ಸಿದ್ಧರಾಮ ಸಂಪಾದಿಸಿ

ಸಿದ್ಧರಾಮ : - ಹನ್ನೆರಡನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಮುದ್ದುಗೌಡ, ಸುಗ್ಗವ್ವೆ ಎಂಬ ದಂಪತಿಗಳಿಗೆ ಮಗನಾಗಿ ಹುಟ್ಟಿದ ಈತ ಬಾಲ್ಯದಿಂದಲೂ ಲೋಕಕ್ಕೆ ವಿಚಿತ್ರವೆನಿಸುವ ರೀತಿಯಲ್ಲಿ ಬೆಳೆದು ಕೊನೆಗೆ ಶ್ರೀಶೈಲದಲ್ಲಿ ಮಲ್ಲಿಕಾರ್ಜುನನ ಸಾಕ್ಷಾತ್ಕಾರ ಪಡೆದುದನ್ನೂ ಅನಂತರ ಸೊನ್ನಲಿಗೆಗೆ ಹಿಂದಿರುಗಿ ಈತನು ಕೈಗೊಂಡ ಕಾರ್ಯಸಾಧನೆಯನ್ನೂ ರಾಘವಾಂಕ ತನ್ನ ಸಿದ್ಧರಾಮಚಾರಿತ್ರದಲ್ಲಿ ಬಹಳ ಅರ್ಥವತ್ತಾಗಿ ನಿರೂಪಿಸಿದ್ದಾನೆ. ಶರಣರ ಕಾರ್ಯಕ್ಷೇತ್ರಕ್ಕೆ ಒಳಗಾಗುವುದಕ್ಕೆ ಮುನ್ನವೇ ಈತ ಸಾಧನೆಯಲ್ಲಿ ಉನ್ನತವಾದ ನಿಲವನ್ನು ಪಡೆದವನಾಗಿದ್ದ. ಸೊನ್ನಲಿಗೆ (ಈಗಿನ ಸೊಲ್ಲಾಪುರ) ಇವನ ಕಾರ್ಯಕ್ಷೇತ್ರವಾಗಿತ್ತು. ಅನೇಕ ಕಡೆಗಳಿಂದ ಶಿಷ್ಯರನ್ನು ಆಕರ್ಷಿಸಿ ತನ್ನದೇ ಆದ ರೀತಿಯಲ್ಲಿ ಜಗತ್ತಿನ ಹಿತಕ್ಕಾಗಿ ದುಡಿಯುತ್ತಿದ್ದ ಈತ ಕರ್ಮಯೋಗಿಯಾಗಿದ್ದ. ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು. ಅನುಗೊಂಬನಿತು ಕಾಯಕಂ ನಡೆಯುತ್ತಿರಬೇಕು ಎನ್ನುವ ಸೂತ್ರವನ್ನು ಅವಲಂಬಿಸಿ ತನ್ನ ಶಿಷ್ಯರೊಡನೆ ತಾನೂ ಗುದ್ದಲಿ ಹಿಡಿದು ಅಗೆಯುತ್ತಿದ್ದ. ಕೆರೆ, ಅರವಟ್ಟಿಗೆ, ಗುಡಿಗೋಪುರಗಳನ್ನು ಕಟ್ಟಿಸುತ್ತ ಬಹು ದೊಡ್ಡ ಆದರ್ಶವನ್ನು ಸಾಧಿಸಿ ತೋರಿಸುತ್ತಿದ್ದ. ಸಾಮಾಜಿಕವಾಗಿ ಇದು ಬಹಳ ದೊಡ್ಡ ಆದರ್ಶವೆಂಬುದು ನಿಜವಾದರೂ ಆಧ್ಯಾತ್ಮಿಕ ಸಾಧನೆ ಇದನ್ನೂ ಒಳಗೊಂಡು ಇದಕ್ಕೂ ಮಿಗಿಲಾಗಿ ಬೆಳೆಯಬೇಕೆಂಬುದನ್ನು ತಿಳಿಸಲು ಅಲ್ಲಮಪ್ರಭು ಸಿದ್ಧರಾಮನ ಬಳಿಗೆ ಬಂದು, ಆತನ ಸಾಧನೆಯಲ್ಲಿದ್ದ ಅರಕೆಯನ್ನು ತೋರಿಸಿ ಆತನನ್ನು ಕಲ್ಯಾಣಕ್ಕೆ ಕರೆದುಕೊಂಡು ಬಂದ. ಅಲ್ಲಿ ಸಿದ್ಧರಾಮ ಬಸವಾದಿ ಶರಣರ ಕಾರ್ಯಕ್ಷೇತ್ರದಲ್ಲಿ ಭಾಗಿಯಾಗಿ ಅವರ ಅನುಭಾವದ ಮಥನದಿಂದ ಶಿವಯೋಗಿಯಾಗಿ ಪರಿಣಮಿಸಿದ.

ಕಲ್ಯಾಣದಲ್ಲಿ ಸಂಭವಿಸಿದ ಕ್ರಾಂತಿಯ ಅನಂತರ ಅಲ್ಲಿನ ಪರಂಪರೆ ಯನ್ನು ಸೊನ್ನಲಿಗೆಯಲ್ಲಿ ಕಾಯ್ದಿಡಲು ಸಿದ್ಧರಾಮ ಪ್ರಯತ್ನಿಸಿದ. ಈತನ ಕಾರ್ಯಕ್ಷಮತೆಯಿಂದ ಮತ್ತು ಆಧ್ಯಾತ್ಮಿಕ ಸಾಧನೆಯಿಂದ ಸೊನ್ನಲಿಗೆ, ಅಭಿನವ ಶ್ರೀಶೈಲ ಎಂಬ ಕೀರ್ತಿಯನ್ನು ಪಡೆಯಿತು. ಇದನ್ನು ನಿರ್ದೇಶಿಸಿ ಅನೇಕ ಶಾಸನಗಳು ದೊರೆತಿವೆ. ಈತ ಕಟ್ಟಿಸಿದ ಕೆರೆ ಮತ್ತು ದೇವಾಲಯ ಗಳು ಈಗಲೂ ಸೊಲ್ಲಾಪುರದಲ್ಲಿ. ಜೀವಂತ ಪರಂಪರೆಯ ಸಾಕ್ಷಿಯಾಗಿ ಉಳಿದಿರುವುದನ್ನು ಕಾಣಬಹುದು.

ಶ್ರೇಷ್ಠ ವಚನಕಾರನಾಗಿದ್ದ ಈತ, ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾನೆ. ಅಪಾರವಾದ ಲೋಕಕಾರುಣ್ಯ, ನಿರಂತರ ಆತ್ಮಜಾಗೃತಿ, ಕರ್ಮಮಾರ್ಗದಲ್ಲಿ ಒಲವು, ಅದರೊಡನೆ ಜ್ಞಾನಭಕ್ತಿಗಳ ಸಮನ್ವಯ ಮತ್ತು ಕೊನೆಯಲ್ಲಿ ಏರಿನಿಂತ ಆಧ್ಯಾತ್ಮಿಕ ನಿಲವು-ಇವು ಇವನ ವಚನಗಳಲ್ಲಿ ಸುಂದರವಾಗಿ ಪ್ರತಿಬಿಂಬಿತವಾಗಿವೆ. ವಚನಗಳನ್ನಲ್ಲದೆ ಈತ ಬಸವಸ್ತೋತ್ರದ ತ್ರಿವಿಧಿ (ಪದ್ಯ 125), ಮಿಶ್ರಸ್ತೋತ್ರದ ತ್ರಿವಿಧಿ (ಪದ್ಯ 109), ಅಷ್ಟಾವರಣ ಸ್ತೋತ್ರದ ತ್ರಿವಿಧಿ (ಪದ್ಯ 144), ಸಂಕೀರ್ಣ ತ್ರಿವಿಧಿಗಳನ್ನು ಯೋಗಿನಾಥ ಎಂಬ ಅಂಕಿತದಲ್ಲಿ ಬರೆದಿದ್ದಾನೆ. ಇಲ್ಲಿಯೂ ಈತನ ಸಾಧನೆ ಮತ್ತು ಸಿದ್ಧಿಗಳು ವ್ಯಕ್ತವಾಗಿವೆ. (ಬಿ.ಎಸ್.)