ಸಾಧ್ವಿ ಮೈಸೂರಿನಿಂದ ಪ್ರಕಟವಾಗುತ್ತಿದ್ದ ಒಂದು ಸಂಜೆ ದಿನಪತ್ರಿಕೆ. ಎಂ. ವೆಂಕಟಕೃಷ್ಣಯ್ಯನವರು 1899ರಲ್ಲಿ ಇದನ್ನು ವಾರಪತ್ರಿಕೆಯಾಗಿ ಪ್ರಾರಂಭಿಸಿದರು. 1908ರಲ್ಲಿ ಮೈಸೂರು ಪತ್ರಿಕಾ ಕಾನೂನು ಜಾರಿಗೆ ಬಂದಾಗ ಅದನ್ನು ವಿರೋಧಿಸಿ ವೆಂಕಟಕೃಷ್ಣಯ್ಯನವರು ತಮ್ಮ ಇತರ ಪತ್ರಿಕೆಗಳೊಡನೆ ಸಾಧ್ವಿಯ ಪ್ರಕಟಣೆಯನ್ನೂ ನಿಲ್ಲಿಸಿ ಮತ್ತೆ 1909ರಲ್ಲಿ ಪ್ರಕಟಣೆ ಪ್ರಾರಂಭಿಸಿದರು. ಸಾಧ್ವಿ 1928ರಲ್ಲಿ ಬೆಂಗಳೂರಿನ ಸುಲ್ತಾನ್ ಪೇಟೆಯ ಗಣೇಶ ಹಬ್ಬದಲ್ಲಿ ಆದಂಥ ಗಲಾಟೆ ಕುರಿತು ಪಕ್ಷಪಾತವಿಲ್ಲದೆ ಸಮಾಚಾರವನ್ನು ಪ್ರಕಟಿಸಿದುದನ್ನು ಸಹಿಸದೆ 1929ರಲ್ಲಿ ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಸರ್ಕಾರ ವೆಂಕಟಕೃಷ್ಣಯ್ಯ ನವರ ಎಲ್ಲ ಪತ್ರಿಕೆಗಳ ಜೊತೆಗೆ ಸಾಧ್ವಿಯ ಪ್ರಕಟಣೆಯನ್ನೂ ತಡೆಯಿತು. ವೆಂಕಟಕೃಷ್ಣಯ್ಯನವರು (ನೋಡಿ) 1933 ನವೆಂಬರ್ 11ರಂದು ನಿಧನರಾದರು.

ಇವರ ಜ್ಞಾಪಕಾರ್ಥ ಅಗರ ರಂಗಯ್ಯನವರು 1936 ಫೆಬ್ರವರಿ 24ರಂದು ಸಾಧ್ವಿ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1939ರಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಸತ್ಯಾಗ್ರಹ ಚಳವಳಿಯನ್ನು ಮೈಸೂರು ಕಾಂಗ್ರೆಸ್ ಪ್ರಾರಂಭಿಸಿದಾಗ ಸಾಧ್ವಿ ಪತ್ರಿಕೆ ಆ ಸಂಬಂಧದಲ್ಲಿ ಅನೇಕ ಲೇಖನಗಳನ್ನು ಪ್ರಕಟಪಡಿಸಿತು. ಆ ವರ್ಷದ ಆಗಸ್ಟ್‍ನಲ್ಲಿ ಸಾಧ್ವಿ ಪತ್ರಿಕೆಯ ಸಂಪಾದಕರನ್ನು ಸರ್ಕಾರ ದಸ್ತಗಿರಿ ಮಾಡಿ ಪತ್ರಿಕಾ ಕಾನೂನಿನ ಪ್ರಕಾರ ಪತ್ರಿಕೆಯ ರಹದಾರಿಯನ್ನು ರದ್ದುಪಡಿಸಿತು. ಪತ್ರಿಕೆಯ ಪ್ರಕಟಣೆ 1936 ಅಕ್ಟೋಬರ್ 16ರಂದು ಮತ್ತೆ ನಿಂತಿತು. ಮುಂದೆ ಮೈಸೂರಿನಲ್ಲಿ ಜಾರಿಗೆ ಬಂದ ಪತ್ರಿಕಾ ಕಾನೂನಿನಂತೆ ರೂ. 250 ಠೇವಣಿ ಕಟ್ಟಿ ಪತ್ರಿಕೆ ನಡೆಸಲು ಸಂಪಾದಕರು ನಿರಾಕರಿಸಿದರು. ಆದರೆ ಮಿರ್ಜಾ ಇಸ್ಮಾಯಿಲರ ಪರಿಚಯವಿದ್ದ ಪತ್ರಿಕೆಯ ಹಿತೈಷಿಗಳಲ್ಲಿ ಒಬ್ಬರಾದ ನಂಜನಗೂಡಿನ ಸುಪ್ರಸಿದ್ದ ಸಾಹಿತಿ ಎನ್. ಸುಬ್ರಹ್ಮಣ್ಯಯ್ಯನವರು ಸಾಧ್ವಿಪತ್ರಿಕೆಯ ಸಂಪಾದಕರಾಗಿ ಪ್ರಕಟಣೆಯನ್ನು ಪ್ರಾರಂಭಿಸಿದರು. 1942 ಜುಲೈ 20ರಿಂದ ಸಾಧ್ವಿ ದಿನಪತ್ರಿಕೆಯಾಯಿತು. ಕ್ವಿಟ್ ಇಂಡಿಯ ಚಳವಳಿಯ ಪರಿಣಾಮ, ಸರ್ಕಾರಿ ಅಧಿಕಾರಿಗಳ ಒತ್ತಡದ ಕಾರಣಗಳಿಂದ 1942 ಆಗಸ್ಟ್ 21ರಂದು ಎನ್. ಸುಬ್ರಹ್ಮಣ್ಯಯ್ಯನವರು ಪತ್ರಿಕೆಯ ಸಂಪಾದಕತ್ವವನ್ನು ಬಿಟ್ಟರು. ಅಂದಿನಿಂದ 1958 ನವೆಂಬರ್ 11ರವರೆಗೆ ಎ.ಆರ್.ನಾಗರಾಜನ್ ಈ ಪತ್ರಿಕೆಯ ಸಂಪಾದಕರಾಗಿದ್ದರು. ಅನಂತರ ಅಗರ ರಂಗಯ್ಯನವರು ಪತ್ರಿಕೆಯ ಸಂಪಾದಕರಾಗಿದ್ದರು. 1962 ಆಗಸ್ಟ್ 3ರಂದು ಆಗ ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಸಾಧ್ವಿ ಪತ್ರಿಕೆ ರಜತಮಹೋತ್ಸವವನ್ನು ಆಚರಿಸಿತು. ಆ ಉತ್ಸವದ ನೆನಪಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಚಿನ್ನದ ಪದಕ ಕೊಡಲು ಒಂದು ನಿಧಿಯನ್ನು ವಿಶ್ವವಿದ್ಯಾನಿಲಯಕ್ಕೆ ಅರ್ಪಿಸಲಾಯಿತು. ಅಗರ ರಂಗಯ್ಯನವರ ತರುವಾಯ ಇದು ಕೆಲಕಾಲ ವಾರಪತ್ರಿಕೆಯಾಗಿ ಪ್ರಕಟವಾಗುತ್ತಿತ್ತು. *