ಸಿಸಿಲಿ ಮೆಡಿಟರೇನಿಯನ್ ಸಮುದ್ರದಲ್ಲಿರುವ ಅತ್ಯಂತ ದೊಡ್ಡ ದ್ವೀಪ. ತ್ರಿಕೋನಾಕಾರದಲ್ಲಿರುವ ಈ ದ್ವೀಪ ಇಟಲಿಯ ದಕ್ಷಿಣಭಾಗದಲ್ಲಿದೆ. ಈ ದ್ವೀಪದಲ್ಲಿರುವ ವೇಲೆರ್ಮೋದ ಮೂರ್ ಅರಮನೆಯೊಂದರ ಗೋಡೆಯ ಮೇಲೆ ಸಿಸಿಲಿಯನ್ನು ಹೊಗಳುವ ಮಾತೊಂದಿದೆ. ಯುರೋಪ್ ಪ್ರಪಂಚದ ಹೆಮ್ಮೆ, ಇಟಲಿ ಯುರೋಪಿನ ಹೆಮ್ಮೆ ಸಿಸಿಲಿಯೋ, ಮೆಡಿಟರೇನಿಯನ್ನಿನ ಅತ್ಯಂತ ಸುಂದರ ಉದ್ಯಾನ. ಮೆಸಿನಾ ಜಲಸಂಧಿಯಿಂದ ಇದು ಇಟಲಿಯಿಂದ ಬೇರ್ಪಟ್ಟಿದೆ. ವಿಸ್ತೀರ್ಣ 25,708 ಚ.ಕಿಮೀ. ಇದರ ಸಮುದ್ರತೀರದ ಉದ್ದ 709 ಕಿಮೀ. ಜನಸಂಖ್ಯೆ 50,98,234 (1998).

ಎಟ್ನಾ ಈ ದ್ವೀಪದ ಮೇಲಿರುವ ಎತ್ತರ ಪರ್ವತ. ಅದರ ತಪ್ಪಲಿನಿಂದ ಸ್ವಲ್ಪ ದೂರ ಪೂರ್ವ ತೀರದಲ್ಲಿ ಟೌಮೊರ್‍ಮಿನಾ ಇದೆ. ಬಂಡೆಗಳ ಮೇಲೆ ನೆಲಸಿರುವ ಈ ಸ್ಥಳ ಒಂದು ವಿಹಾರಧಾಮ. ಉತ್ತರಕ್ಕೆ, ಇಟಲಿಗೆ ತೀರ ಸನಿಹದಲ್ಲಿ, ಮೆಸಿನ ಜಲಸಂಧಿ ಇದೆ. ಇಲ್ಲಿ ಇದೇ ಹೆಸರಿನ ಪಟ್ಟಣವಿದೆ. ಇಲ್ಲಿ ರೇಷ್ಮೆ, ರಾಸಾಯನಿಕಗಳು, ಮಸ್ಲಿನ್ ಬಟ್ಟೆ, ಉತ್ಪಾದನೆಯಾಗುತ್ತದೆ. ಇವು ಅನ್ಯ ದೇಶಗಳಿಗೆ ರಫ್ತಾಗುತ್ತವೆ. ಸೈರಾಕ್ಯೂಸ್ ನಗರವನ್ನು ಕ್ರಿ.ಪೂ. 734ರಲ್ಲಿ ಗ್ರೀಕರು ಸ್ಥಾಪಿಸಿದರು. ಇದೊಂದು ಪ್ರಮುಖ ನಗರವಾಗಿತ್ತು. ಇಲ್ಲಿಯ ಜನ ಬಹಳ ಹಿಂದುಳಿದವರು. ಆದರೆ ಸ್ವಾತಂತ್ರ್ಯ ಪ್ರೇಮಿಗಳು. ಇಲ್ಲಿ ಮಾಫಿಯ ಎಂಬ ರಹಸ್ಯ ದರೋಡೆಕೋರರೂ ಕಳ್ಳ ಸಾಗಣೆಕಾರರೂ ಸೇರಿಕೊಂಡು ಜನರಲ್ಲಿ ಭೀತಿ ಮೂಡಿಸಿದ್ದರು. ಇಲ್ಲಿಯ ಜನರ ಮುಖ್ಯ ಕಸಬು ಬೇಸಾಯ. ಗಂಧಕ, ಉಪ್ಪು, ತೈಲ ಸಿಗುತ್ತವೆ. ನಿಂಬೆ, ಕಿತ್ತಳೆ, ಆಲಿವ್ ಹಾಗೂ ಕೆಲವು ಧಾನ್ಯಗಳನ್ನು ಬೆಳೆಯುತ್ತಾರೆ.

ಮೊದಲು ಸಿಸಿಲಿ ಫಿನೀಷಿಯನರ ಅಧೀನದಲ್ಲಿದ್ದು(ಕ್ರಿ.ಪೂ. 1000) ಅವರ ವಸಾಹತಾಗಿತ್ತು. ಮೆಡಿಟರೇನಿಯನ್ನಿನ ಸಮುದ್ರಮಾರ್ಗದಲ್ಲಿರುವು ದರಿಂದ ಇದು ಪದೇ ಪದೇ ಆಕ್ರಮಣಕ್ಕೆ ಒಳಗಾಗುತ್ತಿತ್ತು. ಕ್ರಿ.ಪೂ. 8ನೆಯ ಶತಮಾನದಲ್ಲಿ ಗ್ರೀಕರು ಇದನ್ನು ವಶಪಡಿಸಿಕೊಂಡರು. ಇದು ವಾಣಿಜ್ಯ ಮತ್ತು ವಿದ್ಯಾ ಕೇಂದ್ರವಾಯಿತು. ಅವರ ಅನೇಕ ದೇಗುಲಗಳ ಅವಶೇಷಗಳು ಅಲ್ಲಲ್ಲಿವೆ. ಅನಂತರ ಕಾರ್ತೇಜಿನಿಯನರು, ರೋಮನರು, ವ್ಯಾಂಡಲರು, ಗಾಥರು, ಬಿಜಾನ್‍ಟೀಯನರು ಇಲ್ಲಿ ಆಳಿದರು. ಸಾರಸಿನರು ಅರಬ್ ಸಂಸ್ಕøತಿಯನ್ನು ಇಲ್ಲಿಗೆ ತಂದರು (9ನೆಯ ಶತಮಾನ). ಎರಡು ಶತಮಾನದ ಅನಂತರ ನಾರ್ಮನರು ಇವರನ್ನು ಓಡಿಸಿದರು. 1189ರಲ್ಲಿ ಜರ್ಮನಿಯ ಆರನೆಯ ಹೆನ್ರಿ ಇದನ್ನು ವಶಪಡಿಸಿಕೊಂಡ. 1268ರಲ್ಲಿ ಇದು ಫ್ರಾನ್ಸಿನ ವಶವಾಯಿತು. ದುರಾಡಳಿತವನ್ನು ಸಹಿಸಲಾರದ ಸಿಸಿಲಿಯನ್ನರು ದಂಗೆ ಎದ್ದು ಎಲ್ಲ ವಿದೇಶಿಯರನ್ನೂ ಸದೆ ಬಡಿದರು. ರಕ್ಷಣೆ ನೀಡಬೇಕೆಂದು ಸ್ಪೇನಿಗೆ ಮೊರೆ ಇಟ್ಟರು. ಅನಂತರ ಇದು ಸ್ಪೇನಿನ ಅಧೀನವಾಯಿತು.

1734-35ರಲ್ಲಿ ಡಾನ್ ಗ್ಯಿರ್ಲೋನ್ ನೇಪಲ್ಸ್-ಸಿಸಿಲಗಳ ದೊರೆಯಾದ. ಇಟಲಿಯ ವೀರ ಗ್ಯಾರಿಬಾಲ್ಡಿ ಸಿಸಿಲಿಯನ್ನು ವಿಮೋಚನೆಗೊಳಿಸಿ ಇಟಲಿಗೆ ಸೇರಿಸಿದ(1861).

ಎರಡನೆಯ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳು ಸಿಸಿಲಿಯನ್ನು 1943 ಜುಲೈ 10ರಂದು ವಶಪಡಿಸಿಕೊಂಡವು. ಅನಂತರ ಮೆಸಿನಾ ಅದರ ವಶವಾಯಿತು. ಮಿತ್ರರಾಷ್ಟ್ರಗಳು ಇಟಲಿಯ ಮೇಲೆ ಆಕ್ರಮಣ ಮಾಡಲು ಇದರಿಂದ ಸಾಧ್ಯವಾಯಿತು. ಸಿಸಿಲಿಯಿಂದ ಕಟಾನಿಯ ಮತ್ತು ಮಿಸಿನಾಕ್ಕೆ ಮೋಟರು ಸಂಪರ್ಕ ಏರ್ಪಟ್ಟಿತು(1971).

ವಾಯುಗುಣ : ಇಲ್ಲಿ ಮೆಡಿಟರೇನಿಯನ್ ವಾಯುಗುಣವಿದೆ. ಚಳಿಗಾಲದಲ್ಲಿ ಮಳೆ, ತಂಪಾದ ವಾತಾವರಣ ಇರುತ್ತದೆ. ಬೇಸಗೆಯಲ್ಲಿ ಒಣ ಹವೆ. ಚಳಿಗಾಲದಲ್ಲಿ 70 ಸೆಂ. ಬೇಸಗೆಯಲ್ಲಿ 260 ಸೆಂ. ಉಷ್ಣಾಂಶವಿರುತ್ತದೆ.

ಸಸ್ಯವರ್ಗ : ಇಲ್ಲಿ ಮೆಡಿಟರೇನಿಯನ್ ಸಸ್ಯವರ್ಗವಿದೆ. ದಕ್ಷಿಣದ ತೀರದುದ್ದಕ್ಕೂ ಆಲಿವ್, ನಿಂಬೆ, ಅಡಕೆ ಮುಂತಾದ ಮರಗಳಿವೆ. ಉತ್ತರದ ಇಳಿಜಾರು ಮತ್ತು ಪರ್ವತ ಪ್ರದೇಶಗಳಲ್ಲಿಯೂ ಮೌಂಟ್ ಎಟ್ನಾದ ಇಳಿಜಾರುಗಳಲ್ಲಿಯೂ ಅರಣ್ಯಗಳಿವೆ. ಸಿಸಿಲಿಯಲ್ಲಿ ಓಕ್ ಮತ್ತು ಪೈನ್ ಮರಗಳು ಸು. 4000-6000 ಅಡಿಗಳವರೆಗೆ ಬೆಳೆಯುತ್ತವೆ.

ಪ್ರಾಣಿವರ್ಗ: ಸಿಸಿಲಿಯ ಅರಣ್ಯ ಪ್ರದೇಶದಲ್ಲಿ ವಿವಿಧ ಬಗೆಯ ಪ್ರಾಣಿಗಳಿವೆ. ಜಿಂಕೆ, ಕಾಡುಬೆಕ್ಕು, ಮೊಲ, ನರಿ, ಬೀವರ್, ಮುಳ್ಳುಹಂದಿ ಪ್ರಾಣಿಗಳಿವೆ. ಇವು ಪರ್ವತ ಕಣಿವೆ ಮತ್ತು ತೀರ ಪ್ರದೇಶಗಳಲ್ಲಿ ಕಂಡುಬರುತ್ತವೆ.

ವ್ಯವಸಾಯ : ಸಿಸಿಲಿ ದಟ್ಟ ಅರಣ್ಯವನ್ನು ಹೊಂದಿತ್ತು. ಆದರೆ ಈಗ ಅದು ನಾಶಗೊಂಡಿದ್ದು ಆ ಭಾಗವನ್ನು ರೈತರು ಆಡು ಮತ್ತು ಕುರಿ ಸಾಕಾಣೆಗೆ ಬೇಕಾದ ಹುಲ್ಲು ಬೆಳೆಸಲು ಉಪಯೋಗಿಸಿಕೊಂಡಿದ್ದಾರೆ. ಉಳಿದ ಭಾಗದಲ್ಲಿ ವ್ಯವಸಾಯ ಮಾಡುತ್ತಿದ್ದು, ಸಿಸಿಲಿ ವ್ಯವಸಾಯ ಉತ್ಪನ್ನದಲ್ಲಿ ಪ್ರಾಮುಖ್ಯ ಪಡೆದಿದೆ.

ಭಾಷೆ ಮತ್ತು ಧರ್ಮ : ಸಿಸಿಲಿ ಜನರು ಸಾಮಾನ್ಯವಾಗಿ ಸ್ಥಳೀಯ ಭಾಷೆಗಳನ್ನು ಮಾತನಾಡುತ್ತಾರೆ. ಅರೆಬಿಕ್, ಗ್ರೀಕ್ ಮತ್ತು ಇತರ ಭಾಷೆಗಳೂ ಇವೆ. ಈ ದ್ವೀಪದಲ್ಲಿ ಹೆಚ್ಚು ಜನರು ಗುಂಪುಗಳಲ್ಲಿ ವಾಸಮಾಡುತ್ತಿದ್ದು ಅವರಲ್ಲಿ ಗ್ರೀಕರು, ಕಾರ್ತೇಜಿಯನ್ನರು, ರೋಮನ್ನರು, ಅರಬ್ಬರು, ಗ್ರೀಕರು, ನಾರ್ಮನ್ನರು, ಆಫ್ರಿಕದ ಮುಸ್ಲಿಮರು ಮತ್ತು ಈಜಿಪಿಯನ್ನರು ಮುಂತಾದವರಿದ್ದಾರೆ.

ಸರ್ಕಾರ : 1948ರಲ್ಲಿ ಸಿಸಿಲಿ ಇಟಲಿಯಿಂದ ಸ್ವತಂತ್ರವಾಯಿತು. ಈ ದ್ವೀಪದಲ್ಲಿ 9 ಪ್ರಾಂತಗಳಿವೆ. 90 ಸದಸ್ಯರನ್ನೊಳಗೊಂಡ ಶಾಸನ ಸಭೆಯಿದೆ. ಮೌಂಟ್ ಎಟ್ನಾ : ಮೌಂಟ್ ಎಟ್ನಾ 37.80 ಉತ್ತರ ಅಕ್ಷಾಂಶ ಮತ್ತು 150.10| ಪೂರ್ವ ರೇಖಾಂಶದಲ್ಲಿದ್ದು, ಸಿಸಿಲಿಯಲ್ಲಿಯೇ ಅತ್ಯಂತ ಎತ್ತರವಾದ ಹಾಗೂ ಯುರೋಪಿನಲ್ಲೇ ಅತ್ಯಂತ ದೊಡ್ಡ ಜ್ವಾಲಾಮುಖಿ ಪರ್ವತವಾಗಿದೆ. ಇದು ಶಂಖಾಕೃತಿಯಲ್ಲಿದೆ. ಇದರ ಎತ್ತರ 10,800 ಅಡಿ, ಸುತ್ತಳತೆ 136 ಕಿಮೀ.

   (ಡಿ.ಒ.ಜಿ.)