಿಸಿದ್ದಾರಾದರೂ ಈ ರಾಜರು ಯಾರು ಎಂಬುದನ್ನು ಗುರುತಿಸಲಾಗಿಲ್ಲ. (ಜಿ.ಬಿ.ಆರ್.)