ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಳುವರು, ಗೇರುಸೊಪ್ಪೆಯ

ಸಾಳುವರು, ಗೇರುಸೊಪ್ಪೆಯ

13ನೆಯ ಶತಮಾನದಿಂದ 16ನೆಯ ಶತಮಾನದ ಕೊನೆಯವರೆಗೆ ಉತ್ತರಕನ್ನಡ ಜಿಲ್ಲೆಯ ಗೇರುಸೊಪ್ಪೆಯಿಂದ ಆಳಿದ ಜೈನ ರಾಜವಂಶ. ಈ ಮನೆತನದವರು ಸೋಮವಂಶದ ಕಾಶ್ಯಪಗೋತ್ರದವರು. ಈ ವಂಶದಲ್ಲಿ ಹೆಚ್ಚಾಗಿ ಉತ್ತರಾಧಿಕಾರವು ಸೋದರಳಿಯನಿಗೆ ಸಲ್ಲುತ್ತಿದ್ದು, ಆ ಸೋದರಳಿಯನಿಗೇ ರಾಜ ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಿದ್ದ. ನಾರಣಾಂಕ, ನಾಗಣಾಂಕ ಮುಂತಾದ ಈ ವಂಶದ ರಾಜರು 13ನೆಯ ಶತಮಾನದಲ್ಲಿ ಇದ್ದು ಕಲ್ಯಾಣದ ಚಾಳುಕ್ಯರ ಮಾಂಡಲಿಕರಾಗಿದ್ದಿರಬಹುದು. ಮುಂದೆ ಕ್ರಮವಾಗಿ ಹೊನ್ನ (ಸು. 1333-47), ಕಾಮ (ಸು. 1347-62), ಮಂಗರಸ (ಸು. 1362-77) ರಾಜ್ಯವಾಳಿದರು. ಅನಂತರ ಹೈವ ಸು. 1377ರಲ್ಲಿ ಪಟ್ಟಕ್ಕೆ ಬಂದು 1392ರವರೆಗೆ ಆಳಿದ. ಹೊನ್ನಾವರದ ಬಸವ ಕದಂಬ ಎಂಬವ ಇವನ ಮಾಂಡಲಿಕನಾಗಿದ್ದ. 1390ರ ಸುಮಾರಿನಲ್ಲಿ ವಿಜಯನಗರದ ಮಂಗಪ್ಪ ದಣ್ಣಾಯಕ ಹೈವನ ಮೇಲೆ ದಂಡೆತ್ತಿ ಬಂದಿದ್ದ. ಹೈವನ ಅನಂತರ ಮಂಗ II (1392-1401), ಕೇಶವ (1401-20) ರಾಜ್ಯವಾಳಿದರು. ಕೇಶವನ ಕಾಲದಲ್ಲಿ ವಿಜಯನಗರದ ಅಧಿಕಾರಿಗಳಾದ ನಾಗಣ್ಣ ಒಡೆಯ ಮತ್ತು ಭಾನಪ್ಪ ಒಡೆಯರು ಅವನ ವಿರುದ್ಧ ಯುದ್ಧ ಹೂಡಿದರು. ಕೇಶವ ಹಾಡುವಳ್ಳಿಯ ಸಂಗಿರಾಯನೊಡನೆಯೂ ಸೆಣಸಿದ. ಕೇಶವನ ಸೋದರಳಿಯ ಸಂಗಮ ಅಥವಾ ಸಂಗಿರಾಯ (1420-38), ಅನಂತರ ಈತನ ಸೋದರಿ ಲಕ್ಷ್ಮೀದೇವಿಯ ಮಗ ಭೈರವ I (1438-62) ಇವರು ಮುಂದಿನ ದೊರೆಗಳು. ಭೈರವ ಸಹ ವಿಜಯನಗರದ ವಿರುದ್ಧ ಬಂಡಾಯ ಹೂಡಿದ್ದ. ಇವನ ಕಾಲದಲ್ಲಿ ಯುವರಾಜನಾಗಿದ್ದ ಇವನ ಸೋದರ ಭೈರವ II ಗೇರುಸೊಪ್ಪೆಯಿಂದ ಆಳುತ್ತಿದ್ದ (1462). ಇದೇ ಕಾಲದಲ್ಲಿ ಸಂಗಿರಾಯನ ಇನ್ನೊಬ್ಬ ಸೋದರಿ ಶಂಕರದೇವಿಯ ಮಗ ಮಲ್ಲಿರಾಯ (ಜಿನದಾಸ ಸಾಳ್ವಮಲ್ಲ, 1462-80) ಹೊನ್ನಾವರದಿಂದ ಆಳುತ್ತಿದ್ದ. 1471ರಲ್ಲಿ ಇವರಿಬ್ಬರಿಗೂ ಯುದ್ಧ ನಡೆದು, ಹಾಡುವಳ್ಳಿಯ ಇದಂಗರಸನ ಸಹಾಯ ಪಡೆದಿದ್ದ ಮಲ್ಲಿರಾಯ ಜಯಗಳಿಸಿದ. ಅದೇ ವರ್ಷದಲ್ಲಿ ಎರಡನೆಯ ಭೈರವ ತೀರಿಕೊಂಡಾಗ ಗೇರುಸೊಪ್ಪೆಯನ್ನೂ ವಶಪಡಿಸಿಕೊಂಡ. ಇವನ ಸೋದರಿ ಮಲ್ಲಿದೇವಿಯ ಮಗ ದೇವರಾಯ (ಸಾಳ್ವದೇವ) ಇವನ ಕಾಲದಲ್ಲಿ ಯುವರಾಜನಾಗಿದ್ದು ಮುಂದೆ ದೊರೆಯಾದ (1481-1510). ಈತ 1481ರಲ್ಲಿ ಗೋವೆಯಲ್ಲಿದ್ದ ಆದಿಲ್‍ಶಾಹಿ ಸೇನಾನಿಯನ್ನು ಸೋಲಿಸಿ ರಾಜಾಧಿರಾಜ ರಾಜಪರಮೇಶ್ವರ ಮುಂತಾದ ಬಿರುದುಗಳನ್ನು ತಳೆದು, 1492ರಲ್ಲಿ ವಿಜಯನಗರದ ವಿರೂಪಾಕ್ಷನ ಮೇಲೂ ಯುದ್ಧಮಾಡಿದ. ಅನಂತರ ವಿಜಯನಗರದ ತುಳುವ ವಂಶದವರ ಆಳಿಕೆ ಆರಂಭವಾದಾಗ, ಅವರೊಡನೆ ರಾಜಿಯಾದಂತೆ ತೋರುತ್ತದೆ. ಈ ದೇವರಾಯನಿಗೂ ಇವನ ಅನಂತರ ರಾಜ್ಯವಾಳಿದ ಎರಡನೆಯ ದೇವರಾಯನಿಗೂ (1511-25) ಇದ್ದ ಸಂಬಂಧ ತಿಳಿಯದು. ಇವರಿಬ್ಬರ ರಾಜ್ಯ ಕಾಲದ ನಡುವೆ ಗೇರುಸೊಪ್ಪೆ ಬೇರೆಯವರ ಕೈವಶವಾಗಿರಲೂಬಹುದು. ದೇವರಾಯ ಮಡಗೋವೆಯವರೆಗೂ ದಂಡೆತ್ತಿ ಹೋಗಿ ಪೋರ್ಚುಗೀಸರನ್ನು ಎದುರಿಸಿದ. ಮುಂದಿನ ದೊರೆ ಕೃಷ್ಣದೇವ (ಸು. 1525-48) 1530ರ ಹೊತ್ತಿಗೆ ಹಾಡುವಳ್ಳಿಯ ದೊರೆಗಳನ್ನು ಸೋಲಿಸಿದ್ದ. ಕೃಷ್ಣದೇವನ ಅನಂತರ ಗೇರುಸೊಪ್ಪೆಯನ್ನು ಆಳಿದ ಚೆನ್ನಭೈರಾದೇವಿ (ಸು. 1548-99) ಪ್ರಾಯಶಃ ಹಾಡುವಳ್ಳಿ ವಂಶದವಳಾಗಿದ್ದು ಇವಳ ಕಾಲದಲ್ಲಿ ಈಕೆ ಎರಡು ರಾಜ್ಯಗಳನ್ನೂ ಒಂದುಗೂಡಿಸಿದಳು. ಕರಿಮೆಣಸಿನರಾಣಿ ಎಂದು ಪೋರ್ಚುಗೀಸರಿಗೆ ಪರಿಚಿತಳಾಗಿದ್ದ ಈಕೆ ಆದಿಲ್‍ಶಾನ ಜೊತೆ ಸ್ನೇಹ ಬೆಳೆಸಿ ಕೆಳದಿಯ ಅರಸರು ಮತ್ತು ಪೋರ್ಚುಗೀಸರ ವಿರುದ್ಧ ಸತತವಾಗಿ ಯುದ್ಧ ನಡೆಸಿದಳು. ಆದರೆ ಮುಂದೆ ಪೋರ್ಚುಗೀಸರೊಡನೆ ಸಂಧಿ ಮಾಡಿಕೊಂಡಳು. ಸು. 1599ರಲ್ಲಿ ಕೆಳದಿಯ ವೆಂಕಟಪ್ಪನಾಯಕ ಚೆನ್ನಭೈರಾದೇವಿಯನ್ನು ಸೋಲಿಸಿ ಗೇರುಸೊಪ್ಪೆ ರಾಜ್ಯವನ್ನು ವಶಪಡಿಸಿ ಕೊಂಡ. ಚೆನ್ನಭೈರಾದೇವಿ ಕೆಳದಿಯ ಸೆರೆಯಲ್ಲಿ ಸತ್ತಳು.

ಗೇರುಸೊಪ್ಪೆಯ ಅರಸರು ಕಲೆ ಹಾಗೂ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ಮೂಡಬಿದರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಯ (ಸಾವಿರಕಂಬದ ಬಸದಿ) ಮುಂದೆ ಇರುವ ಸುಂದರವಾದ ಭೈರಾದೇವಿ ಮಂಟಪ ಒಂದನೆಯ ಭೈರವನ ಕಾಣಿಕೆ. ಈತನ ರಾಣಿ ನಾಗಲೆ ಈ ಬಸದಿಯ ಮಾನಸ್ತಂಭವನ್ನು ಮಾಡಿಸಿದಳು. ಧನ್ಯಕುಮಾರ ಚರಿತೆಯನ್ನು ಬರೆದ ಆದಿಯಪ್ಪ ಒಂದನೆಯ ಭೈರವನ ಆಶ್ರಯದಲ್ಲಿದ್ದ. ಸಾಳ್ವ ಭಾರತವನ್ನು ಬರೆದ ಸಾಳ್ವ ಒಂದನೆಯ ಮಲ್ಲಿರಾಯನ ಆಸ್ಥಾನದಲ್ಲಿದ್ದ. ಕಾವ್ಯಸಾರವನ್ನು ರಚಿಸಿದ ಜೈನಪಂಡಿತ ವಾದಿವಿದ್ಯಾನಂದನನಿಗೆ ಕೃಷ್ಣದೇವ ಆಶ್ರಯವಿತ್ತಿದ್ದ.

                (ಎಸ್.ಕೆ.)