ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿದ್ದವನಹಳ್ಳಿ ಕೃಷ್ಣಶರ್ಮ

ಸಿದ್ದವನಹಳ್ಳಿ ಕೃಷ್ಣಶರ್ಮ

1904-73. ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರು. ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯಲ್ಲಿ 1904 ಜುಲೈ 31ರಂದು ಜನಿಸಿದರು. ಮೂಲತಃ ಇವರು ತೆಲುಗು ವೈದಿಕ ಮನೆತನಕ್ಕೆ ಸೇರಿದವರು. ಇವರ ತಂದೆ ರಂಗಾಚಾರ್ಯರು, ತಾಯಿ ಶೇಷಮ್ಮ. ತಮ್ಮಹುಟ್ಟೂರಲ್ಲಿ ಆರಂಭದ ಶಿಕ್ಷಣವನ್ನು ಮುಗಿಸಿದ ಇವರು ಅನಂತರ ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ.ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು.

1920-21ರ ಸುಮಾರಿಗೆ ಪಂಡಿತ ತಾರಾನಾಥರ ಆಕರ್ಷಣೆಯಿಂದಾಗಿ ಅವರ ಆಶ್ರಮದಲ್ಲಿ ಸ್ವಲ್ಪಕಾಲವಿದ್ದ ಇವರು ಅಲ್ಲಿಂದ ಬಂದನಂತರ 1925ರಲ್ಲಿ ವಿವಾಹವಾದರು. 1927ರಲ್ಲಿ ಹೈದರಾಬಾದಿಗೆ ಹೋಗಿ ಅಲ್ಲಿ ಮೆಥಡಿಸ್ಟ್ ಶಾಲೆಯೊಂದರಲ್ಲಿ ಮಾಸ್ತರರಾಗಿ ಕೆಲಸಮಾಡಿದರು; ಅಲ್ಲಿನ ರಾಜಕೀಯ ಆಂದೋಲನದಲ್ಲೂ ಸಕ್ರಿಯವಾಗಿ ಪಾಲುಗೊಂಡರು. ನಿಜಾಂ ಆಡಳಿತದ ವಿರುದ್ಧ ಲೇಖನಗಳನ್ನು ಬರೆದು ಜನತೆಯನ್ನು ಪ್ರಚೋದಿಸಿದರು. ಇವರನ್ನು ಬಂಧಿಸಿ ಶಿಕ್ಷಿಸಲು ನಿಜಾಂ ಸರ್ಕಾರ ಪಟ್ಟ ಪ್ರಯತ್ನಗಳೆಲ್ಲ ವಿಫಲವಾಯಿತು. ಕಡೆಗೆ ಇವರಿಗೆ ಹೈದರಾಬಾದು ತೊರೆಯುವಂತೆ ಗಡಿಪಾರು ಆಜ್ಞೆಯಾಯಿತು.

ಭಾರತ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರವಾಗಿದ್ದ ವಾರ್ಧಾಕ್ಕೆ ಹೋಗಿ ಗಾಂಧೀಜಿಯವರ ಒಡನಾಡಿಯಾಗಿ ಆಶ್ರಮದಲ್ಲಿದ್ದು ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ ಇವರು ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರೂ ಅವರಿಗೆ ಕಾರ್ಯದರ್ಶಿಯಾಗಿಯೂ (1936-39) ಕೆಲಸ ಮಾಡಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆ ಅನುಭವಿಸಿದರು.

ಕನ್ನಡ ಪತ್ರಿಕೋದ್ಯಮ ಬೆಳೆವಣಿಗೆಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರು. ಇವರು ಪ್ರಥಮ ಬಾರಿಗೆ ಕನ್ನಡದಲ್ಲಿ ಹರಿಜನ ಪತ್ರಿಕೆಯನ್ನು ಪ್ರಕಟಿಸಿದರು. ವಿಶ್ವಕರ್ನಾಟಕ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ಆಕರ್ಷಕ ಗದ್ಯಶೈಲಿಯಲ್ಲಿ ಇವರು ಬರೆಯುತ್ತಿದ್ದ ಲೇಖನಗಳು, ಸಂಪಾದಕೀಯಗಳು ಬಹುಬೇಗ ಜನಪ್ರಿಯವಾದುವು. ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಿಗೂ ಅಂಕಣಕಾರರಾಗಿದ್ದ ಇವರು ಬೆಡಗಿನ ಭಾಷೆಯಲ್ಲಿ ನಿರ್ಮಿಸುತ್ತಿದ್ದ ಶಬ್ದ ಶಿಲ್ಪಗಳು ಆಕರ್ಷಣೀಯ ವಾಗಿರುತ್ತಿದ್ದುವು. ಇವರು ನಿರ್ವಹಿಸಿದ ಮಾತಿನ ಮಂಟಪ, ಚಿಂತನ-ಮಂಥನ ಎಂಬ ಅಂಕಣಗಳಂತೂ ಸುಪ್ರಸಿದ್ಧವಾದುವು. ವಾಹಿನಿ, ಜಯಕರ್ನಾಟಕ, ನವೋದಯ, ಭೂದಾನ, ಕನ್ನಡನುಡಿ ಈ ಪತ್ರಿಕೆಗಳ ಸಂಪಾದಕರಾಗಿಯೂ ಇವರು ಕೆಲಸಮಾಡಿದ್ದಾರೆ.

ಕನ್ನಡ ಸಂಘ ಸಂಸ್ಥೆಗಳ ಬೆಳೆವಣಿಗೆಗ ಇವರು ಶ್ರಮಿಸಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರು(1949-50). ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗಾಂಧೀ ಸಾಹಿತ್ಯ ಸಂಘವನ್ನೂ ಸಹಕಾರಿ ಸಂಘವನ್ನೂ ಸ್ಥಾಪಿಸಿ ಬೆಳೆಸಿದರು. ಗೋಸೇವಾ ಕ್ಷೇತ್ರದಲ್ಲೂ ಇವರು ಕೆಲಸಮಾಡಿದ್ದಾರೆ. ಸಹಕಾರ ಗೋಸೇವಾಕ್ಷೇತ್ರ ಸ್ಥಾಪನೆ ಮತ್ತು ಬೆಳೆವಣಿಗೆಯಲ್ಲಿ ಇವರ ಪಾತ್ರ ಮಹತ್ತ್ವದ್ದು. ಇದಕ್ಕಾಗಿ ಇವರು ರಚಿಸಿದ ಕಾಮಧೇನು ಎಂಬ ಗ್ರಂಥದ ಪೂರ್ಣವರಮಾನವನ್ನು ಗೋಸೇವೆಗೆ ಬಿಟ್ಟಿದ್ದಾರೆ.

ಸಂಸ್ಕøತ, ಕನ್ನಡ, ಇಂಗ್ಲಿಷ್, ಬಂಗಾಲಿ, ಹಿಂದಿ, ತೆಲುಗು, ತಮಿಳು ಮತ್ತು ಉರ್ದು ಭಾಷೆಗಳಲ್ಲಿ ಪರಿಶ್ರಮ ಪಡೆದಿದ್ದ ಇವರು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯಸೇವೆ ಮಾಡಿದ್ದಾರೆ. ಸಾಹಿತ್ಯ, ಭೂಗೋಳ, ಚರಿತ್ರೆ, ಧರ್ಮ, ಸಹಕಾರ, ಶಿಕ್ಷಣ, ಗಾಂಧೀವಾದ, ಭೂದಾನ, ರಾಜಕೀಯ ಮುಂತಾದ ನಾನಾ ವಿಷಯಗಳ ಬಗ್ಗೆ ಅನೇಕ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಧಾರವಾಡದ ಗೆಳೆಯರ ಗುಂಪಿನ ಪ್ರಕಟಣೆಯಾದ ಯತಿರಾಜ ರಾಮಾನುಜ ಎಂಬುದು ಇವರ ಪ್ರಥಮ ಕೃತಿ. ವಾರ್ಧಾದಲ್ಲಿದ್ದಾಗ ಅಲ್ಲಿನ ಪರಿಸರದಿಂದ ಪ್ರಭಾವಿತರಾಗಿ ಪರ್ಣಕುಟಿ, ವಾರ್ಧಾಯಾತ್ರೆ ಎಂಬ ಪುಸ್ತಕಗಳನ್ನು ಬರೆದರು. ವಿನೋಬಾ ಅವರಿಂದ ಪ್ರೇರಿತರಾಗಿ ನವೋದಯ ಯಾತ್ರೆ, ರಾಮನಾಮ, ಆಶ್ರಮಜೀವನ, ಬೆಂಗಳೂರಿನಲ್ಲಿ ವಿನೋಬಾ, ಭೂದಾನ ಮುಂತಾದ ಕಿರುಹೊತ್ತಗೆಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಕಿಡಿಗಳು, ದೀಪಮಾಲೆ, ಕುಲದೀಪಕರು ಇವು ಇವರು ಪ್ರಕಟಿಸಿರುವ ವ್ಯಕ್ತಿಚಿತ್ರ ಸಂಕಲನಗಳು. ರಾಜೇಂದ್ರ ಪ್ರಸಾದ್, ಮೋತಿ ಲಾಲ್, ಜವಾಹರಲಾಲ್ ನೆಹರೂ, ಕಸ್ತೂರಬಾ-ಇವು ಇವರು ಬರೆದಿರುವ ಜೀವನಚರಿತ್ರೆಗಳು. ಭಾಷಾಂತರದಲ್ಲಿ ನುರಿತಿದ್ದ ಇವರು ಗಾಂಧೀಜಿಯವರ ಹಿಂದ್ ಸ್ವರಾಜ್ಯ, ಆರೋಗ್ಯರಹಸ್ಯ, ಸಂವಾದ ಮಾಲೆ, ಆತ್ಮಕಥೆ, ಗೀತಾಮಾತೆ, ಮೀನೂಮಸಾನಿಯವರ ನಮ್ಮ ಹಿಂದೂಸ್ತಾನ, ನೆಹರೂರವರ ಗಾಂಧಿ, ಕೃಪಲಾನಿಯವರ ಮೂಲಶಿಕ್ಷಣ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆ.ಎಂ. ಮುನ್ಷಿಯವರ ಕೃಷ್ಣಾವತಾರ ಎಂಬ ಗ್ರಂಥವನ್ನು ಕನ್ನಡದಲ್ಲಿ ಅರ್ಥವತ್ತಾಗಿ ಮೂಡಿಸಿದ್ದಾರೆ. ರಾಮಾವತಾರ ಎಂಬುದು ಇವರ ಸ್ವತಂತ್ರಕೃತಿ. ಸಮಾಜಶಿಕ್ಷಣ, ಗಾಂಧಿ ಮತ್ತು ಕರ್ನಾಟಕ ಎಂಬ ಎರಡು ಗ್ರಂಥಗಳನ್ನು ಇವರು ಸಂಪಾದಿಸಿದ್ದಾರೆ.

ಇವರಿಗೆ 1973ರಲ್ಲಿ ಸಿದ್ಧಹಸ್ತ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು. ಅದೇ ವರ್ಷ ಇವರು ನಿಧನರಾದರು.

 												(ಎ.ಎಮ್.ಪಿ.)