ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀತಾರಾಮಯ್ಯ, ವಿ

ವಿ.ಸೀತಾರಾಮಯ್ಯ : - 1899-1983. ವಿ.ಸೀ. ಎಂಬ ಸಂಕ್ಷಿಪ್ತನಾಮ ದಿಂದ ಕನ್ನಡ ನಾಡಿನಲ್ಲೂ ಭಾರತದಲ್ಲೂ ಹೆಸರಾದ ಸಾಹಿತಿ, ವಾಗ್ಮಿ, ಸಾಹಿತ್ಯ ಕಲೆಗಳ ವಿಮರ್ಶಕ, ವಿಚಾರವಾದಿ. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899 ಅಕ್ಟೋಬರ್ 2ರಂದು ಜನಿಸಿದರು. ಹುಲ್ಲೂರು ವೆಂಕಟರಾಮಯ್ಯ ಇವರ ತಂದೆ, ತಾಯಿ ಬೂದಿಗೆರೆ ದೊಡ್ಡವೆಂಕಟಮ್ಮ. 1907ರಲ್ಲಿ ಬೆಂಗಳೂರು ನಗರದ ಪ್ರಾಥಮಿಕ ಶಾಲೆಯೊಂದರಲ್ಲಿ ಕಲಿತು 1917ರಲ್ಲಿ ಮೈಸೂರು ಮಹಾರಾಜ ಕಾಲೇಜು ಸೇರಿ ಅರ್ಥಶಾಸ್ತ್ರದಲ್ಲಿ 1920ರಲ್ಲಿ ಬಿ.ಎ., 1922ರಲ್ಲಿ ಎಂ.ಎ. ಪದವಿ ಪಡೆದರು. 1923ರಿಂದ 1928ರ ವರೆಗೆ ಮೈಸೂರಿನ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ, 1928ರಿಂದ 1955ರ ವರೆಗೆ ಮೈಸೂರು ವಿಶ್ವವಿದ್ಯಾ ನಿಲಯದ ಕಾಲೇಜುಗಳಲ್ಲಿ ಕನ್ನಡದ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ (ಮಧ್ಯೆ ಕೆಲವು ವರ್ಷ ಚಿಕ್ಕಮಗಳೂರು ಕಾಲೇಜಿನ ಸೂಪರಿಂಟೆಂಡೆಂಟರಾಗಿ) ಕೆಲಸ ಮಾಡಿ ನಿವೃತ್ತರಾದರು. ಬಳಿಕ ಬೆಂಗಳೂರು ಕೇಂದ್ರದ ಭಾಷಣ ವಿಭಾಗದ ಮುಖ್ಯಸ್ಥರಾಗಿಯೂ (1956-58), ಹೊನ್ನಾವರದ ಕಾಲೇಜಿನ ಪ್ರಿನ್ಸಿಪಾಲ್ ಆಗಿಯೂ (1964-68) ಸೇವೆ ಸಲ್ಲಿಸಿದರು. ಅಲ್ಲದೆ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿಯೂ ಕನ್ನಡ ನುಡಿ (1939-42), ಪರಿಷತ್ ಪತ್ರಿಕೆ (1939-42 ಹಾಗೂ 1955-56), ಪ್ರಬುದ್ಧ ಕರ್ಣಾಟಕ (1943-47) ಈ ಪತ್ರಿಕೆಗಳ ಸಂಪಾದಕರಾಗಿಯೂ ದುಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಮತ್ತು ಜ್ಞಾನಪೀಠ ಪ್ರಶಸ್ತಿಯ ಸಲಹಾ ಮಂಡಲಿಯ ಸದಸ್ಯರಾಗಿಯೂ ಕೆಲಸ ಮಾಡಿದರು.


ಇವರಿಗೆ ಕನ್ನಡ, ಇಂಗ್ಲಿಷ್ ಭಾಷೆಗಳ ಮೇಲೆ ಸಮಾನ ಪ್ರಭುತ್ವವಿತ್ತು. ಇವರದು ಬಹುಮುಖಿ ಸಾಹಿತ್ಯಸೇವೆ. ಕಾವ್ಯ, ವಿಮರ್ಶೆ, ನಾಟಕ, ಜೀವನಚರಿತ್ರೆ, ಗ್ರಂಥಸಂಪಾದನೆ, ಲಲಿತ ಪ್ರಬಂಧಗಳು, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮುಂತಾದ ವಿವಿಧ ಪ್ರಕಾರಗಳಿಗೆ ಸೇರಿದ 21ಕ್ಕೂ ಹೆಚ್ಚಿನ ಕೃತಿಗಳನ್ನೂ 6 ಇಂಗ್ಲಿಷ್ ಕೃತಿಗಳ ಅನುವಾದಗಳನ್ನೂ ಅನೇಕ ಬಿಡಿ ಲೇಖನಗಳು, ಕಾವ್ಯಾವಲೋಕನ, ಸಮೀಕ್ಷೆಗಳನ್ನೂ ಇವರು ಪ್ರಕಟಿಸಿದ್ದಾರೆ.

ಇವರ ಕೆಲವು ಮುಖ್ಯ ಕೃತಿಗಳು ಹೀಗಿವೆ : ಕವನಸಂಗ್ರಹಗಳು - ಗೀತೆಗಳು (1931), ದೀಪಗಳು (1933), ನೆಳಲು-ಬೆಳಕು (1935), ದ್ರಾಕ್ಷಿ-ದಾಳಿಂಬೆ (1948), ಹೆಜ್ಜೆಪಾಡು (1958), ಅರಲುಬರಲು (1972); ಲಲಿತ ಪ್ರಬಂಧಗಳು - ಪಂಪಾಯಾತ್ರೆ (1928), ಬೆಳುದಿಂಗಳು(1959), ಸೀಕರಣೆ (1976); ನಾಟಕಗಳು - ಸೊಹ್ರಾಬ್ ರುಸ್ತುಂ (1930), ಶ್ರೀಶೈಲ ಶಿಖರ (1960); ಜೀವನಚಿತ್ರಗಳು - ಭಾರತದ ಐವರು ಮಾನ್ಯರು (1951), ಮಹನೀಯರು (1970); ಹಿರಿಯರು, ಗೆಳೆಯರು (1980); ಅನುವಾದಗಳು-ಪಿಗ್‍ಮೇಲಿಯನ್ (1963), ಮೇಜರ್ ಬಾರ್ಬರ (1968), ಬಂಗಾಳಿ ಸಾಹಿತ್ಯಚರಿತ್ರೆ (1966); ವಿಮರ್ಶೆ - ಅಶ್ವತ್ಥಾಮನ್ (1946), ಕವಿಕಾವ್ಯದೃಷ್ಟಿ(1955), ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ (1961), ಸಾಹಿತ್ಯ : ಸಂಪ್ರದಾಯ ಮತ್ತು ಹೊಸ ಮಾರ್ಗ (1967), ಸತ್ಯ ಮತ್ತು ಮೌಲ್ಯ (1972) ಸಾಹಿತ್ಯಾವ ಲೋಕನ (1979); ಇಂಗ್ಲಿಷ್‍ನಲ್ಲಿ - ಪಂಪ (1967), ಕೆ.ವೆಂಕಟಪ್ಪ (1968), ಪುರಂದರದಾಸ (1971), ಎಂ.ವಿಶ್ವೇಶ್ವರಯ್ಯ (1971), ಡಿ.ವಿ.ಗುಂಡಪ್ಪ (1972), ವಾಲ್ಮೀಕಿ ರಾಮಾಯಣ (1972). ಐ.ಬಿ.ಹೆಚ್.ನ ಕವಿಕಾವ್ಯಪರಂಪರೆ ಎಂಬ ಸರಣಿಯಲ್ಲಿನ ಪಂಪ, ರನ್ನ ಜನ್ನ, ಒಂದನೆಯ ನಾಗವರ್ಮ, ಎರಡನೆಯ ನಾಗವರ್ಮ, ಕುಮಾರವ್ಯಾಸ, ಹರಿಹರದೇವ, ನಾಗಚಂದ್ರ, ರಾಘವಾಂಕ ಮೊದಲಾದ ಕವಿಗಳ ವಿಷಯಕವಾದ ಗ್ರಂಥಗಳನ್ನಿವರು ಸಂಪಾದಿಸಿ, ಪೀಠಿಕೆಯಾಗಿ ಕವಿಯ ಕಾವ್ಯದ ಸಮಗ್ರ ಸಮೀಕ್ಷೆಯನ್ನು ನೀಡಿದ್ದಾರೆ. ಕವಿರಾಜಮಾರ್ಗ, ವಡ್ಡಾರಾಧನೆ, ವ್ಯಾಕರಣಗಳು, ಯಕ್ಷಗಾನ, ಜನಪದ ಸಾಹಿತ್ಯ - ಈ ವಿಷಯಗಳನ್ನು ಕುರಿತ ಗ್ರಂಥಗಳು ಇದೇ ಮಾಲಿಕೆಯಲ್ಲಿ ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ.

ಇವರ ಗದ್ಯ ಆಧುನಿಕವಾದ್ದು; ಆಡುಮಾತಿಗೆ ಹತ್ತಿರದ್ದು; ಸುಲಭವಾದರೂ ಅಚ್ಚುಕಟ್ಟಾದ್ದು. ಇವರ ಭಾವಗೀತೆಗಳಲ್ಲಿ ಕೋಮಲ ಅಭಿಪ್ರಾಯಗಳು ಮೂಡಿವೆ. ಇವುಗಳ ಗೇಯ ಗುಣ ತುಂಬ ಆಕರ್ಷಕವಾದುದು.

ಇವರಿಗೆ ಅನೇಕ ಗೌರವಗಳು ಲಭಿಸಿವೆ. 1931ರಲ್ಲಿ ಕಾರವಾರ ದಲ್ಲಿ ಸೇರಿದ್ದ ಕವಿ ಸಮ್ಮೇಳನದ ಅಧ್ಯಕ್ಷತೆಯೂ 1954ರಲ್ಲಿ ಕುಮಟದಲ್ಲಿ ನಡೆದ 36ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಕನ್ನಡ ಜನತೆ ಇವರಿಗೆ ಸಲ್ಲಿಸಿದ ಪ್ರಮುಖ ಗೌರವಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಇವರ ಅರಲುಬರಲು ಕವನ ಸಂಗ್ರಹಕ್ಕೆ 1973ರಲ್ಲಿ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ಆಜೀವ ಗೌರವ ವೇತನವನ್ನು ನೀಡಿ ಪುರಸ್ಕರಿಸಿದೆ. ಇವರಿಗೆ ವಿ.ಸೀ.(1954) ಮತ್ತು ವಿ.ಸೀ. 75 (1973) ಎಂಬ ಎರಡು ಅಭಿನಂದನ ಗ್ರಂಥಗಳನ್ನು ಅರ್ಪಿಸಲಾಗಿದೆ. ಇವರು 1983ರಲ್ಲಿ ನಿಧನರಾದರು. (ಕೆ.ಎಸ್.ಎನ್.ಎ.)