ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾವಯವ ಕೃಷಿ

ಸಾವಯವ ಕೃಷಿ ನಿಸರ್ಗದಿಂದ ಲಭಿಸುವ ಜೈವಿಕ ಮತ್ತು ಅಜೈವಿಕ ಪದಾರ್ಥಗಳನ್ನು ನೈಸರ್ಗಿಕ ಪ್ರಕ್ರಿಯೆಗಳಿಗೆ ಹಾನಿತಟ್ಟದಂತೆ ಬಳಸುತ್ತ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳುವ ಬೇಸಾಯ (ಆಗ್ರ್ಯಾನಿಕ್ ಫಾರ್ಮಿಂಗ್). 15ನೆಯ ಶತಮಾನದಲ್ಲಿ ಸಂಭವಿಸಿದ ಕೈಗಾರಿಕಾಕ್ರಾಂತಿ, 20ನೆಯ ಶತಮಾನದಲ್ಲಿ ಘಟಿಸಿದ ಎರಡು ಮಹಾಯುದ್ಧಗಳು (1914-18, 1939-45) ಮತ್ತು 19-20ನೆಯ ಶತಮಾನಗಳಲ್ಲಿ ವಿe್ಞÁನಕ್ಷೇತ್ರದಲ್ಲಾದ ಸೀಮೋಲ್ಲಂಘನ (ಬ್ರೇಕ್‍ತ್ರೂ) ಎಲ್ಲವುಗಳ ಸಮಗ್ರ ಫಲ: ನೈಸರ್ಗಿಕ ತತ್ತ್ವಗಳ ಬಗ್ಗೆ ಹೆಚ್ಚಿನ ಅರಿವು (ಇದು ವಿe್ಞÁನ), ಇದನ್ನು ಮತ್ತೆ ನಿಸರ್ಗಕ್ಕೆ ಅನ್ವಯಿಸಿ (ಇದು ತಂತ್ರವಿದ್ಯೆ) ಅಧಿಕಾಧಿಕ ಜೀವನ ಸೌಕರ್ಯಗಳ ಲಭ್ಯತೆ. ತಾತ್ತ್ವಿಕವಾಗಿ ಹೇಳುವುದಾದರೆ ಈ ವೇಳೆಗೆ ಮಾನವನಿಗೂ ನಿಸರ್ಗಕ್ಕೂ ನಡುವೆ ತಂತ್ರವಿದ್ಯೆಯ ಪಾತ್ರ ಮತ್ತು ಪ್ರಭಾವ ಅಧಿಕವಾದುವು.

ಇಂಥ ಬೆಳೆವಣಿಗೆ ಕೃಷಿಕ್ಷೇತ್ರದ ಮೇಲೆ ವ್ಯಾಪಕ ಪ್ರಭಾವ ಬೀರಿತು: ಕಡಿಮೆ ದೇಹಶ್ರಮ, ಅಧಿಕ ಯಂತ್ರಾವಲಂಬನೆ, ಹೆಚ್ಚು ಬೆಳೆ ಇಳುವರಿ ಮತ್ತು ಗರಿಷ್ಠ ವ್ಯಾಪಾರ ಲಾಭ. ತಂತ್ರವಿದ್ಯೆಯ ಅನಿರ್ಬಂಧಿತ ಬಳಕೆ ಯಿಂದ ರಸಗೊಬ್ಬರ, ಕ್ರಿಮಿಕೀಟ ಕಳೆನಾಶಕ ಔಷಧಿ ಸಿಂಪರಣೆ, ನೀರಾವರಿ ಮುಂತಾದ ಕೃತಕ ವಿಧಾನಗಳನ್ನು ನಿಸರ್ಗದ ಮೇಲೆ ಲಂಗುಲಗಾಮಿಲ್ಲದೆ ಹೇರಿ ದುಡ್ಡು ಗಳಿಸುವ ಪ್ರವೃತ್ತಿ ವರ್ಧಿಸಿತು. ಸರ್ವತ್ರ ವಾಣಿಜ್ಯ ಬೆಳೆಗಳನ್ನು (ಕಾಫಿ, ಟೀ, ಅಡಕೆ, ಹೊಗೆಸೊಪ್ಪು ಇತ್ಯಾದಿ) ಇತರ ಸಸ್ಯಪ್ರಭೇದಗಳಿಗೆ ಮಾರಕವೆನಿಸುವ ಮಟ್ಟದಲ್ಲಿ ಬೇಸಾಯ ಮಾಡಲಾಯಿತು. ಹೀಗೆ ಕೈಗಾರಿಕೀಕರಣ (ಇಂಡಸ್ಟ್ರಿಯ ಲೈಸೇಶನ್) ಮತ್ತು ವಾಣಿಜ್ಯೀಕರಣ (ಕಮರ್ಶಿಯಲೈಸೇಷನ್) ಎಂಬ ಎರಡು ದುಷ್ಪ್ರಭಾವಗಳು ಕೃಷಿಕ್ಷೇತ್ರವನ್ನು ಆಕ್ರಮಿಸಿದುವು. ಫಲವಾಗಿ ನಿಸರ್ಗದ ಹನನ ಅವ್ಯಾಹತವಾಗಿ ಮುನ್ನಡೆಯಿತು. ಸಂಕರಬೀಜ, ರಸಗೊಬ್ಬರ, ಪೀಡೆನಾಶಕ, ಯಾಂತ್ರಿಕ ಉಳುಮೆ ಹಾಗೂ ಕಟಾವು ಮತ್ತು ಕೃತಕ ನೀರಾವರಿ — ಈ ಪಂಚಾಂಗದ ಮೇಲೆ ನೂತನ ಕೃಷಿ (ನಿರವಯವ ಅಥವಾ ರಾಸಾಯನಿಕ ಬೇಸಾಯ), ವಿಶೇಷವಾಗಿ 20ನೆಯ ಶತಮಾನದ ಉತ್ತರಾರ್ಧದಲ್ಲಿ ವಿಜೃಂಭಿಸಿತು.

ಆದರೆ ಈ ಉಚ್ಛ್ರಾಯ ಸ್ಥಿತಿ ದೀರ್ಘಕಾಲ ಮೆರೆಯಲಿಲ್ಲ. 20-21ನೆಯ ಶತಮಾನಗಳ ಸಂಧಿಕಾಲದಲ್ಲಿ ನಿಸರ್ಗ ಘೋರವಾಗಿ ಮುನಿಯಿತು, ರೈತರು ಸಾಲಬಾಧೆಯಿಂದ ಕಂಗೆಟ್ಟರು, ಪರಿಸರ ಮಾಲಿನ್ಯ ಉಲ್ಬಣಿಸಿತು, ಜನಾರೋಗ್ಯ ಹದಗೆಟ್ಟಿತು ಮತ್ತು ಸಿರಿವಂತರ ಹಾಗೂ ಬಡವರ ನಡುವಿನ ಕಂದರ ಅಪಾಯಕಾರಿ ಮಟ್ಟ ಮುಟ್ಟಿತು. ಈ ಮುಖ್ಯ ಪಂಚದೋಷಗಳು ವಿಚಾರವಂತ ಮಾನವನಿಗೆ ಮೂಲಭೂತ ಚಿಂತನೆಗೈಯಲು ಪ್ರೇರಣೆ ನೀಡಿದುವು. ಪ್ರಪಂಚಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ತಂಡಗಳು ಕೈಗೊಂಡ ಪ್ರಯೋಗ ಮತ್ತು ಚಿಂತನೆಗಳ ಫಲವಾಗಿ ಮನುಕುಲ ಸುರಕ್ಷಿತವಾಗಿ ಉಳಿದಿರಲು ಸಾವಯವ ಕೃಷಿಗೆ ಶರಣಾಗುವುದೊಂದೇ ಮಾರ್ಗವೆಂಬುದು ಸ್ಪಷ್ಟವಾಯಿತು.

ವ್ಯಾಪಕವಾಗಿ ನಿಸರ್ಗ ತನ್ನ ಎಲ್ಲ ``ಅವಯವ”(ಭಾಗ)ಗಳನ್ನೂ ತನ್ನದೇ ಕ್ರಮದಲ್ಲಿ ಬಳಸುತ್ತ ನಿರಂತರ ಕ್ರಿಯಾಶೀಲವಾಗಿರುವುದು. ಆದ್ದರಿಂದ ಈ ಅವಯವಗಳನ್ನು ನಿಸರ್ಗ ನಿಯಮಾನುಸಾರ ಉಪಯೋಗಿಸಿಕೊಂಡು ನಿರ್ವಹಿಸುವ ಬೇಸಾಯವೇ ಸಾವಯವ ಕೃಷಿ ಎನ್ನಿಸುತ್ತದೆ. ನಿಸರ್ಗದೂರವಾದ ಯಂತ್ರ, ತಂತ್ರ, ರಸಗೊಬ್ಬರ, ಪೀಡೆನಾಶಕ ಮುಂತಾದವು ಇಲ್ಲಿ ನಿಷಿದ್ಧ. ಭೂಮಿ ಇಂದು ಹನಿನೀರಾವರಿ (ಡ್ರಿಪ್ ಇರಿಗೇಷನ್), ಕೊಳವೆಬಾವಿ (ಬೋರ್ ವೆಲ್), ಮಾರಿ ಹಲುಬೆ (ಟ್ರ್ಯಾಕ್ಟರ್), ರಸಗೊಬ್ಬರ ಮುಂತಾದ ಮಾನವಕೃತ ವಸ್ತು ಮತ್ತು ವಿಧಾನಗಳ ನೆಲೆ ಆಗಿದೆ. ಇಂದಿನ ಭೂಮಿಯಲ್ಲಿ ತ್ಯಾಜ್ಯ ವಸ್ತುಗಳು ಕೊಳೆತು ವಿಘಟಿಸಿ ಮತ್ತೆ ಗೊಬ್ಬರವಾಗದೆ ನೆಲ ಜಲ ವಾಯುಗಳಲ್ಲಿ ಸರ್ವತ್ರ ತುಂಬಿಕೊಂಡಿವೆ. ಭಾರೀ ಕೈಗಾರಿಕೆಗಳ ಉತ್ಪನ್ನಗಳು ಹೆಚ್ಚಿದಂತೆ ಪರಿಸರಮಾಲಿನ್ಯವೂ ಏರುತ್ತಿದೆ.

ನಿಸರ್ಗದ ಪ್ರಧಾನ ಮೂಲಭೂತ ನಿಯಮಗಳಿವು: ವೈವಿಧ್ಯ, ವಿಕೇಂದ್ರೀಯತೆ, ಸ್ವಾವಲಂಬನೆ, ಚಕ್ರೀಯ ಪರಿವರ್ತನೆ, ವ್ಯರ್ಥ ಪದಾರ್ಥರಾಹಿತ್ಯ, ಸಹಕಾರ ಮತ್ತು ಸಾಹಚರ್ಯ. ಇವುಗಳ ಮೇಲಿನ ಅವಲಂಬನೆಯೇ ಸಾವಯವ ಕೃಷಿಯ ಸಾರ. ಈ ತನಕ (21ನೆಯ ಶತಮಾನದ ಮೊದಲ ದಶಕ) ಕೈಗಾರಿಕೀಕೃತ ಮತ್ತು ವಾಣಿಜ್ಯೀಕೃತ ಕೃಷಿ ಪರಿಸರದ ವ್ಯಾಪಕ ಹಾನಿಗೆ ಕಾರಣವಾಗಿದೆ. ಇದನ್ನು ಧಿಡೀರನೆ ದುರಸ್ತಿಗೊಳಿಸುವುದೇನೂ ಸುಲಭದ ಮಾತಲ್ಲ: ಮಾನವನ ಚಿಂತನೆಯ ತಾತ್ತ್ವಿಕ ತಳಹದಿಯಲ್ಲೇ ಮೂಲಭೂತ ಪಲ್ಲಟ ಮಾತ್ರ ಇದನ್ನು ಸಾಧಿಸಿತು—ಅದೂ ತೀರ ಮಂದಗತಿಯಲ್ಲಿ. ಈ ಪಲ್ಲಟವಾದರೂ ಸಾವಯವ ಕೃಷಿಯತ್ತ ಆಗಬೇಕು. ರಸಗೊಬ್ಬರ ಉಪಯೋಗ, ಎಂಡೊಸಲ್ಛಾನ್ ಮುಂತಾದ ರಾಸಾಯನಿಕ ಪೀಡೆನಾಶಕಗಳ ಬಳಕೆ ಇತ್ಯಾದಿ ಕೃತಕ ವಿಧಾನಗಳನ್ನು ಕೈಬಿಡಬೇಕು. ಹಟ್ಟಿಗೊಬ್ಬರ, ಮಿಶ್ರಗೊಬ್ಬರ (ಕಾಂಪೋಸ್ಟ್ ಮೆನ್ಯೂರ್) ಮುಂತಾದ ನೈಸರ್ಗಿಕ ಸಸ್ಯ ಪೋಷಕಗಳನ್ನು ಹದವರಿತು ಪ್ರಯೋಗಿಸಬೇಕು. ಇವೆಲ್ಲ ಕ್ರಿಯೆಗಳು ನೈಸರ್ಗಿಕ ಪ್ರಕ್ರಿಯೆಗಳ ಜೊತೆ ಸಮ ಶ್ರುತಿ ಸಮ ಗತಿಯಲ್ಲಿದ್ದಾಗ ಮಾತ್ರ ಮನುಕುಲ ಉಳಿದೀತು. ಸಾವಯವ ಕೃಷಿಯೊಂದೇ ಇದನ್ನು ಸಾಧಿಸಬಲ್ಲದು. (ನೋಡಿ- ಸಹಜಕೃಷಿ) (ಎ.ಪಿ.ಸಿ.)