ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀತಾರಾಮಶಾಸ್ತ್ರೀ, ಹುಲಿಮನೆ

ಸೀತಾರಾಮಶಾಸ್ತ್ರೀ, ಹುಲಿಮನೆ 1907-85. ರಂಗನಟ ಹಾಗೂ ಕಲಾವಿದ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹುಲಿಮನೆಯಲ್ಲಿ 1907ರಲ್ಲಿ ಜನಿಸಿದರು. ತಮ್ಮ 13ನೆಯ ವಯಸ್ಸಿನಲ್ಲೇ ಗರೂಡ ಸದಾಶಿವ ರಾಯರ ನಾಟಕ ಮಂಡಳಿಯಲ್ಲಿ ದೇವರ ಪೂಜಾಕಾರ್ಯಕ್ಕೆ ಸೇರಿದರು. ಇವರಿಗೆ ಗರೂಡರು ತಮ್ಮ ಕಂಪನಿಯ ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನೀಡಿದರು. ಕಾಲಕ್ರಮೇಣ ಕಂಪನಿಯಲ್ಲಿ ತರಬೇತಿ ನೀಡುವ ಶಿಕ್ಷಕರೂ ಆದರು. ಗರೂಡರ ನಾಟಕ ಮಂಡಳಿಯ ಅವಸಾನಕಾಲದ ತನಕ ಅಲ್ಲೇ ನಿಷ್ಠರಾಗಿ ದುಡಿದು ಅನಂತರ ಅನಿವಾರ್ಯವಾಗಿ ತ್ಯಜಿಸುವಂತಾಯಿತು. ಅನಂತರ ಅಲ್ಲಿಯ ಬಳಗದವರನ್ನೇ ಕೂಡಿಕೊಂಡು ವರ್ಷಕಾಲ ಶ್ರೀಗುರುಸಮರ್ಥ ನಾಟಕ ಸಂಘ ಕಟ್ಟಿದರು. ಆ ಸಂಸ್ಥೆ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿಯಲಿಲ್ಲ. ಶಿರಸಿಯ ಕಲಾವಿದರನ್ನು ಸೇರಿಸಿಕೊಂಡು 1931ರಲ್ಲಿ ಜಯಕರ್ನಾಟಕ ನಾಟಕ ಸಂಘ ಮೈಸೂರು, ಸ್ಥಾಪಿಸಿದರು. 1940ರಲ್ಲಿ ಮೈಸೂರಿನ ಬದಲಾಗಿ ಸಿದ್ದಾಪುರ ಎಂದು ಹೆಸರು ಬದಲಾಯಿಸಲಾಯಿತು. ಸಂಘ ತನ್ನ ಶೈಶವ ಸ್ಥಿತಿಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಸಂಚಾರಮಾಡಿತು. ಉಡುಪಿ ಮೊಕ್ಕಾಂನ(1943) ಅನಂತರ ಸಂಸ್ಥೆ ಉನ್ನತ ಸ್ಥಿತಿಗೆ ಬಂದು 5 ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸುತ್ತಾಡಿ ಒಂದು ಲಕ್ಷಕ್ಕೂ ಮಿಕ್ಕಿದ ಧನ ಸಂಪತ್ತನ್ನು ಸಂಪಾದಿಸಿತು. ಮಲೆನಾಡು, ಕರಾವಳಿಯಲ್ಲಿ ಶ್ರೇಯಸ್ಸು ಕಂಡ ಈ ನಾಟಕ ಸಂಘ ದುರ್ದೈವದಿಂದ 1948ರಲ್ಲಿ ರಾಯಚೂರಿನಲ್ಲಿ ರಜಾಕಾರರ ಹಾವಳಿಗೆ ಸಿಲುಕಿ ಸಕಲವನ್ನೂ ಕಳೆದುಕೊಂಡಿತು. ಈ ನಾಟಕ ಸಂಘ ಸಾವಿರಕ್ಕೂ ಹೆಚ್ಚು ಜನರಿಗೆ ಬಣ್ಣಹಚ್ಚುವ, ಅಭಿನಯಿಸುವ ತರಬೇತಿಯನ್ನು ನೀಡಿದೆ.

ಟಿಪ್ಪುಸುಲ್ತಾನ ನಾಟಕದಲ್ಲಿ ಟಿಪ್ಪುವಿನ ಪಾತ್ರವನ್ನು ಹುಲಿಮನೆ ಯವರು ಯಶಸ್ವಿಯಾಗಿ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿ ಹುಲಿ ಎಂದೇ ಕರೆಸಿಕೊಂಡರು. ಎಚ್ಚಮನಾಯಕ, ವೀರಸನ್ನಾದಾಸ, ಕೃಷ್ಣಲೀಲೆ, ಚಿತ್ರಾಂಗದ, ದೇವೀಮಹಾತ್ಮೆ, ಸಾವಿತ್ರಿ ಸತ್ಯವಾನ, ಸಂಪೂರ್ಣ ರಾಮಾಯಣ, ವರದಕ್ಷಿಣೆ, ಎಕಚಪ್ಯಾಲಾ (ಮರಾಠಿ ಅನುವಾದ) ಅಲ್ಲದೇ ಶಾಸ್ತ್ರೀಯವರೇ ಸ್ವತಃ ಬರೆದ ಧರ್ಮವಿಜಯ ನಾಟಕ ಮುಂತಾದವುಗಳನ್ನು ಕಂಪನಿ ಪ್ರದರ್ಶಿಸುತ್ತಿತ್ತು. ನಾಲ್ಕು ದಶಕಗಳ ಕಲಾಜೀವನ ಶಾಸ್ತ್ರೀಯವರದಾಗಿತ್ತು. ಆದರೆ ಕೊನೆಗಾಲದಲ್ಲಿ ಬಡತನದಿಂದಾಗಿ ಊರಿಗೆ ಯಾವುದೇ ನಾಟಕ ಕಂಪನಿ ಬಂದರೂ ಅಲ್ಲಿಗೆ ಹೋಗಿ ಪಾತ್ರಾವಕಾಶ ಕೇಳುವ ಪರಿಸ್ಥಿತಿ ಇವರಿಗೆ ಒದಗಿ ಬಂತು. 1965ರಲ್ಲಿ ರಾಜ್ಯ ಸರ್ಕಾರ ಇವರಿಗೆ ಪುರಸ್ಕಾರ ನೀಡಿ ಗೌರವಿಸಿತು. ಮಾಸಾಶನ ಕೂಡ ಮಂಜೂರು ಮಾಡಿತು. ಇವರು 1985 ಮೇ 15ರಂದು ಸಾಗರದಲ್ಲಿ ನಿಧನರಾದರು. (ಎಮ್.ವಿ.ಎಸ್.)