ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಲ ವಸೂಲಿ ನ್ಯಾಯಮಂಡಲಿ

ಸಾಲ ವಸೂಲಿ ನ್ಯಾಯಮಂಡಲಿ

ಬ್ಯಾಂಕುಗಳು ನೀಡುವ ಸಾಲ, ಮುಂಗಡಗಳು ಸಕಾಲದಲ್ಲಿ ಮರುಪಾವತಿಯಾಗದಿದ್ದರೆ ಕಾನೂನು ಬದ್ಧವಾಗಿ ಅದನ್ನು ವಸೂಲಿ ಮಾಡಲು ಬ್ಯಾಂಕುಗಳಿಗೆ ಸಾಕಷ್ಟು ಸಮಯ ವ್ಯಯ ಮಾಡಬೇಕಾಗುತ್ತದೆ. ನ್ಯಾಯಾಲಯಗಳು, ಉಚ್ಛ ನ್ಯಾಯಾಲಯಗಳಲ್ಲಿ ದಾವೆ ಹೂಡಿ ವಸೂಲಿಗಾಗಿ ಕಾನೂನುಬದ್ಧವಾಗಿ ಪ್ರಯತ್ನಪಡುವುದಕ್ಕೆ ದೀರ್ಘಕಾಲದ ಅವಶ್ಯಕತೆಯಿದೆ ಜತೆಗೆ ಎಲ್ಲ ಬ್ಯಾಂಕುಗಳು ಹೀಗೆ ದಾವೆ ಹೂಡಿದಾಗ ಲಕ್ಷಾಂತರ ದಾವೆಗಳು ನ್ಯಾಯಲಯದಲ್ಲಿ ತುಂಬಿಕೊಂಡು ಅವುಗಳೆಲ್ಲಾ ಸಾಬೀತಾಗಿ ಬ್ಯಾಂಕಿಗೆ ತೀರ್ಪು ಬರುವುದರೊಳಗೆ ಸಾಲಗಳಿಗೆ ಬಡ್ಡಿಯೂ ಸಹ ತುಂಬಾ ಬೆಳೆದುಹೋಗಿರುತ್ತದೆ. ಜೊತೆಗೆ ಈ ಸಾಲಗಳು ಬ್ಯಾಂಕಿನಲ್ಲಿ ಅನುತ್ಪಾದನಾ ಆಸ್ತಿಯಾಗಿ ಬೆಳೆದು ರಿಸರ್ವ್ ಬ್ಯಾಂಕಿನ ಹಾಗು ಲೆಕ್ಕ ಪರಿಶೋಧಕರ ಕೆಂಗಣ್ಣಿಗು ಗುರಿಯಾಗಿರುತ್ತದೆ. ಹೀಗಾಗಿ ಎಲ್ಲ ಬ್ಯಾಂಕುಗಳು ಈ ಸಮಸ್ಯೆಗಳಿಂದ ಜರ್ಝರಿತವಾಗಿವೆ. ಇದು ಸರ್ಕಾರಕ್ಕೆ, ರಿಸರ್ವ್‍ಬ್ಯಾಂಕಿಗೆ ಹಾಗು ಬ್ಯಾಂಕುಗಳಿಗೆ ತುಂಬಾ ಕಳವಳದ ಬೆಳವಣಿಗೆಯಾಯಿತು. ಆಗ ರಿಸರ್ವ್‍ಬ್ಯಾಂಕ್ 1981ರಲ್ಲಿ ಶ್ರೀ.ಟಿ.ತಿವಾರಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿ ಈ ಬಗ್ಗೆ ಅಧ್ಯಯನ ನಡೆಸಿ ವರದಿ ಮಾಡಲು ಆದೇಶಿಸಿತು. ತಿವಾರಿ ಸಮಿತಿ ನೀಡಿದ ವರದಿಯಲ್ಲಿನ ಹಲವಾರು ಸಲಹೆಗಳಲ್ಲಿ ವಿಶೇಷ ನ್ಯಾಯಮಂಡಲಿಗಳನ್ನು ಸ್ಥಾಪಿಸಿ ಬ್ಯಾಂಕಿನ ದಾವೆಗಳನ್ನು ಆದಷ್ಟು ಶೀರ್ಘವಾಗಿ ಇತ್ಯರ್ಥಮಾಡುವುದು ಒಂದಾಗಿತ್ತು. ಇದನ್ನು ಒಪ್ಪಿದ ರಿಸರ್ವ್‍ಬ್ಯಾಂಕು ಒಂದು ಉಪ ಸಮಿತಿಯನ್ನು ಸ್ಥಾಪಿಸಿ, ಅದಕ್ಕೆ ಈ ಬಗ್ಗೆ ಒಂದು ಕರಡು ಮಸೂದೆಯನ್ನು ರಚಿಸಿ ಕೊಡಲು ಹೇಳಲಾಯಿತು. 1986ರಲ್ಲಿ ಈ ವೆಸುವಲ್ಲಾ ಸಮಿತಿಯು ಒಂದು ಕರಡು ಮಸೂದೆಯನ್ನು ರಚಿಸಿ ಸರ್ಕಾರದ ಅವಗಾಹನೆಗಾಗಿ ಸಲ್ಲಿಸಿತು. ಆ ಮಸೂದೆಯೇ, ಸಾಲ ವಸೂಲಿ (ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು) ಮಸೂದೆ, 1986. ಸರ್ಕಾರದ ಆದೇಶದ ಮೇರೆಗೆ ಭಾರತೀಯ ಕೈಗಾರಿಕ ಅಭಿವೃದ್ಧಿ ಬ್ಯಾಂಕು ಈ ಕರಡು ಮಸೂದೆಯನ್ನು ಪರಿಶೀಲಿಸಿ ತನ್ನ ಸಲಹೆಗಳನ್ನು ಸೇರಿಸಿ ಅಂಗೀಕಾರಕ್ಕಾಗಿ ಸರ್ಕಾರಕ್ಕೆ ಮಂಡಿಸಿತು. ಈ ಮಧ್ಯೆ 1991ರ ನರಸಿಂಹನ್ ಸಮಿತಿಯೂ ಸಹ ತನ್ನ ವರದಿಯಲ್ಲಿ ಸಾಲ ವಸೂಲಿಗಾಗಿ ವಿಶೇಷ ನ್ಯಾಯಮಂಡಲಿಗಳನ್ನು ಸ್ಥಾಪಿಸಲು ಸಲಹೆ ಮಾಡಿತ್ತು. ಆಗ, ರಿಸರ್ವ್‍ಬ್ಯಾಂಕಿಗೆ ಪ್ರಧಾನ ಕಾನೂನು ಸಲಹೆಗಾರನಾಗಿದ್ದ ಶ್ರೀ.ವಿ.ಜಿ.ಹೆಗ್ಗಡೆಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿ, ಈ ಬಗ್ಗೆ ಪ್ರಸ್ತುತವಿರುವ ಕಾನೂನಿನ ಚೌಕಟ್ಟಿನಲ್ಲಿ ಬ್ಯಾಂಕು ಹಾಗು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿಯಲ್ಲಾಗುತ್ತಿರುವ ಅನೇಕ ತೊಂದರೆ, ಸಮಸ್ಯೆಗಳ ಬಗ್ಗೆ ಆಧ್ಯಯನ ನಡೆಸಿ ವರದಿ ಮಾಡಲು ಹೇಳಿತು. ಸಂವಿಧಾನದ ಕಲಂ 226 ಮತ್ತು 227 ರ ಅನ್ವಯ ಉಚ್ಛ ನ್ಯಾಯಾಲಯಗಳ ಕ್ಷೇತ್ರವ್ಯಾಪ್ತಿಯೊಳಗೆ ಬರುವುದರ ಔಚಿತ್ಯದ ಬಗ್ಗೆ ಚರ್ಚಿಸಿ, ಚಿಂತಿಸಿ ಕೊನೆಗೆ ಸರ್ಕಾರವು ಸಮಿತಿಯ ಸಲಹೆ ಮೇರೆಗೆ ಒಂದು ಕಾಯಿದೆಯನ್ನು ಜಾರಿ ಮಾಡಿತು. ಕೇಂದ್ರ ಶಾಸಕಾಂಗವು ಸಂವಿಧಾನ ನೀಡಿರುವ ಅಧಿಕಾರದನ್ವಯ ಈ ಕಾಯಿದೆ ಜಾರಿಗೆ ಬಂದಿತು. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಬರಬೇಕಾದ ಸಾಲ ವಸೂಲಾತಿ ಕಾಯಿದೆ, 1993 (51-1993 ಅಧಿಕೃತವಾಗಿ ಪ್ರಕಟವಾಗಿ ದಿನಾಂಕ 24ನೇ ಜೂನ್, 1993ರಿಂದ ಪ್ರಾರಂಭವಾಯಿತು. ಸಾಲ ವಸೂಲಿ ಮೇಲ್ಮನವಿ ನ್ಯಾಯ ಮಂಡಲಿಯ ಅಧಿನಿಯಮ, 1994 ನ್ನು ರಚಿಸಲಾಯಿತು. ಈ ಕಾಯಿದೆಯ ಅನ್ವಯವಾಗಿ, ಕೊಲ್ಕತ್ತ, ದೆಹಲಿ, ಜೈಪುರ್, ಬೆಂಗಳೂರು, ಅಹಮದಾಬಾದ್, ಚೆನ್ನೈ, ಗೌಹಾಟಿ, ಪಾಟ್ನಾ, ಜಬಲ್‍ಪುರ್ ಮತ್ತು ಮುಂಬಯಿಗಳಲ್ಲಿ ನ್ಯಾಯಮಂಡಲಿಗಳನ್ನು ಸ್ಥಾಪಿಸಲಾಗಿದೆ. ಆಯಾಯ ಸಾಲ ವಸೂಲಿ ನ್ಯಾಯಮಂಡಳಿಗಳ ಕಾರ್ಯ ವ್ಯಾಪ್ತಿಯ ಸ್ಥಳಗಳÀಲ್ಲಿನ ದಾವೆ, ವಿವಾದಗಳನ್ನು ಪರಿಶೀಲಿಸಿ ಪರಿಹರಿಸಲು ಮುಂಬಯಿಯಲ್ಲಿ ಮೇಲ್ಮನವಿ ನ್ಯಾಯಮಂಡಲಿಯನ್ನು ಸ್ಥಾಪಿಸಲಾಯಿತು.

ಕಾರ್ಯ ವಿಧಾನ: ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು ತಮ್ಮ ಸಾಲದ ವಸೂಲಿಗಾಗಿ ಈ ಸಾಲ ವಸೂಲಿ ನ್ಯಾಯಮಂಡಲಿಗೆ ಕೋರಿಕೆ ಸಲ್ಲಿಸಬೇಕು. ಕೋರಿಕೆ ಪತ್ರದ ಜೊತೆಗೆ ಸಂಬಂಧಪಟ್ಟ ದಾಖಲೆಗಳು, ಆಧಾರಗಳು ಹಾಗು ವಿಧಿಸಿದ ಶುಲ್ಕವನ್ನು ಪಾವತಿಸಬೇಕು. ನಂತರ ನ್ಯಾಯಮಂಡಳಿಯು ಸಂಬಂಧಪಟ್ಟ ವಾದಿ, ಪ್ರತಿವಾದಿಗಳಿಗೆ ಸೂಚನಾ ಪತ್ರ ಕಳುಹಿಸಿ ಹಾಜರಾಗುವಂತೆ ನಿರ್ದೇಶಿಸುತ್ತದೆ. ಸೂಚನೆ ನೀಡಿದ 30 ದಿನಗಳೊಳಗಾಗಿ ಪ್ರತಿವಾದಿಯು ಹಾಜರಾಗಿ ದಾಖಲೆ, ಆಧಾರಗಳ ಮೂಲಕ ವಾದಿಸಿ ಬ್ಯಾಂಕಿನ ದಾವೆಯನ್ನು ಎದುರಿಸಬಹುದು. ನ್ಯಾಯವಾದಿಯ ಸಹಕಾರವನ್ನು ಪಡೆಯಬಹುದು. ಲಿಖಿತ ವಿವರಣೆಯನ್ನು ಸಲ್ಲಿಸಬೇಕು. ನಂತರ ವಾದ,ವಿವಾದಗಳನ್ನು ಪರಿಶೀಲಿಸಿ ನ್ಯಾಯಮಂಡಳಿಯು ತನ್ನ ತೀರ್ಪನ್ನು ನೀಡುವುದು. ನ್ಯಾಯಾಲಯಗಳಿಂದ ಅಥವಾ ಬೇರೆಯ ನ್ಯಾಯಮಂಡಳಿಗಳಿಂದ ದಾವೆಗಳು ವರ್ಗವಾಗಿ ಬಂದರೆ ನಿರ್ದಿಷ್ಟ ಪದ್ಧತಿಯನ್ನು ಅನುಸರಿಸಿ ಅವುಗಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರವನ್ನು ನ್ಯಾಯಮಂಡಳಿಗಳಿಗೆ ನೀಡಲಾಗಿದೆ. ಇಲ್ಲಿಗೆ ಮೀರಿದವುಗಳನ್ನು, ಬ್ಯಾಂಕಿಗೆ ವಿರುದ್ಧ ಬರುವ ದಾವೆಗಳನ್ನು, ಉಚ್ಛ ನ್ಯಾಯಾಲಯಗಳಲ್ಲಿ ಅಥವಾ ಸುಪ್ರೀಂ ಕೋರ್ಟಿನಲ್ಲಿ ಮುಂದುವರೆಸಬಹುದು. (ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)