ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಿಲ್ವರ್ ಓಕ್

ಸಿಲ್ವರ್ ಓಕ್ - ಪ್ರೋಟಿಯೇಸೀ ಕುಟುಂಬಕ್ಕೆ ಸೇರಿದ ಗ್ರೀವಿಲ್ಲಿಯ ರೊಬಸ್ಟ ಪ್ರಭೇದದ ನಿತ್ಯಹಸುರಿನ ಮರ. ಮೂಲ ಸ್ಥಾನ ಆಸ್ಟ್ರೇಲಿಯ. ಮೊದಲಿಗೆ ಕಾಫಿ ತೋಟಗಳಲ್ಲಿ ನೆರಳಿಗಾಗಿ ಹಾಗೂ ಉದ್ಯಾನವನಗಳಲ್ಲಿ ಶೃಂಗಾರಕ್ಕಾಗಿ ಹಾಗೂ ಸಾಲು ಮರಕ್ಕಾಗಿ ಬೆಳೆಸುತ್ತಿದ್ದು, ಈಗ ಅರಣ್ಯ ಇಲಾಖೆಯ ವತಿಯಿಂದ ನೆಡು ತೋಪುಗಳಲ್ಲಿ ಇದನ್ನು ಹೆಚ್ಚುಹೆಚ್ಚಾಗಿ ಬೆಳೆಸಲಾಗುತ್ತಿದೆ. ಮೊನಚಾದ ಉಪಪರ್ಣಗಳ ತಳಭಾಗ ಬೂದು ಬಣ್ಣವಿದ್ದು ದೂರದ ನೋಟಕ್ಕೆ ಬಿಳಿಯ ಹಂದರಗಳು ಕಾಣುವುವು. ಕಿತ್ತಳೆಬಣ್ಣದ ದಟ್ಟ ಗೊಂಚಲಿನ ಹೂಗಳು ಸೆಪ್ಟೆಂಬರ್-ಅಕ್ಟೋಬರ್ ಹಾಗೂ ಮಾರ್ಚ್-ಮೇ ತಿಂಗಳಲ್ಲಿ ಮೂಡಿ, ಕಾಯಿಗಳು ನವೆಂಬರ್ ಮತ್ತು ಜೂನ್-ಜುಲೈಗಳಲ್ಲಿ ಮಾಗಲು ಪ್ರಾರಂಭಿಸುವುವು. ಬೀಜ ಬಲುತೆಳು ಮತ್ತು ಹಗುರ. ಹೊಸದರಲ್ಲಿ ಮಾತ್ರ ಚೆನ್ನಾಗಿ ಮೊಳೆಯುವುದು. ಸ್ವಾಭಾವಿಕ ಪುನರುತ್ಪತ್ತಿ ಸಮರ್ಪಕವಲ್ಲ. ಪಾತಿಯಲ್ಲಿ ಬೆಳೆಸಿದ ಸಸಿಗಳು 10-12 ಸೆಂಮೀ ಎತ್ತರವಾದಾಗ ಮರಳು, ಗೊಬ್ಬರಮಿಶ್ರ ಕೆಮ್ಮಣ್ಣು ತುಂಬಿದ ಕುಂಡ ಇಲ್ಲವೇ ಪಾಲಿತೀನ್ ಚೀಲಗಳಲ್ಲಿ ನೆಟ್ಟು ನೀರೆರೆದು ಸಲಹಬೇಕು. ಸಸಿಗಳು 30-45 ಸೆಂಮೀ. ಎತ್ತರಕ್ಕೆ ಬೆಳೆದ ಅನಂತರ ಮಳೆಗಾಲದಲ್ಲಿ ಹದಮಾಡಿದ ಗುಣಿಗಳಲ್ಲಿ (ಅರ್ಧ ಮೀ) 8 ಮೀ ಅಂತರದಲ್ಲಿ ನೆಟ್ಟು ಬೆಳೆಸಬಹುದು.

ಮಾಸಲು ನಸುಗೆಂಪಿನ ಇದರ ಚೌಬೀನೆ, ಕಂದುಬಣ್ಣದ ಚುಕ್ಕೆಗಳಿಂದೊಡಗೂಡಿ, ಪೀಠೋಪಕರಣ, ಪೆಟ್ಟಿಗೆಗಳು, ಸ್ಲೇಟುಗಳ ಚೌಕಟ್ಟು ಇತ್ಯಾದಿ ಕೆಲಸಗಳಿಗೆ ಉಪಯೋಗಕ್ಕೆ ಬರುತ್ತದೆ. (ಎ.ಕೆ.ಎಸ್.)