ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀತಾರಾಮಶಾಸ್ತ್ರೀ, ಎನ್ ಎಸ್

ಸೀತಾರಾಮಶಾಸ್ತ್ರೀ, ಎನ್ ಎಸ್

ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹ ಕನ್ನಡದಲ್ಲಿ ದೈನಿಕವೊಂದನ್ನು ಹೊರತರಲು ನಿರ್ಧರಿಸಿದಾಗ ಅದರ ಸಂಪಾದಕರು ಯಾರಾಗಬಹುದೆನ್ನುವ ಕುತೂಹಲ ಚರ್ಚೆಯ ವಸ್ತುವಾಗಿದ್ದುದು ಹಿಂದಿನ ಕಥೆ. ಕನ್ನಡ ಪ್ರಭ ಪತ್ರಿಕೆಯ ಸಾರಥ್ಯವನ್ನು ಎನ್.ಎಸ್.ಸೀತಾರಾಮಶಾಸ್ತ್ರಿ ಅವರು ವಹಿಸಿಕೊಂಡಾಗ ಯಾರೂ ಹುಬ್ಬೇರಿಸಲಿಲ್ಲ.

ಕನ್ನಡ ಪ್ರಭಕ್ಕೆ ಅವರು ಕಾಲಿಡುವ ಹೊತ್ತಿಗೆ ಅವರಿಗೆ ಮೂವತ್ತು ವರ್ಷದ ಪತ್ರಿಕೋದ್ಯಮದ ಅನುಭವವಿತ್ತು. 1936ರಷ್ಟು ಹಿಂದೆಯೇ, ಅಂದರೆ ಭಾರತಕ್ಕೆ ಸ್ವಾತಂತ್ರ್ಯಸಿಗುವುದಕ್ಕೆ ಹನ್ನೊಂದು ವರ್ಷ ಮೊದಲೇ, ಶಾಸ್ತ್ರಿಗಳು ವಿಶ್ವಕರ್ನಾಟಕ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಿದ್ದವನಹಳ್ಳಿ ಕೃಷ್ಣಶರ್ಮರು ಸಂಪಾದಕರಾಗಿದ್ದ ಹರಿಜನ ಕನ್ನಡ ದೈನಿಕದಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಾಸ್ತ್ರಿ ಅವರಿಗೆ ಬಿ.ಎಸ್.ವೆಂಕಟರಾಮ್ ಆರಂಭಿಸಿದ ಛಾಯಾ ಮಾಸಿಕ ಹಾಗೂ ಸಾಪ್ತಾಹಿಕ ದೇಶಬಂಧು ನಿಯತಕಾಲಿಕಗಳೊಂದಿಗೆ ನಿಕಟ ಸಂಪರ್ಕವಿತ್ತು. `ಸರಸ ಸರಣಿ ಅಂಕಣ ಜನಪ್ರಿಯವಾಗಿತ್ತು. ಪೌರವಾಣಿ ದೈನಿಕಕ್ಕೂ ಕೆಲ ಕಾಲ ಕೆಲಸ ಮಾಡಿದ ಶಾಸ್ತ್ರಿಗಳು ಜನಪ್ರಗತಿ ಸಾಪ್ತಾಹಿಕಕ್ಕೆ ಸಂಪಾದಕರಾಗಿಯೂ ಇದ್ದರು. ತುಸು ಹೆಚ್ಚು ಕಡಿಮೆ ಅದೇ ಸಮಯದಲ್ಲಿ ಮೈಸಿಂಡಿಯಾ ಇಂಗ್ಲಿಷ್ ಸಾಪ್ತಾಹಿಕಕ್ಕೆ ಅಂಕಣ ಬರೆದು ದ್ವಿಭಾಷಾ ಪತ್ರಿಕೋದ್ಯಮಿ ಎಂದು ಹೆಸರು ಮಾಡಿದ್ದರು. 1961ರಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಿಶೇಷ ಪ್ರತಿನಿಧಿಯಾಗಿದ್ದರು. ಇದಲ್ಲದೆ `ಕೈಲಾಸ, ಗೋಕುಲ ಮೊದಲಾದ ನಿಯತಕಾಲಿಕೆಗಳ ಸಂಪಾದಕರಾಗಿ ಅವರು ಕೆಲಸ ಮಾಡಿದರು.

ಫಿಲೋಮಿನಾ ಚರ್ಚ್‍ಗೆ ಬೆಂಕಿ, ಹ್ಯಾಮಿಲ್ಟನ್ ಭವನ ಸತ್ಯಾಗ್ರಹ, ಶ್ರೀ ಜಯಚಾಮರಾಜ ಒಡೆಯರ್ ಪಟ್ಟಾಭಿಷೇಕ, ವಿಶ್ವ ವೈ.ಎಂ.ಸಿ.ಎ. ಸಮ್ಮೇಳನ ಶಿವಪುರ ಸತ್ಯಾಗ್ರಹ ಮೊದಲಾದ ಮಹತ್ವದ ಘಟನೆಗಳನ್ನು ವರದಿ ಮಾಡಿದ ಸಂದರ್ಭಗಳನ್ನು ಎನ್.ಎಸ್. ಸೀತಾರಾಮಶಾಸ್ತ್ರಿಗಳು ಅಭಿಮಾನದಿಂದ ನೆನೆಯುತ್ತಿದ್ದರು. ಕನ್ನಡ ಪ್ರಭವನ್ನು ಹೊಸ ಕಲ್ಪನೆಯೊಂದಿಗೆ ಬೆಳಗಿಸಲು ಅವರು ಸಮಾನ ಮನಸ್ಕ ಪತ್ರಕರ್ತರ ತಂಡವನ್ನೆ ರಚಿಸಿದ್ದರು ಎನ್ನುವುದು ವಿಶೇಷ. ಕನ್ನಡ ಪ್ರಭದಿಂದ ನಿರ್ಗಮಿಸಿದ ಬಳಿಕ ಸಮಾಚಾರ ಭಾರತಿ ಸುದ್ದಿ ಸಂಸ್ಥೆಯ ಬೆಂಗಳೂರು ಶಾಖೆಯ ಮುಖ್ಯಸ್ಥರಾಗಿ ಅವರು ಕೆಲ ಕಾಲ ದುಡಿದರು.

ಮೌಲ್ಯಗಳಿಗೆ ಬದ್ಧರಾಗಿರುವುದು ಹಳೆಯ ಕಾಲದ ಪತ್ರಕರ್ತರಲ್ಲಿದ್ದ ವಿಶೇಷ ಗುಣವಾಗಿತ್ತು. ದಿವಂಗತ ಶಾಸ್ತ್ರಿಗಳು ಆ ಗುಣನಿಧಿ ಆಗಿದ್ದರು. ಎಂದೇ ಅವರು 1994ರ ಸಾಲಿನ ಟೀಯೆಸ್ಸಾರ್ ಪ್ರಶಸ್ತಿಗೆ ಅರ್ಹ ಆಯ್ಕೆ ಎನಿಸಿದರು. ಈ ಮೊದಲು ಅವರಿಗೆ ಪಿ.ಆರ್. ರಾಮಯ್ಯ ಪ್ರಶಸ್ತಿ (1980) ಹಾಗೂ ರಾಜ್ಯೋತ್ಸವ ಪ್ರಶಸ್ತಿ (1986) ಲಭಿಸಿತ್ತು. (ಎಂ.ಕೆ.ಬಿ.)