ಸೀಬೆ ಸಿಡಿಯಮ್ ಗ್ವಜಾವಾ ಎಂಬ ಪ್ರಭೇದದ ಮಿರಿಟೆಸಿ ಕುಟುಂಬಕ್ಕೆ ಸೇರಿರುವ ಸಸ್ಯ (ಗೊವ). ಹಿಂದಿಯಲ್ಲಿ ಅರ್ಮ್‍ದ್, ಜಮ್‍ಫಲ್ ಹಾಗೂ ಕನ್ನಡದಲ್ಲಿ ಸೀಬೆ, ಪೇರಲ ಎಂಬ ಹೆಸರುಗಳಿವೆ.

ಸಸ್ಯ ಸು. 4.5-7.5 ಮೀ ಎತ್ತರ ಬೆಳೆಯುತ್ತದೆ. ಮಧ್ಯ ಅಮೆರಿಕ ಇದರ ತವರೂರು. ಇದು ಭಾರತದಲ್ಲಿಯೂ ಬೆಳೆಯುತ್ತದೆ. ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ್, ಪಂಜಾಬ್, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಸುತ್ತಾರೆ. ಇದು ಅತಿ ಬಿಸಿಲು ಮತ್ತು ಬರಗಾಲ ತಡೆದುಕೊಳ್ಳಬಲ್ಲದು. ಸಾಮಾನ್ಯವಾಗಿ ಎಲ್ಲ ತರಹದ ಮಣ್ಣಿನಲ್ಲೂ ಬೆಳೆಯುತ್ತದೆ.

ಹಣ್ಣಿನ ತಿರುಳು ದಪ್ಪ, ಬಲು ರುಚಿಕರ. ಇದರಲ್ಲಿ ಸಿ ಜೀವಸತ್ತ್ವ ಹೇರಳವಾಗಿದೆ. ಸ್ವಲ್ಪ ಕ್ಯಾಲ್ಶಿಯಮ್ ಕೂಡ ಇರುತ್ತದೆ. ಕಚ್ಚಾ ಹಣ್ಣನ್ನು ನೇರವಾಗಿ ಸೇವಿಸಬಹುದು. ಹಣ್ಣನ್ನು ಒಣಗಿಸಿ ಪುಡಿಮಾಡಿ ಜಾಮ್ ಮತ್ತು ಜೆಲ್ಲಿ ರೂಪದಲ್ಲಿ ಉಪಯೋಗಿಸಬಹುದು. ಒಣಗಿಸಿದರೂ ಸಿ ಜೀವಸತ್ತ್ವ ನಷ್ಟವಾಗದು. ಇದಲ್ಲದೆ ಸೀಬೆಕಾಯಿ, ಸೀಬೆಎಲೆ ಹಾಗೂ ಚಕ್ಕೆಗಳನ್ನು ಬಾಯಿಹುಣ್ಣು, ವಸಡಿನ ರಕ್ತಸ್ರಾವ, ತುರಿಕಜ್ಜಿಗಳಿಗೆ ಔಷಧ ರೂಪದಲ್ಲಿ ಉಪಯೋಗಿಸಬಹುದು. (ಎ.ಜಿ.ಡಿ.)