ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುದರ್ಶನ್, ಎಚ್

ಸುದರ್ಶನ್, ಎಚ್ 1950-. ಪ್ರಸಿದ್ಧ ಸಮಾಜ ಸೇವಕರು ಮತ್ತು ವೈದ್ಯರು, ರೈಟ್ ಲೈವ್ಲಿ ಹುಡ್ ಪ್ರಶಸ್ತಿ ವಿಜೇತರು. ಇವರ ಪೂರ್ಣ ಹೆಸರು ಹನುಮಪ್ಪ ರೆಡ್ಡಿ ಸುದರ್ಶನ್. 1950 ಡಿಸೆಂಬರ್ 30 ರಂದು ಜನಿಸಿದರು. ಇವರು ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿ.ಎಸ್. ಪದವಿ ಪಡೆದರು(1973). ಅನಂತರ 1975-79ರಲ್ಲಿ ರಾಮಕೃಷ್ಣ ಮಿಷನ್ ಪರವಾಗಿ ಉತ್ತರ ಪ್ರದೇಶದ ಹಿಮಾಲಯ ಶ್ರೇಣಿಯಲ್ಲೂ ಪಶ್ಚಿಮ ಬಂಗಾಲದ ಬೇಲೂರ ಮಠ ಮತ್ತು ಕರ್ನಾಟಕದ ಪೊನ್ನಂಪೇಟೆಯಲ್ಲೂ ಕೆಲಸ ನಿರ್ವಹಿಸಿದರು. 1979ರಲ್ಲಿ ಈಗಿನ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಬಂದು ಸೋಲಿಗ ಬುಡಕಟ್ಟು ಪಂಗಡದ ಸೇವಾಕಾರ್ಯದಲ್ಲಿ ತೊಡಗಿ, ಅಲ್ಲಿಯೇ ನೆಲೆಸಿದರು. ಆನೆ ಮತ್ತು ಕಾಡು ಪ್ರಾಣಿಗಳ ಉಪಟಳದಿಂದ ನೊಂದ ಸೋಲಿಗರು ಮತ್ತಿತರರಿಗಾಗಿ ಒಂದು ಆಸ್ಪತ್ರೆಯನ್ನು ತೆರೆದರು. ಸೋಲಿಗರ ಕಷ್ಟಸುಖಗಳನ್ನು ಹತ್ತಿರದಿಂದ ಕಂಡ ಇವರು ಸ್ನೇಹಿತರ ಸಹಕಾರ ದೊಂದಿಗೆ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನು ಸ್ಥಾಪಿಸಿದರು (1980). ಈ ಸಂಸ್ಥೆ ಸೋಲಿಗರಿಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ದುಡಿಯುತ್ತಿದೆ.

ಇವರು ಸೋಲಿಗರೊಂದಿಗೆ ಕೆಲಸವನ್ನು ಪ್ರಾರಂಭಿಸಿದ ಮೇಲೆ ಅವರಲ್ಲಿದ್ದ ಜನಪದ ಕಲೆಗಳು, ಸಂಪ್ರದಾಯಗಳು ಮತ್ತು ವೈದ್ಯಪದ್ಧತಿಯನ್ನು ಗುರುತಿಸಿದರು. ಸೋಲಿಗರು ರೋಗ ರುಜಿನಗಳಿಗೆ ಉಪಯೋಗಿಸುವ ಗಿಡ ಮೂಲಿಕೆಗಳನ್ನು ಬಳಿಸಿ, ಅವುಗಳ ಉಪಯೋಗ ಮತ್ತು ಸಂಗ್ರಹಣೆಯ ದೃಷ್ಟಿಯಿಂದ ವೈಜ್ಞಾನಿಕವಾಗಿ ವಿಂಗಡಿಸಿ ಯುವ ಪೀಳಿಗೆಯಲ್ಲಿ ಈ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದ್ದಾರೆ.

ಸೋಲಿಗರ ಹಾಡಿಯಲ್ಲಿ ಕಾರ್ಯನಿರತವಾದ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರ ಸೋಲಿಗರ ಆರೋಗ್ಯ, ಶಿಕ್ಷಣ, ವೈದ್ಯ ಪದ್ಧತಿ, ಪರಿಸರ ಪ್ರಜ್ಞೆ ಮತ್ತು ಪ್ರಾಕೃತಿಕ ಸಂಪತ್ತಿನ ಉಳಿವಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಪಲ್ಲಟಗೊಂಡ ಸೋಲಿಗರಿಗೆ ನೆಲೆ ನೀಡುವುದು ಮತ್ತು ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣವನ್ನು ಮಾಡಿ ವಿತರಿಸುವ ಕೆಲಸಗಳನ್ನು ಮಾಡುತ್ತಿದೆ.

ಅನಂತರ ಇವರು ಕರುಣಾ ಟ್ರಸ್ಟ್ ಅನ್ನು ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಪ್ರಾರಂಭಿಸಿದರು(1986). ಇದರ ಮುಖ್ಯ ಉದ್ದೇಶ ಗ್ರಾಮೀಣ ಆರೋಗ್ಯ ಮತ್ತು ಜೀವನ ಮಟ್ಟದ ಸುಧಾರಣೆ. ಸೋಲಿಗರ, ಭೂಮಿ ಇಲ್ಲದ ಕಡುಬಡವರ, ಪೌಷ್ಠಿಕಾಂಶದ ಕೊರತೆಯನ್ನು ಹೋಗಲಾಡಿಸಲು ಮಾರ್ಗಗಳನ್ನು ರೂಪಿಸಿದರು. ಇವರಲ್ಲಿ ವಂಶಗತ ವಾಗಿ ಬಂದಿದ್ದೆಂದು ತಿಳಿದಿದ್ದ ಸಿಕಲ್ ಸೆಲ್ ಅನೀಮಿಯ ರೋಗವನ್ನು ನಿವಾರಿಸಲು ಅಗತ್ಯ ಕಾರ್ಯತಂತ್ರ ರೂಪಿಸಿದರು.

ಅನಕ್ಷರಸ್ಥರೇ ಹೆಚ್ಚಾಗಿರುವ ಸೋಲಿಗರಿಗಾಗಿ ಅನೇಕ ಯೋಜನೆ ಗಳನ್ನು ಕಾರ್ಯರೂಪಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರಿಗೆ ಹಲವಾರು ಗೌರವ, ಪ್ರಶಸ್ತಿಗಳು ಬಂದಿವೆ. ಕರ್ನಾಟಕ ಸರ್ಕಾರ ಇವರ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ(1984) ನೀಡಿ ಗೌರವಿಸಿದೆ. ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ(1994) ಲಭಿಸಿದೆ. ಪರ್ಯಾಯ ನೊಬೆಲ್ ಎಂದೇ ಪ್ರಸಿದ್ಧವಾದ ರೈಟ್ ಲೈವ್ಲಿಹುಡ್ ಪ್ರಶಸ್ತಿ(1994) ಇವರಿಗೆ ಸಂದ ಮಹತ್ತ್ವದ ಪುರಸ್ಕಾರ. ಭಾರತ ಸರ್ಕಾರ ಇವರ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ(2000).

ಇವರು 1997-99ರವರೆಗೆ ಹೆಲ್ತ್ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷರಾಗಿದ್ದರು. ಅನಂತರ ನ್ಯಾಷನಲ್ ಲಿಟರೆಸಿ ಮಿಷನ್‍ನ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ದುಡಿದರು. 1990-92ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಯೋಜನಾ ಆಯೋಗದ ಸಮಿತಿಯಲ್ಲಿ ಸದಸ್ಯರಾಗಿದ್ದರು. ಪ್ರಸ್ತುತ ಕರ್ನಾಟಕ ಲೋಕಾಯುಕ್ತದ ವಿಜಿಲೆನ್ಸ್ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. (ಎಸ್.ಯು.ಪಿ.)