ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿದ್ದಯ್ಯ, ಎಚ್

ಸಿದ್ದಯ್ಯ, ಎಚ್ _1952. ಹಿಂದಿನ ಮೈಸೂರು ಸಂಸ್ಥಾನದ ರಾಜಕಾರಣದಲ್ಲಿ ಅಜಾತಶತ್ರು, ಸಾತ್ವಿಕ ರಾಜಕಾರಣಿ ಎಂದು ಹೆಸರಾಗಿದ್ದವರು. ಶಿವಮೊಗ್ಗದವರಾದ ಇವರು ಅಲ್ಲಿ ವಕೀಲಿವೃತ್ತಿಯನ್ನು ಆರಂಭಿಸಿ ಒಳ್ಳೆಯ ಸಂಪಾದನೆಯಿದ್ದರೂ ಅದನ್ನು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಿಂದ ಆಕರ್ಷಿತರಾದರು. ಒಮ್ಮೆ ಇವರು ತಮ್ಮ ವೃತ್ತಿಗೆ ಸಂಬಂಧಿಸಿದ ಕೆಲಸಕ್ಕಾಗಿ ಶಿವಮೊಗ್ಗದಿಂದ ಚನ್ನಗಿರಿಗೆ ಹೋಗಿದ್ದಾಗ ಅಲ್ಲಿ ಶಾಂತವಾಗಿ ನಡೆಯುತ್ತಿದ್ದ ಕಾಂಗ್ರೆಸ್ಸಿನ ಸಭೆಯ ಮೇಲೆ ಪೊಲೀಸರು ನಿಷೇಧಾಜ್ಞೆ ಹೊರಡಿಸಿ ನಡೆದುಕೊಂಡ ರೀತಿಯಿಂದ ತೀವ್ರ ಅಸಮಾಧಾನಗೊಂಡರು. ಮೂಲಭೂತ ಸ್ವಾತಂತ್ರ್ಯಕ್ಕಾಗಿ ಹೋರಾಟ ಅನಿವಾರ್ಯವೆಂದು ಭಾವಿಸಿದ ಇವರು 1938ರಲ್ಲಿ ಅಂದಿನ ಮೈಸೂರು ಸಂಸ್ಥಾನ ಕಾಂಗ್ರೆಸ್‍ಗೆ ಸೇರಿದರು. ಅದೇ ವರ್ಷ ಏಪ್ರಿಲ್‍ನಲ್ಲಿ ಶಿವಪುರದಲ್ಲಿ ಸಮಾವೇಶಗೊಂಡಿದ್ದ ಅಖಿಲ ಮೈಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನದಲ್ಲಿ ಭಾಗವಹಿಸಿ, ಅಲ್ಲಿ ನಡೆದ ಧ್ವಜಸತ್ಯಾಗ್ರಹ ದಲ್ಲೂ ಪಾಲ್ಗೊಂಡರು. ಅಂದಿನಿಂದ ಇವರು ಸಂಸ್ಥಾನದ ಕಾಂಗ್ರೆಸ್ ಚಳವಳಿಯ ಮುಂಚೂಣಿಯ ನಾಯಕರಲ್ಲೊಬ್ಬರಾದರು. ಜವಾಬ್ದಾರಿ ಸರ್ಕಾರದ ಸ್ಥಾಪನೆಗೆ ನಡೆದ ಸತ್ಯಾಗ್ರಹಗಳಲ್ಲಿ ಇವರು ಭಾಗವಹಿಸಿ ಸರ್ಕಾರದ ಪ್ರತಿಬಂಧಕಾಜ್ಞೆಗಳನ್ನು ಮುರಿದು ಹಲವು ಬಾರಿ ಜೈಲುವಾಸವನ್ನೂ ಅನುಭವಿಸಿದರು.

ಇವರು 1941-42ರ ಆಗಿನ ರಾಜಕೀಯ ಸಂದಿಗ್ಧ ಸಮಯದಲ್ಲಿ ಮೈಸೂರು ಸಂಸ್ಥಾನ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಚುನಾಯಿತರಾದರು. ಆಗ ಸಂಸ್ಥಾನದಾದ್ಯಂತ ಪ್ರವಾಸಮಾಡಿ ಚಳವಳಿಗೆ ಜನರನ್ನು ಹುರಿದುಂಬಿಸಿದರು. ಆ ಸಂದರ್ಭಗಳಲ್ಲಿ ಇವರು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಚಾರಗಳಿಗೆ ಆಧ್ಯಾತ್ಮಿಕ ವಿಷಯಗಳನ್ನು ಲೇಪನಮಾಡಿ ಮಾಡುತ್ತಿದ್ದ ಭಾಷಣಗಳು ಜನಪ್ರಿಯವಾಗಿದ್ದವು.

ಮೈಸೂರು ಕಾಂಗ್ರೆಸ್ ಆಶ್ರಯದಲ್ಲಿ 1947ರ ಸೆಪ್ಟಂಬರ್‍ನಲ್ಲಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗಾಗಿ ಮೈಸೂರು ಚಲೋ ಸತ್ಯಾಗ್ರಹ ಆರಂಭವಾಯಿತು. ಅಂದಿನ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ. ರೆಡ್ಡಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರೂ ಬೆಂಗಳೂರಿನಿಂದ ಹೊರಟು ಪಾದಯಾತ್ರೆಯಲ್ಲಿ ಮೈಸೂರಿಗೆ ಬಂದು ಅರಮನೆ ಮುಂದೆ ಸತ್ಯಾಗ್ರಹ ಮಾಡುವ ಕಾರ್ಯ ಕ್ರಮವಿತ್ತು. ಈ ತಂಡದಲ್ಲಿ ಇವರೂ ಇದ್ದರು. ಸರ್ಕಾರದವರು ಮೈಸೂರು ಚಲೋ ತಂಡವನ್ನು ಬೆಂಗಳೂರಿನಲ್ಲೇ ಬಂಧಿಸಿದರು. ಆಗ ಇವರೂ ಬಂಧಿತರಾದರು. ಈ ಹೋರಾಟದ ಅನಂತರ ಕೆ.ಸಿ. ರೆಡ್ಡಿಯವರು ರಚಿಸಿದ ಪ್ರಪ್ರಥಮ ಪ್ರಜಾಸತ್ತಾತ್ಮಕ ಮಂತ್ರಿಮಂಡಲದಲ್ಲಿ ಇವರು ಸಚಿವರಾಗಿದ್ದರು. 1952ರ ಪ್ರಥಮ ಮಹಾಚುನಾವಣೆಗಳ ಅನಂತರ ಮೈಸೂರು ವಿಧಾನ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಇವರು ಆ ಹುದ್ದೆಯಲ್ಲಿದ್ದಾಗಲೇ ನಿಧನರಾದರು.

(ಬಿ.ಆರ್.ಪಿ.)