ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀತಾರಾಮಯ್ಯ, ಪಾಲಹಳ್ಳಿ

ಸೀತಾರಾಮಯ್ಯ, ಪಾಲಹಳ್ಳಿ 1892-1977. ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸೇವಕರು. ಮೈಸೂರಿನಲ್ಲಿ ಜನಿಸಿದ ಇವರು ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ ದ್ದಾಗ, ಅಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ವೆಂಕಟಕೃಷ್ಣಯ್ಯನವರ ಪ್ರಭಾವಕ್ಕೆ ಒಳಗಾಗಿ ಅವರ ಮಾರ್ಗದರ್ಶನದಿಂದ ತಮ್ಮ ಬದುಕನ್ನು ರೂಪಿಸಿಕೊಂಡರು. ಮದರಾಸಿನಲ್ಲಿ ಪದವಿ ಪರೀಕ್ಷೆ ಹಾಗೂ ನ್ಯಾಯಾಂಗ ವ್ಯಾಸಂಗ ಮುಗಿಸಿ ಮೈಸೂರಿಗೆ ಬಂದು ವಕೀಲಿ ವೃತ್ತಿಯನ್ನು ಆರಂಭಿಸಿದರಾದರೂ ತಮ್ಮ ಬಹುಪಾಲು ವೇಳೆಯನ್ನು ಕಾರ್ಮಿಕರ ಸಂಘಟನೆ ಮತ್ತು ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ಕಳೆದರು. ವಿ.ವಿ.ಗಿರಿಯವರ ಜೊತೆಗಾರರಾಗಿ ಮೈಸೂರು ರೈಲ್ವೆ ಕಾರ್ಮಿಕರ ಸಂಘವನ್ನು ಕಟ್ಟಿದ ಇವರು ಸಂಘದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದರು (ವಿ.ವಿ.ಗಿರಿ ಅಧ್ಯಕ್ಷರಾಗಿದ್ದರು). ರೈಲ್ವೆ ಕಾರ್ಮಿಕರ ಸಂಘಟನೆಯಲ್ಲಿ ತೊಡಗಿದ್ದಾರೆಂದು ಅಂದಿನ ಸರ್ಕಾರ ಇವರನ್ನು ಒಮ್ಮೆ ಮೈಸೂರಿನಿಂದ ಗಡಿಪಾರು ಮಾಡಿತು. ಇನ್ನೊಮ್ಮೆ ವಿ.ವಿ. ಗಿರಿ ಯವರು ಮೈಸೂರು ನಗರಕ್ಕೆ ಬರಬಾರದೆಂದು ಸರ್ಕಾರ ನಿಷೇಧಾಜ್ಞೆ ವಿಧಿಸಿದಾಗ ಇವರು ಮೈಸೂರಿನ ರೈಲ್ವೆ ಕಾರ್ಮಿಕರನ್ನೆಲ್ಲ ಶ್ರೀರಂಗಪಟ್ಟಣಕ್ಕೆ ಕರೆದೊಯ್ದು ಅಲ್ಲಿ ಗಿರಿಯವರ ಭಾಷಣ ಕೇಳುವಂತೆ ಮಾಡಿದರು.

ಮೈಸೂರುಸಂಸ್ಥಾನ ಕಾಂಗ್ರೆಸ್ಸಿನ ಆಶ್ರಯದಲ್ಲಿ 1938ರಲ್ಲಿ ಮದ್ದೂರು ಬಳಿಯ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಸೀತಾರಾಮಯ್ಯ ದಂಪತಿಗಳು ಭಾಗವಹಿಸಿದ್ದರು. ಮುಂದೆ ವಿದುರಾಶ್ವತ್ಥದಲ್ಲಿ ನಡೆದ ಸತ್ಯಾಗ್ರಹದಲ್ಲೂ ಭಾಗವಹಿಸಿದ್ದ ಇವರಿಗೆ ಎರಡು ವರ್ಷ ಜೈಲುಶಿಕ್ಷೆಯೂ ಆಯಿತು. ಮತ್ತೆ ಚಲೇಜಾವ್ ಚಳವಳಿ ಮತ್ತು ಜವಾಬ್ದಾರಿ ಸರ್ಕಾರಕ್ಕಾಗಿ ಮೈಸೂರಿನಲ್ಲಿ ನಡೆದ ಸತ್ಯಾಗ್ರಹದಲ್ಲೂ ಇವರ ಬಂಧನವಾಗಿತ್ತು.

ಇವರು ಹಿಂದಿನ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರಲ್ಲದೆ, ಆ ಸಭೆಯ ಕಾಂಗ್ರೆಸ್ ಪಕ್ಷದ ನಾಯಕ ರಾಗಿಯೂ ಕೆಲಸ ಮಾಡಿದರು. ಮೈಸೂರು ಪುರಸಭೆಯ ಸದಸ್ಯರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಸ್ವಾತಂತ್ರ್ಯೋತ್ತರದಲ್ಲಿ ಮೈಸೂರು ಪುರಸಭೆಯ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾದರು. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರೂ ಆಗಿದ್ದ ಇವರು ಮೈಸೂರು ವಿಧಾನ ಪರಿಷತ್ತಿನ ಅಧ್ಯಕ್ಷರಾಗಿಯೂ ಸ್ವಲ್ಪಕಾಲ ಕಾರ್ಯನಿರ್ವಹಿಸಿದರು. ಇವರ ಸಾರ್ವಜನಿಕ ಸೇವೆಯನ್ನು ಗಮನಿಸಿ ಭಾರತ ಸರ್ಕಾರ 1973ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. (ಬಿ.ಆರ್.ಪಿ.)