ಸಿದ್ದಿ ಕರ್ನಾಟಕದ ಒಂದು ಪ್ರಮುಖ ಬುಡಕಟ್ಟು. ಇಂದಿಗೂ ಗುಡ್ಡಗಾಡುಗಳಲ್ಲಿ ವಾಸಿಸುತ್ತಿರುವ ಇವರನ್ನು ಪರಿಶಿಷ್ಟ ಪಂಗಡವೆಂದು ಗುಜರಾತಿನಲ್ಲಿ ಮಾತ್ರ ಗುರುತಿಸಲಾಗಿದೆ. ಕರ್ನಾಟಕದಲ್ಲಿ ಸಿದ್ದಿಯರನ್ನು ಹಿಂದುಳಿದ ಗುಂಪಿಗೆ ಸೇರಿಸಲಾಗಿದೆ. ಇವರದು ದಪ್ಪತುಟಿ, ಚಪ್ಪಟೆಮೂಗು, ಚಿಕ್ಕಹಣೆ, ಒರಟಾದ ಗುಂಗುರುಗೂದಲು, ಕಪ್ಪುವರ್ಣ, ಎತ್ತರದ ಸಶಕ್ತ ಮೈಕಟ್ಟು. ಇವರು ನೀಗ್ರೊ ಗುಂಪಿಗೆ ಸೇರಿದವರೆಂಬುದು ಇವರ ಚಹರೆಗಳಿಂದ ತಿಳಿದುಬರುತ್ತದೆ. ಡಚ್ಚರು, ಪೋರ್ಚುಗೀಸರು, ಅರಬರು ಮತ್ತು ಇಂಗ್ಲಿಷರು ಗುಲಾಮರ ಸಂತೆಯಲ್ಲಿ ಕಾಂಗೋ, ಬೆಜಾ ಮುಂತಾದ ಬೇರೆ ಬೇರೆ ಮೂಲಕ್ಕೆ ಸೇರಿದ ಜನರನ್ನು ಭಾರತಕ್ಕೆ ತಂದರು. ಆ ರೀತಿ ತಂದ ಬೆಜಾ ಎಂಬ ಗುಂಪಿನವರೇ ಸಿದ್ದಿಗಳಿರಬೇಕೆಂಬುದು ವಿದ್ವಾಂಸರ ಊಹೆ. ಸಿದ್ದಿ ಎಂಬ ಹೆಸರು ಸಿದಿ ಎಂಬುದರಿಂದ ಬಂದಿರ ಬಹುದು. ಹರ್ಬರ್ಟ್ ರಿಸ್ಲೇ ಎಂಬ ವಿದ್ವಾಂಸ ಸಿದಿ ಎಂದರೆ ಕೂಲಿ ಕಾರರೆಂದು ಹೇಳಿದ್ದಾನೆ. ಸಿದ್ದಿನಾಸ ಎಂಬ ತಮ್ಮ ಮೂಲದೇವರಿಂದ ಈ ಹೆಸರು ಬಂದಿತೆಂಬುದು ಸಿದ್ದಿಗಳ ಅಭಿಪ್ರಾಯ.

ಇವರು ಕರ್ನಾಟಕದಲ್ಲಷ್ಟೇ ಅಲ್ಲದೆ; ಗುಜರಾತ್, ಗೋವ, ಕೇರಳಗಳಲ್ಲಿಯೂ ನೆಲಸಿದ್ದಾರೆ. ಪೋರ್ಚುಗೀಸರ ವಸಾಹತಾಗಿದ್ದ ಗೋವದಿಂದ ಇವರು ಕರ್ನಾಟಕಕ್ಕೆ ಬಂದಂತೆ ತೋರುತ್ತದೆ. ಪೋರ್ಚುಗೀಸರು ತಮ್ಮ ವಶದಲ್ಲಿದ್ದ ಆಫ್ರಿಕದ ಮೊಜಾಂಬಿಕ್ ಎಂಬ ಪ್ರದೇಶದಿಂದ ಸುಮಾರು ನಾಲ್ಕೈದುನೂರು ವರ್ಷಗಳ ಹಿಂದೆ ಗೋವಕ್ಕೆ ಕೂಲಿ ಮತ್ತು ಸೈನ್ಯಕ್ಕಾಗಿ ಇವರನ್ನು ಕರೆತಂದರು. ಪೋರ್ಚುಗೀಸರಿಂದ ತಪ್ಪಿಸಿಕೊಂಡ ಈ ಸಮುದಾಯ ಕರ್ನಾಟಕದ ಗಡಿಭಾಗದ ಅರಣ್ಯಗಳನ್ನು ಸೇರಿದವು. ಆ ಮೂಲದ ಜನ ಉತ್ತರಕನ್ನಡ ಜಿಲ್ಲೆಯ ಅಂಕೋಲ, ಯಲ್ಲಾಪುರ, ಶಿರಸಿ, ಹಳಿಯಾಳ, ಮುಂಡಗೋಡು ತಾಲ್ಲೂಕುಗಳ ಊರುಗಳಲ್ಲಿ ಮತ್ತು ಸುತ್ತುಮುತ್ತಲಿನ ಗುಡ್ಡಗಾಡುಗಳಲ್ಲಿ ವಾಸವಾಗಿದ್ದಾರೆ. ಇವರಲ್ಲಿ ಕ್ರಿಶ್ಚಿಯನ್ ಸಿದ್ದಿ, ಮುಸ್ಲಿಮ್ ಸಿದ್ದಿ ಮತ್ತು ಹಿಂದು ಸಿದ್ದಿಗಳೆಂದು ಮೂರು ಪಂಗಡಗಳಿವೆ. ಹಬ್ಬ ಹರಿದಿನಗಳ ಆಚರಣೆ, ಭಾಷೆಯ ವ್ಯತ್ಯಾಸವನ್ನು ಬಿಟ್ಟರೆ ಉಳಿದಂತೆ ವಿಶೇಷ ಭಿನ್ನತೆ ಈ ಪಂಗಡಗಳ ನಡುವೆ ಕಾಣಬರುವುದಿಲ್ಲ. ಇವರ ಬದುಕನ್ನು ಗಮನಿಸಿದಾಗ ತಮ್ಮದೇ ಆದ ಧರ್ಮ, ಸಂಪ್ರದಾಯ ರೀತಿ ನೀತಿಗಳು ಯಾವುದೂ ಇವರಿಗೆ ನೆನಪಿನಲ್ಲಿ ಇದ್ದಂತೆ ತೋರುವುದಿಲ್ಲ. ಧರ್ಮದಿಂದ ಧರ್ಮಕ್ಕೆ ಸಂಪ್ರದಾಯದಿಂದ ಸಂಪ್ರದಾಯಕ್ಕೆ ಇವರು ತುಂಬ ಸುಲಭವಾಗಿ ಬದಲಾಗುತ್ತಾರೆ. ಸಿದ್ದಿಗಳು ಯಾರ ಮನೆಯಲ್ಲಿ ಕೂಲಿ ಮಾಡುತ್ತಾರೋ ಅಲ್ಲಿಯ ಧರ್ಮವನ್ನು ಸುಲಭವಾಗಿ ಅಂಗೀಕರಿಸುತ್ತಾರೆ. ಕ್ರಿಶ್ಚಿಯನ್ ಸಿದ್ದಿಗಳು ಕನ್ನಡ ಮಿಶ್ರಿತ ಗೋವ ಕೊಂಕಣಿ, ಮುಸ್ಲಿಮ್ ಸಿದ್ದಿಗಳು ಉರ್ದು, ಹಿಂದು ಸಿದ್ದಿಗಳು ಮರಾಠಿ, ಕನ್ನಡ, ಕೊಂಕಣಿ ಸೇರಿದ ಮಿಶ್ರಭಾಷೆ ಮಾತನಾಡುತ್ತಾರೆ. ಅನ್ನ, ಗಂಜಿ ಇವರ ಮುಖ್ಯ ಆಹಾರ. ಮಾಂಸದ ಬಳಕೆಯೂ ಉಂಟು. ಚಿಗರೆ, ಹಂದಿ, ಉಡ, ಪುನುಗುಬೆಕ್ಕು, ಮುಂಗುಸಿ, ಕಾಡುಕೋಳಿ, ಇಣಚಿ, ಮೀನು, ಏಡಿ, ಆಮೆ ಮುಂತಾದ ಪ್ರಾಣಿ, ಪಕ್ಷಿಗಳ ಮಾಂಸ ಇವರಿಗೆ ಪ್ರಿಯವಾದುದು. ಜೇನು ಇಳಿಸುವುದರಲ್ಲಿ ಇವರು ಪಳಗಿದವರು.

ಸಾಂಪ್ರದಾಯಿಕವಾಗಿ ಕಸೆಅಂಗಿ, ಕಚ್ಚೆ ಪಂಚೆ, ರುಮಾಲು ಅಥವಾ ಟೋಪಿಯನ್ನು ಧರಿಸುತ್ತಾರೆ. ಮಹಿಳೆಯರು ಸೀರೆ, ಕುಪ್ಪಸ ತೊಡುತ್ತಾರೆ. ಬೆಳ್ಳಿಬಂಗಾರದ ಆಭರಣಗಳನ್ನು ಧರಿಸುವರು. ಇವರಲ್ಲಿ ಸ್ವಂತ ಭೂಮಿ, ಮನೆ ಹೊಂದಿರುವವರು ವಿರಳ. ಕೂಲಿಯಾಗಿಯೋ ಜೀತದಾಳಾಗಿಯೋ ತಮ್ಮ ಬದುಕನ್ನು ಕಳೆಯುತ್ತಾರೆ.

ಸ್ಥಳೀಯ ಒಕ್ಕಲಿಗರ ಮತ್ತು ಹವ್ಯಕರ ಪ್ರಭಾವಕ್ಕೆ ಇವರು ಒಳಗಾಗಿದ್ದಾರೆ. ಇದನ್ನು ಇವರ ಆಚರಣೆಗಳಲ್ಲಿ ಗುರುತಿಸಬಹುದು. ಹಿಂದು, ಕ್ರೈಸ್ತ, ಮುಸ್ಲಿಮ್ ಸಿದ್ದಿಗಳಲ್ಲಿ ಪರಸ್ಪರ ವಿವಾಹಸಂಬಂಧವಿದೆ. ಮದುವೆಯಲ್ಲಿ ತೆರಕೊಡುವ ಪದ್ಧತಿ ಇಂದಿಗೂ ಇದೆ. ಮನೆಯ ಹಿರಿಯರಿಗೆ, ಹೆಣ್ಣುಮಕ್ಕಳಿಗೆ, ಬುದ್ವಂತ, ಕೋಲುಕಾರರಿಗೆ ಮದುವೆಯ ಸಮಾರಂಭದಲ್ಲಿ ಹೆಚ್ಚಿನ ಪ್ರಾಮುಖ್ಯ. ಮದುವೆಯ ಶಾಸ್ತ್ರ ಹವ್ಯಕರಿಂದ ಪ್ರಭಾವಿತವಾಗಿದೆ. ಮುಸ್ಲಿಮ್ ಸಿದ್ದಿಯರಲ್ಲಿ ಮದುವೆ ಶಾಸ್ತ್ರ ನೆರವೇರಿಸುವವನು ಕಾಜಿ. ಕ್ರಿಶ್ಚಿಯನ್ ಸಿದ್ದಿಗಳ ಮದುವೆ ಚರ್ಚಿನಲ್ಲಿ ನಡೆದರೂ ಉಳಿದ ಶಾಸ್ತ್ರ ಮನೆಯಲ್ಲೇ ನಡೆಯುತ್ತದೆ. ಉಡಿಕೆ ಮಾಡಿಕೊಳ್ಳುವುದು, ಸಿದ್ದಿಯಲ್ಲದ ಹೆಣ್ಣನ್ನು ಮದುವೆಯಾಗುವುದು, ಮದುವೆಯಾಗದೆ ಗರ್ಭಿಣಿಯಾದರೆ ಬಹಿಷ್ಕಾರ ಹಾಕದಿರುವುದು ಮೊದಲಾದ ನಡಾವಳಿ ಇವರಲ್ಲಿದೆ. ಸುಲಿದ ತೆಂಗಿನಕಾಯಿ ಇವರ ಮನೆದೇವರು. ದೇವರಿಗೆ, ಬೂತಕ್ಕೆ ಕುರಿ, ಕೋಳಿ ಬಲಿಕೊಡುತ್ತಾರೆ. ಗ್ರಾಮದೇವತೆಗಳಿಗೂ ನಡೆದುಕೊಳ್ಳುತ್ತಾರೆ. ಡೋಲಿನ ರೀತಿಯ ಢಮಾಮಿ ಎಂಬ ವಾದ್ಯವನ್ನು ಗಂಡಸರು ನುಡಿಸುತ್ತಾರೆ. ಅದರ ಗತ್ತಿಗೆ ತಕ್ಕಂತೆ ಹೆಂಗಸರು ಕುಣಿಯುತ್ತಾರೆ. ಸಂಗ್ಯಾ-ಬಾಳ್ಯ ಯಕ್ಷಗಾನ ಬಯಲಾಟವೂ ಇವರಲ್ಲಿ ರೂಢಿಯಲ್ಲಿದೆ. ದೊಡ್ಡಾಟದ ಧರ್ತಿ, ಗತ್ತುಗಳನ್ನು ಇವರ ಬಯಲಾಟದಲ್ಲಿ ಗುರುತಿಸಬಹುದು.

(ಆರ್.ಎಸ್.ಜೆ.)

ಗುಮಟೆಪಾಂಗು ಎಂಬ ಮಣ್ಣಿನ ಕೊಡ ನುಡಿಸುವ ಸಿದ್ದಿಯರು ಅದರ ತಾಳಕ್ಕೆ ತಕ್ಕಂತೆ ನರ್ತಿಸುವರು. ಮಹಿಳೆಯರಲ್ಲಿ ಪುಗಡಿ ನೃತ್ಯ ಕಂಡುಬರುತ್ತದೆ. ಮುಸ್ಲಿಮ್ ಸಿದ್ದಿಯರಲ್ಲಿ ಅಲಾದಿ ನೃತ್ಯ ಮೊಹರಂ ವೇಳೆಯಲ್ಲಿ ಕಂಡುಬರುತ್ತದೆ.

ಮಹಾಲಯ ಅಮವಾಸ್ಯೆಯ ದಿನ ತಾವೇ ತಯಾರಿಸಿದ ಮದ್ಯ ಸೇವಿಸಿ ವಯಸ್ಸು-ಲಿಂಗ ಭೇದವಿಲ್ಲದೆ ಢಮಾಮಿ, ಗುಮಟೆಪಾಂಗು ನುಡಿಸಿ ನರ್ತಿಸುತ್ತಾರೆ. ಪಿತೃಗಳ ಆರಾಧನೆಯನ್ನು ಅಂದು ನಡೆಸುತ್ತಾರೆ. ಸತ್ತವರು ಸಿದ್ದಿನಾಸ ಸೇರುತ್ತಾರೆಂದು ತಿಳಿಯುವ ಸಿದ್ದಿಗಳು ಶವವನ್ನು ಹೂಳುತ್ತಾರೆ. ಮಡಿ-ಮೈಲಿಗೆಗಳ ಕಟ್ಟುಪಾಡು ಸಿದ್ದಿಗಳಲ್ಲಿ ಇಲ್ಲ.

ಆಧುನಿಕ ಅಕ್ಷರ-ಆರೋಗ್ಯ ಸೌಲಭ್ಯಗಳಿಗೆ ಸಿದ್ದಿಗಳು ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಸಿದ್ದಿ ಅಭಿವೃದ್ಧಿಗಾಗಿ ಸರ್ಕಾರೇತರ ಸಂಘ-ಸಂಸ್ಥೆಗಳು ದುಡಿಯುತ್ತಿವೆ. ದೃಢಕಾಯರಾದ ಸಿದ್ದಿಯರನ್ನು ಕ್ರೀಡಾ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿದೆ.

ಸಿದ್ದಿಗಳಿಗೆ ಸಂಬಂಧಿಸಿದ ಜನಪದ ಕಥೆಗಳನ್ನು ಎಲ್.ಆರ್.ಹೆಗಡೆ, ಸಂಗ್ರಹಿಸಿದ್ದಾರೆ (1971), ಟಿ.ಸಿ. ಫಾಲಾಕ್ಷಪ್ಪ (1968-70) ಸಿದ್ದಿಯರನ್ನು ಕುರಿತು ಸಾಮಾಜಿಕ ಅಧ್ಯಯನ ಮಾಡಿದ್ದಾರೆ. ಉಡುಪಿಯ ಆರ್.ಆರ್.ಸಿ. ಸಂಸ್ಥೆ ಸಿದ್ದಿಯರ ಸಮಗ್ರ ದಾಖಲಾತಿಯನ್ನು ಮಾಡಿದೆ (1996-2000). *