ಸಿಂಗಪುರ ಆಗ್ನೇಯ ಏಷ್ಯದಲ್ಲಿರುವ ಒಂದು ಸ್ವತಂತ್ರ ದ್ವೀಪರಾಷ್ಟ್ರ. ಈ ಪುಟ್ಟ ರಾಷ್ಟ್ರ ದಕ್ಷಿಣ ಚೀನ ಸಮುದ್ರ ಮತ್ತು ಹಿಂದೂ ಮಹಾಸಾಗರ ಸೇರುವ ಮಲಯ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿದೆ. ಮುಖ್ಯ ದ್ವೀಪದ ವಿಸ್ತೀರ್ಣ 572 ಚ.ಕಿಮೀ. ಇದರ ಸುತ್ತಲೂ ಇರುವ ಸು.50ಕ್ಕೂ ಮಿಕ್ಕಿದ ಸಣ್ಣಪುಟ್ಟ ದ್ವೀಪಗಳ ಒಟ್ಟು ವಿಸ್ತಾರ 46 ಚ.ಕಿಮೀ. ಮುಖ್ಯ ದ್ವೀಪ ಪೂರ್ವ ಪಶ್ಚಿಮವಾಗಿ 42 ಕಿಮೀ, ಉತ್ತರ ದಕ್ಷಿಣವಾಗಿ 23 ಕಿಮೀ ಇದೆ. ಇದರ ಒಟ್ಟು ಕರಾವಳಿ ಉದ್ದ 51 ಕಿಮೀ. ಜನಸಂಖ್ಯೆ 3,777,000.

ಸಿಂಗಪುರ ದ್ವೀಪ ಸಮಭಾಜಕ ವೃತ್ತಕ್ಕೆ ಹತ್ತಿರವಾಗಿದ್ದು, ತೇವ ಭರಿತವಾದ ಮತ್ತು ಅತ್ಯಧಿಕ ಉಷ್ಣಾಂಶದಿಂದ ಕೂಡಿದ ವಾಯುಗುಣ ಹೊಂದಿದೆ. ಸರಾಸರಿ 27ºಸೆ ಉಷ್ಣಾಂಶವಿರುವುದಲ್ಲದೆ, ಕಡಲಿನ ಬಿಸಿಗಾಳಿಯಿಂದ ಕೆಲವೊಮ್ಮೆ 31ºಸೆ ತಲುಪುವುದು. ವಾರ್ಷಿಕ ಸರಾಸರಿ 2,400 ಮಿಮೀ ಮಳೆ ಬೀಳುತ್ತದೆ. ನವೆಂಬರ್‍ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಈಶಾನ್ಯ ಮಾರುತಗಳಿಂದ ಅತ್ಯಧಿಕ ಮಳೆಯಾಗುತ್ತದೆ. ಜೂನ್‍ನಿಂದ ಅಕ್ಟೋಬರ್ ತಿಂಗಳವರೆಗೆ ಆಗ್ನೇಯ ಮಾರುತಗಳು ಬೀಸುವುದರಿಂದ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುತ್ತದೆ.

ಹೆಚ್ಚಾದ ಮಾನವ ವಸತಿ ಸಿಂಗಪುರದ ಪ್ರಕೃತಿದತ್ತ ಸಸ್ಯವರ್ಗದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಒಂದು ಕಾಲದಲ್ಲಿ ದಟ್ಟಕಾಡುಗಳಿಂದ ಈ ದ್ವೀಪಗಳು ಆವರಿಸಿದ್ದುವು, ಆದರೆ ಜನಸಂಖ್ಯೆ ಹೆಚ್ಚಾದಂತೆ ಹೊಸ ವಸತಿ ನಿರ್ಮಾಣಗಳಿಗೆ ಕಾಡುಗಳನ್ನು ಕಡಿಯಲಾಯಿತು. ಕೆಲವು ಪ್ರದೇಶದಲ್ಲಿ ಜಾಜೀಕಾಯಿ, ಲವಂಗ, ಮೆಣಸು ಇತ್ಯಾದಿ ಉಷ್ಣವಲಯದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಅನಂತರ ಈ ಪ್ರದೇಶದಲ್ಲಿ ರಬ್ಬರ್ ಮತ್ತು ತೆಂಗಿನ ತೋಟಗಳನ್ನು ಅಭಿವೃದ್ಧಿಗೊಳಿ ಸಲಾಯಿತು.

ಸಮುದ್ರಮಟ್ಟಕ್ಕಿಂತ 177 ಮೀ ಎತ್ತರವಾಗಿರುವ ತಿಮಾಹ ಬೆಟ್ಟ ಇಲ್ಲಿನ ಎತ್ತರ ಪ್ರದೇಶವಾಗಿದೆ. ಸೇ.50 ಭಾಗ ಭೂ ಪ್ರದೇಶ ಕಟ್ಟಡಗಳಿಂದ ತುಂಬಿದೆ. ಸೇ.40 ಭಾಗ ತೆರೆದ ಪ್ರದೇಶ, ಪಾರ್ಕ್, ಮಿಲಿಟರಿ ನೆಲೆ, ನೀರು ಮತ್ತು ಖರಾಬು ಭೂಮಿ ಆವರಿಸಿದೆ. ಸೇ. 2 ಭಾಗ ಭೂಮಿ ಮಾತ್ರ ಕೃಷಿ ಯೋಗ್ಯವಾಗಿದೆ.

ಸಿಂಗಪುರ ಪ್ರಪಂಚದಲ್ಲಿಯೇ ಅತ್ಯಂತ ಜನಸಾಂದ್ರತೆಯಿಂದ ಕೂಡಿದ ದೇಶಗಳಲ್ಲೊಂದಾಗಿದೆ. ಇಲ್ಲಿ ನೆಲೆಸಿರುವ ಜನರ ಪೂರ್ವಿಕರು ಚೀನ, ಮಲೇಷಿಯ, ಇಂಡೊನೇಷ್ಯ ಮತ್ತು ಭಾರತದಿಂದ ವಲಸೆ ಬಂದವರೆಂದು ತಿಳಿದು ಬರುತ್ತದೆ. ಸೇ. 75ರಷ್ಟು ಜನ ಚೀನ ಮೂಲದವರಾಗಿದ್ದಾರೆ. ಮಲಯ ಮತ್ತು ಭಾರತೀಯರು ಸೇ.15 ಎಂದು ಅಂದಾಜು ಮಾಡಲಾಗಿದೆ. ಉಳಿದವರು ಯುರೇಷಿಯ ದವರು. ಇಲ್ಲಿ ನಾಲ್ಕು ಮುಖ್ಯ ಆಡಳಿತ ಭಾಷೆಗಳಿವೆ : ಇಂಗ್ಲಿಷ್, ಚೀನಿ, ಮಲೈ ಮತ್ತು ತಮಿಳು. ಮಲೈ ಇಲ್ಲಿನ ರಾಷ್ಟ್ರಭಾಷೆ. ಆಡಳಿತ ಮತ್ತು ಶಾಲಾ ಕಾಲೇಜುಗಳಲ್ಲಿ ಇಂಗ್ಲಿಷನ್ನು ಬಳಸಲಾಗುತ್ತಿದೆ. ಸಿಂಗಪುರದಲ್ಲಿ ಯಾವುದೇ ಆಡಳಿತಾತ್ಮಕ ಧರ್ಮವಿಲ್ಲ. ರಾಷ್ಟ್ರದ ಸಂವಿಧಾನ ಎಲ್ಲ ಧರ್ಮಕ್ಕೂ ಸಮಾನತೆ ತೋರಿದೆ. ಮಲೈಯನ್ನರು ಹೆಚ್ಚಾಗಿ ಇಸ್ಲಾಮ್ ಧರ್ಮವನ್ನು ಆಚರಿಸಿದರೆ, ಚೀನದವರು ಬೌದ್ಧಧರ್ಮವನ್ನೂ ತಾವೊ ಧರ್ಮವನ್ನೂ ಅನುಸರಿಸುತ್ತಾರೆ. ಭಾರತೀಯರು ಸಿಖ್ ಮತ್ತು ಹಿಂದು ಧರ್ಮವನ್ನು ಅನುಸರಿಸುತ್ತಾರೆ. ಕೆಲವು ಭಾರತೀಯರು, ಚೀನದವರು, ಯುರೋಪಿಯನ್ನರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ.

ಸಿಂಗಪುರ ಆಗ್ನೇಯ ಏಷ್ಯದಲ್ಲಿಯೇ ಅತ್ಯಂತ ಹೆಚ್ಚಿನ ಸಾಕ್ಷರತೆ ಇರುವ ರಾಷ್ಟ್ರಗಳಲ್ಲೊಂದು. ಇಲ್ಲಿ ಸೇ.90 ಭಾಗ ಜನ ಓದು ಬರೆಹ ಬಲ್ಲವರಾಗಿದ್ದಾರೆ. ಸೇ.50ರಷ್ಟು ವಿದ್ಯಾವಂತರು ಎರಡು ಅಥವಾ ಮೂರು ಭಾಷೆ ಬಲ್ಲವರಾಗಿದ್ದಾರೆ. ಇಲ್ಲಿ ಉನ್ನತ ಶಿಕ್ಷಣ ಹೊಂದಲು ರಾಷ್ಟ್ರೀಯ ಸಿಂಗಪುರ ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಅನೇಕ ತಾಂತ್ರಿಕ ತರಬೇತಿ ಸಂಸ್ಥೆಗಳಿವೆ.

ಸಿಂಗಪುರ ವೈವಿಧ್ಯಮಯ ಸಂಸ್ಕøತಿಯನ್ನು ಹೊಂದಿದೆ. ಹೆಚ್ಚಿನ ಜನ ಪಾಶ್ಚಿಮಾತ್ಯ ಉಡುಪನ್ನು ಧರಿಸುತ್ತಾರಾದರೂ, ಭಾರತೀಯರು ಮತ್ತು ಮಲೈಯದವರು ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುತ್ತಾರೆ. ಇಲ್ಲಿ ಕಲೆ, ಸಂಗೀತ ಮತ್ತು ಸಾಹಿತ್ಯಗಳ ವಿವಿಧ ಸಾಂಸ್ಕøತಿಕ ಚಟುವಟಿಕೆಗಳು ಪ್ರವರ್ಧಮಾನದಲ್ಲಿವೆ. ಸಿಂಗಪುರದ ಸಿಂಪೋನಿ ಸಂಗೀತ ವಾದ್ಯಮೇಳ ಅತ್ಯಂತ ಜನಪ್ರಿಯ. ಎರಡು ವರ್ಷಕ್ಕೊಮ್ಮೆ ನಡೆಸುವ ನಾಟಕಗಳು ಅನೇಕ ಅಂತಾರಾಷ್ಟ್ರೀಯ ಸಮುದಾಯವನ್ನು ಆಕರ್ಷಿಸಿವೆ.

ಸಿಂಗಪುರದ ಸೇ. 90 ಭಾಗ ಜನ ಪಟ್ಟಣಗಳಲ್ಲಿ ವಾಸಿಸುತ್ತಾರೆ. ಈ ಪಟ್ಟಣದ ಸುತ್ತಲೂ ಇದ್ದ ಬಂದರುಗಳನ್ನು 1800ರಲ್ಲಿ ಬ್ರಿಟಿಷರು ಅಭಿವೃದ್ಧಿಗೊಳಿಸಿದರು. ಇದರಿಂದ 1900ರ ಹೊತ್ತಿಗೆ ಇಲ್ಲಿನ ವ್ಯಾಪಾರ ವಿಸ್ತರಿಸಿತು. ಬೇರೆ ಬೇರೆ ದೇಶಗಳಿಂದ ಜನರು ವಲಸೆ ಬಂದರು. ಹೀಗಾಗಿ ವಸತಿ ಸಮಸ್ಯೆ ಉಲ್ಬಣಗೊಂಡ ಪರಿಣಾಮವಾಗಿ ಅನೇಕ ಅಂತಸ್ತಿನ ಮನೆಗಳು ರೂಪುಗೊಂಡವು. ಇದರಿಂದಾಗಿ ಅನೇಕ ಸಮಸ್ಯೆಗಳು ಉದ್ಭವಗೊಂಡವು. 1900ರ ವೇಳೆಗೆ ಸಿಂಗಪುರ ಸರ್ಕಾರ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಪಾಶ್ಚಾತ್ಯ ದೇಶಗಳ ಮಾದರಿಯಲ್ಲಿ ಆಧುನಿಕ ಸಿಂಗಪುರವನ್ನು ನಿರ್ಮಿಸಿ ಪ್ರಪಂಚದೆಲ್ಲೆಡೆ ಯಿಂದ ಜನರನ್ನು ಆಕರ್ಷಿಸಿತು.

ಇಂದು ಇದು ಆರ್ಥಿಕ ಕ್ಷೇತ್ರದಲ್ಲಿ ಅತ್ಯಂತ ಅಭಿವೃದ್ಧಿ ಹೊಂದಿದ ದೇಶವಾಗಿದೆ. ಇದು ವ್ಯಾಪಾರ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿದ್ದು ಪ್ರತಿವರ್ಷ ಇಲ್ಲಿಗೆ ಸು. 3 ಮಿಲಿಯನ್ ಪ್ರವಾಸಿಗರು ಬರುತ್ತಾರೆಂದು ಅಂದಾಜಿದೆ. ಏಷ್ಯದಲ್ಲಿಯೇ ಅತ್ಯಂತ ಹೆಚ್ಚಿನ ತಲಾ ಆದಾಯ ಹೊಂದಿರುವ ದೇಶವಿದು.

ಇಲ್ಲಿ ನೈಸರ್ಗಿಕ ಬಂದರು ಇದ್ದು ಮೊದಲಿಂದಲೂ ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳೊಡನೆ ವ್ಯಾಪಾರ ಸಂಪರ್ಕವನ್ನಿಟ್ಟು ಕೊಂಡಿದೆ. ಇಲ್ಲಿ ಮುಕ್ತ ವ್ಯಾಪಾರವಿದೆ. ಸಿಂಗಪುರ ಮುಖ್ಯವಾಗಿ ಸಂಯುಕ್ತ ಯುರೋಪ್ ರಾಷ್ಟ್ರಗಳು, ಜಪಾನ್, ಮಲೇಷಿಯ ಮತ್ತು ಅಮೆರಿಕ ದೇಶಗಳೊಡನೆ ವ್ಯಾಪಾರ ವಹಿವಾಟುಗಳನ್ನು ಹೊಂದಿದೆ. ಇದು ವಿದ್ಯುತ್ ಸಲಕರಣೆಗಳನ್ನೂ ಆಹಾರ ಪದಾರ್ಥಗಳನ್ನೂ ಕಬ್ಬಿಣ, ಉಕ್ಕು, ಪೆಟ್ರೋಲ್, ಪ್ಲಾಸ್ಟಿಕ್, ರಬ್ಬರ್ ಮತ್ತು ಯಂತ್ರೋಪಕರಣಗಳನ್ನೂ ಪ್ರಮುಖವಾಗಿ ಆಮದು ಮಾಡಿಕೊಳ್ಳುತ್ತದೆ. ಬಟ್ಟೆ, ಯಂತ್ರೋಪಕರಣಗಳ ಬಿಡಿಭಾಗಗಳು, ಪೆಟ್ರೋಲಿಯಮ್ ಪದಾರ್ಥಗಳು, ರಬ್ಬರ್ ಮತ್ತು ದೂರ ಸಂಪರ್ಕ ಉಪಕರಣಗಳನ್ನು ರಫ್ತು ಮಾಡುತ್ತದೆ.

ಸಿಂಗಪುರ ದ್ವೀಪದಲ್ಲಿ ಪ್ರಾಗೈತಿಹಾಸಿಕ ಕಾಲದಿಂದಲೇ ಜನರು ವಾಸವಾಗಿದ್ದರು 100 ರಿಂದ 1200ರ ಸುಮಾರಿನಲ್ಲಿ ಸಿಂಗಪುರವನ್ನು ಟೆಮಸೆಕ್ ಅಥವಾ ಸಮುದ್ರ ಪಟ್ಟಣ ವೆಂದು ಕರೆಯುತ್ತಿದ್ದರು. ಸಿಂಗಪುರ ಎಂದರೆ ಸಂಸ್ಕøತದಲ್ಲಿ “ಸಿಂಹ ನಗರ” ವೆಂದರ್ಥ. 1300ರ ಅವಧಿಯಲ್ಲಿ ಸಿಂಗಪುರ ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು. 1869ರಲ್ಲಿ ನಿರ್ಮಿಸಲಾದ ಸೂಯೆಜ್ ಕಾಲುವೆಯಿಂದಾಗಿ ಸಿಂಗಪುರ ಪ್ರಪಂಚದ ಒಂದು ಮುಖ್ಯ ಬಂದರಾಯಿತು. ಹಡಗುಗಳು ಇಂಗ್ಲೆಂಡ್ ದೇಶವನ್ನು ಕಡಿಮೆ ದಿನಗಳಲ್ಲಿ ತಲುಪುವಂತಾಯಿತು. ಇದರಿಂದ ಯುರೋಪ್ ಮತ್ತು ಏಷ್ಯ ರಾಷ್ಟ್ರಗಳ ವ್ಯಾಪಾರ ಅಭಿವೃದ್ಧಿ ಹೊಂದಿತು.

(ಎಚ್.ಎನ್.)