ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಕ್ಲೇರ್, ಲೂಯಿಸ್

ಸಿಂಕ್ಲೇರ್, ಲೂಯಿಸ್ 1885-1951. ನೊಬೆಲ್ ಪ್ರಶಸ್ತಿ ಪುರಸ್ಕøತ ಅಮೆರಿಕದ ಪ್ರಸಿದ್ಧ ಕಾದಂಬರಿಕಾರ, ಶ್ರೇಷ್ಠ ವಿಡಂಬನಕಾರ. ನ್ಯೂಯಾರ್ಕ್ ನಗರದಲ್ಲಿ ಸಂಪಾದಕ ಸ್ಥಾನದಲ್ಲಿ ಕೆಲಸ ಮಾಡುತ್ತ ಸಾಹಿತ್ಯ ರಚನೆಯಲ್ಲಿ ತೊಡಗಿದ. ಮೊದಮೊದಲು ಬರೆದ ದಿ ಟ್ರಯಲ್ ಆಫ್ ದಿ ಹಾಕ್(1915), ದಿ ಇನ್ನೊಸೆಂಟ್ಸ್(1917) ಮೊದಲಾದ ಕಾದಂಬರಿಗಳು ಜನಾದರಣೆ ಪಡೆಯಲಿಲ್ಲ. ದಿ ಜಾಬ್(1917) ಇವನ ಮೊದಲ ಉತ್ತಮ ಕೃತಿಯಾದರೂ ದಿ ಮೇನ್‍ಸ್ಟ್ರೀಟ್(1920) ಕಾದಂಬರಿ ಎಲ್ಲರ ಗಮನ ಸೆಳೆಯಿತು. 1922ರಲ್ಲಿ ಪ್ರಕಟವಾದ ಬ್ಯಾಬಿಟ್ ಗ್ರಂಥದ ಮೂಲಕ ಇವನು ಅತ್ಯಂತ ಪ್ರಸಿದ್ಧನೂ ವಿವಾದಾತ್ಮಕ ಬರೆಹಗಾರನೂ ಆದ. ಆರೋಸ್ಮಿತ್(1925) ಕೃತಿಯಲ್ಲಿ ಒಬ್ಬ ಬ್ಯಾಕ್ಟಿರಿಯಾಲಜಿಸ್ಟನ ವೃತ್ತಿಜೀವನದ ಏರಿಳಿತಗಳ ಚಿತ್ರಣವಿದೆ. ಎಲ್ಮರ್ ಜೆಂಟ್ರಿ(1927), ಡ್ಯಾಡ್ಸ್‍ವರ್ತ್(1929), ಇಟ್ ಕೆನ್‍ನಾಟ್ ಹ್ಯಾಪನ್ ಹಿಯರ್(1935)- ಇವು ಇವನ ಇತರ ಕಾದಂಬರಿಗಳು. ಇವನ ಬಹುತೇಕ ಕೃತಿಗಳು ಸಂಶೋಧನೆಯನ್ನಾಧರಿಸಿವೆ. ಇವನಿಗೆ 1930ರಲ್ಲಿ ನೊಬೆಲ್ ಪ್ರಶಸ್ತಿ ದೊರತಿದೆ. (ಎನ್.ಎಸ್.ಎಲ್.)