ಸಾಹು 1682-1749. ಮರಾಠ ದೊರೆ, ಶಿವಾಜಿಯ ಮೊಮ್ಮಗ, ಸಾಂಭಾಜಿಯ ಮಗ, ತಾಯಿ ಎಸುಬಾಯಿ. ಎರಡನೆಯ ಶಿವಾಜಿ ಎಂದೂ ಹೆಸರಾಗಿದ್ದ ಈತ 1682ರಲ್ಲಿ ಜನಿಸಿದ. ಔರಂಗಜೇಬ ಸಾಂಬಾಜಿಯನ್ನು ಕೊಂದು(1689) ಅವನ ಮಡದಿ ಮತ್ತು ಮಗನನ್ನು ಕೊಂಡೊಯ್ದು ದೆಹಲಿಯ ಸೆರೆಮನೆಯಲ್ಲಿಟ್ಟ. ಅಲ್ಲಿ ಔರಂಗಜೇಬನ ಎರಡನೆಯ ಮಗಳು ಜಿನಾತ್ ಉನ್ನೀಸ ಇವನನ್ನು ಮಾತೃವಾತ್ಸಲ್ಯದಿಂದ ಪೋಷಿಸುತ್ತಿದ್ದ ಪರಿಣಾಮ ಔರಂಗಜೇಬ ಇವನನ್ನು ಇಸ್ಲಾಂ ಮತಕ್ಕೆ ಮತಾಂತರಗೊಳಿಸಲಿಲ್ಲ. ಔರಂಗಜೇಬ ಇವನನ್ನು ಸಾಹು ಎಂದು ಕರೆದ. ಸಾಹು ಎಂದರೆ ಒಳ್ಳೆಯವನು ಎಂದರ್ಥ. ಔರಂಗಜೇಬನ ದೃಷ್ಟಿಯಲ್ಲಿ ಶಿವಾಜಿ ಮತ್ತು ಸಂಭಾಜಿಗಳೆಲ್ಲರೂ ಪಕ್ಕಾ ಕಳ್ಳರಾಗಿದ್ದರು. ಔರಂಗಜೇಬನ ಆಜ್ಞೆ ಮೇರೆಗೆ ಇವನಿಗೆ ಇಬ್ಬರು ಮರಾಠ ಕನ್ಯೆಯರನ್ನು ಮದುವೆ ಮಾಡಿಸಲಾಗಿತ್ತು. ಸಾಹು ಅನಾರೋಗ್ಯ ಪೀಡಿತನಾದ(1700). ಶರೀರ ಮತ್ತು ಬುದ್ಧಿ ದುರ್ಬಲಗೊಂಡವು. ಮರಾಠರನ್ನು ವಿಭಜಿಸುವ ದೃಷ್ಟಿಯಿಂದ ಔರಂಗಜೇಬ ಸಾಹುವನ್ನು ಬಿಡುಗಡೆ ಮಾಡಲು ಆಲೋಚಿಸಿದ್ದ. ಆದರೆ ಅಷ್ಟರಲ್ಲಿ ಮರಣಹೊಂದಿದ. ಇವನ ಮರಣಾನಂತರ ಇವನ ಮಗ ಆಜಮನು ಈತನನ್ನು ಬಿಡುಗಡೆಗೊಳಿಸಿದ(1707). ಅನಂತರ ಸಾಹು ಮರಾಠ ಸಾಮ್ರಾಜ್ಯವನ್ನು ವಹಿಸಿಕೊಡಬೇಕೆಂದು ತಾರಾಬಾಯಿಗೆ ಹೇಳಿಕಳುಹಿಸಿದ. ಅವಳು ಸಾಹುವನ್ನು ಮೋಸಗಾರನೆಂದು ದೂಷಿಸಿ ಮರಾಠ ಸಾಮ್ರಾಜ್ಯಕ್ಕೂ ಅವನಿಗೂ ಯಾವ ಹಕ್ಕಿಲ್ಲವೆಂದು ಘೋಷಿಸಿದಳು. ಮರಾಠ ಸಾಮ್ರಾಜ್ಯ ತನ್ನ ಪತಿ ರಾಜಾರಾಮನಿಗೆ ಸೇರಿದುದರಿಂದ ತನ್ನ ಮಗ ಮೂರನೆಯ ಶಿವಾಜಿ ನ್ಯಾಯವಾಗಿ ರಾಜ್ಯದ ಹಕ್ಕುದಾರನೆಂದು ಪ್ರತಿಪಾದಿಸಿದಳು. ಅವಳು ಸಾಹುವನ್ನು ಸೋಲಿಸಲು ಧಾನಾಜಿಜಾಧವ್ ನೇತೃತ್ವದ ಒಂದು ಸೈನ್ಯವನ್ನು ಕಳುಹಿಸಿಕೊಟ್ಟಳು. ಖೆಡ್ ಎಂಬ ಸ್ಥಳದಲ್ಲಿ ಎರಡು ಸೈನ್ಯಕ್ಕೂ ಯುದ್ಧವಾಗಿ ಧಾನಾಜಿ ಸೈನ್ಯ ಸೋಲನುಭವಿಸಿತು (1707). ತಾರಾಬಾಯಿ ತನ್ನ ಮಗನೊಡನೆ ಕೊಲ್ಲಾಪುರಕ್ಕೆ ಬಂದಳು. ಮೂರನೆಯ ಶಿವಾಜಿ ಮರಣಹೊಂದಿದಾಗ ಅವನ ಸಹೋದರ ಸಾಂಭಾಜಿ ಕೊಲ್ಲಾಪುರ ಶಾಖೆಗೆ ಛತ್ರಪತಿಯಾದರೆ, ಸಾಹು ಸತಾರಾ ಶಾಖೆಗೆ ಛತ್ರಪತಿಯಾದ. ಇದನ್ನು ಮರಾಠರು ಒಪ್ಪಿದರು. ಸಾಹು-ಸಾಂಭಾಜಿಯರ ಸಂಬಂಧ ಅನ್ಯೋನ್ಯವಾಗಿರಲಿಲ್ಲ. ಸಾಂಭಾಜಿ ಮರಾಠ ರಾಜ್ಯದ ಅರ್ಧಭಾಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದ. ಇವನು ಅದಕ್ಕಾಗಿ ಸಾಹುವನ್ನು ಕೊಲ್ಲಿಸಲು ಅನೇಕ ಸಂಚಗಳನ್ನು ರೂಪಿಸಿ ವಿಫಲನಾದ. ಸಾಹು ಮತ್ತು ಸಾಂಭಾಜಿ ಇಬ್ಬರೂ ವಾರಣ ಒಪ್ಪಂದಕ್ಕೆ ಸಹಿ ಹಾಕಿದರು(1731). ಇದರ ಪ್ರಕಾರ ಸಾಹು ಸಾಂಭಾಜಿಗೆ ವಾರಣ ಮಹಲ್, ವಾರಣ, ಕೃಷ್ಣಾ ಸಂಗಮದ ದಕ್ಷಿಣಕ್ಕಿರುವ ಸೈನ್ಯ ಠಾಣ್ಯಗಳು, ಕೋಟೆಕೊತ್ತಲಗಳನ್ನೊಳಗೊಂಡ ದೊತಾರ್ ಷಾ ಜಿಲ್ಲೆ ಬಿಟ್ಟುಕೊಟ್ಟ. ಇವನು ಕೊಪ್ಪಲ್ ಕೋಟೆಯನ್ನು ಸಾಂಭಾಜಿಗೆ ಕೊಟ್ಟು ರತ್ನಗಿರಿ ವಹಿಸಿಕೊಂಡ. ವಾರಣ ಕೃಷ್ಣಾ ಸಂಗಮದಿಂದ, ದಕ್ಷಿಣದ ಕೃಷ್ಣಾ ತುಂಗಭದ್ರಾ ಸಂಗಮದವರೆಗೂ ಇದ್ದಂತಹ ಕೋಟೆಗಳು, ಸೈನ್ಯಠಾಣ್ಯಗಳನ್ನು ಸಾಂಭಾಜಿಗೆ ನೀಡಲಾಯಿತು. ತುಂಗಭದ್ರಾದಿಂದ ರಾಮೇಶ್ವರದವರೆಗಿನ ಅರ್ಧರಾಜ್ಯದ ಜೊತೆಗೆ ಕೊಂಕಣದಲ್ಲಿ ಸಾಲ್ಸಿಯಿಂದ ಪಂಚಮಹಲ್ ವರೆಗೂ ಇರುವ ಪ್ರದೇಶಗಳನ್ನು ಸಾಂಭಾಜಿಗೆ ಬಿಟ್ಟುಕೊಡಲಾಯಿತು. ಇಬ್ಬರೂ ತಮ್ಮ ಶತ್ರುಗಳನ್ನು ನಾಶಮಾಡಿ ರಾಜ್ಯದ ಐಕ್ಯಮತ್ಯ ಸಾಧಿಸಬೇಕೆಂದು ಒಪ್ಪಿಕೊಂಡರು. ವಾರಣ ಒಪ್ಪಂದದ ಪ್ರಕಾರ ಸತಾರ ಮತ್ತು ಕೊಲ್ಲಾಪುರ ರಾಜಮನೆತನಗಳಲ್ಲಿದ್ದ ಭಿನ್ನಾಭಿಪ್ರಾಯ ಅಳಿದು ಸಾಹು ಸಾಂಭಾಜಿಯರ ಸಂಬಂಧ ಬಲವಾಯಿತು. ಸಾಂಭಾಜಿ ಅನೇಕ ಬಾರಿ ಸತಾರಾಕ್ಕೆ ಭೇಟಿಕೊಟ್ಟಾಗ ಸಾಹು ಅವನನ್ನು ಪ್ರೀತ್ಯಾದರಗಳಿಂದ ಉಪಚರಿಸಿದ. ಸಾಹು ಸು. 40 ವರ್ಷಗಳ ಕಾಲ ರಾಜ್ಯವಾಳಿದ. ಇವನ ಕೊನೆಯ ವರ್ಷಗಳು ಅನಾರೋಗ್ಯದಿಂದ ಹಾಗೂ ತನ್ನ ರಾಣಿ ಸಕ್ವಾರ್‍ಬಾಯಿ ಹಠಮಾರಿತನದಿಂದ ಕಷ್ಟಕರವಾಗಿದ್ದುವು. ತನ್ನ ಆತ್ಮೀಯ ಸ್ನೇಹಿತನಾದ ಶ್ರೀಪತಿ ಹಾಗೂ ಪ್ರೀತಿಪಾತ್ರಳಾದ ಸಗುಣಾಬಾಯಿ ಮರಣಹೊಂದಿದ್ದರಿಂದ ಏಕಾಂಗಿಯಾದ. ಇವನಿಗೆ ಮಕ್ಕಳಿರಲಿಲ್ಲವಾಗಿ ಇವನ ಸ್ಥಿತಿ ಚಿಂತಾಜನಕವಾಗಿತ್ತು. ಕೊಲ್ಲಾಪುರದ ಸಾಂಭಾಜಿಯನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ರಘೋಜಿಭೋನ್‍ಸ್ಲೆಯ ಮೂರನೆಯ ಮಗ ಮುಧೋಜಿಯನ್ನು ಒಪ್ಪಿಕೊಂಡಿದ್ದರೂ ತಾರಾಬಾಯಿ ಇದಕ್ಕೆ ಸಮ್ಮತಿಸಿರಲಿಲ್ಲ. ತನಗೆ 23 ವರ್ಷದ ರಾಜಾರಾಮನೆಂಬ ಮೊಮ್ಮಗನಿದ್ದಾನೆಂದು ತಾರಾಬಾಯಿ ಹೇಳಿದಳು. ಮರಣೋನ್ಮುಖನಾದ ಸಾಹು ತಾರಾಬಾಯಿಯ ವಿಚಿತ್ರ ಕಥೆ ನಂಬಿ, ರಾಜಾರಾಮನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಂಡ. ಸಾಹು 1749 ಡಿಸೆಂಬರ್ 15ರಂದು ಮರಣಹೊಂದಿದ. ಇವನು ಚಿಕ್ಕಂದಿನಿಂದ 1707ರವರೆಗೆ ಮೊಗಲರ ಆಸ್ಥಾನದಲ್ಲಿದ್ದ. ಅನಂತರ ತಾರಾಬಾಯಿಯಿಂದ ಅನೇಕ ಕಷ್ಟಗಳನ್ನು ಅನುಭವಿಸಬೇಕಾಯಿತು (1712). ಇವನು ಬಾಲಾಜಿ ವಿಶ್ವನಾಥನನ್ನು ಪೇಶ್ವೆಯಾಗಿ ನೇಮಿಸಿಕೊಂಡ(1713). ಇವನ ಸಾರ್ವಜನಿಕ ಮತ್ತು ಯುದ್ಧನೀತಿಗಳನ್ನು ಪೇಶ್ವೆ ರೂಪಿಸಿ, ಕಾರ್ಯಗತಗೊಳಿಸುತ್ತಿದ್ದ. ಆದರೂ ಸಾಹು ಕರ್ನಾಟಕದ ಮೇಲೆ ದಂಡಯಾತ್ರೆ ಹೊರಟು ಮೀರಜ್‍ವರೆಗೂ ಬಂದ(1739). ಆದರೆ ಇವನಿಗೆ ಯುದ್ಧಗಳಲ್ಲಾಗಲೀ ರಾಜಕೀಯ ಕ್ಷೇತ್ರದಲ್ಲಾಗಲೀ ಹೆಚ್ಚಿನ ಆಸಕ್ತಿ ಇರಲಿಲ್ಲ. ಶಾಂತಿ ಸ್ಥಾಪಿಸುವ ಕೆಲಸಗಳನ್ನು ಪೇಶ್ವೆಗಳಿಗೂ ಸಲಹೆಗಾರರಿಗೂ ವಹಿಸುತ್ತಿದ್ದ. ಈತ ಮೃದು ಸ್ವಭಾವದವನೂ ಕರುಣಾಳುವೂ ಆಗಿದ್ದ. ಜಗಳವಾಡುವುದನ್ನು ಇವನು ಸಹಿಸುತ್ತಿರಲಿಲ್ಲ. ಇವನ ನೇತೃತ್ವದಲ್ಲಿ ಬಾಜಿರಾಯ ಉಮಾಬಾಯಿ ದಾಭಡೆಗೂ(1731), ಬಾಲಾಜಿರಾಯ-ರಘೋಜಿ ಭೋನ್‍ಸ್ಲೆಗೂ ರಾಜಿ ಮಾಡಿಸಿದ(1743). ಇವನಿಗೆ ಎಲ್ಲರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವ ಗುಣವಿತ್ತು ಕೃತಜ್ಞತಾಮನೋಭಾವವಿತ್ತು. ಸೆರೆಮನೆಯಲ್ಲಿದ್ದಾಗ ಔರಂಗಜೇಬನ ಎರಡನೆಯ ಮಗಳೇ ತಾಯಿಯಂತೆ ನೋಡಿಕೊಂಡಿದ್ದರಿಂದ ಇವನು ಔರಂಗಜೇಬ ಹಾಗೂ ಮೊಗಲರನ್ನು ಭಕ್ತಿಯಿಂದ ಕಾಣುತ್ತಿದ್ದ. ತಾನು ಮೊಗಲರ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಿದ್ದ. ಇವನು ಸಂಪ್ರದಾಯವಾದಿಯಾಗಿದ್ದು ಹಳೆಯದನ್ನು ಮುರಿಯದೇ ಹೊಸದನ್ನು ಜಾರಿಗೆ ತರದೇ ಹಿಂದಿನದನ್ನೇ ಉಳಿಸಿಕೊಳ್ಳುವುದು ನೀತಿಯಾಗಿತ್ತು. ಇವನು ಧೈರ್ಯಶಾಲಿಯಾದರೂ ಯುದ್ಧಚಟುವಟಿಕೆಗಳನ್ನು ವಿರೋಧಿಸುತ್ತಿದ್ದ. ಮೊಗಲ್ ಅಂತಃಪುರದಲ್ಲಿ ಬಾಲ್ಯವನ್ನು ಕಳೆದುದರಿಂದ ಇವನು ಮೃದುಸ್ವಭಾವದವನಾಗಿಯೂ ಸೋಮಾರಿಯಾಗಿಯೂ ವಿಲಾಸಿಯಾಗಿಯೂ ಇದ್ದ. ಬೇಟೆಯಂಥ ಹವ್ಯಾಸವನ್ನಿಟ್ಟುಕೊಂಡಿದ್ದ. ಸಂಧಾನ ಮತ್ತು ರಕ್ಷಣೆ ಇವನ ಆಂತರಿಕ ಮತ್ತು ವಿದೇಶಾಂಗ ನೀತಿಯ ತಳಹದಿಯಾಗಿದ್ದವು. ಇವನ ಜಾಗೀರ್ ಪದ್ಧತಿ ರಾಷ್ಟ್ರಾಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಾಗಿರಲಿಲ್ಲ. ಇವನ ಆಳಿಕೆಯಲ್ಲಿ ರಾಜವಂಶದ ಪ್ರಭಾವ ಕಡಮೆಯಾಗಿ ಪೇಶ್ವೆಗಳು ಪ್ರಬಲರಾದರು. ರಾಜಕೀಯ ವಿಷಯಗಳಲ್ಲಿ ಇವನಿಗಿದ್ದ ಅಜ್ಞಾನ ಸ್ವಾಭಾವಿಕವಾಗಿ ಪೇಶ್ವೆಗಳ ಕೈಗೆ ಆಡಳಿತ ಹೋಗಲು ಅವಕಾಶಮಾಡಿತು. (ಬಿ.ಎಮ್.)