ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿತಾರರತ್ನ ರಹಿಮತ್ ಖಾನ

ಸಿತಾರರತ್ನ ರಹಿಮತ್ ಖಾನ -

ವಿಂಧ್ಯದೀಚೆ ಸಿತಾರ ಸಂಸ್ಕøತಿ ತಂದವನೀತ. 1863ರಲ್ಲಿ ಸಂಗೀತ ಮನೆತನದಲ್ಲಿ ಗುಲಾಮ ಹುಸೇನಖಾನರ ದ್ವಿತೀಯ ಪುತ್ರನಾಗಿ ರಹಿಮತ್‍ಖಾನ ಜನಿಸಿದರು. ಗುಲಾಮ ಹುಸೇನಖಾನರು ಭಾವನಗರದ ಆಸ್ಥಾನಗಾಯಕರಾಗಿದ್ದರು. ಮನೆಯಲ್ಲಿ ಸಂಗೀತ ಶಾಲೆ ನಡೆಸುತ್ತಿದ್ದರು. ಹಿಂದುಸ್ತಾನಿ ಸಂಗೀತದ ಮೂಲ ಸ್ರೋೀತವಾದ ಗ್ವಾಲಿಯರ ಘರಾಣೆಯ ಇಂಥ ಸುರಿತದಲ್ಲಿ ಬಾಲಕ ರಹಿಮತ್‍ಖಾನರಲ್ಲಿ ಸಂಗೀತಾಸಕ್ತಿ ಅಂಕುರಿಸಿದುದು ಸಹಜವೆ. ನಾಲ್ಕನೆಯ ವಯಸ್ಸಿನಲ್ಲಿಯೆ ತನ್ನ ತಂದೆಯ ಪದತಲದಲ್ಲಿ ಸಂಗೀತ ಕಲಿಯಲಾರಂಭಿಸಿದರು. ಅದೂ ಅಲ್ಲದೆ, ಸೋದರಮಾವ ಮತ್ತು ಆಸ್ಥಾನ ಸಿತಾರವಾದಕ ಗುಲಾಮ ನಬೀಬಖಾನರು ರಹಿಮತ್‍ಖಾನನ ತಂದೆಯೊಂದಿಗೆ ವಾಸಿಸುತ್ತಿದ್ದರು. ಗಾಯನ ಪಾಠ ಮುಗಿಯುತ್ತಲೆ ಪುಟ್ಟ ರಹಿಮತ್‍ಖಾನ ಸಿತಾರ ಪಾಠಕ್ಕೆ ಓಡುತ್ತಿದ್ದರು. ಸಿತಾರದ ಸೆಳೆತ ಜೋರಾಗತೊಡಗಿತು.

ರಹಿಮತ್‍ಖಾನ ಎರಡರಲ್ಲೂ ಸಮಾನ ಪರಿಣತಿ ಸಂಪಾದಿಸತೊಡಗಿದರು. ಎರಡರಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬ ಹೊಯ್ದಾಟ. ಮಗನನ್ನು ತಮ್ಮಂತೆಯೆ ಗಾಯಕನನ್ನಾಗಿ ಮಾಡುವ ಪ್ರಬಲ ಇಚ್ಫೆಯಿದ್ದರೂ ಗುಲಾಮ ಹುಸೇನ ಖಾನ ಉದಾರ ಮನಸ್ಸಿನವರು. ಮಗನೆ, ನಿನ್ನ ಒಲವನ್ನು ಅನುಸರಿಸು. ನೀನು ನೀನಾಗು ಎಂದು ಉಪದೇಶಿಸಿದರು. ಅಷ್ಟೇ ಅಲ್ಲ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಭಾವನಗರ ಆಸ್ಥಾನದ ಬೀನ ಮತ್ತು ಸಿತಾರವಾದಕ ಹಬೀಬಖಾನರಲ್ಲಿ ಒಯ್ದಿಟ್ಟರು. ರಹಿಮತ್‍ಖಾನ ನಿಷ್ಠೆಯಿಂದ ಗುರುಸೇವೆ ಮಾಡಿದರು. ಒಮ್ಮೆ ಗುರುವಿನ ಹುಕ್ಕಾ ಹೊತ್ತಿಸಬೇಕಿತ್ತು. ಇಕ್ಕಳ ಸಿಕ್ಕಿರಲಿಲ್ಲ. ರಹಿಮತ್‍ಖಾನ ಕೆಂಡವನ್ನು ಅಂಗೈಯಲ್ಲಿ ಹಿಡಿದುತಂದ. ಗುರುವಿನ ಮನಸ್ಸು ಗೆದ್ದ. ಹಬೀಬಖಾನರು ಮನಸ್ಸು ಬಂದಾಗ ಕಲಿಸುತ್ತಿದ್ದರು. ಬೇಟಾ, ಬೀನ ಲೇ ಆವೊ ಎಂದಾಗ ರಹಿಮತ್‍ಖಾನರಿಗೆ ಖುಷಿಯೊ ಖುಷಿ. ನಾಲ್ಕು ವರ್ಷ ಕಠಿಣ ರಿಯಾಜಿನಿಂದ ರಹಿಮತ್‍ಖಾನ ವಾದ್ಯದ ಮೇಲೆ ಹಿಡಿತ ಸಾಧಿಸಿದರು. ಒಂದು ದಿನ ಗುರು ನುಡಿದರು, ರಹಿಮತ್, ಇನ್ನು ಮೇಲೆ ನನ್ನ ಕೆಲವು ಶಿಷ್ಯರಿಗೆ ನೀನೇ ಕಲಿಸು. ಗುರು ತಮ್ಮಲ್ಲಿಟ್ಟ ವಿಶ್ವಾಸದಿಂದ ರಹಿಮತ್‍ಖಾನ ಭಾವತುಂದಿಲರಾದರು. ಗುರು ತಮ್ಮ ಕಚೇರಿಗಳಿಗೆ ಶಿಷ್ಯನನ್ನು ಕರೆದೊಯ್ಯುವುದು ವಾಡಿಕೆಯಾಯಿತು. ಕೆಲವು ಕಚೇರಿಗಳಿಗೆ ಶಿಷ್ಯನನ್ನು ಶಿಫಾರಿಸುತ್ತಿದ್ದರು ಕೂಡ.

ಒಂದು ಸುದಿನದಂದು ಪಕ್ಕದ ಸಂಸ್ಥಾನವಾದ ಲಿಮ್ಡಿಯ ದೊರೆಯಿಂದ ರಹಿಮತ್‍ಖಾನರಿಗೆ ಆಮಂತ್ರಣ ಬಂದಿತು. ರಹಿಮತ್‍ಖಾನರು ಬೀನ ಮತ್ತು ಸಿತಾರಗಳನ್ನು ರಾತ್ರಿ 9 ರಿಂದ ನಸುಕಿನ 3 ಗಂಟೆಯವರೆಗೆ ನುಡಿಸಿದರು. ಮಹಾರಾಜಾ ಜಸವಂತ ಸಿಂಗ್ ಮತ್ತು ಉಪಸ್ಥಿತರಿದ್ದ ಸಂಗೀತ ಪ್ರೇಮಿಗಳು ಪ್ರಶಂಸೆ ಮತ್ತು ಕಾಣಿಕೆಗಳನ್ನು ಸುರಿದರು. ರಹಿಮತ್‍ಖಾನರು ಅವುಗಳನ್ನೆಲ್ಲ ಗುರುಚರಣಗಳಿಗೆ ಅರ್ಪಿಸಿದರು. ಸಂಗೀತ ದೇವಿಯ ಪದತಲದಲ್ಲಿ ಗೈದ 20 ವರ್ಷಗಳ ತಪಸ್ಸು ಫಲ ನೀಡಿತ್ತು. ರಹಿಮತ್‍ಖಾನರ ಫ್ರೌಢಿಮೆಯ ಖ್ಯಾತಿ ಪಸರಿಸಲಾರಂಭಿಸಿತು. ಮಂಗರೋಲಾ, ಗುಜರಾತ, ನಾಗಪುರ, ರಾಯಗಡ, ಕಚ್ಫ, ಒಡಿಸ್ಸಾ, ಪಂಜಾಬ ಮತ್ತು ಸಿಂಧ್ ಮೊದಲಾದೆಡೆಗಳಿಂದ ಆಮಂತ್ರಣಗಳು ಪ್ರವಹಿಸಿದವು. ಆದರೂ, ರಹಿಮತ್‍ಖಾನರದು ಇದೆಲ್ಲ ಸಾಧನೆಯಿಂದ ಸಂತೃಪ್ತರಾಗುವ ಜಾಯಮಾನವಲ್ಲ. ಇನ್ನೂ, ಇನ್ನೂ ಪರಿಪೂರ್ಣತೆ ಸಾಧಿಸುವ ಹಂಬಲ, ಪರಿಶ್ರಮ.

ಇಂದೋರ ಸಂಸ್ಥಾನಿಕರು ರಹಿಮತ್‍ಖಾನರನ್ನು ಆಸ್ಥಾನ ಕಲಾವಿದರನ್ನಾಗಿ ನಿಯಮಿಸಿದರು (1878) ರಹಿಮತ್ ಖಾನರ ಜೀವನದಲ್ಲಿ ಅದೊಂದು ಮಹತ್ವದ ತಿರುವು. ರಹಿಮತ್‍ಖಾನರು ಅರಸುತ್ತಿದ್ದ ಅಪ್ರತಿಮ ಬಂದೆ ಅಲಿಖಾನರೂ ಅಲ್ಲಿಯೆ ಆಸ್ಥಾನ ಬೀನವಾದಕರಾಗಿದ್ದರು. ರಹಿಮತ್‍ಖಾನರು ಬಂದೆ ಅಲಿಖಾನರನ್ನು ಗುರುವಾಗಿ ಸ್ವೀಕರಿಸಿ ಹಲವಾರು ವರ್ಷ ಮಾರ್ಗದರ್ಶನ ಪಡೆದು ಪರಿಪೂರ್ಣತೆ ಸಾದಿsಸಿದರು. “ಬೀನ್ ಹೊಟ್ಟೆಪಾಡಿಗಾಗಿ ನುಡಿಸುವ ವಾದ್ಯವಲ್ಲ. ಭಗವಂತನನ್ನು ಒಲಿಸಿಕೊಳ್ಳಲು ನುಡಿಸುವ ವಾದ್ಯ. ನೀನು ಇದುವರೆಗೂ ಸಾಧಿಸಿದುದೆಲ್ಲವನ್ನು ಸಿತಾರಿನಲ್ಲಿ ಅಳವಡಿಸಿಕೊ” ಎಂದು ಗುರು ಬಂದೆ ಅಲಿಖಾನರು ಉಪದೇಶಿಸಿದರು. ಈಗ ರಹಿಮತ್‍ಖಾನರು ಸಿತಾರದ ಮೇಲೆ ಗಮನ ಕೇಂದ್ರೀಕರಿಸಿದರು. ಅದು ಅವರನ್ನು ಅಮರವಾಗಿಸಿದ ವಾದ್ಯವಾಯಿತು. ಅಂದಿನ ಸಿತಾರ ಗಾತ್ರದಲ್ಲಿ ಚಿಕ್ಕದಿದ್ದು ಮಸೀದಖಾನಿ ಮತ್ತು ರಝಾಖಾನಿ ಗತ್ತುಗಳನ್ನು ಮಾತ್ರ ನುಡಿಸಲು ಯೋಗ್ಯವಾಗಿತ್ತು. ಬೀನ್‍ನಲ್ಲಿ ನುಡಿಸಬಹುದಾಗಿದ್ದ ಆಲಾಪ, ಜೋಡ, ಝಾಲಾ ನುಡಿಸಲು ಬರುತ್ತಿರಲಿಲ್ಲ. ಸಿತಾರದ ಏಳು ತಂತಿಗಳಲ್ಲಿ ಖರ್ಜ ಷಡ್ಜ ತಂತಿಯಿರಲಿಲ್ಲ. ಇದ್ದುದು ಮಂದ್ರ ಮಧ್ಯಮ, ಎರಡು ಮಂದ್ರ ಷಡ್ಜ, ಖರ್ಜ ಪಂಚಮ, ಮಂದ್ರ ಪಂಚಮ, ಪಪೀಹಾ ಮತ್ತು ಚಿಕಾರಿ ತಂತಿಗಳು. ಹಾಗಾಗಿ, ವಿಲಂಬಿತ್‍ದಲ್ಲಿ ಒಳ್ಳೆಯ ಆಲಾಪ ನುಡಿಸಲು ಅಡಚಣೆಯಾಗುತ್ತಿತ್ತು. ಈ ಕೊರತೆಯನ್ನು ನೀಗಿಸಲು ರಹಿಮತ್‍ಖಾನರ ಆವಿಷ್ಕಾರಕ ಬುದ್ಧಿ ಕೆಲಸ ಮಾಡತೊಡಗಿತು. ರಹಿಮತ್‍ಖಾನರು ಖರ್ಜ ಷಡ್ಜ ಅಳವಡಿಸಿ ತಂತಿಗಳ ಮರುಹೊಂದಾಣಿಕೆ ಮಾಡಿದರು ಮಂದ್ರ ಮಧ್ಯಮ, ಮಂದ್ರ ಷಡ್ಜ, ಖರ್ಜ ಪಂಚಮ, ಖರ್ಜ ಷಡ್ಜ, ಮಂದ್ರ ಪಂಚಮ, ಪಪೀಹಾ ಮಧ್ಯ ಷಡ್ಜ ಮತ್ತು ಚಿಕಾರಿ ತಾರ ಷಡ್ಜ. ಈಗ ಅಧಿಕ ಮಾಧುರ್ಯ, ಸ್ಥಿತಿಸ್ಥಾಪಕತೆ. ವೈವಿಧ್ಯ ಸಾಧ್ಯವಾಯಿತು. ಸಿತಾರವು ಬೀನ್ ಮತ್ತು ಸೂರಬಹಾರ ವಾದ್ಯಗಳು ನುಡಿಸುವ ಎಲ್ಲವನ್ನೂ ನುಡಿಸಲು ಸಮರ್ಥವಾಯಿತು. ನಾಲ್ಕು ಸಪ್ತಕಗಳಿಂದೊಡಗೂಡಿದ ಪರಿಪೂರ್ಣ ವಾದ್ಯವಾಯಿತು.

ಭಾತಖಂಡೆ ಮತ್ತು ವಿಷ್ಣು ದಿಗಂಬರ ಪಲುಸ್ಕರರ ಸಂಗೀತ ಚಟುವಟಿಕೆಗಳಿಂದಾಗಿ ಮುಂಬಯಿ ಸಂಗೀತ ಕೇಂದ್ರವಾಗಿತ್ತು. ರಹಿಮತ್‍ಖಾನರನ್ನು ಮುಂಬಯಿ ಕೈಬೀಸಿ ಕರೆಯಿತು. ಮುಂಬಯಿಯಾದ್ಯಂತ ಅವರ ಕಚೇರಿಗಳೇರ್ಪಟ್ಟು ಹೊಸ ಸಿತಾರವು ರಸಿಕರ ಹಾಗೂ ಸಂಗೀತಜ್ಞರ ಹೃದಯ ಗೆದ್ದಿತು. ರಹಿಮತ್‍ಖಾನ ಪುಣೆಗೆ ಹೋದರು. ಅಲ್ಲಿಯೂ ಅವರ ಸಿತಾರ ಜಯಭೇರಿ ಬಾರಿಸಿತು. ತಮ್ಮ ಕಚೇರಿಗಳಿಗಾಗಿ ದೊಡ್ಡ ದೊಡ್ಡ ಥಿಯೆಟರುಗಳನ್ನು ಬಾಡಿಗೆ ಹಿಡಿದರು. ಸಂಗೀತ ಸವಿಯುವ ಹಕ್ಕು ಕೇವಲ ರಾಜಾ ಮಹಾರಾಜರಿಗಷ್ಟೆ ಅಲ್ಲ, ಜನಸಾಮಾನ್ಯರಿಗೂ ಇದೆ ಎಂದು ಬಲವಾಗಿ ನಂಬಿದವರು ರಹಿಮತ್‍ಖಾನರು. ಪುಣೆಯಲ್ಲಿ ಅವರು ಭಾರತ ಗಾಯನ ಸಮಾಜ ಎಂಬ ಸಂಗೀತ ಶಾಲೆಯನ್ನು ತೆರೆದರು. ಅಲ್ಲಿ ಅವರು ಸಿತಾರ ಕಲಿಸಿದರೆ ಭಾಸ್ಕರಬುವಾ ಬಖಲೆ ಗಾಯನ ಕಲಿಸುತ್ತಿದ್ದರು. ಸುಪ್ರಸಿದ್ಧ ಗಾಯಕ ಬೆಹರೆಬುವಾ ಆ ಶಾಲೆಯ ಶಿಷ್ಯರಲ್ಲೊಬ್ಬರು.

ರಹಿಮತ್‍ಖಾನರ ಖ್ಯಾತಿ ಮೈಸೂರಿನ ಅರಸಾದ ನಾಲ್ವಡಿ ಕೃಷ್ಣರಾಜ ಒಡೆಯರ ಕಿವಿ ತಲುಪಿತು. ಮಹಾರಾಜರು ಸ್ವತಃ ವೈಣಿಕರಾಗಿದ್ದು ಕಲೆಗಳ ಬಹು ದೊಡ್ಡ ಆಶ್ರಯದಾತರಾಗಿದ್ದರು. ಹಿಂದುಸ್ತಾನಿ ಸಂಗೀತವೆಂದರೆ ಬಲು ಇಷ್ಟ. ನತ್ಥನಖಾನ, ಅವರ ತರುವಾಯ ಅವರ ಪುತ್ರ ವಿಲಾಯತ ಹುಸೇನಖಾನ, ಠುಮರಿ ಗಾಯಕಿ ಗೋಹರಜಾನ ಆಸ್ಥಾನ ಗಾಯಕರಾಗಿದ್ದರೆ ಬರ್ಕತುಲ್ಲಾಖಾನ ಆಸ್ಥಾನ ಸಿತಾರವಾದಕರಾಗಿದ್ದರು. ಮಹಾರಾಜರಿಂದ ಸೈ ಎನಿಸಿಕೊಳ್ಳುವುದು ಶ್ರೇಷ್ಠತೆಗೆ ಮುದ್ರೆ ಬಿದ್ದಂತೆ. ನಾಲ್ವಡಿ ಕೃಷ್ಣರಾಜರು 1911ರಲ್ಲಿ ರಹಿಮತ್‍ಖಾನರನ್ನು ಆಮಂತ್ರಿಸಿದರು. ಮಹಾರಾಜರು ರಹಿಮತ್‍ಖಾನರ ವಾದನವನ್ನು ಬಹುವಾಗಿ ಮೆಚ್ಚಿಕೊಂಡು ಸಿತಾರ ರತ್ನ ಬಿರುದು ನೀಡಿ ಸನ್ಮಾನಿಸಿದರು. ಅಂದಿನಿಂದ ಸಿತಾರ ರತ್ನ ಎನ್ನುವುದು ಅವರ ಹೆಸರಿನ ಅವಿಭಾಜ್ಯ ಅಂಗವಾಗಿದೆ. ಮಹಾರಾಜರು ತಮ್ಮ ಆಸ್ಥಾನ ಕಲಾವಿದರಾಗುವಂತೆ ರಹಿಮತ್‍ಖಾನರನ್ನು ಕೇಳಿದರು. ಸಿತಾರ ರತ್ನರು ಎಲ್ಲಕ್ಕಿಂತ ಸ್ವಾತಂತ್ರ್ಯವನ್ನು ಹೆಚ್ಚು ಇಷ್ಟಪಡುತ್ತಿದ್ದುದರಿಂದ ಮಹಾರಾಜರ ಆಹ್ವಾನವನ್ನು ವಿನಯಪೂರ್ವಕವಾಗಿಯೆ ಒಪ್ಪಿಕೊಳ್ಳಲಿಲ್ಲ.

ಮೈಸೂರಿನ ನಷ್ಟ ಧಾರವಾಡದ ಲಾಭವಾಯಿತು. ಮೈಸೂರಿಗೆ ಹೋಗುವ ಮಾರ್ಗದಲ್ಲಿ ರಹಿಮತ್‍ಖಾನರು ಧಾರವಾಡದಲ್ಲಿ ಒಂದೆರಡು ದಿನ ತಂಗಿದ್ದರು. ಧಾರವಾಡದ ಸೃಷ್ಟಿಸೌಂದರ್ಯ ಮತ್ತು ಪ್ರಶಾಂತ ವಾತಾವರಣ ರಹಿಮತ್‍ಖಾನರ ಮನ ಸೂರೆಗೊಂಡಿತ್ತು. 1912ರಲ್ಲಿ ಅವರು ಧಾರವಾಡದಲ್ಲಿ ನೆಲೆಸಿ 1954ರಲ್ಲಿ ಪೈಗಂಬರವಾಸಿಗಳಾಗುವವರೆಗೆ ಧಾರವಾಡವನ್ನೆ ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡಿದ್ದರು. ಹೆಮ್ಮೆಯಿಂದ ತಮ್ಮನ್ನು ರಹಿಮತ್‍ಖಾನ ಧಾರವಾಡಕರ ಎಂದೆ ಕರೆದುಕೊಳ್ಳುತ್ತಿದ್ದರು. 1931ರಲ್ಲಿ ಧಾರವಾಡದ ಮಾಳಮಡ್ಡಿಯ ಸ್ಟೇಶನ್ ರಸ್ತೆಯಲ್ಲಿ ಭಾರತೀಯ ಸಂಗೀತ ವಿದ್ಯಾಲಯ ಸ್ಥಾಪಿಸಿ ಸಂಗೀತ ವಿದ್ಯೆ ಕಲಿಸಿದರು. ಅದನ್ನು ಮೊಮ್ಮಕ್ಕಳಾದ ಬಾಲೆಖಾನ, ಹಮೀದಖಾನ ಮುಂದುವರಿಸಿಕೊಂಡು ಬರುತ್ತಿರುವರು.

ಸಿತಾರರತ್ನರು ಮೇರು ಸಿತಾರವಾದಕರಾಗಿದ್ದರು. ಅವರ ಶೈಲಿಯು ಬೀನಕಾರ ಘರಾಣೆಯ ಮಾಧುರ್ಯ, ಗ್ವಾಲಿಯರ ಘಾರಾಣೆಯ ಉನ್ನತ ಗಾಂಭೀರ್ಯ ಮತ್ತು ಚಾಚೂ ತಪ್ಪದ ಲಯಕಾರಿಗಳ ಮುಪುರಿಯಾಗಿತ್ತು. ಅದಕ್ಕೆ ಗಾಯಕಿ ಅಂಗದ ಕುಂದಣ ಬೇರೆ. ಅವರು ಎರಡೂ ಕೈಗಳನ್ನು ಏಕ ಕಾಲಕ್ಕೆ ಚಲಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಬಲಗೈ ತಂತಿಗಳನ್ನು ಮೀಂಟುತ್ತಿದ್ದಂತೆ ಎಡಗೈ ಪಡದೆಗಳ ಮೇಲೆ ಸರಾಗವಾಗಿ ಓಡಾಡುತ್ತಿತ್ತು. ಅವರು ಸ್ವರ ಮತ್ತು ಲಯಗಳ ಪ್ರಭುವಾಗಿದ್ದರು. ಅವರ ಇನ್ನೊಂದು ವೈಶಿಷ್ಟ್ಯವೆಂದರೆ, ಮೊಹರಾ. ತೀನ್‍ತಾಲದ ಕೊನೆಯಲ್ಲಿ ಎರಡೂವರೆ ಮಾತ್ರೆಗಳಲ್ಲಿ ಸಂಯೋಜಿಸಿದ ಸ್ವರಗುಚ್ಫ. ಪಿಲಾಹರಾ ಇವೆಲ್ಲದರ ರಸಾಯನ ರಹಿಮತ್ ಬಾಜ್ ಎಂದೆ ಪ್ರಖ್ಯಾತವಾಗಿತ್ತು.

ಸಿತಾರರತ್ನರದು ಅಪ್ಪಟ ಭಾರತೀಯ ಮನೋಧರ್ಮ. ಸಂಗೀತವೇ ನನ್ನ ಧರ್ಮ, ಸುರ ಹೀ ಈಶ್ವರ ಎಂದು ಹೆಮ್ಮೆಯಿಂದ ಉದ್ಗರಿಸುತ್ತಿದ್ದರು. ಆರ್.ಪಿ.ಎಂ. ಧ್ವನಿಮುದ್ರಿಕೆಗಳ ಯುಗ. ತಮ್ಮ ಧ್ವನಿಮುದ್ರಿಕೆಗಳನ್ನು ಹೋಟೆಲುಗಳಲ್ಲಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಹಚ್ಚಿ ಕುಲಗೆಡಿಸುವುದು ಸಿತಾರರತ್ನರಿಗೆ ಸುತರಾಂ ಇಷ್ಟವಿರಲಿಲ್ಲ. ಆದುದರಿಂದ, ಅವರು ಧ್ವನಿಮುದ್ರಿಕೆಗಳನ್ನು ಹೊರತರಲು ಉತ್ಸುಕರಾಗಿರಲಿಲ್ಲ. ಅಂತಾಗಿಯೂ, ಎಚ್.ಎಮ್.ವಿ. 6 ರಾಗಗಳನ್ನು ಧ್ವನಿಮುದ್ರಿಸಿಕೊಳ್ಳಲು ಅವರ ಮನವೊಲಿಸುವಲ್ಲಿ ಯಶಸ್ವಿಯಾಯಿತು ಭೈರವಿ, ಮಾಲಕಂಸ, ಜೋಗಿಯಾ, ಲಲಿತ್, ಜೀವನಪುರಿ, ಮತ್ತು ಪರಜ. ಅದು ಮೂರು ನಿಮಿಷಗಳ ಕಾಲ.

ಸಿತಾರರತ್ನರದು ಮಹಾ ಸಂಗೀತ ಪರಂಪರೆ. ಅವರಿಗಿಂತ ಪೂರ್ವದ ಮೂರು ತಲೆಮಾರು ಮತ್ತು ಅವರ ನಂತರದ ಮೂರು ತಲೆಮಾರು ಸಂಗೀತಗಾರರಾಗಿರುವರು. ತಂದೆ ಗುಲಾಮ ಹುಸೇನಖಾನ ಭಾವನಗರದ ಆಸ್ಥಾನ ಗಾಯಕರಾಗಿದ್ದರು. ಅಜ್ಜ ಮದಾರಭಕ್ಷ ರತ್ಲಮ್ ಆಸ್ಥಾನದ ಗಾಯಕ ಹಾಗೂ ಸಿತಾರವಾದಕ. ಮುತ್ತಜ್ಜ ದೌಲತಖಾನ ಇಂದೋರ ಮತ್ತು ರತ್ಲಮ್ ಆಸ್ಥಾನಗಳ ಗಾಯಕ. ಸಿತಾರರತ್ನರ ಮಗ ಪೈಗಂಬರವಾಸಿ ಎ. ಕರೀಮಖಾನ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಿತಾರ ಪ್ರಾಧ್ಯಾಪಕರಾಗಿದ್ದರು. ನಿವೃತ್ತಿಯ ನಂತರ ಗೋವಾದ ಅಕಾಡೆಮಿ ಆಫ್ ಮ್ಯೂಜಿಕ್‍ನಲ್ಲೂ ಹಲವಾರು ವರ್ಷ ಬೋಧಕ. ಸಿತಾರರತ್ನರ ಇನ್ನೊಬ್ಬ ಮಗ ದಿ. ಸತೀಶಕುಮಾರ ದಿಲ್ಲಿ ಆಕಾಶವಾಣಿ ಕೇಂದ್ರದ ನಿಲಯ ಸಿತಾರವಾದಕರಾಗಿದ್ದರು. ಮತ್ತೊಬ್ಬ ಮಗ ದಸ್ತಗೀರಖಾನ ಕೂಡ ಸಿತಾರವಾದಕರಾಗಿದ್ದು ಮುಂಬಯಿಯಲ್ಲಿ ವಾದ್ಯಗಳ ಅಂಗಡಿಯಿಟ್ಟಿರುವರು.

ಸಿತಾರರತ್ನರ ಒಂಬತ್ತು ಮೊಮ್ಮಕ್ಕಳಲ್ಲಿ ಎಲ್ಲರೂ ಕರೀಮಖಾನರ ಮಕ್ಕಳು ಅವರಲ್ಲಿ ಏಳು ಜನ ಸಿತಾರ ವಾದಕರು. ಸುಪ್ರಸಿದ್ಧರು. ಹಿರಿಯ ಮೊಮ್ಮಗ ಉಸ್ಮಾನಖಾನ ಪುಣೆಯಲ್ಲಿ ನೆಲೆಸಿರುವರು. ಎರಡನೆಯವರಾದ ಬಾಲೆಖಾನ ಧಾರವಾಡದ ಆಕಾಶವಾಣಿ ಕೇಂದ್ರದ ನಿಲಯ ಕಲಾವಿದರಾಗಿ ನಿವೃತ್ತರಾಗಿರುವರು. ಮೂರನೆಯವರಾದ ಮೆಹೆಬೂಬಖಾನ ಮುಂಬಯಿಯಲ್ಲಿರುವರು. ನಾಲ್ಕನೆಯವರಾದ ಹಮೀದಖಾನ ಧಾರವಾಡದ ಕರ್ನಾಟಕ ಸಂಗೀತ ಕಾಲೇಜಿನ ಪ್ರಾಚಾರ್ಯರು. ಐದನೆಯ bsÉೂೀಟೆ ರಹಿಮತ್‍ಖಾನ ಗೋವಾ ಸಂಗೀತ ಅಕಾಡೆಮಿಯಲ್ಲಿ ಅಧ್ಯಾಪಕರು. ಅವಳಿಗಳಾದ ಕೊನೆಯ ಇಬ್ಬರು ರಫೀಕಖಾನ ಮತ್ತು ಶಫೀಕಖಾನ ಮಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳ ನಿಲಯ ಕಲಾವಿದರು. ಬಾಲೆಖಾನರ ಮಗ ರಯೀಸಖಾನ ಪಂಚಗಣಿಯ ಪಬ್ಲಿಕ್ ಸ್ಕೂಲೊಂದರಲ್ಲಿ ಸಿತಾರ ಅಧ್ಯಾಪಕ. ಇನ್ನೋರ್ವ ಮಗ ಹಾಫಿಜ್ ಖಾನ ಕೂಡ ಸಿತಾರವಾದಕನಾಗಿ ಮುಂದೆ ಬರುತ್ತಿರುವನು. ಅಲ್ಲಿಗೊಂದು ಸಪ್ತಕ ಪೂರ್ಣವಾಯಿತು. ಏಳು ತಲೆಮಾರು ಸಂಗೀತ ಹರಿದುಬಂದಿರುವ ಈ ಮನೆತನದಲ್ಲಿ ಇನ್ನೂ ಹಲವಾರು ಸಪ್ತಕಗಳು ಮೂಡಿಬಂದರೆ ಅಚ್ಚರಿಯಿಲ್ಲ. ಇಂಥ ಮಹಾನ್ ಸಂಗೀತ ವೃಕ್ಷ ಇನ್ನೆಲ್ಲಿಯೂ ಇಲ್ಲವೆ ಇಲ್ಲವೆನ್ನುವಷ್ಟು ವಿರಳ.

1954ರಲ್ಲಿ ಸಿತಾರರತ್ನರು ಸ್ವರ್ಗಸ್ಥರಾದರು. ಅಂದಿನಿಂದ ಪ್ರತಿ ವರ್ಷ ಅವರ ಪುಣ್ಯತಿಥಿ ಸಂಗೀತೋತ್ಸವವನ್ನು ಕಳೆದ 50 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಮೊದಲು ಪುಣೆಯಲ್ಲಿ ಜರುಗುತ್ತಿತ್ತು. 1961ರ ಮುಳಾ ಮುಠಾ ನೆರೆಯಿಂದಾಗಿ ಕುಟುಂಬ ಧಾರವಾಡಕ್ಕೆ ಸ್ಥಳಾಂತರವಾಯಿತು. ಅಂದಿನಿಂದ ಪುಣ್ಯತಿಥಿ ಧಾರವಾಡದಲ್ಲಿ ಜರುಗುತ್ತಿದೆ. ಹೀರಾಬಾಯಿ ಬಡೋದೆಕರ, ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಸಂಗಮೇಶ್ವರ ಗುರವ, ಜಿತೇಂದ್ರ ಅಭಿಷೇಕಿ, ಅಜಯ ಚಕ್ರವರ್ತಿ, ಪಂಡಿತ ಪ್ರತಾಪನಾರಾಯಣ, ಕಂಕಣಾ ಬ್ಯಾನರ್ಜಿ, ಶೃತಿ ಸಡೋಲೆಕರ, ಪದ್ಮಾ ತಳವಾಳಕರ, ಅಶ್ವಿನಿ ಭಿಡೆ, ಎನ್.ರಾಜಮ್ (ವಾಯಲಿನ್), ರಾಜೀವ ತಾರಾನಾಥ (ಸರೋದ), ಶಾಹಿದ್ ಪರ್ವೆಜ್ (ಸಿತಾರ), ವಿಶ್ವಮೋಹನ ಭಟ್ಟ (ಮೋಹನವೀಣಾ) ಮೊದಲಾದವರು ಪಾಲ್ಗೊಂಡಿರುವರು. ದಿಲ್ಲಿ, ಮುಂಬಯಿ, ಕಲ್ಕತ್ತಾ, ಪುಣೆ, ಹೈದರಾಬಾದ ಮೊದಲಾದ ಕಡೆಗಳಿಂದ ಸಂಗೀತಗಾರರನ್ನು ಆಹ್ವಾನಿಸಲಾಗುತ್ತದೆ. ಅನೇಕ ತರುಣ ಸಂಗೀತಗಾರರಿಗೆ ಅವಕಾಶ ನೀಡುವ ಮೂಲಕ ಅವರ ಏಳ್ಗೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಸಂಗೀತೋತ್ಸವಗಳು ಸಿತಾರರತ್ನರ ಸ್ಮರಣೆಯನ್ನು ಹಸಿರಾಗಿರಿಸಿವೆ.

 (ಸದಾನಂದ ಕನವಳ್ಳಿ)