ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿದ್ಧಕಸಿದ್ಧಿ

ಸಿದ್ಧಕಸಿದ್ಧಿ ಕರ್ನಾಟಕದ ಒಂದು ಅಲೆಮಾರಿ ಪಂಗಡ; ವೃತ್ತಿ ಗಾಯಕರು. ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಮತ್ತು ಪಶ್ಚಿಮ ಕರಾವಳಿಯ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಇವರು ಮುಸಲ್ಮಾನ ಪಂಗಡಕ್ಕೆ ಸೇರಿದವರು (ಮೊದಲಿಗೆ ಹಿಂದುಗಳಾ ಗಿದ್ದವರು). ತಮ್ಮನ್ನು ಜಾತಿಗಾರರು, ಭೈರೂಪಗಾರರು ಎಂದು ಕರೆದುಕೊಳ್ಳುತ್ತಾರೆ. ಮೂಲತಃ ಇವರು ನೀಗ್ರೊ ಬುಡಕಟ್ಟಿನವರು ಎಂಬ ಅಭಿಪ್ರಾಯವಿದೆ.

ಇವರಿಗೆ ಹಿಂದು ಹಬ್ಬ, ಹುಣ್ಣಿಮೆ, ಜಾತ್ರೆಗಳು ಬಹು ಸೇರುತ್ತವೆ. ಇವರ ಹೆಣ್ಣುಮಕ್ಕಳು ಅರಿವೆಯ ಡೇರೆಗಳನ್ನು ತಯಾರಿಸುವ ಕಸಬಿನಲ್ಲಿ ಸಿದ್ಧಹಸ್ತರು. ಪುರುಷರು, ಮಕ್ಕಳು ಸೋಗುಹಾಕಿ ಕಾಣಿಕೆ ಪಡೆಯುವುದರ ಜೊತೆಗೆ ಎಮ್ಮೆಗಳನ್ನು ಸಾಕುವುದು, ವ್ಯಾಪಾರ ಮಾಡುವುದು ಇತ್ಯಾದಿ ಉಪಕಸಬುಗಳನ್ನು ಮಾಡುತ್ತಾರೆ.

ಸಿದ್ಧಕಸಿದ್ಧಿಗಳು ಹಾಕುವ ಸಿದ್ಧಿಯ ಸೋಗು ಮನರಂಜಕವಾದುದು. ಅದು ಹೀಗಿದೆ: ಗಂಡಸೊಬ್ಬ ತನ್ನ ಕುಂಡಿಗಳ ಮೇಲೆ ಅರಿವೆಯ ಉಂಡಿಗಳನ್ನು ಕಟ್ಟಿಕೊಂಡು, ಮೇಲೊಂದು ಅರಿವೆಯನ್ನು ಸುತ್ತಿ ಹಿಂಭಾಗವನ್ನು ಏರುಕುಂಡಿಗಳನ್ನಾಗಿ ಮಾಡಿಕೊಳ್ಳುತ್ತಾನೆ. ಮುಖಕ್ಕೆ ಮರದಲ್ಲಿ ಮಾಡಿದ ದೊಡ್ಡ ಮೂಗನ್ನು ಹಾಕಿಕೊಂಡು, ಅದಕ್ಕೆ ಮೀಸೆಗಡ್ಡಗಳನ್ನು ಅಂಟಿಸಿ ಮುಖವಾಡ ಮಾಡಿಕೊಂಡು ಮುಖಕ್ಕೆ ಹಾಕಿಕೊಳ್ಳುತ್ತಾನೆ. ಜೊತೆ ಪುರುಷನೊಬ್ಬನಿಗೆ ಮುಖಕ್ಕೆ ಬಣ್ಣ ಬಳಿದು, ಸ್ತ್ರೀವೇಷ ಹಾಕಿ ಜೊತೆಗಾರ್ತಿಯನ್ನಾಗಿ ಮಾಡಿಕೊಳ್ಳುತ್ತಾನೆ. ಈ ವೇಷವನ್ನು ಚಿಮಣಾ ಎಂದು ಕರೆಯಲಾಗುತ್ತದೆ. ಸಿದ್ಧಿಯು ತನ್ನ ಕೈಯಲ್ಲಿಯ ಟೆಂಗಿನ ಪಟ್ಟೆಯಲ್ಲಿ ಹರಳು ಹಾಕಿ ಅದಕ್ಕೊಂದು ಶುಭ್ರ ಅರಿವೆಯ ಮುಚ್ಚಿ ಗುಳಗುಳಿಸಿ, ತನ್ನ ಹಾಡಿನೊಂದಿಗೆ ಬಲಗೈಯಲ್ಲಿ ಹಿಡಿದು ನುಡಿಸುತ್ತಾನೆ. ಚಿಮಣಾ ಅವನ ಜೊತೆ ತಾಳವನ್ನಾಗಲೀ ದಮಡಿಯನ್ನಾಗಲೀ ಹಿಡಿದು ಬಾರಿಸುತ್ತ ದನಿಗೂಡಿಸಿ ಹಿಮ್ಮೇಳ ಕೊಡುತ್ತಾಳೆ. ಸಿದ್ಧಿಚಿಮಣಾ ಜೊತೆಯಾಗಿ ಹಾಡುವ ಹಾಡುಗಳು ಆಕರ್ಷಕವಾಗಿರುತ್ತವೆ.

ಡರ್ರ್ ಸಿದ್ಧಿ, ಹರ್ರ್ ಸಿದ್ಧಿ, ಸಿದ್ಧಕಸಿದ್ಧಿ, ಹಗೆದಾಗ ಬಿದ್ದಿ, ಹಳಜೋಳ ತಿಂದಿ, ಹಗೆದಾಗ ಹಾಂವಾ, ಬಡಿಬ್ಯಾಡ ಮಾಂವಾ; ಕುಂತರ್ಯಾಕ, ಕುಂತರ್ಯಾಕ, ಚಿಮಣಾ ಬಂದಾಳ, ಮದವಿ ಆಗಾಕ, ಮಾವನ ಹುಡಕಾಕ, ಒಳಗಿನ ಕಸಾ ಹೊರಗ ಒಗಿರಿ, ಹೊರಗಿನ ಕಸಾ ಒಳಗ ಒಗಿರಿ, ದಾಬೇದಾಗ ಕಣಕಿ ಒಗಿರಿ, ಗ್ವಾದಿನ್ಯಾಗ ಎತ್ತಾ ಕಟ್ಟರಿ-ಇತ್ಯಾದಿ ಹಾಡುಗಳನ್ನು ಹಾಡುವುದಲ್ಲದೆ ಅನೇಕ ಜನಪದ ಕಥನಗೀತೆಗಳನ್ನೂ ಹಾಡುತ್ತಾರೆ.

ಸಿದ್ಧಕಸಿದ್ಧಿಗಳು ಹಾಕುವ ಬಯಲು ಸೋಗುಗಳಲ್ಲಿ ಚಿಮಣಾ ಸೋಗು, ಸಿದ್ಧಿ ಸೋಗು, ಮುಖರಿ ಸೋಗು, ಬ್ಯಾಡ್ರ ಸೋಗು, ಕುದರಿ ಸೋಗು ಇವು ಮುಖ್ಯವಾದುವು. ಇವರು ಬಯಲು ಆಟಗಳನ್ನು ಆಡುವುದರಲ್ಲಿಯೂ ನಿಸ್ಸೀಮರು. ಅವುಗಳಲ್ಲಿ ಲಾಗದ ಆಟ, ಕಸರತ್ತಿನ ಆಟ, ಹಾರಿ ಎತ್ತುವ ಆಟ ಇವು ಮುಖ್ಯವಾದುವು.

(ಎನ್.ಎನ್.ಎಸ್.)