ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಗರ್, ಐಸಾಕ್ ಬಾಷೇವಿಯಸ್

ಸಿಂಗರ್, ಐಸಾಕ್ ಬಾಷೇವಿಯಸ್ 1904-. ಪ್ರಸಿದ್ಧ ಕಾದಂಬರಿಕಾರ, ಕಥೆಗಾರ 1904 ಜುಲೈ 14 ರಂದು ಪೋಲೆಂಡ್‍ನ ರಾಡ್‍ಜಿಮಿನ್‍ನಲ್ಲಿ ಜನಿಸಿದ. ಇವನು ಕಾದಂಬರಿ, ಸಣ್ಣಕಥೆ ಹಾಗೂ ಪ್ರಬಂಧಗಳನ್ನು ರಚಿಸಿದ್ದು, ಯಿದ್ದಿಷ್ ಲೇಖಕನೆಂದು ಖ್ಯಾತಿಗಳಿಸಿದ್ದಾನೆ. ಇವನ ಕಾದಂಬರಿಗಳು ಅಮೆರಿಕ ಹಾಗೂ ಪೋಲೆಂಡ್‍ನ ಯೆಹೂದಿ ಜೀವನ ಸೂಕ್ಷ್ಮತೆಯನ್ನೂ ಬದಲಾವಣೆಯನ್ನೂ ತೋರಿಸುತ್ತವೆ. ಇದೇ ಸಂದರ್ಭದಲ್ಲಿ ಇವನ ಸಣ್ಣಕಥೆಗಳು ಹಾಸ್ಯ, ವ್ಯಂಗ್ಯ, ಬುದ್ಧಿವಂತಿಕೆ, ವಿವೇಚನೆ ಕೆಲವೊಮ್ಮೆ ನಿಗೂಢ ಹಾಗೂ ಅಸಂಗತವೆನಿಸುವ ಅತ್ಯುತ್ತಮ ಕೃತಿಗಳಾಗಿವೆ.

ಹಸಿಡಿಕ್ ರಾಬ್ಬಿಸ್ ಕುಟುಂಬದಿಂದ ಬಂದ ಇವನು ವಾರ್ಸಾ ರಾಬ್ಬಿನಿಕಲ್ ಸೆಮಿನರಿಯಲ್ಲಿ ಸಾಂಪ್ರದಾಯಿಕ ಯಹೂದಿ ಶಿಕ್ಷಣ ಪಡೆದ. ಹೀಗಾಗಿ ಲೇಖಕನಾದಂತೆಯೇ ರಬ್ಬಿಯಾಗಿಯೇ ಇರಲು ಬಯಸಿದ. 1935 ರಲ್ಲಿ ಇವನ ಪ್ರಥಮ ಕಾದಂಬರಿ ಪ್ರಕಟವಾಯಿತು. ಇದೇ ಸಮಯದಲ್ಲಿ ಈತ ಹಾಗೂ ಇವನ ಅಣ್ಣ ಇಸ್ರೇಲ್, ತಮ್ಮ ದೇಶ ನಾಜೀಗಳ ಆಕ್ರಮಣಕ್ಕೆ ಒಳಗಾಗಬಹುದು ಎಂಬ ಕಾರಣದಿಂದ ಅಮೆರಿಕಕ್ಕೆ ಓಡಿಹೋದರು. ನ್ಯೂಯಾರ್ಕ್ ನಗರದಲ್ಲಿ ನೆಲೆಸಿದ ಈತ ಮೊದಲಿಗೆ ಯಿದ್ದಿಷ್ ವಾರಪತ್ರಿಕೆ ಜ್ಯೂಯಿಶ್ ಡೈಲಿ ಫಾರ್ವರ್ಡ್‍ನಲ್ಲಿ ವಾರ್‍ಶೋಸ್ಕಿ ಎಂಬ ಗುಪ್ತನಾಮದಲ್ಲಿ ಜರ್ನಲಿಸ್ಟ್ ಆಗಿ ಬರೆಯಲು ಪ್ರಾರಂಭಿಸಿದ. ಇವನಿಗೆ 1943ರಲ್ಲಿ ಅಮೆರಿಕದ ನಾಗರಿಕ ಹಕ್ಕು ದೊರೆಯಿತು. ಇವನ ಬಹುಪಾಲು ಕೃತಿಗಳು ಇಂಗ್ಲಿಷ್‍ನಲ್ಲಿವೆ. ಮೊದಲಿಗೆ ಯಿದ್ದಿಷ್‍ನಲ್ಲಿ ಬರೆಯುತ್ತಿದ್ದವನು ಅನಂತರ ಇಂಗ್ಲಿಷ್ ಅನುವಾದಕ್ಕೆ ತೊಡಗಿಸಿಕೊಂಡ. ಇವನ ಪ್ರಮುಖ ಕಾದಂಬರಿಗಳೆಂದರೆ ದ ಫ್ಯಾಮಿಲಿ ಮಾಸ್ಕಟ್ (1950), ದ ಮೆಜಿಷಿಯನ್ ಆಫ್ ಲುಬ್ಲಿನ್ (1960), ದ ಸ್ಲೇವ್ (1962), ದ ಮ್ಯಾನರ್ (1967), ದ ಎಸ್ಟೇಟ್ (1969), ಎನಿಮೀಸ್, ಎ ಲವ್ ಸ್ಟೋರಿ (1977). ಇವನ ಖ್ಯಾತಿಯನ್ನು ಹೆಚ್ಚಿಸಿದ ಸಣ್ಣ ಕಥಾಸಂಕಲನಳಿವು, ಜಿಮ್ಫೆಲ್ ದ ಫೂಲ್ (1957), ದ ಸ್ಪಿನೋಜ ಆಫ್ ಮಾರ್ಕೆಟ್ ಸ್ಟ್ರೀಟ್ (1961), ಶಾರ್ಟ್ ಫ್ರೈಡೆ (1964), ದ ಸೀಅನ್ಸ್ (1968). ಷ್ಲೆಮಿಲ್ ವೆಂಟ್ ಟು ವಾರ್ಸ ಅಂಡ್ ಅದರ್ ಸ್ಟೋರಿಸ್ (1968) ಪ್ರಸಿದ್ಧ ಮಕ್ಕಳ ಕಥಾ ಸಂಕಲನ. ವಾರ್ಸದಲ್ಲಿ ತನ್ನ ಬಾಲ್ಯ ಜೀವನಾನುಭವವನ್ನು ಮೈ ಫಾದರ್ಸ್ ಕೋರ್ಟ್ ಕೃತಿಯಲ್ಲಿ ದಾಖಲಿಸಿದ್ದಾನೆ (1966). (ಸಿ.ಎಸ್.ಪಿ)