ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಕ್ಲೇರ್, ಅಪ್ಟನ್

ಸಿಂಕ್ಲೇರ್, ಅಪ್‍ಟನ್ 1878-1968. ಅಮೆರಿಕದ ಕಾದಂಬರಿಕಾರ, ಸಮಾಜ ಸುಧಾರಕ. ಬಾಲ್ಟಿಮೋರ್‍ನಲ್ಲಿ ಜನಿಸಿದ ಈತ ಬಡತನದಲ್ಲಿ ಬೆಳೆದ. ಹದಿನೈದನೆಯ ವಯಸ್ಸಿನಿಂದಲೇ ಅದ್ಭುತ ಕಥೆಗಳನ್ನು ಬರೆಯಲು ಆರಂಭಿಸಿದ. ಮಕ್ಕಳ ಪುಸ್ತಕ, ಸಮಾಜ ಅಧ್ಯಯನ, ಆರೋಗ್ಯಾಧ್ಯಯನ, ಧಾರ್ಮಿಕಾಧ್ಯಯನಗಳಿಂದ ಹಿಡಿದು ಕಾದಂಬರಿ, ಸಣ್ಣಕಥೆಗಳವರೆಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾನೆ (1901-40). ದಿ ಜಂಗಲ್ (1906), ಕಿಂಗ್ ಕೋಲ್ (1917), ದಿ ಪ್ರಾಫಿಟ್ಸ್ ಆಫ್ ರಿಲಿಜನ್ (1918), ದಿ ಬ್ರಾಸ್ ಚೆಕ್ (1919), ದಿ ಗೂಸ್ ಸ್ಟೆಪ್ (1923) ಮೊದಲಾದ ಕಾದಂಬರಿಗಳು ಸಮಕಾಲೀನ ಜೀವನದ ಅನೇಕ ಸಮಸ್ಯೆಗಳನ್ನು ಚಿತ್ರಿಸುತ್ತವೆ. ಈತನ ಅತ್ಯುತ್ತಮ ಕೃತಿಗಳಲ್ಲಿ ಒಂದಾದ ದಿ ಜಂಗಲ್ ಕಾದಂಬರಿ ಅಮೆರಿಕದ ಮಾಂಸ ಉದ್ಯಮದ ಕೊಳಕನ್ನು ಬಯಲಿಗೆಳೆಯಿತು; ಅಲ್ಲಿ ಪ್ರಥಮ ಬಾರಿಗೆ ಶುದ್ಧಾಹಾರದ ಕಾನೂನು ಜಾರಿಗೊಳ್ಳಲು ಈ ಕಾದಂಬರಿಯೇ ಮೂಲ ಪ್ರೇರಣೆಯಾಯಿತು. ಲ್ಯಾನಿಬಡ್ ಎಂಬ ಪಾತ್ರವನ್ನು ನಾಯಕ ಪಾತ್ರವಾಗಿ ಮಾಡಿಕೊಂಡು ಈತ ಸುಮಾರು ಹನ್ನೆರಡು ಕಾದಂಬರಿಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಡ್ರೇಗನ್ ಟೀತ್ (1942) ಪ್ರಸಿದ್ಧವಾದುದು. 1943ರಲ್ಲಿ ಈ ಕಾದಂಬರಿ ಪುಲಿಟ್ಜರ್ ಬಹುಮಾನಗಳಿಸಿತು. ಸಮಸ್ಯೆಗಳತ್ತ ಸಮಾಜದ ಗಮನ ಸೆಳೆಯುವುದು ಸಿಂಕ್ಲೇರನ ಮೂಲೋದ್ದೇಶವಾಗಿತ್ತು. ಹಾಗಾಗಿ ಈತ ತನ್ನ ಕೃತಿಗಳಲ್ಲಿ ಸೃಜನಶೀಲತೆಯ ಕಡೆಗೆ ಹೆಚ್ಚಾಗಿ ಗಮನ ಹರಿಸಲಿಲ್ಲ. ಕ್ಲಾಕ್‍ಫಿಚ್, ಫ್ರೆಡರಿಕ್ ಗ್ಯಾರಿಸನ್ ಮತ್ತು ಆರ್ಥರ್ ಸ್ಟರ್ಲಿಂಗ್ ಇವು ಸಿಂಕ್ಲೇರ್ ಬಳಸಿದ ಕೆಲವು ಗುಪ್ತನಾಮಗಳು. ಈತ ಮೈ ಲೈಫ್‍ಟೈಮ್ ಇನ್ ಲೆಟರ್ಸ್ (1960) ಎಂಬ ಆತ್ಮಕಥೆಯೊಂದನ್ನು ಪ್ರಕಟಿಸಿದ್ದಾನೆ. (ಎನ್.ಎಸ್.ಎಲ್.)