ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿದ್ದಾಪುರ

ಸಿದ್ದಾಪುರ ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಆ ತಾಲ್ಲೂಕಿನ ಆಡಳಿತ ಕೇಂದ್ರ. ಕಾರವಾರಕ್ಕೆ ಆಗ್ನೇಯದಲ್ಲಿರುವ ಈ ತಾಲ್ಲೂಕಿನ ಉತ್ತರಕ್ಕೆ ಶಿರಸಿ, ಪಶ್ಚಿಮಕ್ಕೆ ಕುಮಟ ಮತ್ತು ಹೊನ್ನಾವರ ತಾಲ್ಲೂಕುಗಳೂ ಪೂರ್ವ ಮತ್ತು ದಕ್ಷಿಣಕ್ಕೆ ಶಿವಮೊಗ್ಗ ಜಿಲ್ಲೆಯ ಸೊರಬ ಮತ್ತು ಸಾಗರ ತಾಲ್ಲೂಕುಗಳೂ ಇವೆ. ಉಂಬಳಮನೆ, ಸಿದ್ದಾಪುರ ಈ ತಾಲ್ಲೂಕಿನಲ್ಲಿರುವ ಹೋಬಳಿಗಳು. ಒಟ್ಟು 200 ಗ್ರಾಮಗಳು ಇವೆ. ತಾಲ್ಲೂಕಿನ ವಿಸ್ತೀರ್ಣ 619 ಚ.ಕಿ.ಮೀ. ಜನಸಂಖ್ಯೆ 1,06,774.

ತಾಲ್ಲೂಕಿನ ದಕ್ಷಿಣದಲ್ಲಿ ಸಿದ್ದಾಪುರ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗಡಿಯಾಗಿ ಶರಾವತಿ ನದಿ ಪಶ್ಚಿಮಾಭಿಮುಖವಾಗಿ ಹರಿದು ಮುಂದೆ ಹೊನ್ನಾವರ ತಾಲ್ಲೂಕಿನ ಮುಖಾಂತರ ಅರಬ್ಬೀ ಸಮುದ್ರ ಸೇರುವುದು. ಇಲ್ಲಿಂದ ಶರಾವತಿ ನದಿಯ ಗೇರುಸೊಪ್ಪೆ ಜಲಪಾತ ಸುಮಾರು 19 ಕಿಮೀ ದೂರದಲ್ಲಿದೆ. ಅಘನಾಶಿನಿ ನದಿಯ ಪೂರ್ವಭಾಗ ಈ ತಾಲ್ಲೂಕಿನ ಈಶಾನ್ಯದಲ್ಲಿ ಪಶ್ಚಿಮಾಭಿಮುಖವಾಗಿ ತದಡಿ ನದಿ ಎಂಬ ಹೆಸರಿನಿಂದ ಮುತ್ತಳ್ಳಿ, ಬಳೂರು ಮತ್ತು ಉಂಚಳ್ಳಿ ಮುಖಾಂತರ ಹರಿದು ಕುಮಟ ತಾಲ್ಲೂಕನ್ನು ಪ್ರವೇಶಿಸುತ್ತದೆ. ಈ ದೊಡ್ಡ ನದಿಗಳಿಗಿಂತ ಇಲ್ಲಿ ಹರಿಯುವ ಅನೇಕ ಸಣ್ಣ ತೊರೆಗಳು ತಾಲ್ಲೂಕಿನ ವ್ಯವಸಾಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿವೆ.

ತಾಲ್ಲೂಕಿನ ಪಶ್ಚಿಮ ಭಾಗ ಬೆಟ್ಟಗಳಿಂದ ಕೂಡಿದ್ದು ದಕ್ಷಿಣ ಭಾಗ ದಟ್ಟಕಾಡುಗಳಿಂದ ಕೂಡಿದ್ದರೆ ಉತ್ತರ ಭಾಗ ಕೆಲವೆಡೆ ಬೋಳು ನೆಲದಿಂದ ಕೂಡಿದೆ. ಈ ಪಶ್ಚಿಮ ಬೆಟ್ಟಗಳ ಕಣಿವೆ ಪ್ರದೇಶಗಳೆಲ್ಲ ತೋಟಗಳಿಂದ ತುಂಬಿವೆ. ಮಧ್ಯಭಾಗ ಸಣ್ಣ ಬೆಟ್ಟಗುಡ್ಡಗಳಿಂದ ಕೂಡಿದ್ದು ಸದಾ ಹರಿಯುವ ಝರಿಗಳಿಂದ ಕೂಡಿದೆ. ತಾಲ್ಲೂಕಿನ ಪೂರ್ವಭಾಗ ಬೆಟ್ಟಗುಡ್ಡಗಳು ವಿರಳವಾಗಿರುವ ಮೈದಾನ ಪ್ರದೇಶ. ಈ ಭಾಗವೂ ದಟ್ಟ ಮರಗಿಡಗಳಿಂದ ಬತ್ತ ಕಬ್ಬು ಗದ್ದೆಗಳಿಂದ ಕೂಡಿದೆ. ಅತ್ಯಂತ ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಸದಾ ಹಸಿರಾಗಿರುವ ದಟ್ಟ ಕಾಡುಗಳಿಂದ ತುಂಬಿದೆ. ವಾರ್ಷಿಕ ಸರಾಸರಿ ಮಳೆ 2,428 ಮಿಮೀ.

ತಾಲ್ಲೂಕಿನ ಅರಣ್ಯಗಳಲ್ಲಿ ಬೆಲೆಬಾಳುವ, ಉಪಯುಕ್ತ ಮರಗಳು ಬೆಳೆಯುವುವು. ಜೇನು, ಕೆಲವು ಜಾತಿಯ ಫಲಗಳು, ಗಿಡಮೂಲಿಕೆಗಳು ಇತರ ಉತ್ಪನ್ನಗಳು. ಕಾಡುಗಳಲ್ಲಿ ಹುಲಿ, ಚಿಗರೆ, ಮೊಲ, ಕಾಡುಹಂದಿ, ಕಾಡುಕೋಣ, ಕಾಡುಕೋಳಿ, ನರಿ ಮುಂತಾದವುಗಳನ್ನೂ ವಿವಿಧ ಬಗೆಯ ಹಾವುಗಳನ್ನೂ ನೋಡಬಹುದು.

ತಾಲ್ಲೂಕಿನ ಪಶ್ಚಿಮ ಭಾಗದ ಎತ್ತರ ಪ್ರದೇಶಗಳಲ್ಲಿ ಕೆಂಪುಮಣ್ಣಿನ ಭೂಮಿಯೂ ಕಣಿವೆಗಳಲ್ಲಿ ಫಲವತ್ತಾದ ಜಂಬುಮಣ್ಣಿನ ಪ್ರದೇಶವೂ ಇದ್ದು ಪೂರ್ವದಲ್ಲಿ ಕೆಂಪುಮಣ್ಣಿನ ಭೂಪ್ರದೇಶದಿಂದ ಕೂಡಿದೆ. ಬತ್ತ ಮತ್ತು ಕಬ್ಬು ಇಲ್ಲಿನ ಮುಖ್ಯ ಬೆಳೆಗಳು. ತೊಗರಿ ಹುರುಳಿ ಮುಂತಾದ ಧಾನ್ಯಗಳನ್ನೂ ಬೆಳೆಯುತ್ತಾರೆ. ಅಡಕೆ, ಮೆಣಸು, ಏಲಕ್ಕಿ, ವೀಳೆಯದೆಲೆ, ನಿಂಬೆ ಮತ್ತು ಕಿತ್ತಳೆಹಣ್ಣು ಇವು ತೋಟದ ಬೆಳೆಗಳು.

ಸಿದ್ದಾಪುರ ತಾಲ್ಲೂಕು ಸ್ವಾತಂತ್ರ್ಯ ಸಂಗ್ರಾಮದ ಕರನಿರಾಕರಣೆ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿ ಪ್ರಸಿದ್ಧವಾಗಿದೆ.

ಈ ತಾಲ್ಲೂಕಿನ ಉಂಚಳ್ಳಿ ಜಲಪಾತ ಸಿದ್ದಾಪುರಕ್ಕೆ ಈಶಾನ್ಯದಲ್ಲಿ ಸು. 19 ಕಿಮೀ ದೂರದಲ್ಲಿದೆ. ತಾಲ್ಲೂಕಿನ ಗಡಿಯ ಸಮೀಪ ಶರಾವತಿ ನದಿಯ ಜೋಗ ಜಲಪಾತವಿದೆ. ಸಿದ್ದಾಪುರಕ್ಕೆ ಪಶ್ಚಿಮದಲ್ಲಿ ಸು. 8 ಕಿಮೀ ದೂರದಲ್ಲಿರುವ ಬಿಳಗಿ ಗ್ರಾಮದಲ್ಲಿ ಕೋಟೆ ಮತ್ತು ಅರಮನೆಯ ಅವಶೇಷಗಳಿವೆ. ಇಲ್ಲೊಂದು ಪಾಶ್ರ್ವನಾಥ ಬಸದಿ ಇದೆ. ಸಿದ್ದಾಪುರದ ಪಶ್ಚಿಮಕ್ಕೆ ಸು. 22 ಕಿಮೀ ದೂರದಲ್ಲಿ ಕುಮಟ-ಸಿದ್ದಾಪುರ ಗಡಿಯ ದೊಡ್ಡಮನೆ ಘಾಟ್ ಮಾರ್ಗದಲ್ಲಿ ದೊಡ್ಡ ಮನೆ, ಸಿರಿಗುಣ ಗ್ರಾಮಗಳಿವೆ. ಸಿದ್ದಾಪುರದ ಪಶ್ಚಿಮಕ್ಕೆ ಸುಮಾರು ಒಂದೂವರೆ ಕಿಮೀ ದೂರದಲ್ಲಿರುವ ಹೊಸೂರು ಗ್ರಾಮದಲ್ಲಿ ಒಂದು ಹಳೆಯ ದೇವಾಲಯ ಮತ್ತು ಎರಡು ಶಿಲಾಶಾಸನಗಳಿವೆ. ಬಿಳಗಿಯ ನೈಋತ್ಯಕ್ಕೆ ಸು. 8 ಕಿಮೀ ದೂರದಲ್ಲಿ ಸಮುದ್ರಮಟ್ಟದಿಂದ 457 ಮೀಟರ್ ಎತ್ತರವಿರುವ ಹುಕಾಳಿ ಗುಡ್ಡವಿದೆ. ಬಿಳಗಿಯ ಪಶ್ಚಿಮಕ್ಕೆ ಸು. 5 ಕಿಮೀ ದೂರದಲ್ಲಿರುವ ಇಟಗಿಯಲ್ಲಿ ರಾಮೇಶ್ವರ ದೇವಾಲಯವಿದೆ. ಸಿದ್ದಾಪುರದ ನೈಋತ್ಯಕ್ಕೆ ಸು. 16 ಕಿಮೀ ದೂರದಲ್ಲಿ ಇರುವ ಕೊಡಕಣಿ ಗ್ರಾಮ ಒಂದು ಜೈನಕೇಂದ್ರ. ಇದು ಗೇರುಸೊಪ್ಪೆ ಜಲಪಾತಕ್ಕೆ ಹತ್ತಿರದ ಗ್ರಾಮವಾಗಿದ್ದು ಇಲ್ಲಿ ಒಂದು ಪ್ರವಾಸಿ ಮಂದಿರವಿದೆ. ಸಿದ್ದಾಪುರದ ಉತ್ತರಕ್ಕೆ ಸುಮಾರು 3 ಕಿಮೀ ದೂರದಲ್ಲಿ ಕೊಂಡ್ಲಿ ಗ್ರಾಮವಿದೆ. ಇಲ್ಲೊಂದು ಹಳೆಯ ಕೋಟೆ ಮತ್ತು ಕಾಳಮ್ಮ ದೇವಾಲಯವಿದೆ. ಸಿದ್ದಾಪುರ-ಕುಮಟ ಗಡಿಯ ದೊಡ್ಡಮನೆಯ ಉತ್ತರಕ್ಕೆ ನಿಲಕುಂದ ಘಾಟ್ ಮಾರ್ಗವಿದೆ. ನಿಲಕುಂದ, ಕುಲುಗಾಡಿ ಗ್ರಾಮಗಳು ಈ ಮಾರ್ಗದಲ್ಲಿವೆ.

ಸಿದ್ದಾಪುರ ಈ ತಾಲ್ಲೂಕಿನ ಮುಖ್ಯಸ್ಥಳ ಮತ್ತು ಆಡಳಿತ ಕೇಂದ್ರ. ಶಿವಮೊಗ್ಗ ಜಿಲ್ಲಾ ಗಡಿಯ ಪಶ್ಚಿಮಕ್ಕೆ 5ಕಿಮೀ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರಿನಲ್ಲಿ (ಹರಿಯುವ ವರದಾ ನದಿಯ ಆಸರೆಯಲ್ಲಿ) ಸಹ್ಯಾದ್ರಿಯ ನಿಸರ್ಗ ಸೌಂದರ್ಯದ ಮಡಿಲಲ್ಲಿರುವ ಈ ಊರು ಸಮುದ್ರ ಪಾತಳಿಯಿಂದ 606 ಮೀ ಎತ್ತರದಲ್ಲಿದೆ. ಜೋಗ ಜಲಪಾತ ಇದರ ದಕ್ಷಿಣಕ್ಕೆ 16 ಕಿಮೀ ದೂರದಲ್ಲಿದೆ. ಕಾರವಾರ, ಅಂಕೋಲ, ಕುಮಟ ಪಟ್ಟಣಗಳಿಗೆ ಆಗ್ನೇಯ ದಿಕ್ಕಿನಲ್ಲೂ ಹೊನ್ನಾವರಕ್ಕೆ ಪೂರ್ವದಲ್ಲೂ ಭಟ್ಕಳಕ್ಕೆ ಈಶಾನ್ಯದಲ್ಲೂ ಶಿರಸಿಗೆ ದಕ್ಷಿಣದಲ್ಲೂ ಇರುವ ಈ ಪಟ್ಟಣ ಒಂದು ವ್ಯಾಪಾರ ಕೇಂದ್ರವಾಗಿದೆ. ತಾಳಗುಪ್ಪ ರೈಲುನಿಲ್ದಾಣ ಈ ಪಟ್ಟಣಕ್ಕೆ ಹತ್ತಿರವಾದದ್ದು.

ಬಿಳಗಿಯ ಸಿದ್ದಮ್ಮ ರಾಣಿಯ ಹೆಸರಿನಿಂದ ಈ ಊರಿಗೆ ಸಿದ್ದಾಪುರ ಎಂದು ಹೆಸರಾಯಿತು ಎಂದು ಪ್ರತೀತಿ. (ಆರ್.ಜಿ.ಆರ್.)