ಸಾಯಣ ಸು. 14ನೆಯ ಶತಮಾನ. ಚತುರ್ವೇದಗಳಿಗೂ ಬ್ರಾಹ್ಮಣ ಗಳಿಗೂ ಆರಣ್ಯಕಗಳಿಗೂ ಸಮಗ್ರ ಭಾಷ್ಯಗಳನ್ನು ರಚಿಸಿದ ಸಂಸ್ಕøತ ವಿದ್ವಾಂಸ. ಇವರು ವಿಜಯನಗರದ ದೊರೆ ಬುಕ್ಕರಾಯನಿಗೆ (1364-78) ಮತ್ತು ಇಮ್ಮಡಿ ಹರಿಹರನಿಗೆ (1379-82) ಪ್ರಧಾನಾಮಾತ್ಯರಾಗಿದ್ದ ರೆಂದೂ ವೇದಭಾಷ್ಯಗಳನ್ನು ರಚಿಸಲು ಬುಕ್ಕರಾಯ ಮತ್ತು ಮಾಧವಾಚಾರ್ಯರಿಂದ ಪ್ರೇರಣೆ ಪಡೆದರೆಂದೂ ತಿಳಿದುಬರುತ್ತದೆ. ಈ ಭಾಷ್ಯಕ್ಕೆ ಇವರು ವೇದಾರ್ಥ ಪ್ರಕಾಶ ಎಂಬ ಹೆಸರು ಕೊಟ್ಟಿದ್ದಾರೆ. ಸಾಯಣರು ತೈತ್ತಿರೀಯ ಶಾಖಾಧ್ಯಾಯಿಗಳಾಗಿದ್ದರು. ಯಾಗದಲ್ಲಿ ಯಜುರ್ವೇದಕ್ಕೆ ಹೆಚ್ಚು ಉಪಯೋಗವಿರುವುದರಿಂದಲೂ ಯಜುರ್ವೇದ ತಮ್ಮ ಸ್ವಶಾಖೆಯಾದುದರಿಂದಲೂ ಇವರು ಮೊದಲು ತೈತ್ತಿರೀಯಸಂಹಿತೆ ಮತ್ತು ಬ್ರಾಹ್ಮಣಗಳಿಗೆ ಭಾಷ್ಯ ಬರೆದರು. ಅನಂತರ ಋಗ್ವೇದಕ್ಕೆ ಸೇರಿದ ಐತರೇಯ ಬ್ರಾಹ್ಮಣ ಮತ್ತು ಆರಣ್ಯಕಗಳಿಗೂ ತದನಂತರ ಋಗ್ವೇದ ಸಂಹಿತೆಗೂ ಭಾಷ್ಯರಚನೆ ಮಾಡಿದರು. ಋಗ್ಭಾಷ್ಯದ ಅನಂತರ ಸಾಮವೇದಕ್ಕೂ ಆ ವೇದಕ್ಕೆ ಸೇರಿದ ಬ್ರಾಹ್ಮಣಗ್ರಂಥಗಳಿಗೂ ಭಾಷ್ಯಗಳನ್ನು ರಚಿಸಿ ಕಾಣ್ವಶಾಖೆಯ ಸಂಹಿತೆಯ 20 ಅಧ್ಯಾಯಗಳಿಗೆ ಭಾಷ್ಯ ಬರೆದರು. ಈ ಸಂಹಿತೆಗಳಿಗೂ ಆರಣ್ಯಕಗಳಿಗೂ ಭಾಷ್ಯರಚಿಸಿದ ಮೇಲೆ ಐಹಿಕಾಮುಷ್ಮಿಕಫಲಕ್ಕೆ ಕಾರಣವಾದ ನಾಲ್ಕನೆಯ ವೇದವಾದ ಅಥರ್ವವೇದಕ್ಕೆ ಭಾಷ್ಯ ರಚಿಸಿದರು. ಇವೆಲ್ಲ ಆದಮೇಲೆ ಶತಪಥ ಬ್ರಾಹ್ಮಣದ ಭಾಷ್ಯವನ್ನು ಕೊನೆಯಲ್ಲಿ ಬರೆದರು. ಸಾಯಣರ ಭಾಷ್ಯರಚನೆಯಲ್ಲಿ ಈ ಕ್ರಮವಿರುವುದನ್ನು ಆಯಾ ಭಾಷ್ಯಗ್ರಂಥಗಳ ಅಂತರಂಗ ಪ್ರಮಾಣಗಳಿಂದ ತಿಳಿಯಬಹುದಾಗಿದೆ. ವೈದಿಕಗ್ರಂಥಗಳಿಗೆ ಭಾಷ್ಯಬರೆದವರಾರೂ ಇಷ್ಟು ಬೃಹತ್ಪ್ರಮಾಣದಲ್ಲಿ ಇಷ್ಟು ವ್ಯಾಪಕವಾಗಿ ಎಲ್ಲ ವೇದಗಳ ಸಂಹಿತಾ ಬ್ರಾಹ್ಮಣಾದಿಗಳಿಗೆ ಭಾಷ್ಯಗಳನ್ನು ಬರೆದಿಲ್ಲ. ಇದು ಆಚಾರ್ಯ ಸಾಯಣರ ಅಭೂತಪೂರ್ವ ಸಾಧನೆ. ಈ ಎಲ್ಲ ಭಾಷ್ಯಗಳನ್ನೂ ಒಬ್ಬರೇ ಬರೆದರೆ ಎಂಬ ಬಗ್ಗೆ ಕೆಲವು ಸಂದೇಹಗಳಿವೆ. ಇಮ್ಮಡಿ ಹರಿಹರ ಮಹಾರಾಜನ ಚತುರ್ವೇದ ಭಾಷ್ಯಪ್ರವರ್ತಕರಾದ ಮೂವರು ದೊಡ್ಡ ವಿದ್ವಾಂಸರಿಗೆ ಅಗ್ರಹಾರಗಳನ್ನು ಕೊಟ್ಟು ಸನ್ಮಾನ ಮಾಡಿದ ಸಂಗತಿಯೊಂದು 1386ರ ಶಾಸನವೊಂದರಿಂದ ತಿಳಿದು ಬರುತ್ತದೆ. ಶ್ರೀಮತ್ಸಾಯಣಾಚಾರ್ಯರೊಡನೆ ಸಹಕರಿಸಲು ಒಂದು ವಿದ್ವನ್ಮಂಡಲಿಯೇ ಸಿದ್ಧವಾಗಿತ್ತೆಂದು ಈ ಮೇಲಿನ ಆಧಾರದಿಂದ ಊಹಿಸಬಹುದಾಗಿದೆ.

ಸಾಯಣರ ಭಾಷ್ಯಗಳು ಮಹತ್ತ್ವಪೂರ್ಣವಾದವು. ಇವರ ಅಪಾರ ಪಾಂಡಿತ್ಯ, ಸರ್ವಶಾಸ್ತ್ರ ಪ್ರಾವೀಣ್ಯ ಮತ್ತು ಸಾಮಥ್ರ್ಯಗಳ ಅರಿವು ಇವುಗಳಿಂದಾಗುತ್ತದೆ. ಸಾಯಣರ ಭಾಷ್ಯ ಯಾಜ್ಞಿಕವಾದ ಪ್ರಕ್ರಿಯೆಯನ್ನು ಹೆಚ್ಚಾಗಿ ವಿವರಿಸುವುದಾದರೂ ಆಧ್ಯಾತ್ಮಿಕಾರ್ಥಗಳ ನಿರೂಪಣೆ ಇಲ್ಲದಿಲ್ಲ. ಖಿಲವಾಗಿ ಹೋಗುತ್ತಿದ್ದ ವೈದಿಕ ಸಂಪ್ರದಾಯದ ಮಹತ್ತ್ವವನ್ನು ಸಂರಕ್ಷಿಸುವ ಮಹತ್ಪ್ರಯತ್ನವನ್ನಿಲ್ಲಿ ಕಾಣಬಹುದಾಗಿದೆ. ಸಾಯಣರ ಭಾಷ್ಯಾರ್ಥಗಳು ಕೆಲವು ವೇಳೆ ಯಾಸ್ಕರ ನಿರೂಪಣೆಗಳಿಗಿಂತ ಬೇರೆಯಾಗಿ ರುವುದೂ ಉಂಟು. ಆಧುನಿಕ ವಿಮರ್ಶಕರು ಸಾಯಣರ ಅರ್ಥನಿರ್ವಚನ ವನ್ನು ಸಮಗ್ರವಾಗಿ ಒಪ್ಪದಿದ್ದರೂ ವೇದಾರ್ಥ ನಿರ್ಣಯದಲ್ಲಿ ಸಾಯಣರ ಅರ್ಥನಿರೂಪಣೆಯಿಂದ ಅಪಾರ ಸಹಾಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವೇದಗಳ ಭಾಷೆ ಮತ್ತು ಧರ್ಮದ ಪರಿಚಯ ಪಡೆಯಲು ಸಾಯಣರ ಭಾಷ್ಯ ಮುಖ್ಯ ಸಾಧನ.

(ಎನ್.ಎಸ್.ಐ.)