ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಂಘ್ಭೂಮ್ ತಾಮ್ರನಿಕ್ಷೇಪಗಳು

ಸಿಂಘ್‍ಭೂಮ್ ತಾಮ್ರನಿಕ್ಷೇಪಗಳು

ಭಾರತದ ಬಿಹಾರ್ ರಾಜ್ಯದ ಸಿಂಘ್‍ಭೂಮ್ ಜಿಲ್ಲೆಯಲ್ಲಿಯ ತಾಮ್ರನಿಕ್ಷೇಪಗಳು. ಈ ಪ್ರದೇಶದಲ್ಲಿಯ ನಿಕ್ಷೇಪಗಳು ಸು. 130 ಕಿಮೀ ಗಳಿಗೂ ಹೆಚ್ಚು ಉದ್ದವಿವೆ. ಇವು ಭಾರತದ ಪ್ರಮುಖ ತಾಮ್ರನಿಕ್ಷೇಪಗಳು ಎನಿಸಿವೆ. ಸಿಂಘ್‍ಭೂಮ್ ಜಿಲ್ಲೆಯ ರಾಖ ಮತ್ತು ತಾಮಪಹಾರ್ ಗಣಿಗಳ ನಡುವೆ ಇರುವ ತಾಮ್ರನಿಕ್ಷೇಪಗಳು ಚದರಿದಂತೆಯೂ ಎಳೆಗಳಂತೆ ನರಗಳ ರೂಪದಲ್ಲೂ ಮುದ್ದೆ ರೂಪದಲ್ಲೂ ಕಾಣಬರುತ್ತವೆ. ಬೆಣಚು ಮತ್ತು ಕ್ಲೋರೈಟ್ ಶಿಲಾಪದರಗಳು ಹಾಗೂ ಇವುಗಳ ಬಿರುಕುಗಳಲ್ಲಿ ಹಾಗೂ ಪೆಂಟೆಶಿಲೆಗಳಲ್ಲಿ ತಾಮ್ರದ ನಿಕ್ಷೇಪ ಕಂಡುಬಂದಿದೆ. ಲೋಹಯುಕ್ತ ಅದುರಿನ ಎಳೆಗಳು ಒಂದರಮೇಲೊಂದರಂತೆ, ಮಸೂರಾಕಾರದ ಮಡಿಕೆಯಂತಿವೆ (ಎನ್‍ಎಕಿಲಾನ್). ಈ ನಿಕ್ಷೇಪ ಪ್ರದೇಶದಲ್ಲಿ ದೊರೆಯುವ ಖನಿಜಗಳು ಬಿರಿದ ವಲಯಗಳಿಂದ (ಷಿಯರ್ eóÉೂೀನ್ಸ್) ನಿಯಂತ್ರಿತವಾಗಿವೆ. ಅದುರುಕುಡಿಗಳು ಈ ವಲಯಗಳ ಇಳಿಜಾರಿನ ಸಮೀಪ ಸಮಾಂತರವಾಗಿವೆ. ಇದರಲ್ಲಿ ಸ್ವಲ್ಪಮಟ್ಟಿಗೆ ಮಡಿಕೆ ಕೂಡ ತಾಮ್ರನಿಕ್ಷೇಪದ ರಚನೆಯನ್ನು ನಿಯಂತ್ರಿಸಿರುವುದು ಕಂಡುಬಂದಿದೆ. ಅಪಟೈಟ್-ಮ್ಯಾಗ್ನಟೈಟ್ ಮತ್ತು ಯುರೇನಿಯಮ್ ಖನಿಜಗಳು ಒಳಗೊಂಡ ವಲಯ, ತಾಮ್ರನಿಕ್ಷೇಪವಿರುವ ಈ ಪ್ರದೇಶದ ಶಿಲಾಭಾಗದೊಂದಿಗೆ ಅಂದರೆ, ಸ್ತರಭಂಗದಿಂದ ಮೇಲೊಗೆಯಲ್ಪಟ್ಟ ಶಿಲಾಭಾಗದೊಂದಿಗೆ ಸಾಗಿರುವುದು ಸ್ಥಿರಪಟ್ಟಿದೆ.

ತಾಮಪಹಾರ್ ಕ್ಷೇತ್ರದಲ್ಲಿ ಸು. 1585 ಮೀ ಉದ್ದದ ತಾಮ್ರನಿಕ್ಷೇಪವೊಂದು ಶಿಲಾ ಓಟದುದ್ದಕ್ಕೂ ಕಂಡುಬರುತ್ತದೆ. ಇದರಲ್ಲಿ ಸು. 50 ಸೆಂಮೀ ನಿಂದ 10.85 ಮೀ ದಪ್ಪದ, ನಡುನಡುವೆ ಸ್ಥಳವಿರುವ, ಅನೇಕ ಅಸಂತತ ಎಳೆಗಳಿವೆ. ಇಲ್ಲಿಯ ತಾಮ್ರ ಅದುರು ಸೇ.1.27 ದರ್ಜೆಯದು. ಮೀಸಲು ತಾಮ್ರದ ಅದುರಿನ ಬಗ್ಗೆ 1972ರಲ್ಲಿ ಮಾಡಲಾದ ಒಂದು ಅಂದಾಜಿನ ಪ್ರಕಾರ ಇಲ್ಲಿಯ ಅದುರಿನ ಮೊತ್ತ 4.4 ಮಿಲಿಯನ್ ಟನ್ನುಗಳು. ಇದರ ಪೈಕಿ 0.44 ಮಿಲಿಯನ್ ಟನ್‍ಗಳಲ್ಲಿ ಸೇ. 1.5ರಷ್ಟು ಉತ್ತಮ ದರ್ಜೆಯ ಅದುರು ಎಂಬುದು ಕಂಡುಬಂದಿದೆ.

ರೋಮ್‍ಸಿದ್ದೇಶ್ವರ್ ಮತ್ತು ರಾಖ ಗುಂಪಿನ ಗಣಿಗಳ ಪಶ್ಚಿಮ ಬಡಾವಣೆಗಳೆ ತಾಮಪಹಾರ್ ಗಣಿಗಳು. ಈ ಮೂರೂ ಗಣಿಗಳ ಒಟ್ಟು ಉದ್ದ 5 ಕಿಮೀಗೂ ಹೆಚ್ಚು. ಇಲ್ಲಿ ತಾಮ್ರಅದುರಿನ ನಿಕ್ಷೇಪಗಳು ಸು. 305 ಮೀ ಆಳದವರೆಗೂ ಚಾಚಿಕೊಂಡಿರಬಹುದು ಎಂಬುದು ಒಂದು ಅಂದಾಜು. ಜಿಲ್ಲೆಯ ಇತರ ಭಾಗಗಳಾಗಿರುವ ಚುರಿಯ ಪಹಾರ್ ಮತ್ತು ಅಷ್ಟ ಕೊಯ್ಲಿ ಸಮೀಪದಲ್ಲಿ ಕೆಲವು ಹಳೆಯ ಸಣ್ಣ ಪ್ರಮಾಣದ ತಾಮ್ರಗಣಿಗಳಿರುವುದು ಪತ್ತೆಯಾಗಿದೆ.

ಭಾರತದ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ನಡೆಸಿದ ಪರಿಶೋಧನೆಗಳ ಫಲವಾಗಿ, ರೋಮ್‍ಸಿದ್ದೇಶ್ವರ್ ಪ್ರದೇಶದಲ್ಲಿ ಮತ್ತೊಂದು ತಾಮ್ರನಿಕ್ಷೇಪವಿರುವುದು ಪತ್ತೆಯಾಗಿದೆ. ಸಿಂಘ್‍ಭೂಮ್ ತಾಮ್ರವಲಯಕ್ಕೆ ಸೇರಿದ ರೋಮ್‍ಸಿದ್ದೇಶ್ವರ್ ಬ್ಲಾಕ್‍ನಲ್ಲಿ, ಮೊಸಬಾನಿ ಗಣಿಗಳ ವಾಯವ್ಯಕ್ಕೆ ಸು. 25 ಕಿಮೀ ದೂರದಲ್ಲಿ ಉತ್ತಮ ದರ್ಜೆಯ ತಾಮ್ರ ನಿಕ್ಷೇಪವಿರುವುದೂ ಪತ್ತೆಯಾಗಿದೆ.

ರೋಮ್‍ಸಿದ್ದೇಶ್ವರ್ ಕ್ಷೇತ್ರದ ನಿಕ್ಷೇಪದಲ್ಲಿ ಮುಖ್ಯವಾಗಿ ಕ್ಲೋರೈಟ್ - ಬೆಣಚು ಶಿಲೆ ಮತ್ತು ಬ್ರೆಕ್ಷಿಯ ಶಿಲೆಗಳು ಪ್ರಧಾನವಾಗಿವೆ. ಆದರೆ ಫೆಲ್‍ಸ್ಭಾರ್, ಬೆಣಚು ಮತ್ತು ಕಪ್ಪು ಅಭ್ರಕವುಳ್ಳ ಷಿಸ್ಟ್ ಶಿಲೆ (ರೂಪಾಂತರ ಶಿಲೆ) ಇರುವ ಭಾಗ, ಸ್ತರಂಭಂಗದಿಂದಾಗಿ ಕೆಳಗೆ ಎಸೆಯಲ್ಪಟ್ಟ ಭಾಗವಾಗಿದೆ. ಮುಖ್ಯವಾಗಿ ಕರಿ ಅಭ್ರಕವುಳ್ಳ ಕ್ಲೋರೈಟ್‍ಷಿಸ್ಟ್ (ರೂಪಾಂತರ ಶಿಲೆ) ಮತ್ತು ಬೆಣಚು ಶಿಲೆಗಳ (ಕ್ವಾರ್ಟ್‍ಜೈಟ್ಸ್) ಬಿರುಕು ಮತ್ತು ಸಂದುಗಳಲ್ಲಿ ತಾಮ್ರಖನಿಜ ಭಾಗಶಃ ನಿಕ್ಷೇಪಗೊಂಡಿರುವುದು ಕಂಡುಬಂದಿದೆ. ಇದರಲ್ಲಿ ಚಾಲ್ಕೊಪೈರೈಟ್ ತೀರಾ ಸಾಮಾನ್ಯ ಅದುರಾಗಿರುವುದಲ್ಲದೆ ಎಲ್ಲೆಡೆಯೂ ಹರಡಿದಂತಿದೆ ಕೂಡ. ಒಮ್ಮೊಮ್ಮೆ ಅಪರೂಪಕ್ಕೆ ಎಳೆಗಳ ರೂಪದಲ್ಲಿ ಇಲ್ಲವೆ ಅಲ್ಲಲ್ಲೆ ತೇಪೆಗಳಂತೆ ಕಂಡುಬರುತ್ತದೆ. ಇದರ ಜೊತೆಗೆ ಪೈರೈಟ್ಸ್ ಮತ್ತು ಪಿರೊಟೈಟುಗಳೂ ಪತ್ತೆಯಾಗಿವೆ. ತಾಮ್ರನಿಕ್ಷೇಪದಿಂದ ಕೂಡಿ, ಹೊರಗೆ ಕಾಣಿಸಿಕೊಂಡ ಶಿಲೆಗಳ ಉದ್ದ ಸು.1200ಮೀ ಎಂದು ತಿಳಿದುಬಂದಿದೆ. (ಎಮ್.ಎಸ್.ಪಿ.)