ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಹ್ನಿ, ಬೀರ್ಬಲ್

ಸಾಹ್ನಿ, ಬೀರ್ಬಲ್ 1891-1949. ಭಾರತೀಯ ಪ್ರಾಗ್ಸಸ್ಯ ವಿಜ್ಞಾನಿ (ಪೇಲಿಯೊಬಾಟನಿಸ್ಟ್). 1891 ನವೆಂಬರ್ 11ರಂದು ಜನಿಸಿದರು. ಈಗ ಪಾಕಿಸ್ತಾನದಲ್ಲಿರುವ ಶಹನಾಪುರದಲ್ಲಿ ತಂದೆ ರೂಚಿರಾಮ್ ಸಾಹ್ನಿ ಲಾಹೋರಿನ ಕಾಲೇಜಿನಲ್ಲಿ ರಸಾಯನವಿಜ್ಞಾನ ಪ್ರಾಧ್ಯಾಪಕ. ಮಗ ಲಾಹೋರ್ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಶ್ರೇಣಿಯಲ್ಲಿ ಸಸ್ಯವಿಜ್ಞಾನ ಪದವೀಧರನಾದಾಗ (1911) ಈತ ಆಡಳಿತಾಧಿಕಾರಿ ಪರೀಕ್ಷೆಗೆ ಕೂರಬೇಕೆಂಬುದು ತಂದೆಯ ಅಭಿಲಾಷೆ. ಆದರೆ ಮಗನ ಒಲವಿದ್ದುದು ಸಸ್ಯವಿಜ್ಞಾನದಲ್ಲಿ, ಉನ್ನತಾಧ್ಯಯನದತ್ತ.

ಇವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಎಮಾನ್ಯುಯಲ್ ಕಾಲೇಜ್ ಸೇರಿದರು. ಅಧ್ಯಾಪಕ ಅಲೆಕ್ಸಾಂಡರ್‍ಅವರ ಹಿರಿತನದಲ್ಲಿ ಸ್ನಾತಕೋತ್ತರ ಪದವಿಗಳಿಸಿ ಪ್ರಾಗ್ಸಸ್ಯವಿಜ್ಞಾನಿ ಎ.ಸಿ.ಆರ್ನಾಲ್ಡ್‍ಅವರ ಮಾರ್ಗದರ್ಶನದಲ್ಲಿ ಇದೇ ವಿಷಯ ಕುರಿತು ಸಂಶೋಧನೆ ಮಾಡಲು ಮುಂದಾದರು. ಇವರ ಸೂಕ್ಷ್ಮಬುದ್ಧಿ ಮತ್ತು ವಿಷಯಮಂಡನ ಕೌಶಲ ಗಮನಿಸಿದ ಆರ್ನಾಲ್ಡ್ ಇವರಿಗೆ ಗೊಂಡ್ವಾನ ಮತ್ತು ಇತರ ಪ್ರದೇಶಗಳ ಸಸ್ಯಾವಶೇಷಗಳ ಅಧ್ಯಯನಕಾರ್ಯ ವಹಿಸಿದರು. ಅಂದು ಲಾಸನ್ ಎಂಬವರ ಸಸ್ಯವಿಜ್ಞಾನ ಪಠ್ಯಪುಸ್ತಕ ಶಾಲಾ ಕಾಲೇಜುಗಳಲ್ಲಿ ಪ್ರಚಾರದಲ್ಲಿತ್ತು. ಭಾರತೀಯ ಸಸ್ಯ ಸಂಪತ್ತನ್ನೂ ಇದರೊಳಗೆ ಅಳವಡಿಸುವ ಹೊಣೆಯನ್ನು ಖುದ್ದು ಲಾಸನ್ ಅವರೇ ಸಾಹ್ನಿಯವರಿಗೆ ಒಪ್ಪಿಸಿದರು. ಈ ಸಾಹ್ನಿ-ಸುಧಾರಿತ ಲಾಸನ್ ಪುಸ್ತಕ ಇಂದಿಗೂ ಒಂದು ಉತ್ತಮ ಗ್ರಂಥವಾಗಿ ಪ್ರಸ್ತುತವೆನಿಸಿದೆ.

1919ರಲ್ಲಿ ಡಾಕ್ಟೊರೇಟ್ ಪದವಿ ಪಡೆದು ಭಾರತಕ್ಕೆ ಮರಳಿ, ಕಾಶಿ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗದಲ್ಲಿ ಅಧ್ಯಾಪಕರಾಗಿ ನೇಮನಗೊಂಡರು. ಸಂಶೋಧನಾ ಕಾರ್ಯವೂ ಸೇರಿದಂತೆ ಎಲ್ಲದರಲ್ಲೂ ಅನುರೂಪರಾದ ಸಾವಿತ್ರಿಯವರನ್ನು ವಿವಾಹವಾದರು (1920). ಲಖನೌ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ಕಾರ್ಯಕ್ಷೇತ್ರ ಬದಲಾಯಿಸಿದರು (1921). ಅಲ್ಲಿ ಸ್ವತಂತ್ರ ಸಸ್ಯವಿಜ್ಞಾನವಿಭಾಗ ಪ್ರಾರಂಭಿಸಿ, ಅನನ್ಯವಾಗಿ ಬೆಳೆಸಿದ ಹೆಗ್ಗಳಿಕೆ ಇವರದು. ವಿಶ್ವವಿದ್ಯಾಲಯದ ಅತಿ ಹಿರಿಯ ಪ್ರಾಧ್ಯಾಪಕರಾಗಿದ್ದರೂ ಸ್ನಾತಕೋತ್ತರ ತರಗತಿಗಳ ಜೊತೆಜೊತೆಗೆ ತಪ್ಪದೇ ಪದವಿ ತರಗತಿಗಳಿಗೂ ಬೋಧಿಸಿ ಹೆಸರು ಗಳಿಸಿದರು. ಇವರ ಸತ್ತ್ವ ಮತ್ತು ಸ್ಫೂರ್ತಿಯುತ ಬೋಧನೆ ಅಸಂಖ್ಯ ವಿದ್ಯಾರ್ಥಿಗಳನ್ನು ಈ ವಿಭಾಗಕ್ಕೆ ಆಕರ್ಷಿಸಿತು. ಅದರ ಒಂದು ಪರಿಣಾಮ: ವಿಭಾಗದಲ್ಲಿ ಸಂಶೋಧನ ಕಾರ್ಯಕ್ಕೆ ಸ್ಥಳಾಭಾವ. ಹಿಂಜರಿಯಲಿಲ್ಲ; ಗ್ರಂಥಾಲಯದ ಬೀರುಗಳ ಹಿಂದಿನ ಇಕ್ಕಟ್ಟಿನ ಜಾಗದಲ್ಲೇ ಅದನ್ನೂ ನಡೆಸಿದರು. ತಮ್ಮ ಡಾಕ್ಟೊರೇಟ್ ಪದವಿಗಾಗಿ ಆರ್ನಾಲ್ಡ್ ಜೊತೆ ನಡೆಸಿದ ಗೊಂಡ್ವಾನ ಸಸ್ಯಾವಶೇಷಗಳ ಸಂಶೋಧನೆಯ ಪುನರವಲೋಕನ; ಜೊತೆಗೇ ಭಾರತದ ಸಸ್ಯಾವಶೇಷಗಳ ಅಭ್ಯಾಸ, ಅಧ್ಯಯನ ವಿವಿಧ ಪ್ರಭೇದಗಳ ವಿಂಗಡನ. ಬಿಹಾರ ಪ್ರಾಂತ್ಯದ ರಾಜಮಹಲ್ ಬೆಟ್ಟಗಳಲ್ಲಿಯ ಗ್ಲಾಸಾಪ್ಟರಿಸ್ ಸಸ್ಯಗಳ ಬಗ್ಗೆ ಮತ್ತು ಹಿಮ್ಮತ್ ನಗರದ ಸುಣ್ಣಕಲ್ಲು ರೂಪದ ಮರಳುಕಲ್ಲುಗಳ ಒಣ ನೆಲದಲ್ಲಿ ಬೆಳೆಯುವ ಫರ್ನ್ ಗಿಡಗಳ ಅವಶೇಷಗಳ ಬಗ್ಗೆ ಕೃತಿಗಳು ಪ್ರಪಂಚದ ಪ್ರಾಗ್ಸಸ್ಯವಿಜ್ಞಾನಿಗಳ ಅಪಾರ ಮೆಚ್ಚುಗೆ ಗಳಿಸಿದುವು.

ಭೂಗರ್ಭಶಾಖೆಗೆ ತಜ್ಞ ಸಲಹಾಕಾರರಾಗಿಯೂ ಕೆಲಸ ನಿರ್ವಹಿಸಿದರು; ಭೂಮಿಯ ವಿವಿಧ ಪದರಗಳಲ್ಲಿ ದೊರೆತ ಸಸ್ಯಗಳ ಸಾದೃಶ್ಯ ಮತ್ತು ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿ ವಯೋಮಾನ ಮತ್ತು ಅವುಗಳ ವಿವಿಧ ಯುಗಗಳ ಬೂಷ್ಟು ಜಾತಿಯ ಸಸ್ಯಗಳ ಚೂರುಗಳು, ಪಾಚಿಜಾತಿಯ ಸಸ್ಯ ಬೀಜಕಗಳು, ಫರ್ನ್ ಸಸ್ಯದ ಸ್ಪೊರ್ಯಾಂಜಿಯಮ್‍ಗಳ ಶೋಧನೆ; ದಖನ್ ಸ್ತಂಭ ಶಿಲಾರಚನೆಯಲ್ಲಿಯ ಸಸ್ಯಾವಶೇಷಗಳು ಈಯೊಸೀನ್ ಯುಗಕ್ಕೆ ಸೇರಿದವೆಂಬ ಪ್ರಮುಖ ನಿರ್ಧಾರ. ಕಾಶ್ಮೀರ ಕಣಿವೆಯ ಕರೇವದಲ್ಲಿ ಸಸ್ಯ ನಿಕ್ಷೇಪಗಳು ಪ್ಲೀಯಿಸ್ಟೊಸೀನ್ ಯುಗದಲ್ಲಿ ಹಿಮಾಲಯದಲ್ಲಾದ ಭಾರಿ ಬದಲಾವಣೆಯ ಸೂಚಕವೆಂಬ ಮಹತ್ತ್ವದ ಶೋಧನೆ ಇವರ ಯಶೋಗಾಥೆಯ ನವಿಲುಗರಿ. ಕೊಲ್ಕತ ಸಂಗ್ರಹಾಲಯದಲ್ಲಿ ಲಭ್ಯವಿದ್ದ ಭಾರತದ ಸಸ್ಯಾವಶೇಷಗಳ ಅಧ್ಯಯನದಿಂದ ದೊರೆತ ಮಾಹಿತಿಯನ್ನು ವಿಮರ್ಶಿಸಿ, ಕ್ರೋಡೀಕರಿಸಿ ಹಲವಾರು ಬಹೂಪಯೋಗೀ ಲೇಖನಗಳ ಪ್ರಕಟಣೆ ಇವರ ವಿಶ್ಲೇಷಕ ಸಾಮಥ್ರ್ಯಕ್ಕೆ ಹಿಡಿದ ಕನ್ನಡಿ. ಇವರ ಬಹುಮುಖ ಪ್ರತಿಭೆ ಗಮನಿಸಿ ಇವರಿಗೆ ಕೇಂಬ್ರಿಜ್ ವಿಶ್ವವಿದ್ಯಾಲಯ ಭಾರತದ ಮೊತ್ತಮೊದಲಿಗರಾಗಿ ಎಸ್‍ಸಿ.ಡಿ ಪದವಿಕೊಟ್ಟು ಗೌರವಿಸಿತು (1929).

ಆಮ್‍ಸ್ಟಡ್ರ್ಯಾಮಿನಲ್ಲಿ ನಡೆದ 6ನೆಯ ಅಂತಾರಾಷ್ಟ್ರೀಯ ಸಸ್ಯವಿಭಾಗದ ಕಾಂಗ್ರೆಸ್‍ನಲ್ಲಿ ಇವರು ಭಾರತ ಹಾಗೂ ಸೈಬೀರಿಯ, ಚೀನ, ಕೊರಿಯ ಮುಂತಾದ ದೇಶಗಳಲ್ಲಿ ಗೊಂಡ್ವಾನ ಪದರಗಳಲ್ಲಿಯ ಸಸ್ಯಾವಶೇಷಗಳ ತುಲನಾತ್ಮಕ ಅಧ್ಯಯನ ಕುರಿತು ಮಂಡಿಸಿದ ಪ್ರಬಂಧ ಇವರನ್ನು ಪ್ರಪಂಚದ ಶ್ರೇಷ್ಠ ಪ್ರಾಗ್ಸಸ್ಯವಿಜ್ಞಾನಿಗಳ ಸಾಲಿಗೆ ಸೇರಿಸಿತು. ಇಂಗ್ಲೆಂಡಿನ ರಾಯಲ್ ಸೊಸೈಟಿಯ ಸದಸ್ಯತ್ವ ದೊರೆಯಿತು. ಭಾರತೀಯ ವಿಜ್ಞಾನ ಕಾಂಗ್ರೆಸ್‍ನ ಅಧ್ಯಕ್ಷರಾದರು (1940). ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಗೌರವ ಸದಸ್ಯತ್ವ ದೊರೆಯಿತು (1948).

ಸಾಹ್ನಿಯವರ ಆಸಕ್ತಿ ಬಹುಮುಖಿಯಾದುದು. 1945ರಲ್ಲಿ ಇವರು ಬರೆದ “ಪುರಾತನ ಕಾಲದ ಭಾರತದಲ್ಲಿ ನಾಣ್ಯ ತಯಾರಿಕೆಯ ಯಂತ್ರ ಕೌಶಲ” ಎಂಬ ಸಂಶೋಧನ ಲೇಖನ ಇದಕ್ಕೊಂದು ನಿದರ್ಶನ. ಕಾಶ್ಮೀರದ ಕೊಕ್ರಕಾಟದಲ್ಲಿ ಇದು ದೊರೆತ ಟೆರ್ರಾಕೋಟ ನಾಣ್ಯಗಳ ಅಚ್ಚುಗಳನ್ನು ಭಾರತದ ಇತರೆಡೆ ದೊರೆತ ಅಚ್ಚುಗಳೊಡನೆ ಮಾಡಿದ ತುಲನೆ. ಕೊಕ್ರಕಾಟದಲ್ಲಿ ದೊರೆತ ಅಚ್ಚು ಬಹುಧಾನ್ಯಕ ಭಾಗವಾದ ಯೌಧೇಯ ರಾಜ್ಯಕ್ಕೆ ಸೇರಿದುದು ಎಂಬ ಅಂಶ ಬಲು ಗಮನಾರ್ಹ ಸಂಶೋಧನೆ. ಈ ಯೌಧೇಯ ರಾಜ್ಯದ ಉಲ್ಲೇಖ ಮಹಾಭಾರತದಲ್ಲಿರುವು ದರಿಂದ, ಮಹಾಭಾರತದ ಕಾಲನಿರ್ಣಯ ಮಾಡಿದಂತಾಯಿತು.

ಅಪಾರ ಸಂಖ್ಯೆಯಲ್ಲಿ ವಿಚಾರವಂತ ವಿದ್ಯಾರ್ಥಿ ಸಂಶೋಧಕರನ್ನು ಪ್ರಾಗ್ಸಸ್ಯವಿಜ್ಞಾನ ಪ್ರಪಂಚಕ್ಕೆ ಪರಿಚಯಿಸಿ ತಮ್ಮ ಜೀವನದ ಮಹತ್ತರ ಕನಸಾದ ಪ್ರಾಗ್ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆಯ ಸ್ಥಾಪನೆಯಾದ ಆರು ದಿನಗಳಲ್ಲೇ ಅಕಾಲ ಮರಣಕ್ಕೀಡಾದುದೊಂದು ದುರಂತ. ಇವರ ಪತ್ನಿ ಸಾವಿತ್ರಿ ಸಾಹ್ನಿ ತಮ್ಮ ಪತಿಯ ಸ್ಮರಣಾರ್ಥ ಸಾಹ್ನಿ ಇನ್‍ಸ್ಟಿಟ್ಯೂಟ್ ಆಫ್ ಪೇಲಿಯೋಬಾಟನಿಯನ್ನು ಬೆಳೆಸಿದುದು ಇವರ ಸಾರ್ಥಕ ಜೀವನಕ್ಕೆ ಸಂದ ಮಹತ್ತರ ಗೌರವವಾಗಿದೆ. (ಎಸ್.ಎಚ್.ಬಿ.ಎಸ್.)