ಸೀತಾಫಲ ಆನೋನೇಸೀ ಕುಟುಂಬಕ್ಕೆ ಸೇರಿರುವ ಅನೊನಾಸ್ಕ್ವಾಮೋಸಾ ಪ್ರಭೇದದ ಸಸ್ಯ (ಸ್ವೀಟ್ ಸೋಪ್, ಶುಗರ್ ಆಪಲ್, ಕಸ್ಟರ್ಡ್ ಆಪಲ್). ಹಿಂದಿಯಲ್ಲಿ ಸೀತಾಫಲ್, ಶೆರಿಫ್ ಎಂಬುದಾಗಿ ಕರೆಯುತ್ತಾರೆ. ಉತ್ತರ ಅಮೆರಿಕ ಹಾಗೂ ವೆಸ್ಟ್ ಇಂಡಿಸ್ ಇದರ ತವರೂರು. ಉತ್ತರ ಹಾಗೂ ದಕ್ಷಿಣ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ವಿಪುಲವಾಗಿ ಬೆಳೆಸುತ್ತಾರೆ. ಭಾರತದಲ್ಲಿ ಎಲ್ಲ ಪ್ರದೇಶಗಳಲ್ಲಿಯೂ ಬೆಳೆಯುತ್ತದೆ. ಇದು ಸಣ್ಣ ಗಿಡ ಅಥವಾ ಮರದೋಪಾದಿಯಲ್ಲಿ ಬೆಳೆಯುವುದು. ಹೃದಯಾಕಾರದ ಹಣ್ಣು ಹಳದಿ ಅಥವಾ ಹಸುರು ಬಣ್ಣ. ತಿನ್ನಲು ತುಂಬ ರುಚಿಕರ. ಹಣ್ಣಿನಲ್ಲಿ 73.9%ರಷ್ಟು ಶರ್ಕರ, 1.6%ರಷ್ಟು ಪ್ರೋಟೀನು ಹಾಗೂ 0.3% ಕೊಬ್ಬು ಇವೆ. ಜೀವಸತ್ತ್ವ ಎ ಕೂಡ ಅಲ್ಪ ಪ್ರಮಾಣದಲ್ಲಿರುತ್ತದೆ. ಹಸುರೆಲೆಗಳಿಂದ ಎಣ್ಣೆ ತಯಾರಿಸುತ್ತಾರೆ. ಎಲೆ ಹಾಗೂ ಬೀಜದ ಪುಡಿಗಳಲ್ಲಿ ಕೀಟನಾಶಕ ಶಕ್ತಿ ಇದೆ. (ಎ.ಜಿ.ಡಿ.)